ಆಕಾಶದಲ್ಲಿ ಪೋಲೀಸ್ ಪೇದೆ (ಭಾಗ ೩)
(.......ಮುಂದುವರಿದಿದೆ)
ಈಗ ಅವನು ವಾಸ್ತವ ಸಂಗತಿಗಳನ್ನು ಹೇಳುವುದು ಬಿಟ್ಟು , ತನಗೆ ಬಿದ್ದ ವಿಚಿತ್ರ ಕನಸುಗಳ ಬಗ್ಯೆ ಹೇಳತೊಡಗಿದ. ಕನಸು ಅಂದರೆ ಪ್ರತಿಯೊಬ್ಬರ ಖಾಸಗೀ ಆಸ್ತಿಯಷ್ಟೆ. ಹಾಗಾಗಿ ರೇವತಿಗೆ ಅವನ ಕನಸಿನ ಪ್ರಕರಣದಲ್ಲಿ ಮುಂದೇನಾಯಿತು ಎಂದು ಮೊದಲೇ ಗೊತ್ತಿರುವುದು ಸಾಧ್ಯವಿರಲಿಲ್ಲ.ಹಾಗಾಗಿ ಅವಳು ಮಧ್ಯೆ ಬಾಯಿ ಹಾಕುವ ಪ್ರಮೇಯ ಬರುತ್ತಿರಲಿಲ್ಲ.
“ಮೊನ್ನೆ ನನಗೊಂದು ವಿಚಿತ್ರ ಕನಸು ಬಿತ್ತು. ಆಕಾಶದಲ್ಲಿ ಹಾರುತ್ತಾ ಇದ್ದೆ. ಕೆಳಗೆ ಮನೆ , ಮರ , ರಸ್ತೆ ಎಲ್ಲಾ ಪುಟ್ಟದಾಗಿ ಗೊಂಬೆಗಳ ತರಹ ಕಾಣುತ್ತಿದ್ದವು. ನಾನು ಕೂತಿದ್ದದ್ದು ಒಂದು ವಿಮಾನದಲ್ಲಿ. ಆ ವಿಮಾನ ಅಂದರೆ ನಮ್ಮ ಬೋಯಿಂಗ್ ಏರ್‍ಬಸ್ ತರಹದ್ದಲ್ಲ. ತಗಡು, ತೇಪೆ ಬಟ್ಟೆ, ಅಲ್ಯೂಮಿನಿಯಮ್ ಬ್ಯಾಗಡೆ, ದಾರ ,ಅಂಟು ಇತ್ಯಾದಿಗಳಿಂದ ಹೇಗೆಹೇಗೋ ಮಾಡಿ ಕಟ್ಟಿದ್ದ ವಿಮಾನ. ಅದರಲ್ಲಿ ನಾನೊಬ್ಬನೇ ಕೂತು ಹೋಗುತ್ತಾ ಇದ್ದೆ. ಸಡನ್ನಾಗಿ ಪೋಲೀಸ್ ವಿಶಲ್ ಥರಾ ಶಬ್ದ ಕೇಳಿಸ್ತು. ಏನೂ ಅಂತ ನೋಡಿದರೆ, ಸಾಕ್ಷಾತ್ ಯಮಧರ್ಮರಾಜ ವಿಮಾನದ ಎದುರು ಕೈ ಅಡ್ಡ ಹಾಕಿ ನಿಂತಿದ್ದ. ಬೇಕಾದಾಗ ನಿಲ್ಲಿಸಲಿಕ್ಕೆ ಅದೇನು ಸರ್ಕಾರೀ ಬಸ್ಸು ಕೆಟ್ಟು ಹೋಯಿತೇ? ಆದರೂ ಮಾಡುವುದೇನು ? ಯಮ ಕೈ ಅಡ್ಡ ಹಾಕಿದ ಮೇಲೆ ನಿಲ್ಲಿಸಲೇ ಬೇಕಲ್ಲ. ಗತ್ಯಂತರವಿಲ್ಲದೆ ಹತ್ತಿರದಲ್ಲಿ ತೇಲುತ್ತಿದ್ದ ಮೋಡದ ಮೇಲೆ ವಿಮಾನ ಇಳಿಸಿ ನಿಲ್ಲಿಸಿದೆ. ಯಮ ಹತ್ತಿರ ಬಂದ. ನೋಡಿದರೆ ಪೋಲೀಸ್ ಪೇದೆಗಳ ಥರ ದಿರಿಸು ಹಾಕಿದ್ದ. ಈಗಿನಂತೆ ಖಾಕಿ ಪ್ಯಾಂಟು, ಶರಟು , ಟೊಪ್ಪಿ ಅಲ್ಲ. ಹಿಂದೆ ಇತ್ತಲ್ಲ ಖಾಕಿ ಶರಟು, ಗರಿಗರಿ ಚಡ್ಡಿ, ಕಾಲು ಚೀಲದ ಬದಲಾಗಿ ಸುತ್ತಿದ್ದ ಖಾಕಿ ಬಟ್ಟೆ, ಚಪ್ಪಲಿ, ತಲೆಮೇಳೆ ಕಪ್ಪುಕೆಂಪು ಪಟ್ಟೆಪಟ್ಟೆಯ ಕುಚ್ಚಿನ ಟೋಪಿ. ಹತ್ತಿರ ಬಂದು ಆರ್ಭಟಿಸಿದ. “ಎಲ್ಲಯ್ಯಾ ಪಾಸ್ ಪೋರ್ಟ್ ತೆಗಿ. ಚಂದ್ರನ ಮೇಲೆ ಇಳಿಯಲಿಕ್ಕೆ ಟಿಕೇಟು ಇದೆಯಾ ತೋರಿಸು" ಇತ್ಯಾದಿ ಇತ್ಯಾದಿ ಅವನ ಕನಸಿನ ಸುರುಳಿ ಬಿಚ್ಚಿಕೊಳ್ಳುತ್ತಿತ್ತು.ಸುಬ್ಬಣ್ಣ ಇಂಥದ್ದೇ ಥರಥರದ ಕನಸುಗಳನ್ನು ಹೆಣೆದು ಕಂಡಕಂಡವರಿಗೆಲ್ಲಾ ಹೇಳುತ್ತಾ ಅದರಲ್ಲಿಯೇ ಹೆಂಡತಿ ಕಾಟದಿಂದ ಮುಕ್ತಿ ಕಂಡುಕೊಂಡಿದ್ದ.
ಹೆಂಡತಿಯ ಕಾಟದಿಂದ ಮುಕ್ತಿ ದೊರಕಿದ್ದೇನೋ ಸರಿ. ಆದರೆ ಹಗಲೂ ರಾತ್ರಿ ಬರೀ ಕನಸನ್ನೇ ಯೋಚಿಸುತ್ತಾ ಅದನ್ನೇ ಹೇಳುತ್ತಿದ್ದರೆ ಅಂಥವನ ಮನಸ್ಥಿತಿ ಏನಾಗಬೇಡ. ಏನಾಗಬಾರದಿತ್ತೋ ಅದೇ ಆಯಿತು. ಸುಬ್ಬಣ್ಣ ಕನಸಿನಲ್ಲೇ ಬದುಕತೊಡಗಿದ. ವಾಸ್ತವ ಪ್ರಪಂಚದ ಅರಿವೇ ಕಡಿಮೆಯಾಗತೊಡಗಿತು. ಅಷ್ಟೇ ಅಲ್ಲ ಅವನ ಕಲ್ಪನೆಗಳೆಲ್ಲಾ ಬತ್ತಿ ಹೋಗಿ ತಿರುತಿರುಗಿ ಯಮಧರ್ಮರಾಜನ ಕನಸನ್ನೇ ನೋಡಿದವರಿಗೆಲ್ಲಾ ಹೇಳತೊಡಗಿದ. ಅವನ ಪರಿಸ್ಥಿತಿ ನೋಡಿದವರಿಗೆ ಅಯ್ಯೋ ಎನ್ನಿಸುತ್ತಿತ್ತು.
