ಆಕಾಶಕ್ಕೆ ಮೌಲ್ಯಯುತ ಜಿಗಿತ : ಇಸ್ರೋ ಹೆಗ್ಗಳಿಕೆ

ವಾಣಿಜ್ಯಿಕ ಉಪಗ್ರಹ ಉಡಾವಣೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿಂಗಾಪುರದ ೭ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವಲ್ಲಿ ಸಫಲವಾಗಿದೆ. ಚಂದ್ರಯಾನ-೩ ಉಡಾವಣೆಯ ಬಳಿಕ ಇಸ್ರೊ ದಾಖಲಿಸಿದ ಮತ್ತೊಂದು ಯಶಸ್ಸು ಇದೆಂಬುದು ಮೇಲ್ನೋಟಕ್ಕೆ ತೋರುತ್ತಿದ್ದರೂ, ಜಾಗತಿಕವಾಗಿ ಇಸ್ರೊ ಒತ್ತಿದ ಭರವಸೆಯ ಮುದ್ರೆ ನಿಜಕ್ಕೂ ಅಭಿಮಾನ ಮೂಡಿಸುವಂಥದ್ದು. ಮಿಗಿಲಾಗಿ, ಇಸ್ರೊ ಇದನ್ನೆಲ್ಲ ಸ್ವದೇಶಿ ನಿರ್ಮಿತ, ಅತ್ಯಂತ ವಿಶ್ವಾಸಾರ್ಹ ರಾಕೆಟ್ ಪಿ ಎಸ್ ಎಲ್ ವಿ ಮೂಲಕ ಸಾಧಿಸುತ್ತಿರುವುದು ಗೌರವ ಮೂಡಿಸುವಂಥ ಕೆಲಸ.
ಒಂದು ಕಾಲದಲ್ಲಿ ಇಸ್ರೊ ತಾನು ನಿರ್ಮಿಸಿದ ಉಪಗ್ರಹಗಳನ್ನು ಫ್ರಾನ್ಸ್, ರಷ್ಯಾದಂಥ ಅನ್ಯರಾಷ್ಟ್ರಗಳಿಗೆ ಕೊಂಡೊಯ್ದು ಉಡಾವಣೆ ಮಾಡುವ ಸ್ಥಿತಿಯಲ್ಲಿತ್ತು. ಸ್ವಾರಸ್ಯವೆಂದರೆ ಈಗ ಅಮೇರಿಕ, ಫ್ರಾನ್ಸ್, ಜಪಾನ, ಇಸ್ರೇಲ್ ನಂಥ ಸ್ವಂತವಾಗಿ ಉಪಗ್ರಹಗಳನ್ನು ಉಡಾವಣೆ ಮಾಡಬಲ್ಲ ದೇಶಗಳೂ ಇಸ್ರೊದ ಲಾಂಚರ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಇಸ್ರೊದ ಅತ್ಯುನ್ನತ ತಂತ್ರಜ್ಞಾನ, ಗುಣಮಟ್ಟದ ಸೇವೆ ಹಾಗೂ ಕಡಿಮೆ ವೆಚ್ಚದ ಆಕರ್ಷಣೆಯಿಂದಾಗಿ ಎನ್ನುವುದು ವಿಶೇಷ.
