ಆಕಾಶದಲ್ಲಿ ಪೋಲೀಸ್ ಪೇದೆ (ಭಾಗ ೨)
(......ಮುಂದುವರಿದಿದೆ)
ಸುಬ್ಬಣ್ಣ ರೇವತಿಗೆ ಮೊದಲಿನಿಂದ ಪರಸ್ಪರ ಪರಿಚಯ ಇರಲಿಲ್ಲ. ಹಾಗಾಗಿಯೇ ಅವಳನ್ನು ನೋಡಿದ್ದೇ ತಡ , ಸುಬ್ಬಣ್ಣ ಅವಳ ಚೆಲುವಿಗೆ ಮರುಳಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದ. ಗೆಳೆಯಂದಿರ ಹಿತವಚನಗಳನ್ನು , ಇಂಥಾ ಸುಂದರಿ ತನಗೆ ದಕ್ಕಲಿಲ್ಲವಲ್ಲಾ ಎಂಬ ಅಸೂಯೆ ಎಂದೇ ಭಾವಿಸಿ, ಅವಕ್ಕೆ ಲಕ್ಷ್ಯ ಕೊಡದೇ ಮದುವೆ ಆಗಿಯೇ ಬಿಟ್ಟ.
ಮದುವೆಗೆ ಮುಂಚೆ, ನಿಶ್ಚಿತಾರ್ಥ ಆದ ಮೇಲೆ ಸುಬ್ಬಣ್ಣ ರೇವತಿ ಒಟ್ಟೊಟ್ಟಿಗೆ ತಿರುಗಿದ್ದು, ಮಾತಾಡಿದ್ದು ಇತ್ತು. ರೇವತಿಗೆ ಅವನ ವಿಷಯ ಹೆಚ್ಚು ಗೊತ್ತಿಲ್ಲದೆಯೇ ಇದ್ದುದರಿಂದ , ಅವನ ಮಾತಿನಲ್ಲಿ ನಿಜವಾಗಿಯೇ ಆಸಕ್ತಿ ತೋರಿಸಿ ಮಧ್ಯೆ ಮಧ್ಯೆ ಬಾಯಿ ಹಾಕದೆ ಕೇಳುತ್ತಿದ್ದಳು. ಅಷ್ಟೇ ಅಲ್ಲದೆ ಸುಬ್ಬಣ್ಣನ ಇಂಗ್ಲೀಷು ಸೊಗಸಾಗಿತ್ತು. ಹಾಗಾಗಿ ಅವಳೊಂದಿಗೆ ಮಾತಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷು ವಾಕ್ಯ ಪ್ರಯೋಗ ಇದ್ದರೂ, ಅದರಲ್ಲಿ ಅವಳಿಗೆ ತಪ್ಪು ಕಂಡು ಹಿಡಿಯುವ ಪ್ರಸಂಗವೇ ಬರುತ್ತಿರಲಿಲ್ಲ. ಹೀಗಾಗಿ ಮದುವೆಗೆ ಮುಂಚೆ ಸುಬ್ಬಣ್ಣನಿಗೆ ರೇವತಿಯ ಸ್ವಭಾವ ವೈಚಿತ್ರ್‍ಯ ಗಮನಕ್ಕೆ ಬರಲೇ ಇಲ್ಲ.
ಅವರ ಮದುವೆಯಾಗಿ ಕೆಲವು ತಿಂಗಳಾದರೂ ನನಗೆ ಅವರ ಭೇಟಿಯಾಗಿರಲಿಲ್ಲ. ಸುಬ್ಬಣ್ಣನಂಥ ಒಳ್ಳೆಯ ಮನುಷ್ಯ ರೇವತಿಯ ಬಾಯಿಗೆ ಸಿಕ್ಕನಲ್ಲ ಎಂದು ಅನುಕಂಪದಿಂದ ನಾನು ಅವನ ಪರಿಸ್ಥಿತಿಯನ್ನು ನೋಡಲಾರದೇ ಅವರನ್ನು ಭೇಟಿಯಾಗುವುದನ್ನು ಆದಷ್ಟು ಮುಂದಕ್ಕೆ ಹಾಕಿದೆ. ಅಂತೂ ಕೊನೆಗೊಮ್ಮೆ ಅವರ ಭೇಟಿಯಾದಾಗ ನಾನಂದುಕೊಂಡಂತೆಯೇ ಆಗಿತ್ತು.ಸುಬ್ಬಣ್ಣ ಕೆಲಸ conference, presentations, seminar, meeting ಇತ್ಯಾದಿಗಳಿಗಾಗಿ ಸಾಕಷ್ಟು ತಿರುಗಾಟ ಮಾಡುತ್ತಿದ್ದ.ಕೆಲವೊಮ್ಮೆ ಪರದೇಶ ಪ್ರವಾಸವೂ ಇರುತ್ತಿತ್ತು.ಹಾಗಾಗಿ ಅವನು ಮಾತನಾಡುವಾಗ ಅವನ ತಿರುಗಾಟದಲ್ಲಿ ಘಟಿಸಿದ ಸ್ವಾರಸ್ಯಕರ ಘಟನೆಗಳ ಪ್ರಸ್ತಾಪ ಆಗಾಗ ಬರುತ್ತಿತ್ತು.ಆದಿನ ಯಾರದ್ದೋ ಮದುವೆಯಲ್ಲಿ ಸಿಕ್ಕು, ಒಟ್ಟಿಗೆ ಊಟ ಮಾಡುತ್ತಿದ್ದಾಗ ಸುಬ್ಬಣ್ಣ ಹೆಂಡತಿಯೊಂದಿಗೆ ಎಲ್ಲಿಯೋ ಹೋಗಿದ್ದ ಪ್ರವಾಸದ ವರ್ಣನೆ ಮಾಡತೊಡಗಿದ.