ಒಂದೆರಡು ತಿಂಗಳಲ್ಲೇ ಅವನ ಪರಿಸ್ಥಿತಿ ಇನ್ನೂ ಹದಗೆಟ್ಟು ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗಿ ಬಂತು. ನಾನಾಗ ಊರಿನಲ್ಲಿರಲಿಲ್ಲ. ಅವನೊಂದಿಗೆ ಆಸ್ಪತ್ರೆಗೆ ಹೋಗಿದ್ದ ನಮ್ಮ ಗೆಳೆಯ ಬಾಲಕೃಷ್ಣ ಫೋನ್ ಮಾಡಿದ್ದ. “ಆಸ್ಪತ್ರೆಗೆ ಸೇರಿಸಿದಾಗಿನಿಂದ ಅವನ ಆರೋಗ್ಯ ಸುಧಾರಿಸುತ್ತಿದೆ. ಕಣ್ಣಿನಲ್ಲಿ ಕಾಂತಿ ಕಾಣುತ್ತಿದೆ. ಮಾತಿನಲ್ಲೂ ಬದಲಾವಣೆ ಕಾಣುತ್ತಿದೆ. ಅಂತೂ ಆ ಪಿರಿಪಿರಿ ಹೆಂಗಸಿನಿಂದ ಸುಬ್ಬಣ್ಣ ಪಾರಾದ"
ಇದಾಗಿ ಎರಡು ಮೂರು ವಾರದ ಮೇಲೆ , ಊರಿಗೆ ವಾಪಸು ಬಂದವನೇ ಸುಬ್ಬಣ್ಣನನ್ನು ನೋಡಲು ಹೋದೆ. ಬೆಳ್ಳಗೆ ಬಿಳಿಚಿಕೊಂಡಿದ್ದ. ಮೈ ಚಕ್ಕಳವಾಗಿತ್ತು. ಹಾಸಿಗೆಯ ಮೇಲೆ ಆಕಾಶದತ್ತ ನೋಡುತ್ತಾ ಮಲಗಿದ್ದ. ರೇವತಿ ಮಂಚದ ಪಕ್ಕದಲ್ಲಿ ಸ್ಟೂಲಿನ ಮೇಲೆ ಕೂತು ಏನೋ ಓದುತ್ತಿದ್ದಳು. ಎಂದಿನಂತೆ ಉಲ್ಲಾಸದಿಂದಿದ್ದಳು. ಬಾಲಕೃಷ್ಣನ ಸುದ್ದಿಯ ಮೇರೆಗೆ ಅಂತೂ ಸುಬ್ಬಣ್ಣ ರೇವತಿಗೆ ಬೈ ಬೈ ಹೇಳಿದ ಎಂದುಕೊಂಡಿದ್ದ ನನಗೆ ಅವಳನ್ನು ಅಲ್ಲಿ ಕಂಡು ಆಶ್ಚರ್ಯವಾಯಿತು. ನಾನು ಬಂದದ್ದು ನೋಡಿ ಸುಬ್ಬಣ್ಣ ನನ್ನತ್ತ ಹೊರಳಿ ನೋಡಿದ. ಕಣ್ಣಿನಲ್ಲಿ ಹುಚ್ಚರ ಕಣ್ಣಿನಲ್ಲಿ ಕಾಣುವ ವಿಲಕ್ಷಣ ಕಳೆಯಿತ್ತು. ನನ್ನನ್ನು ನೋಡಿದವನೇ ತನ್ನ ಕನಸಿನ ಬಗ್ಯೆ ಹೇಳತೊಡಗಿದ. ಯಮಧರ್ಮ ಬಂದು ಶೀಟಿ ಹಾಕಿದ್ದು, ಸುಬ್ಬಣ್ಣ ವಿಮಾನ ಮೋಡದ ಮೇಲೆ ನಿಲ್ಲಿಸಿದ್ದು ಎಲ್ಲಾ ಆಯಿತು. “ಆ ಮೇಲೆ ಯಮ ಹತ್ತಿರ ಬಂದ. ಥೇಟು ಪೋಸ್ಟ್ ಮ್ಯಾನ್ ಥರಾ ದಿರಿಸು ಹಾಕಿದ್ದ. ಈಗಿನ ಹಾಗೆ ಖಾಕಿ ಪ್ಯಾಂಟು , ಶರಟಲ್ಲ. ಹಿಂದಿತ್ತಲ್ಲ ಖಾಕೀ ಚಡ್ಡಿ....”
“ಪೋಸ್ಟ್ ಮ್ಯಾನ್ ಅಲ್ಲಾರೀ, ಪೋಲೀಸ್ ಪೇದೆ. ಪೋಸ್ಟ್ ಮ್ಯಾನ್ ಖಾಕಿ ಚಡ್ಡಿ ಹಾಕಿರೋದಿಲ್ಲ.ಖಾಕಿ ಚಡ್ಡಿ ಹಾಕುತ್ತಾ ಇದ್ದದ್ದು ಹಿಂದಿನ ಕಾಲದ ಪೋಲೀಸ್ ಪೇದೆ ಮಾತ್ರ. ಯಮ ಪೋಲೀಸ್ ಪೇದೆ ವೇಷ ಹಾಕಿ ನಿಂತಿದ್ದ.”
ಸುಬ್ಬಣ್ಣ ದೊಡ್ಡದಾಗಿ ನಿಟ್ಟುಸಿರು ಬಿಟ್ಟು ಹೊರಳಿ ನನ್ನತ್ತ ನೋಡಿದ. ರೇವತಿಯೂ ನನ್ನ ಕಡೆ ನೋಡುತ್ತಾ ನಕ್ಕಳು.
“ಈ ಕನಸು ಹೇಳುತ್ತಾ ಹೇಳುತ್ತಾ ಯಾವಾಗಲೂ ಇದೇ ತಪ್ಪು ಮಾಡುತ್ತಾರೆ " ಅಂದಳು.