ಇಸ್ರೊ ವಿದೇಶದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವುದು ಇದೇ ಮೊದಲಲ್ಲ. ೬೧ ವರ್ಷಗಳಲ್ಲಿ ೩೪ ದೇಶಗಳ ೪೩೧ ಉಪಗ್ರಹಗಳನ್ನು ಸಣ್ಣ ಮತ್ತು ಅತಿಸಣ್ಣ ವರ್ಗಕ್ಕೆ ಸೇರಿವೆ. ೧೯೯೯ರಿಂದ ವಿದೇಶಿ ಗ್ರಾಹಕರಿಗೆ ಉಪಗ್ರಹ ಉಡಾವಣಾ ಸೇವೆ ನೀಡುತ್ತಿರುವುದು ಇಸ್ರೊದ ಗಳಿಕೆಯ ಭಾಗವೇ ಆಗಿದೆ. ಅಚ್ಚರಿಯೆಂದರೆ, ವಿಶ್ವದ ಬೃಹತ್ ಹಾಗೂ ಸಿರಿವಂತ ಬಾಹ್ಯಾಕಾಶ ಸಂಸ್ಥೆಗಳೆಂದೇ ಗುರುತಿಸಿಕೊಂಡ ಅಮೇರಿಕ, ರಷ್ಯಾ, ಜಪಾನ್, ಉತ್ತರ ಕೊರಿಯಾ, ಇರಾನ್ ನ ಉಡಾವಣಾ ಸೇವೆಗಳ ಪೈಪೋಟಿಯನ್ನು ಹಿಂದಿಕ್ಕಿ ಸಿಂಗಾಪುರ, ಬ್ರಿಟನ್, ಕೆನಡಾ, ಜರ್ಮನಿ, ಬೆಲ್ಜಿಯಂ, ಇಟಲಿ, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್, ಯು ಎ ಇ, ಟರ್ಕಿಯಂಥ ರಾಷ್ಟ್ರಗಳನ್ನು ಸೆಳೆಯುವಲ್ಲಿ ಇಸ್ರೊ ಸಫಲವಾಗಿರುವುದು ನಮ್ಮ ವಿಜ್ಞಾನಿಗಳ ತಾಂತ್ರಿಕ ಹೆಗ್ಗಳಿಕೆಗೆ ಸಾಕ್ಷಿ.
ವಾಣಿಜ್ಯಿಕ ಉಡಾವಣೆ ಎಂದ ತಕ್ಷಣ ಪ್ರಧಾನವಾಗಿ ಕಣ್ಮುಂದೆ ಬರುವುದು ವೆಚ್ಚದ ವಿಷಯ. ನೀತಿ ಆಯೋಗ ಸದಸ್ಯ ಮತ್ತು ರಕ್ಷಣಾ ವಿಜ್ಞಾನಿ ವಿ ಕೆ ಸಾರಸ್ವತ್ ಅವರ ಪ್ರಕಾರ, ಇಸ್ರೊ ಪ್ರತಿ ಕಿ.ಗ್ರಾಂ.(ಪೇಲೋಡ್) ೩೦,೦೦೦-೪೦,೦೦೦ ಡಾಲರ್ ವೆಚ್ಚದಲ್ಲಿ ಉಪಗ್ರಹ ಉಡಾವಣೆ ಮಾಡುತ್ತಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲೇ ಅತ್ಯಂತ ಅಗ್ಗ. ಯಾವುದೇ ದೋಷವಿಲ್ಲದೆ ಉಪಗ್ರಹ ಉಡಾವಣೆ ಮಾಡುವುದು ಇಸ್ರೊಗೆ ಕರಗತವಾಗಿದೆ.
ಚಂದ್ರಯಾನ, ಗಗನಯಾನದಂಥ ಬೃಹತ್ ಬಜೆಟ್ ನ ಕಾರ್ಯಾಚರಣೆಗಳಿಗೆ ಬೇಕಿರುವ ಅಗತ್ಯ ಬಂಡವಾಳವನ್ನು ಕ್ರೋಢೀಕರಿಸುವ ಮಾರ್ಗವಾಗಿಯೂ ಈ ವಾಣಿಜ್ಯಿಕ ವಹಿವಾಟು ಇಸ್ರೊಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಭೌಗೋಳಿಕ ಕಾರ್ಯತಂತ್ರ ಹಾಗೂ ರಾಜತಾಂತ್ರಿಕ ಲೆಕ್ಕಾಚಾರಗಳೂ ಇಂಥ ವಿದೇಶಿ ಉಪಗ್ರಹ ಉಡಾವಣೆಗಳ ಹಿಂದಿರುವುದು ಭಾರತದ ಬಹುಮುಖ ಆಲೋಚನೆಗಳಿಗೆ ಸಾಕ್ಷಿ. ಇಸ್ರೊ ಯಶಸ್ಸು ಹೀಗೆಯೇ ಸಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೧-೦೭-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