“ನಾವು ಆಗ್ರಾ ಬಿಟ್ಟಾಗ ಬೆಳಗಿನ ಜಾವ.ಅಲ್ಲಿಂದ ಸುಮಾರು ಇನ್ನೂರು ಕಿಮೀಹೋಗಿದ್ದೆವೋ ಏನೋ, ಅಷ್ಟು ಹೊತ್ತಿಗೆ ಏನಾಯಿತು ಅಂದರೆ....”
ರೇವತಿ ಮಧ್ಯ ಪ್ರವೇಶಿಸಿದಳು "ಭೆಳಗಿನ ಜಾವ ಎಲ್ರೀ ? ಚೆನ್ನಾಗಿ ಎಂಟು ಹೊಡೆದು ಹೋಗಿತ್ತು. ಮತ್ತೆ ಇನ್ನೂರು ಕಿಮೀ ಅಲ್ಲ. ಸರಿಯಾಗಿ ನೂರೈವತ್ತು ಕಿಮೀ ಹೋಗಿದ್ದೆವು ಅಷ್ಟೇ. ಸ್ಪೀಡೋಮೀಟರ್ ನೋಡಿದ್ದು ಚೆನ್ನಾಗಿ ನೆನಪಿದೆ.”
“ಇರಲಿ ಬಿಡು , ಹೃಷೀಕೇಶ ತಲುಪುವ ಹೊತ್ತಿಗೆ " ಸುಬ್ಬಣ್ಣ ಮುಂದುವರಿಸಿದ " ಹೃಷೀಕೇಶ ಏನ್ರೀ?” ಹೃಷೀಕೇಶ ಅಲ್ಲ ಅಂತ ಹೇಳುವುದರ ಬದಲು ಪ್ರಶ್ನೆಯ ರೂಪದಲ್ಲಿ ರೇವತಿ ಅವನನ್ನು ತಿದ್ದಲು ಪ್ರಯತ್ನಿಸಿದಳು.
“ಹೌದೌದು, ನನಗೆ ಸರಿಯಾಗಿ ನೆನಪಿದೆ, ಹೃಷೀಕೇಶವೇ " ಸುಬ್ಬಣ್ಣ ಹೇಳುತ್ತಿದ್ದಂತೆ ರೇವತಿ "ಅಲ್ಲಾರೀ ಹೃಷೀಕೇಶ ಅಲ್ಲಾ ಮಥುರಾ" ಅಂತ ಅವನನ್ನು ಸುಮ್ಮನೆ ಕೂರಿಸಿ ಬಾಕೀ ಪ್ರಕರಣ ತಾನೇ ಮುಂದುವರಿಸಿದಳು.
