ಆಕಾಶಬುಟ್ಟಿ

ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.
‘ಆಕಾಶಬುಟ್ಟಿ’ ಕೃತಿಯ ಬಗ್ಗೆ ಬರೆದಿದ್ದಾರೆ ಲೇಖಕರಾದ ಚೇತನ್ ಭಾರ್ಗವ. ಇವರು ತಮ್ಮ ಮಾತಿನಲ್ಲಿ ಹೇಳಿದ ನುಡಿಗಳ ಆಯ್ದ ಭಾಗ ಇಲ್ಲಿದೆ…
“ನಟರಾಜ್ ಅರಳಸುರಳಿಯವರ ಆಕಾಶ ಬುಟ್ಟಿ ( ಅಪ್ಪನ ನೆನಪಿನ ಕನವರಿಕೆ ) ಯು ಸುಮಾರು ೩೦ ರಿಂದ ೪೦ ವರ್ಷ ಹಿಂದಿನ ಮಲೆನಾಡಿಗರ ಜೀವನ ಶೈಲಿ, ಅವರ ಕೃಷಿ ಚಟುವಟಿಕೆಯನ್ನು ನೆನಪಿಸುತ್ತಾ, ಲೇಖಕರ ತಂದೆಯ ನೆನಪಿನ ಬುತ್ತಿಯನ್ನು ಸುರುಳಿ ಸುರುಳಿಯಾಗಿ ಬಿಚ್ಚಿಡುತ್ತದೆ. ಇಲ್ಲಿ ಲೇಖಕರು ಶ್ರೀಸಾಮಾನ್ಯರಂತೆಯೇ ಬದುಕಿ ಅಸಾಮಾನ್ಯ ವ್ಯಕ್ತಿತ್ವನ್ನು ಹೊಂದಿದ್ದ ತಮ್ಮ ತಂದೆಯ ಜೀವನೋತ್ಸಾಹ, ಪ್ರತಿಭೆಯ ಅನೇಕ ಮಜಲುಗಳನ್ನು ಅನಾವರಣ ಮಾಡಿದ್ದಾರೆ. ಆಕಾಶ ಬುಟ್ಟಿಯು 20 ಪ್ರಸಂಗಗಳನ್ನೊಳಗೊಂಡ ಅನುಭವ ಕಥನ.
ಲೇಖಕರ ತಂದೆ ಎಲ್, ಕೃಷ್ಣಮೂರ್ತಿಯವರು ಶಾಲಾ ಶಿಕ್ಷಕರಾಗಿದ್ದರೂ, ಒಳ್ಳೆಯ ಕೃಷಿಕರು. ಸಂಗೀತ ರಂಗಭೂಮಿಯಲ್ಲಿ ಅಪಾರ ಆಸಕ್ತಿಯಿದ್ದ ವ್ಯಕ್ತಿ. ಹಾಗೆಯೇ ಅಪ್ಪಟ ಪರಿಸರ ಪ್ರೇಮಿ. ಹೀಗೆ ಎಲ್ಲಾ ಜೀವನದ ಎಲ್ಲಾ ರಂಗದಲ್ಲಿಯೂ ತಮ್ಮನ್ನು ತಾವು ಪೂರ್ಣ ಸಮರ್ಪಿಸಿಕೊಳ್ಳುವ ವ್ಯಕ್ತಿತ್ವ. ಹಿಂದಿನ ಕಾಲದಲ್ಲಿ ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದ ರಾತ್ರಿ ಪೂಜೆ ಪುನಸ್ಕಾರವೆಲ್ಲ ಮುಗಿದ ಮೇಲೆ ಮನೆಯವರೆಲ್ಲಾ ಸೇರಿ ಆಕಾಶ ಬುಟ್ಟಿಯನ್ನು ಉಡಾವಣೆಮಾಡುವುದು ಒಂದು ವಾಡಿಕೆ ಹಾಗೂ ಸಂಪ್ರದಾಯ. ಈ ಆಕಾಶ ಬುಟ್ಟಿಯನ್ನು ಲೇಖಕರ ತಂದೆ ಹೇಗೆ ತಯಾರಿಸುತ್ತಿದ್ದರು. ಅದನ್ನು ಅವರು ಕಲಿತ ಬಗೆ ಹೇಗೆ... ಹಾಗೆಯೇ ಲೇಖಕರು ಚಿಕ್ಕವರಿದ್ದಾಗ ತಂದೆ ತಯಾರಿಸಿಟ್ಟಿದ್ದ ಆಕಾಶಬುಟ್ಟಿಯನ್ನು ಆಟದ ಭರದಲ್ಲಿ ಅರಿವಿಲ್ಲದೆ ಹಾಳು ಗೆಡವಿ ಆಕಾಶ ಬುಟ್ಟಿ ಮೇಲೇರದೆ ವೈಫಲ್ಯ ಕಂಡ ಪ್ರಸಂಗ , ಊರವರೆಲ್ಲ ತನ್ನನ್ನು ವಿಲನ್ ರೀತಿ ನೋಡಿದ್ದು ಈ ಎಲ್ಲಾ ಘಟನಾವಳಿಗಳನ್ನು ಲೇಖಕರು ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ. ಹಾಗೆ ಆಕಾಶ ಬುಟ್ಟಿಯ ಉಡಾವಣಾ ವೈಫಲ್ಯದ ಅಪರಾಧಿ ಪ್ರಜ್ಞೆ ತನ್ನನ್ನು ಹೇಗೆ ಕಾಡಿತ್ತು ಎಂದು ಪ್ರಸ್ತಾಪಿಸಿದ್ದಾರೆ. ತಯಾರಿಸಲು ಅಪಾರ ಶ್ರಮ ಬೇಡುವ , ಕೊಂಚ ಯಾಮಾರಿದರೂ ಉರಿದು ಬೂದಿಯಾಗುವ ಆಕಾಶ ಬುಟ್ಟಿಯ ತಯಾರಿಕೆ ಉಡಾವಣಾ ಸಂಭ್ರಮ ದೀಪಾವಳಿ ದಿನಗಳಲ್ಲಿ ಹೇಗಿತ್ತು ಎಂಬುದನ್ನೂ ಹಾಗೂ ಇದು ಅದೇ ಕಾರ್ತಿಕ ಮಾಸದಲ್ಲಿ ಮನೆಯ ಮುಂದೆ ತೂಗು ಬಿಡುವ ತೂಗು ದೀಪ ಅಲ್ಲ ಎಂಬುದನ್ನೂ ಸ್ಪಷ್ಟವಾಗಿ ಓದುಗರಿಗೆ ತಿಳಿಯಪಡಿಸಿದ್ದಾರೆ.
ಆಕಾಶ ಬುಟ್ಟಿಯೆಂದರೆ ಶಟ್ಕೋನಾಕೃತಿಯಲ್ಲಿ ಹಾಳೆಯಿಂದ ತಯಾರಿಸಿ ಒಳಗೆ ತಂತಿಯಲ್ಲಿ ಎಣ್ಣೆಯ ಸಣ್ಣ ದೀಪ ಇಟ್ಟು ಅದರ ಬಿಸಿಗೆ ಗಾಳಿ ಬಿಸಿಯಾಗಿ ಬಲೂನಿನಂತೆ ಮೇಲೇರುವ ಕತ್ತಲ ನಭದಲ್ಲಿ ಹಾರುವ ಆಕಾಶ ಬುಟ್ಟಿಯನ್ನು ನೋಡುವುದೇ ಸಂಭ್ರಮ. ಚಿಣ್ಣರಿಗಂತೂ ಇದು ಜಾದೂವೇ ಸರಿ . ಪವನ ಶಾಸ್ತ್ರದ ನಿಯಮದಂತೆ ಬಿಸಿಯ ಗಾಳಿ ಹಗುರಾಗಿ ಮೇಲೇರಿದಾಗ ಆಕಾಶ ಬುಟ್ಟಿಯೂ ಮೇಲೇರುತ್ತಾ , ಸಣ್ಣ ಚುಕ್ಕಿಯಾಗಿ ನಂತರ ಕತ್ತಲೆಯಲ್ಲಿ ಲೀನವಾಗಿ ಬಿಡುತ್ತದೆ . ಈ ಆಕಾಶ ಬುಟ್ಟಿಯನ್ನು ತಯಾರಿಸುವವರ ಮೂಲ ಬಂಡವಾಳವೆ ಸಹನೆ. ತಯಾರಿಕೆಯ ಹಂತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆಕಾಶ ಬುಟ್ಟಿ ಮೇಲೇರುವುದಿಲ್ಲ . ಇದನ್ನು ತಯಾರಿಸುವಲ್ಲಿ ಲೇಖಕರ ತಂದೆ ಸಿದ್ಧ ಹಸ್ತರಾಗಿದ್ದರು. ತಾಳ್ಮೆಯಿಂದ ಕೆಲಸ ಮಾಡಿ ಅದರಿಂದ ಪಡೆವ ಆನಂದದ ಅರಿವು ಅವರಿಗಿತ್ತು. ಒಮ್ಮೊಮ್ಮೆ ಆಕಾಶ ಬುಟ್ಟಿ ಹಾಳಾಗಿ ಗಂಟೆ ಗಟ್ಟಲೆ ವ್ಯಯಿಸಿದ ಸಮಯ ಶ್ರಮ ಹಾಳಾದರೂ ಬೇಸರಗೊಳ್ಳದ ಸಮಚಿತ್ತತೆ, ಸಹನೆಯೂ ಅವರಿಗೆ ಒಲಿದಿತ್ತು. ಆಕಾಶ ಬುಟ್ಟಿಯ ಮೂಲಕ ಜೀವನದ ಪಾಠ ಹೇಳುವ ಬಗೆ ಸ್ವತಃ ಶಿಕ್ಷಕರಾದ ನಟರಾಜ್ ಅವರಿಗೆ ತಂದೆಯ ಮೂಲಕವೇ ಬಳುವಳಿಯಾಗಿ ಬಂದಿದೆ ಎಂದು ಓದುಗರು ಅರಿಯಬಹುದು.
