ಆಕೆಗೆ ಥ್ಯಾಂಕ್ಸ್ ಹೇಳಿ...ಅಷ್ಟು ಸಾಕು..
ಟಾಮ್್ಬಾಯ್ ಅಂದ್ರೆ ನಿಮಗೆ ಗೊತ್ತು ತಾನೆ? ಗೊತ್ತಿಲ್ಲದಿದ್ದರೆ 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಅಂಜಲಿ (ಕಾಜೋಲ್) ಕಥಾಪಾತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಹುಡುಗಿಯಾಗಿದ್ದರೂ ಹುಡುಗನಿಂತಿರುವ ಚೆಲ್ಲಾಟದ ಹುಡುಗಿ. ಅಂದ್ರೆ 'ಟಾಮ್್ಬಾಯ್್'. ಗಂಡಿನ ತರಾನೇ ವೇಷ ಭೂಷಣ...ಕೂದಲು ಟ್ರಿಮ್ ಮಾಡಿಸಿ, ಜೀನ್ಸ್ ,ಟೀ ಶರ್ಟ್ ಹಾಕಿ ಥೇಟ್ ಹುಡುಗನ ಥರಾನೇ, ಕೆಲವೊಮ್ಮೆ ಹುಡುಗನೋ ಹುಡುಗಿಯೋ ಎಂದು ಸಂಶಯ ಬರುವಷ್ಟರ ಮಟ್ಟಿಗೆ ಡ್ರೆಸ್ ಮಾಡುವ ಹುಡುಗಿಯರನ್ನು 'ಟಾಮ್್ಬಾಯ್್' ಅಂತಾ ಕರೆಯುವುದು ರೂಢಿ. ಕೇವಲ ಹುಡುಗನ ತರಾ ಡ್ರೆಸ್ ಮಾಡುವುದು ಮಾತ್ರವಲ್ಲದೆ ಹುಡುಗರು ಮಾಡುವ ಎಲ್ಲಾ ಸ್ಟಂಟ್್ಗಳನ್ನು ಮಾಡುವ ಮೂಲಕವೂ ಓರ್ವ ಹುಡುಗಿ 'ಹುಡುಗ'ಅಂತಾ ಕರೆಸಿಕೊಳ್ಳುತ್ತಾಳೆ. ನೀನು ನನಗೆ ಮಗಳಾಗಿದ್ದರೂ, ನಮ್ಮ ಪಾಲಿನ 'ಮಗ' ನೀನೇ ಎಂದು ಹೆತ್ತವರು ತಮ್ಮ ಮಗಳಿಗೆ ಹೇಳಿದರೆ ಅವಳಿಗೆ ಸಂತೋಷವಾಗುತ್ತದೆ. ಆದರೆ ಓರ್ವ ಗಂಡಸಿಗೆ ನೀನು 'ಹೆಣ್ಣಿನಂತೆ' ಅಂತಾ ಹೇಳಿ ನೋಡಿ. ಅವನಿಗೆ ಬೇಜಾರಾಗುತ್ತೆ. ಹೆಣ್ಣು ಅಂದರೆ ಅಬಲೆ, ಮೃದು ಮನಸ್ಸಿನವಳು ಅವಳಿಗೆ ತನ್ನನ್ನು ಹೋಲಿಸುವುದೇ? ಎಂಬ ದೃಷ್ಟಿಯಿಂದ ಹುಡುಗ ತಾನು ಹುಡುಗಿಯಂತೆ ಎಂದು ಇತರರಿಂದ ತಮಾಷೆಗೊಳಗಾಗಲು ಇಷ್ಟಪಡುವುದಿಲ್ಲ.
