ಆಕಾಶ ಇಷ್ಟೇ ಯಾಕಿದೆಯೋ

ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಜೋಗಿಯವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ವೃತ್ತಿ ಜೀವನದ ನೆನಪುಗಳು ಗಾಢವಾಗಿರುತ್ತವೆ. ಅದರಾಚೆಗಿನ ಬದುಕಿನ ಘಟನೆಗಳಲ್ಲಿ ಅಂಥ ವೈಶಿಷ್ಟವೇನೂ ಇರುವುದಿಲ್ಲ. ಹುಟ್ಟು, ಸಾವುಗಳ ನಡುವೆ ಬಂದುಹೋಗುವ ಗೆಳೆಯರು, ಕುಟುಂಬಸ್ಥರು, ಪರಿವಾರದವರ ಜತೆಗಿನ ಒಡನಾಟದಲ್ಲಿ ಸಂತೋಷ ಕಾಣಬಹುದು. ಆದರೆ ಸಾರ್ಥಕತೆ ಕಾಣುವುದಕ್ಕೆ ವೃತ್ತಿ ಜೀವನ ಅತ್ಯಗತ್ಯ. ಅನೇಕರ ಆತ್ಮಚರಿತ್ರೆಗಳಲ್ಲಿ ಅವರ ವೃತ್ತಿ ಬದುಕಿನ ವಿವರಗಳೇ ತುಂಬಿರುವುದನ್ನು ನಾವು ಕಾಣಬಹುದು.
ಪೂರ್ಣಿಮಾ ಮಾಳಗಿಮನಿ ತಮ್ಮ ಅಲ್ಪಾವಧಿಯ ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಮಹಿಳೆಯೊಬ್ಬರು ವಾಯುಸೇನೆಯ ಅನುಭವಗಳನ್ನು ಬರೆದಿದ್ದಾರೆ ಹಾಗೂ ಈ ಅನುಭವಗಳನ್ನು ಬರೆದವರು ಕತೆಗಾರರು ಎಂಬ ಕಾರಣಕ್ಕೆ ಈ ಅನುಭವಗುಚ್ಛ ಮುಖ್ಯವಾಗುತ್ತದೆ. ಇದನ್ನು ಬರೆಯುವಾಗ ಪೂರ್ಣಿಮಾ, ವಾಯುಸೇನೆಗೆ ಸೇರಲು ಇಚ್ಚಿಸುವವರಿಗೂ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಸೇರುವ ದಾರಿಯನ್ನೂ ತೋರಿಸಿದ್ದಾರೆ. ಆದ್ದರಿಂದ ಇದು ಅನುಭವ ಕಥನ ಮತ್ತು ಅನುಭವ ನೀಡುವ ಕಥನ.
ವಾಯುಸೇನೆ ಎಂದಾಗ ನನಗೆ ನೆನಪಾಗುವುದು ಡಬ್ಲ್ಯು,ಬಿ, ಯೇಟ್ಸ್ ಬರೆದ An Irish Airman foresees his Death ಕವಿತೆ. ಈ ಕವಿತೆ ಆರಂಭವಾಗುವುದೇ ನನ್ನ ಸಾವನ್ನು ನಾನು ಈ ಮೋಡಗಳ ನಡುವೆ ಎಲ್ಲೋ ಭೇಟಿಯಾಗುತ್ತೇನೆ ಅನ್ನುವುದು ನನಗೆ ಗೊತ್ತಿದೆ ಎಂಬ ಸಾಲಿನೊಂದಿಗೆ. ಯುದ್ಧವಿಮಾನದಲ್ಲಿ ಕುಳಿತ ವಾಯುಸೇನೆಯ ಯೋಧ ಹೇಳುತ್ತಾನೆ ` ನಾನು ಯಾರಿಗೋಸ್ಕರ ಹೋರಾಡುತ್ತಿದ್ದೇನೋ ಅವರನ್ನು ನಾನು ಪ್ರೀತಿಸುತ್ತಿಲ್ಲ. ನಾನು ಯಾರ ವಿರುದ್ಧ ಹೋರಾಡುತ್ತಿದ್ದೇನೋ ಅವರನ್ನು ನಾನು ದ್ವೇಷಿಸುತ್ತಲೂ ಇಲ್ಲ. ಈ ಯುದ್ಧದಿಂದ ನನ್ನ ಜನಕ್ಕೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಯಾವುದೇ ಕರ್ತವ್ಯದ ಕರೆ, ಯಾರದೋ ಒತ್ತಾಯ, ಮಂದಿಯ ಹರ್ಷೋದ್ಗಾರ, ಜನರ ಒತ್ತಡ ಯಾವುದೂ ಇವತ್ತು ನನ್ನನ್ನು ಈ ಯುದ್ಧದತ್ತ ಸೆಳೆಯಲಿಲ್ಲ.’
