ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ 

ಮತ್ತು 
ಮೂರು ಪುಸ್ತಕಗಳ ಲೋಕಾರ್ಪಣೆ 

೧. ಜನಾರಣ್ಯ (ಕಾದಂಬರಿ) - ಶಂಕರ್, (ಕನ್ನಡಕ್ಕೆ) ಗೀತಾ ವಿಜಯಕುಮಾರ್ 

೨. ಒಡಲಾಳದ ತಳಮಳ (ಸಣ್ಣ ಕಥೆಗಳು) - ಕೇಶವ ಕುಡ್ಲ 

೩. ಮರದ ಮರ್ಮರ (ಮಕ್ಕಳ ನಾಟಕ) - ನಾರಾಯಣ ಕಂಗಿಲೆ 


ಅಂದು ನಮ್ಮೊಂದಿಗೆ, 
1. ಡಿ ಕೆ ಚೌಟ (ಖ್ಯಾತ ನಾಟಕಕಾರರು) 
2. ಚಂದ್ರಶೇಖರ ಕಂಬಾರ (ಖ್ಯಾತ ಸಾಹಿತಿಗಳು) 
3. ಸಾ ಶಿ ಮರಳಯ್ಯ (ಖ್ಯಾತ ಸಾಹಿತಿಗಳು) 
4. ಪ್ರೇಮಾ ಭಟ್ (ಖ್ಯಾತ ಕಥೆಗಾರ್ತಿ) 

ಎಂದು? 
ಸೆಪ್ಟಂಬರ್ 4 , ಬೆಳಗ್ಗೆ 10:30 ಕ್ಕೆ 

ಎಲ್ಲಿ? 

ನಯನ ಸಭಾಂಗಣ 
ಕನ್ನಡ ಭವನ 
ಜೆ ಸಿ ರಸ್ತೆ 
ಬೆಂಗಳೂರು


ಜನಾರಣ್ಯಕ್ಕೆ ಅಡಿಯಿಡುವ ಮುನ್ನ....

ಇಂದು ಭ್ರಷ್ಟಚಾರದ ವಿರುದ್ಧ ತೀವ್ರವಾದ ಚಳುವಳಿಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಚಳುವಳಿಗಳ ಪರ, ವಿರೋಧಿ ಚರ್ಚೆಗಳಾಗುತ್ತಿವೆ. ಏನಿದು ಭ್ರಷ್ಟಾಚಾರ? ಕಾರಣಗಳೇನು? ಉನ್ನತಮಟ್ಟದಲ್ಲಿ ಕೋಟ್ಯಾನುಕೋಟಿ ಲಂಚ ಪಡೆದ ರಾಜಕಾರಣಿಗಳಷ್ಟೇ ಭ್ರಷ್ಟರೇ? ಜನಲೋಕಪಾಲ್ ಮಸೂದೆಯಲ್ಲಿ ಪ್ರಧಾನಿ ಮತ್ತು ನ್ಯಾಯಮೂರ್ತಿಗಳನ್ನು ಸೇರಿಸಬೇಕೆಂದು ನಡೆಯುತ್ತಿರುವ ಈ ಚಳವಳಿಯಲ್ಲಿ, ಕಾರ್ಪೊರೇಟ್ ವಲಯವನ್ನು ಸೇರಿಸುವ ಯಾವ ಕೂಗೂ ಕೇಳಿಬರುತ್ತಲೇ ಇಲ್ಲವಲ್ಲ ಎಂಬಂತಹ ಬಹಳಷ್ಟು ಚರ್ಚೆಗಳು ಈ ದಿನ ವ್ಯಾಪಕವಾಗಿವೆ. ಹೌದು, ದೊಡ್ಡ ದೊಡ್ಡ ಕಾರ್ಪೊರೇಟ್ ವಲಯಗಳಲ್ಲಿ, ಪುಸ್ತಕೋದ್ಯಮದಂಥ ಸಣ್ಣ ವ್ಯವಹಾರಗಳಲ್ಲಿಯೂ ಮಿತಿಮೀರಿದ ಭ್ರಷ್ಟಾಚಾರವನ್ನು ಕಾಣುವುದು ಇಂದು ತೀರಾ ಸಾಮಾನ್ಯವಾಗಿದೆ.

ಈ ಕಥೆಯ ನಾಯಕ ಸೋಮನಾಥ ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಸುಸಭ್ಯ. ಉದ್ಯೋಗ ವಿನಿಮಯ ಕೇಂದ್ರದ ಸರದಿಯಲ್ಲಿ ನಿಂತು ಸಮಯ ವ್ಯಯಿಸಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ವಿಫಲನಾಗಿ ಬೇಸತ್ತು ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಾನೆ. ವ್ಯವಹಾರದಲ್ಲಿ ತನ್ನ ಗುರಿ ಮುಟ್ಟಲು, ಎದುರಾಗುವ ನೈತಿಕ ಸವಾಲುಗಳನ್ನು ಮೀರುತ್ತಾ, ಭ್ರಷ್ಟನಾಗಿ ಮಾರ್ಪಾಡಾಗುತ್ತಾ, ಒಂದು ಹಂತದಲ್ಲಿ ತನ್ನ ವ್ಯವಹಾರವನ್ನು ಕುದುರಿಸಿಕೊಳ್ಳಲು ವೇಶ್ಯೆಯರನ್ನು, ಮುಗ್ಧ ಹುಡುಗಿಯರನ್ನು ಹುಡುಕಿ ಕೊಂಡು ಹೊರಡುತ್ತಾನೆ. ಸರಳ ಸುಸಭ್ಯ ಸೋಮನಾಥ ಭ್ರಷ್ಟ ವ್ಯವಹಾರಸ್ಥನಾಗಿ ಮಾರ್ಪಾಡಾಗುವ ಈ ಕಥೆ, ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ, ಅವಕಾಶವಾದಿಗಳಾಗುವ ಭೀಕರ ದುರಂತವನ್ನು ತೋರಿಸುತ್ತದೆ. ಇಂದಿನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿದ್ದು ಹೃದಯವನ್ನು ಕಲಕುತ್ತದೆ.

ಮೆಟ್ರೋಗಳಲ್ಲಿ ನಶಿಸುತ್ತಿರುವ ನೈತಿಕ, ಜೀವನ ಮೌಲ್ಯಗಳು, ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ಚಿತ್ರಣವನ್ನು ೧೯೭೦ರ  ದಶಕದ ಹಿನ್ನೆಲೆಯಲ್ಲಿದ್ದ ಕಲ್ಕತ್ತೆಯ ಜನ ಅರಣ್ಯವನ್ನು ಸಮರ್ಥವಾಗಿ ಚಿತ್ರಿಸಿದವರು “ಶಂಕರ್ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾಗಿರುವ ಮಣಿಶಂಕರ್ ಮುಖರ್ಜಿ ಅವರು. ಇಂಥ ಕಥೆಗೆ ದೇಶ ಕಾಲಗಳ ಮಿತಿಯಿಲ್ಲ ಎಂಬುದನ್ನು ಗ್ರಹಿಸಿ ಬೆಂಗಾಳಿಯಿಂದ ಕನ್ನಡಕ್ಕೆ ಸಮರ್ಥವಾದ ಅನುವಾದವನ್ನು ಮಾಡಿಕೊಟ್ಟಿದ್ದಾರೆ ಶ್ರೀಮತಿ ಗೀತಾ ವಿಜಯಕುಮಾರ್. ಈ ಕಾದಂಬರಿ ಇದಕ್ಕೆ ಮುನ್ನ "ದ ಮಿಡಲ್ ಮ್ಯಾನ್" ಎಂಬ ಹೆಸರಿನಲ್ಲಿ ಮಾನ್ಯ ಅರುಣಾವಸಿನ್ಹ ಅವರಿಂದ ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಅಪಾರ ಮನ್ನಣೆ ಪಡೆದಿತ್ತು. ಜೊತೆಗೆ ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ "ಸತ್ಯಜಿತ್ ರಾಯ್" ಅವರು ಈ ಕಥೆಯನ್ನು ಆಧರಿಸಿ ನಿರ್ದೇಶಿಸಿದ ಚಲನಚಿತ್ರ "ಜನ ಅರಣ್ಯ" ಅಪಾರ ಜನಮನ್ನಣೆ, ವಿಮರ್ಶಕರ ಮನ್ನಣೆ ಪಡೆದುದಲ್ಲದೆ ಕೇಂದ್ರ ಸರ್ಕಾರದ "ಅತ್ಯುತ್ತಮ ನಿರ್ದೇಶಕ" ಪ್ರಶಸ್ತಿ, ಪಶ್ಚಿಮ ಬಂಗಾಲ ಸರ್ಕಾರದ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಅಲ್ಲದೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿತ್ತು. ತಾವು ಮಾಡಿದ ಚಿತ್ರಗಳಲೆಲ್ಲಾ ಇದು ಅತ್ಯಂತ ದಿಟ್ಟತನದ ಚಲನಚಿತ್ರ ಎಂದು ಸ್ವತಹ ಸತ್ಯಜಿತ್ ರಾಯ್ ಅವರೇ ಹೇಳಿಕೊಂಡಿರುವುದು ಕೃತಿಯ ವ್ಯಾಪಕತೆಗೆ ಸಾಕ್ಷಿಯಾಗಿದೆ.
 