ಹೆಣ್ಣು ಎಂದಾಕ್ಷಣ ನಮ್ಮ ಕಣ್ಣಿಗೆ ಸುಳಿಯುವ ಚಿತ್ರಣವೇ ಅಪ್ಪಟ ಭಾರತೀಯ ನಾರಿ. ನಾಚಿಕೊಂಡು ತಲೆತಗ್ಗಿಸಿಕೊಂಡು ಭಯಭಕ್ತಿಯಿಂದ ನಡೆದಾಡುವ ಮುಗ್ದೆ. ಹೆಣ್ಣು ಎಂದು ಹೇಳುವಾಗಲೇ ಅಲ್ಲೊಂದು ಸೌಮ್ಯಭಾವ, ಮೃದುಮಾತು, ಕರುಣೆ, ಮಮತೆಯ ಚಿತ್ರಣ ಮನಸ್ಸಲ್ಲಿ ಮೂಡುತ್ತದೆ. ನನ್ನ ಹುಡುಗಿ ಹಾಗಿರಬೇಕು ಹೀಗಿರಬೇಕು ಎಂದು ಯೋಚಿಸುವ ಗಂಡಿನ ಮನಸ್ಸಲ್ಲಿಯೂ ಈ ತರದ ಮುಗ್ದ ಹೆಣ್ಣು ಮಗಳ ಚಿತ್ರಣವೇ ಮೊದಲಿಗೆ ಬರುತ್ತದೆ. ಆದರೆ ಕಾಲ ಬದಲಾಗಿದೆ. ಈ ಮೊದಲು ಹೆಣ್ಣು ಗಂಡಿನಂತೆ ವರ್ತಿಸಿದರೆ ಗಂಡುಬೀರಿ ಎಂದು ಜರೆಯುತ್ತಿದ್ದ ಜನರು ಇದೀಗ 'ಶೀ ಈಸ್ ಸ್ಮಾರ್ಟ್್' ಅಂತಾ ಹೇಳುವ ಮೂಲಕ ಆಕೆಯನ್ನು ಹುರಿದುಂಬಿಸುತ್ತಾರೆ. ಬದಲಾವಣೆಯೇ ಜಗದ ನಿಯಮ ಎಂಬುದನ್ನು ಎಲ್ಲರೂ ಮೈಗೂಡಿಸಿಕೊಂಡು ಬಂದಿರುವುದರಿಂದ ಹೆಣ್ಣು ಗಂಡುಗಳಲ್ಲಿ ಸಮಾನತಾಭಾವ ಬಂದಿದೆ. ಹಳೆಯ ಕಾಲದ ಹೆಣ್ಮಗಳಂತೆ ಹೆಣ್ಣು ಈಗ ಮನೆಕೆಲಸಕ್ಕೆ ಮಾತ್ರ ಸೀಮಿತವಲ್ಲ. ಪುರುಷ ಮಾಡಬಹುದಾದ ಎಲ್ಲಾ ಕೆಲಸವನ್ನು ಸ್ತ್ರೀ ಮಾಡುತ್ತಿದ್ದಾಳೆ. ಅವನೊಂದಿಗೆ ಸರಿಸಮಾನಾಗಿ ನಿಲ್ಲುವ ತಾಕತ್ತು ಆವಳಿಗೆ ಇದೆ. ಆದರೂ...
ತಾನು 'ಹುಡುಗ' ಎಂದು ಕರೆಸಿಕೊಳ್ಳಲು ಇಷ್ಟಪಡುವ, ಅಥವಾ ಕರೆಯಲ್ಪಡುವ ಪ್ರತಿಯೊಬ್ಬ ಹೆಣ್ಮಗಳಲ್ಲಿ ಸ್ತ್ರೀ ಸಂವೇದನೆಯಂತೂ ಜಾಗೃತವಾಗಿಯೇ ಇರುತ್ತದೆ. ಅವರು ಸ್ತ್ರೀವಾದಿ ಅಲ್ಲದೇ ಇರಬಹುದು, ಅಥವಾ ಸ್ತ್ರೀಯರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟ ಪಡದೇ ಇರುವ ಹುಡುಗಿಯೇ ಆಗಿರಬಹುದು ಅಂತವರ ಮುಂದೆ ನೀವು ಸರಾಗವಾಗಿ ಹೆಣ್ಣಿನ ಬಗ್ಗೆ ಯದ್ವಾತದ್ವವಾಗಿ ಮಾತಾಡಿ, ಥಟ್ಟನೆ ಅವಳ ಹೆಣ್ಮನಸ್ಸು ಜಾಗೃತವಾಗುತ್ತದೆ. ನೀ ಏನಂದೆ? ಅಂತಾ ಅವಳು ಕಣ್ಣು ಕೆಂಪಾಗಿಸುತ್ತಾಳೆ. ನಾವು ಹುಡುಗಿಯರು ಹಾಗಲ್ಲ ಹೀಗೆ ಎಂದು ಅವಳು ವಾದಕ್ಕಿಳಿಯುತ್ತಾಳೆ. ಅಲ್ಲಿಯವರೆಗೆ ಕೂಲ್ ಆಗಿದ್ದ ಆಕೆ ತಕ್ಷಣ ಸ್ತ್ರೀವಾದಿಯಂತೆ ಮಾತಾಡತೊಡಗುತ್ತಾಳೆ. ಹೆಣ್ಣು ಅಂದರೆ ಅವಳೇ..