ಹಾಗಿದ್ದರೆ ಆತ ಯಾಕೆ ಯುದ್ಧಕ್ಕೆ ಹೊರಟ. ಬದುಕಿನ ನಶ್ವರತೆ ತನಗೆ ಅರ್ಥವಾಗಿ ಎನ್ನುತ್ತಾನೆ ಆತ. ಈ ನಿರರ್ಥಕತೆಯ ನಡುವೆಯೇ A lonely impulse of delight. ಸಂತೋಷದ ಸಣ್ಣ ಕಿಡಿಯೊಂದು ಒಳಗೆಲ್ಲೋ ಹೊತ್ತಿಕೊಂಡಿದೆ. ಅದೇ ಇಲ್ಲಿಯ ತನಕ ಕರೆತಂದಿದೆ ಅನ್ನುತ್ತಾನೆ ಆತ.
ಪೂರ್ಣಿಮಾ ಅವರ ಆಕಾಶ ಇಷ್ಟೇ ಯಾಕಿದೆಯೋ ಓದುವಾಗಲೂ ಯಾವುದೋ ಒಂದು ಗುಪ್ತ ಪ್ರೇರಣೆ ಅವರನ್ನು ಆಕಾಶದತ್ತ ಎಸೆದಿದೆ ಅನ್ನುವುದು ಗೊತ್ತಾಗುತ್ತದೆ. ಅವರ ಬಾಲ್ಯ, ಓದು, ನಂತರದ ವಿಹ್ವಲತೆ ಮತ್ತು ಪರಿಕ್ರಮ ಕರೆದಲ್ಲಿಗೆ ಅಬೋಧ ಮುಗ್ಧತೆಯಿಂದ ಅವರು ಹೊರಟಿದ್ದರೆನ್ನುವುದನ್ನೂ ಈ ಆತ್ಮಕತೆಯ ತುಣುಕಿನಂತಿರುವ ಬರಹ ಹೇಳುತ್ತಿರುವಂತಿದೆ. ಇಂಥ ಪ್ರೇರಣೆಗಳೂ ಅವನ್ನು ಉಳಿಸಿಕೊಳ್ಳುವ ದಿಟ್ಟತನವೂ ಇಲ್ಲದೇ ಹೋದರೆ ಬದುಕಿನ ಎಲ್ಲಾ ಬಣ್ಣಗಳನ್ನೂ ಕಾಣಲಾಗುವುದಿಲ್ಲ ಅನ್ನುವುದನ್ನೂ ನಾವು ಅನೇಕರ ಆತ್ಮಕತೆಗಳನ್ನು ಓದುತ್ತಾ ಮನಗಂಡಿರುತ್ತೇವೆ. ನಸೀರುದ್ದೀನ್ ಶಾ ಆತ್ಮಕತೆಯ ಆರಂಭದಲ್ಲಿ ಪಿಂಕ್ ಫ್ಲಾಯ್ಡ್ ಬರೆದ ನಾಲ್ಕು ಈ ಸಾಲುಗಳಿವೆ.
...And then one day you find
Ten years have got behind you
No one told you when to run
You missed the starting gun
ಈ ಸಾಲುಗಳು ನಮ್ಮೆಲ್ಲರ ಒಳಗೂ ಇರುತ್ತವೆ. ಒಂದು ದಿನ ಇದ್ದಕ್ಕಿದ್ದಂತೆ ನಾವು ಇದ್ದಲ್ಲೇ ಇದ್ದೇವೆ ಅನ್ನಿಸುತ್ತದೆ. ಹತ್ತಾರು ವರ್ಷಗಳು ನಮ್ಮನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಹೋಗಿಬಿಟ್ಟಿವೆ ಅಂತ ಗೊತ್ತಾಗುತ್ತದೆ. ಓಡು ಅಂತ ಆಕಾಶಕ್ಕೆ ಹಾರಿಸಿದ ಗುಂಡಿನ ಸದ್ದು ಕೇಳಿಸಿಕೊಳ್ಳದೇ ನಾವು ಗೆರೆಯ ಅಂಚಲ್ಲೇ ಎಷ್ಟೋ ಕಾಲ ನಿಂತಿದ್ದೇವಲ್ಲ ಅಂತನ್ನಿಸಿ ಬೇಸರವಾಗುತ್ತದೆ.
ಹಾಗೆ ಆಗದೇ ಇರುವುದಕ್ಕೆ ಏನು ಮಾಡಬೇಕು ಅನ್ನುವುದನ್ನು ನೀವು ಈ ಪುಸ್ತಕದಿಂದ ಪಡೆಯಬಹುದು. ಅಚಾನಕ್ಕಾಗಿ ನುಗ್ಗಿ ಪಡೆದ ವಾಯುಸೇನೆಯ ವೃತ್ತಿ, ಅದರಿಂದ ಪಟ್ಟ ಪಡಿಪಾಟಲು, ಅದು ಕೊಟ್ಟ ಸುಖ-ದುಃಖ, ನಲಿವು-ಆತಂಕ, ಅಲ್ಲಿನ ಸಮಾನತೆ ಮತ್ತು ಶ್ರೇಣಿವ್ಯವಸ್ಥೆ, ಮಾತು-ಮೌನದ ನಡುವಿನ ಅಂತರ, ನಿಟ್ಟುಸಿರು ಹುಟ್ಟಿಸುವ ನಿರಾಶೆ- ಎಲ್ಲವನ್ನೂ ಪೂರ್ಣಿಮಾ ಹಿಡಿದಿಟ್ಟಿದ್ದಾರೆ.