ಗುರುಪ್ರಸಾದ್
ಪ್ರಕಾಶಕರು
 
 
ಒಡಲಾಳದ ತಳಮಳ ಮುನ್ನುಡಿಯಿಂದ 
 
ಜಾಗತೀಕರಣ ಪ್ರಭಲವಾಗಿ ಜಾರಿಯಲ್ಲಿರುವ ನಮ್ಮ ಸಮಾಜದಲ್ಲಿ ಲೋಕದ ಚಹರೆ ಬದಲಾಗಿ ಹೋಗಿದೆ. ಎಲ್ಲ ಬಗ್ಗೆಯ ಸಂಬಂಧಗಳು ವ್ಯಾಪಾರೀಕಣಗೊಂಡಿದೆ. ಮನುಷ್ಯ ಈ ವ್ಯಾಪಾರೀಕರಣದ ಸಂವಿಧಾನದ ಒಳಗೆ ಬದುಕುವ ಹಂತ ತಲುಪಿದ್ದಾನೆ. ತನಗೊಂದು ಮುಖವಿದೆ ಎಂಬುವ ಅರಿವು ತನಗಿದ್ದರೂ ಅದನ್ನು ಹಿನ್ನೆಲೆಗೆ ಮುಚ್ಚಿಟ್ಟು ಬದುಕುವ ಸ್ಥಿತಿಗೆ ತಲುಪಿದ್ದಾನೆ. ಚಹರೆ ಬದಲಿಸಿಕೊಂಡೇ ಬದುಕುವುದು ಮಾತ್ರ ಉಳಿದಿದೆಯೋ ಏನೋ. ನೈತಿಕತೆ, ಮೌಲ್ಯಗಳು ತಮ್ಮ ಚಹರೆಗಳನ್ನು ಹಾಗೇ ಉಳಿಸಿಕೊಂಡಿವೆಯೋ, ಬದಲಾಗಿವೆಯೋ ವ್ಯಾಖ್ಯಾನಿಸುವುದು ಕಷ್ಟ. ಈ ಕತೆಯಲ್ಲಿ ಈ ಹೊತ್ತಿನ ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯನ ಸ್ಥಾನಮಾನಗಳ ಪ್ರಶ್ನೆ, ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟದ ತೀವ್ರ ಚಿತ್ರಣವಿದೆ. ಜಾಗತೀಕರಣ ಅದರ ತಾತ್ವಿಕ ಸ್ವರೂಪದಲ್ಲಿ ಕಾಣುವ ವ್ಯಾಪಾರಿ ಕ್ರೌರ್ಯ, ಈ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಹೊಸ ತಲೆಮಾರು,  ’ಪವಿತ್ರ’ ವೃತ್ತಿಯಾದ ದೇವರ ಪೂಜಾರಿ ಒಂದುಕಡೆ, ಖಾಸಗೀ ಪ್ರವಾಸೋದ್ಯಮ ಒಂದು ವ್ಯಾಪಾರದ ಸಂಸ್ಥೆಯಾಗಿ ಅದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡ ಪುರೋಹಿತನ ಮಗ ನೀಲಲೋಹಿತ ಇನ್ನೊಂದು ಕಡೆ. ವಿದೇಶದಿಂದ ಪ್ರವಾಸಕ್ಕೆ ಬರುವ ಗಿರಾಕಿಗಳನ್ನು ತೃಪ್ತಿಪಡಿಸುವುದು ಖಾಸಗೀ ಪ್ರವಾಸೋದ್ಯಮ ಸಂಸ್ಥೆಯ ಗುರಿ. ಇಲ್ಲಿ ಕೆಲಸಕ್ಕಿರುವ ನೀಲಲೋಹಿತ ಗಿರಾಕಿಗಳಿಗೆ ತನ್ನ ಶರೀರವನ್ನು ಒಪ್ಪಿಸಿ ತೃಪ್ತಿಪಡಿಸುವ ವೃತ್ತಿಯಲ್ಲಿ ಹಣ ಸಂಪಾದಿಸಬಹುದು. ಆದರೆ ಈ  ’ಅಪವಿತ್ರ’ ವೃತ್ತಿಯನ್ನು ನೆನೆದು ತನ್ನ ಪಾಡನ್ನು ಒರೆಗೆ ಹಚ್ಚಿಕೊಳುವ ಸಂಘರ್ಷವನ್ನು ಈ ಕತೆ ಸಮರ್ಥವಾಗಿ ನಿಭಾಯಿಸಿದೆ. ಪುರೋಹಿತ ತಂದೆಯ ಪವಿತ್ರ ವೃತ್ತಿಯನ್ನು ನೆನೆಯುತ್ತ, ತನ್ನ ಅಪವಿತ್ರ ವೃತ್ತಿಯನ್ನು ಮುಂದಿಟ್ಟುಕೊಂಡ ನೀಲಲೋಹಿತ ಮತ್ತು ಹಣಗಳಿಸುವ ಹೊಸ ಬಗೆಯ ಸಂಸ್ಥೆಗಳು ಈ ಸಮಾಜದಲ್ಲಿ ಹುಟ್ಟಿಕೊಂಡಿರುವುದನ್ನು ಈ ಕತೆ ಸಮರ್ಥವಾಗಿ ತೆರೆದಿಟ್ಟಿದೆ. ಕೇಶವ ಕುಡ್ಲ ಈ ಬಗೆಯ ಉತ್ತಮ ಕತೆಗಳನ್ನು ಬರೆಯುವ ಸಾಹಸ ಮಾಡಲೆಂದು ಆಶಿಸುತ್ತೇನೆ.