ಮುಂದೆಯೂ ಹೀಗೆ ಎರಡು ಮೂರು ಬಾರಿ ಈ ದಂಪತಿಗಳ ಭೇಟಿ ಆಗಿತ್ತು. ಪ್ರತಿಯೊಂದು ಬಾರಿಯೂ ಸುಬ್ಬಣ್ಣ ಏನಾದರೂ ಸ್ವಾರಸ್ಯಕರ ಪ್ರಕರಣ ಹೇಳತೊಡಗಿದರೆ, ಅವನು climaxಗೆ ಬರುವವರೆಗೆ ಸುಮ್ಮನಿದ್ದು, ಆ ಮೇಲೆ ಹಸಿದ ಮಗುವಿನ ಬಾಯಿಯವೆರಗೂ ತುತ್ತು ಒಯ್ದು , ಅದು ಆಸೆಯಿಂದ ಬಾಯಿ ಕಳೆಯುವವರೆಗೂ ಕಾದು, ಆ ಮೇಲೆ ಅದರ ಬಾಯಿ ತಪ್ಪಿಸಿ ತಾನೇ ತಿಂದು ಬಿಟ್ಟಂತೆ, ಇಲ್ಲದ ತಪ್ಪು ಹುಡುಕಿ ಸುಬ್ಬಣ್ಣನನ್ನು ಸುಮ್ಮನಿರಿಸಿ ತಾನೇ ಮುಂದುವರಿಸಿ ಬಿಡುತ್ತಿದ್ದಳು.ಸುಬ್ಬಣ್ಣನೊಂದಿಗೆ ಸಂಸಾರ ಹೂಡಿ ಆಗಲೇ ಕೆಲವು ತಿಂಗಳು ಕಳೆದಿದ್ದವು.ಹಾಗಾಗಿ ಸುಬ್ಬಣ್ಣ ಹೇಳುವ ಅನೇಕ ಘಟನೆಗಳು ಈಗಾಗಲೇ ಅವಳಿಗೆ ಗೊತ್ತಿದ್ದವೇ ಆಗಿದ್ದವು.ಯಾವಯಾವ ಹಂತದಲ್ಲಿ ಏನೇನಾಯಿತು ಎಂಬ ವಿವರಗಳು ಅವಳಿಗೆ ಬಾಯಿಪಾಠವಾಗಿದ್ದವು.ಹಾಗಾಗಿ ಸುಬ್ಬಣ್ಣ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಆಸಕ್ತಿ ಕುದುರಿಸುವವರೆಗೂ ಸುಮ್ಮನಿದ್ದು, ಆ ಮೇಲೆ ಬೆಕ್ಕು ಸಮಯ ಕಾದು ಗಬಕ್ಕನೆ ಇಲಿಯ ಮೇಲೆ ಹಾರುವಂತೆ, ಅವನನ್ನು ತಡೆದು ತಾನೇ ಆ ಪ್ರಸಂಗವನ್ನು ಕೊನೆಗಾಣಿಸಿ ಬಿಡುತ್ತಿದ್ದಳು.ಕೆಲವು ಗಂಡಂದಿರು ತಮ್ಮ ಹೆಂಡತಿ ಹೀಗೆ ಮಾಡಿದರೆ , ಆನಂದದಿಂದ ಅವಳಿಗೇ ಕಥೆ ಮುಂದುವರಿಸಲು ಅವಕಾಶ ಕೊಟ್ಟು "ನೋಡಿದಿರಾ , ನನ್ನ ಹೆಂಡತಿ ಎಷ್ಟು ಚೆನ್ನಾಗಿ ಕಥೆ ಹೇಳುತ್ತಾಳೆ!” ಎಂಬ ಹೆಮ್ಮೆಯ ಭಾವದಲ್ಲಿ ತಾವೂ ಸಭಿಕರಲ್ಲಿ ಒಂದಾಗಿ ಸುಮ್ಮನಾಗಿ ಬಿಡಬಹುದು.ಆದರೇನು, ಹೇಳಿ ಕೇಳಿ ಇಂಥಾ ಗಂಡಸರು ಹೆಂಡತಿಗೆ ಶರಣಾದವರು.ಸುಬ್ಬಣ್ಣ ಆ ಪೈಕಿಯವನಾಗಿರಲಿಲ್ಲ. ಅದೂ ಅಲ್ಲದೆ, ಅವನ ಜೀವನದಲ್ಲಿ ಘಟಿಸಿದ ಸಂಗತಿಗಳನ್ನು ಹೇಳುವ ಅವಕಾಶಗಳನ್ನು ಹೆಂಡತಿ ಒಮ್ಮೆ , ಅಥವಾ ಕೆಲವೊಮ್ಮೆ ಸುಮ್ಮನಿದ್ದಾನು. ಆದರೆ, ಸುಮಾರು ಎರಡು ವರ್ಷವಾಗುವ ಹೊತ್ತಿಗೆ ಹೆಂಡತಿಯ ನಡತೆಯಿಂದ ರೋಸಿಹೋದ ಸುಬ್ಬಣ್ಣ ಹೊಸ ಉಪಾಯ ಕಂಡುಕೊಂಡ. (ಮುಂದುವರಿಯುವುದು......)