ಪೂರ್ಣಿಮಾ ವಾಯುಸೇನೆಯಲ್ಲಿದ್ದ ಅವಧಿ ತುಂಬಾ ಸಣ್ಣದು. ಹೀಗಾಗಿ ಇದೊಂದು ಕಿರು ಆತ್ಮಕತೆ. ಆರು ವರ್ಷಗಳಲ್ಲಿ ಮನಸ್ಸಲ್ಲಿ ಅಚ್ಚೊತ್ತಿದ ಸಂಗತಿಗಳನ್ನಷ್ಟೇ ಅವರು ಹೇಳಿದಂತಿದೆ. ಗಾಢವಾದ ವಿಷಾದ, ತಾಳಿಕೊಳ್ಳಲಾಗದ ಏಕಾಂತ ಮತ್ತು ಕಂಗೆಡಿಸುವ ಅಸಮಾನತೆ ಹುಟ್ಟಿಸುವ ಕಥನಕ್ಕೂ ನಿರಾತಂಕದಲ್ಲಿ ಹುಟ್ಟುವ ಬರಹಕ್ಕೂ ಇರುವ ವ್ಯತ್ಯಾಸ ಪೂರ್ಣಿಮಾರಿಗೆ ಗೊತ್ತಿದೆ. ಹೀಗಾಗಿ ಇದಕ್ಕೆ ನೀಡಬೇಕಾದಷ್ಟನ್ನೇ ಅವರು ಕೊಟ್ಟಿದ್ದಾರೆ.
ನಾನು ಬಹಳ ಹಿಂದೆ ಟ್ರಕ್ ಡ್ರೈವರ್ ಫಿನ್ ಮರ್ಫಿ ಬರೆದ ದಿ ಲಾಂಗ್ ಹೌಲ್: ಎ ಟ್ರಕರ್ಸ್ ಟೇಲ್ಸ್ ಆಫ್ ಲೈಫ್ ಆನ್ ದಿ ರೋಡ್ ಹೆಸರಿನ ಆತ್ಮಕತೆಯನ್ನು ಓದಿದ್ದೆ. ಒಬ್ಬ ಟ್ರಕ್ ಡ್ರೈವರ್ ದೂರದೂರದ ಊರಿಗೆ ಪ್ರಯಾಣ ಮಾಡುತ್ತಾ ಕಳೆದ ದಿನಗಳು, ರಸ್ತೆಯಲ್ಲಿ ಕಳೆದ ರಾತ್ರಿಗಳು, ದಾರಿಯಲ್ಲಿ ಎದುರಾದ ಆತಂಕಗಳು, ಮನೆಯಿಂದ ದೂರವಿದ್ದ ದಿನಗಳು- ಅವುಗಳ ನಡುವೆಯೇ ಕಂಡುಕೊಂಡ ಸಂತೋಷಗಳ ಕುರಿತು ಫಿನ್ ಮರ್ಫಿ ನಮ್ಮಲ್ಲೂ ಜೀವೋತ್ಸಾಹ ಉಕ್ಕುವಂತೆ ಬರೆದಿದ್ದರು. ನಾವು ಅತ್ಯಂತ ಖಾಲಿ ಅಂತ ಭಾವಿಸುವ ಬದುಕಿನಲ್ಲೂ ಬಣ್ಣಗಳಿರುತ್ತವೆ ಅನ್ನುವುದನ್ನು ನನಗೆ ಮನದಟ್ಟು ಮಾಡಿದ ಪುಸ್ತಕ ಅದು.
ಆಕಾಶ ಇಷ್ಟೇ ಯಾಕಿದೆಯೋ ಕೂಡ ಅಂಥದ್ದೇ ಕೃತಿ. ಇದು ತೋರಿಸಿದ ಜಗತ್ತು ನನಗೆ ಹೊಸತು. ಇಲ್ಲಿಯ ಶಿಸ್ತು, ಕಠೋರ ನಿಷ್ಠೆ ಮತ್ತು ಇವೆರಡರ ನಡುವೆ ಅವಿತುಕೊಂಡಿರುವ ಅಶಿಸ್ತು ಮತ್ತು ಲೋಲುಪತೆಯನ್ನು ಪೂರ್ಣಿಮಾ ಬಹಳ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಕತೆ, ಕಾದಂಬರಿ ಬರೆಯುತ್ತಿದ್ದ ಪೂರ್ಣಿಮಾ ಇದರ ಮೂಲಕ ನಾನ್ ಫಿಕ್ಷನ್ಗೆ ಹೊರಳಿಕೊಂಡರು ಅಂತ ಭಾವಿಸಿದ್ದೆ. ಆದರೆ ಇದರಲ್ಲೂ ಕಥನವಿದೆ ಅಂತ ಓದುತ್ತಿದ್ದಂತೆ ಗೊತ್ತಾಯಿತು. ಆತ್ಮಕತೆಯಲ್ಲಿ ಕತೆ ಇರಲೇಬೇಕಲ್ಲ.”