ಅಮರೇಶ ನುಗಡೋಣಿ.
 
ಮರದ ಮರ್ಮರ ಮುನ್ನುಡಿಯಿಂದ  

ಜನಪ್ರಿಯ ನಾಟಕದ ತಂತ್ರವನ್ನೇ ಬಳಸಿರುವ ಕಂಗಿಲರ ರಂಗ ಪ್ರಜ್ಞೆ ಮೆಚ್ಚಿಕೊಳ್ಳುವಂತದ್ದು. ಕಾಸರಗೋಡಿನ ದೇಸೀಯ ಸೊಬಗನ್ನು ಪಡೆದ ಅತ್ಯಂತ ಪರಿಣಾಮಕಾರಿಯಾದ ಭಾಷೆ, ಚುರುಕಾದ ಸಂಭಾಷಣೆ, ಅಲ್ಲಲ್ಲಿ ಬರುವ ತಿಳಿಹಾಸ್ಯ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ’ಮರದ ಮರ್ಮರ’ ನಾಟಕವು ಪ್ರಯೋಗದ ದೃಷ್ಟಿಯಿಂದಲೂ ಯಶಸ್ಸು ಕಾಣಬಲ್ಲ ನಾಟಕ. ದೃಶ್ಯಗಳು ತ್ಡರಿತವಾಗಿ ಪಲ್ಲಟಗೊಳ್ಳುತ್ತವೆ. ಚುರುಕಾದ ಸಂಭಾಷಣೆಗಳಿವೆ. ವಿವಿಧ ಪಾತ್ರಗಳ ಆಗಮನ, ನಿಷ್ಕ್ರಮಣ ನಾಟಕವನ್ನು ಜೀವಂತವಾಗಿರಿಸುತ್ತದೆ. 

ಡಾ ಎಸ್ ಬಿ ಕಾಸರಗೋಡು

Comments