ಅಂದ ಹಾಗೆ ಇಂದು ಮಹಿಳಾ ದಿನಾಚರಣೆ. ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಎಲ್ಲೆಡೆಯೂ ನಡೆಯುತ್ತಿದ್ದೆ. ಸೆಮಿನಾರುಗಳು, ಸ್ಪರ್ಧೆ, ಭಾಷಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳು, ಮಹಿಳೆಯ ಬಗ್ಗೆ ಪುಟಗಟ್ಟಲೆ ಲೇಖನಗಳು, ಸಾಧಕಿಯರಿಗೆ ಸನ್ಮಾನಗಳು ಹೀಗೆ 'ಮಹಿಳಾ ದಿನಾಚರಣೆ' ಅದ್ದೂರಿಯಿಂದ ನೆರವೇರುತ್ತದೆ. ಆದರೆ ಸಮಾಜವನ್ನು ರೂಪಿಸಿದ 'ಆ ಮಹಿಳೆ' ಎಂದಿನಂತೆ ತನ್ನ ಕಾಯಕದಲ್ಲಿ ತಲ್ಲೀನಳಾಗಿದ್ದಾಳೆ. ಅವಳಿಗೆ ಯಾವ ಪ್ರಶಸ್ತಿ ಪುರಸ್ಕಾರವೂ ದಕ್ಕುವುದಿಲ್ಲ. ಹಾಗಂತ ಅವಳು ಮುನಿಸಿಕೊಂಡಿಲ್ಲ. ಹೌದು. ಅವಳು ಬೇರೆ ಯಾರು ಅಲ್ಲ. 'ಗೃಹಿಣಿ' ಅಥವಾ ಹೌಸ್್ವೈಫ್!! ಅವಳು ನಮ್ಮ ಅಮ್ಮನಾಗಿರಬಹುದು, ಸಹೋದರಿ ಅಥವಾ ಪತ್ನಿಯೇ ಆಗಿರಬಹುದು. ಮನೆಗೆಲಸ ಮಾಡಿಕೊಂಡು ಮನೆಯಲ್ಲೇ ಇದ್ದು ತಮ್ಮ ಮಕ್ಕಳ, ಗಂಡನ ಸಂತೋಷದಲ್ಲಿ ಸಂತೋಷವನ್ನು ಕಾಣುವಾಕೆ. 'ಸಾಧಕಿ' ಎಂದಾಕ್ಷಣ ನಮ್ಮ ಮುಂದೆ ಸುಳಿಯುವುದೇ ಏನಾದರೂ ಮಹತ್ಕಾರ್ಯ ಮಾಡಿದ ಮಹಿಳಾಮಣಿಗಳು. ಆದರೆ ತನ್ನ ಜೀವನವನ್ನು ಕುಟುಂಬದ ಸಂತೋಷಕ್ಕಾಗಿ ಮೀಸಲಿರಿಸಿದ 'ಗೃಹಿಣಿ'ಯ ಬಗ್ಗೆ ನಾವು ಚಿಂತಿಸುವುದು ಕಡಿಮೆ. ಮನೆಯಲ್ಲೇ ಇದ್ದು ಗಂಡನ ಮತ್ತು ಮಕ್ಕಳ ಚಾಕರಿ ಮಾಡುವ ಈಕೆಯೇ ನಿಜವಾದ ಸಾಧಕಿ ಎಂದರೆ ತಪ್ಪಾಗಲಾರದು. ಯಾಕೆಂದರೆ ಇಡೀ ಕುಟುಂಬವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ, ಎಲ್ಲರಿಗೂ ಪ್ರೋತ್ಸಾಹ ನೀಡಿ ಮುಂದೆ ಬರುವಂತೆ ಹುರಿದುಂಬಿಸಿದ್ದು ಅವಳಲ್ಲವೇ? ಯಾವುದೇ ಫಲಾಪೇಕ್ಷೆಯಿಲ್ಲದೆ ಅವಳಂತೆ ಕೆಲಸ ಮಾಡುವವರು ಇನ್ಯಾರಿದ್ದಾರೆ ಹೇಳಿ? ಅವಳ ಗುಣಗಾನ ಮಾಡುವವರು ಯಾರಿದ್ದಾರೆ? ಅಂತದರಲ್ಲಿ ಸುದ್ದಿ, ಪ್ರಶಸ್ತಿಗಳಿಂದ ದೂರವಾಗಿ ನಿಂತು ಸದ್ದಿಲ್ಲದೆ ಪ್ರೋತ್ಸಾಹ ನೀಡುವ ಆ ಮಹಾನ್ 'ಗೃಹಿಣಿ'ಗೆ ಥ್ಯಾಂಕ್ಸ್ ಹೇಳುವ ಮೂಲಕ ಈ ಮಹಿಳಾ ದಿನಾಚರಣೆಯನ್ನು ಅರ್ಥಗರ್ಭಿತವಾಗುವಂತೆ ಮಾಡೋಣ.