ಕೃಷ್ಣ ಮೇಷ್ಟ್ರ ಉಪಕಾರ ಸ್ಮರಣೆಯನ್ನು ಅವರ ಮನೆಯ ನಿರ್ಮಾಣದ ಹಿಂದೆ ಮನಕಲಕುವ ಸಂಗತಿಯನ್ನು ಬಾಳೆಕಾಯಿ ನಾಗರಯ್ಯನ ಕಥೆಯಲ್ಲಿ, ಗಂಗಾಧರ ಭಟ್ಟರು ಛತ್ರಿ ಅಪಹರಣ ಮಾಡಿ ಮೇಷ್ಟ್ರ ಆತ್ಮ ಗೌರವಕ್ಕೆ ಧಕ್ಕೆ ಬಂದಾಗ ಅವರು ಅದನ್ನು ಸಂಭಾಳಿಸಿ ಭಟ್ಟರಿಗೆ ಬುದ್ಧಿ ಹೇಳಿದ ರೀತಿ, ಮಲೆಯಾಳಿಯಿಂದ ಟೋಪಿ ಹಾಕಿಸಿಕೊಂಡ ಪ್ರಸಂಗವನ್ನು ಲೇಖಕರು ಹಾಸ್ಯಮಯವಾಗಿ ವಿವರಿಸಿದ ರೀತಿ ಮನೋಜ್ಞವಾಗಿದೆ.
ಕೃಷ್ಣ ಮೇಷ್ಟ್ರ ಪರಿಸರ ಪ್ರೇಮ ಆಕಾಶ ಬುಟ್ಟಿಯ ಪುಸ್ತಕದ ಮೊದಲಿನಿಂದ ಕೊನೆಯವರೆಗೂ ಕಾಣಬಹುದು. ತಮ್ಮ ತೋಟದಲ್ಲಿ ನಾನಾ ಬಗೆಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದಲ್ಲದೆ. ಊರಿನ ಉದ್ದಗಲಕ್ಕೂ ಹೊಸ ನಮೂನೆಯ ಗಿಡ ಮರಗಳನ್ನು ಹುಡುಕಿ ತಂದು ನೆಡುತ್ತಿದ್ದ ಅವರ ಪರಿಸರ ಪ್ರೇಮ ಊರವರಿಗೆ ಆಡಿಕೊಳ್ಳಲು ಒಂದು ವಸ್ತುವಾಗಿ ಇದ್ದರೂ ಅವರು ತಲೆಕೆಡಿಸಿಕೊಂಡವರಲ್ಲ. ಲೇಖಕರಿಗೆ ಕಾಡಿನ ಸಸ್ಯವಾದ ಸುರಗಿ ಗಿಡವನ್ನು ಹುಡುಕಿ ತಂದು ನೆಟ್ಟು ಬೆಳೆಸಲು ಹಾಗೂ ಅದರ ವಿಶೇಷತೆಯನ್ನು ಅರಿಯಲು ಒತ್ತಾಯಿಸಿದ್ದು ಇದಕ್ಕೆ ಸಾಕ್ಷಿ . ಅಲ್ಲದೆ ಆ ಗಿಡವನ್ನು ಹೋದಲ್ಲಿ ಬಂದಲ್ಲಿ ಸಂಗ್ರಹಿಸಿ ಆಸಕ್ತರಿಗೆ ಹಂಚುವ ಕೆಲಸ ಈಗಲೂ ಮಾಡುತ್ತಿರುವುದು ಶ್ಲಾಘನೀಯ.” ೧೮೬ ಪುಟಗಳ ಈ ಹೊತ್ತಗೆ ಸರಾಗ ಓದಿಗೆ ಸಹಕಾರಿ.