ಆಗಾಗ ಬಿದ್ದ ಮಳೆ

ಆಗಾಗ ಬಿದ್ದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೦೮

‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ.  ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ. ಕೈಗೆ ಸಿಗುವುದಿಲ್ಲ. ಎಷ್ಟೋ ಸಲ ಕಾಣೆಯಾಗುತ್ತದೆ. ಕೆಲ ದಿನಗಳ ಅನಂತರ ಅವುಗಳನ್ನು ಹುಡುಕುವ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಉಮ್ಮೇದಿ ಸಹ ಉಳಿದಿರುವುದಿಲ್ಲ. 

ಹೀಗೆ ಅಂದುಕೊಳ್ಳುತ್ತಿರುವಾಗಲೇ ‘ವಿಜಯ ಕರ್ನಾಟಕದ'ದಲ್ಲಿ ಪ್ರಕಟವಾದ ಲೇಖನಗಳನ್ನೆಲ್ಲ ನನ್ನ ಮುಂದೆ ತಂದಿಟ್ಟು ‘ಇವನ್ನೆಲ್ಲ ಪ್ರಕಟಿಸಬಾರದೇಕೇ? ಬೆಚ್ಚಗೆ ಕುಳಿತು ಓದುತ್ತೇವೆ. ಲೇಖಕರಾಗಿ ಅಷ್ಟೂ ಮಾಡಬಾರದೇ? ಬರೆದು ಮುಗಿಸಿದರೆ ಆಗಲಿಲ್ಲ. ಪುಸ್ತಕ ರೂಪದಲ್ಲಿ ಪ್ರಕಟಿಸುವವರೆಗೂ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ' ಎಂದು ವಿನಾಕಾರಣ ರಗಳೆ ಮಾಡಿ, ಅದು ಜಗಳವಾಗುವುದಕ್ಕಿಂತ ಮುಂಚೆಯೇ ಅಂತ್ಯಗೊಳಿಸಿ ಈ ಪುಸ್ತಕಕ್ಕೆ ಕಾರಣವಾದವಳು ಪತ್ರಿಕೆ ಅಭಿಮಾನಿ ಹಾಗೂ ಗೆಳತಿ ಭಾಮಿನಿ ಭಾನು ಕಾಮಿನಿ ಕಾಸರಗೋಡು (ಭಾಭಾಕಾಕಾ). ಯಾವುದೇ ಬರಹಗಾರನಿಗೆ ಇಂಥವಳೊಬ್ಬಳು ಅಭಿಮಾನಿ ಇರಬೇಕು. ಬರೆದದ್ದು ಜೋಳ್ಳಿರಲಿ, ಕಾಳಿರಲಿ, ಕನಿಷ್ಟ ಪುಸ್ತಕವಾಗಿ ಪ್ರಕಟವಾಗುವುದು ಗ್ಯಾರಂಟಿ.”

ಹೀಗೆ ಅಭಿಮಾನಿಯ ಅಭಿಮಾನಕ್ಕೆ ಹೊರ ಬಂದಿರುವ ಈ ಪುಸ್ತಕದ ಬಿಡಿ ಬರಹಗಳು ನಿಜಕ್ಕೂ ಚೆನ್ನಾಗಿವೆ. ಪರಿವಿಡಿಯಲ್ಲಿ ನೀಡಲಾದ ಪಟ್ಟಿಯಲ್ಲಿ ೨೦ ಲೇಖನಗಳಿವೆ. ಹೊಸ ದಾರಿ ತೋರೋ ಗುರು, ‘ಜೋಕು'ಮಾರನಾಗಿ ನೋಡಿ ಸ್ವಾಮಿ, ಕಹಿ ಮಾತ್ರೆ ಸಂತ, ನೇಪಾಳ ‘ಪರ್ವ', ಮುಖ್ಯಮಂತ್ರಿ ಚಾದರ ಎಳೆದುಕೊಂಡಾಗ ಬೆಳಕು ಹರಿದಿತ್ತು, ಬಾಂಗ್ಲಾ ಬ್ಯಾಂಕರ್ ಗೆ ಶಾಂತಿ ನೋಬೆಲ್, ಹೋಗಿ ಬನ್ನಿ ಕಲಾಂ ಸರ್, ಕಪ್ ನಮಗೆ ಬರಲಿ- ಆದರೆ ಕ್ರಿಕೆಟ್ಟೆ ಗೆಲ್ಲಲಿ, ಸರಳ ಮತ್ತು ಅಧ್ಯಯನಶೀಲ ಪತ್ರಕರ್ತ ಎಂಬೆಲ್ಲಾ ಹೆಸರಿನ ಲೇಖನಗಳಿವೆ. ಸಣ್ಣ ಲೇಖನಗಳಾಗಿರುವುದರಿಂದ ಓದಲು ಸುಲಭ ಹಾಗೂ ಸರಾಗ.

‘ಹೋಗಿ ಬನ್ನಿ, ಕಲಾಂ ಸರ್' ಎಂಬ ಲೇಖನದಲ್ಲಿ ವಿಶ್ವೇಶ್ವರ ಭಟ್ ಇವರು ಬರೆಯುತ್ತಾರೆ “ಐದು ವರ್ಷಗಳ ಹಿಂದೆ ಡಾ.ಅಬ್ದುಲ್ ಕಲಾಂ ರಾಷ್ಟ್ರಪತಿ ಭವನಕ್ಕೆ ಬರುವಾಗ ಎರಡು ಸೂಟ್ ಕೇಸ್ ಹಾಗೂ ಕೆಲವು ಬಾಕ್ಸ್ ಪುಸ್ತಕಗಳನ್ನು ತಂದಿದ್ದರು. ಇಂದು ರಾಷ್ಟ್ರಪತಿ ಭವನದಿಂದ ಹೊರ ನಡೆಯುತ್ತಿದ್ದಾರೆ. ಅವೇ ಎರಡು ಸೂಟ್ ಕೇಸ್ ಹಾಗೂ ಕೆಲವು ಬಾಕ್ಸ್ ಪುಸ್ತಕಗಳೊಂಡಿಗೆ. ಆದರೆ ಡಾ. ಕಲಾಂ ದೇಶಕ್ಕೆ ದೇಶವೇ ಅಭಿಮಾನ ಪಡುವಂತಹ ಒಂದು ಉದಾತ್ತ ಸಂಪ್ರದಾಯ, ಉಜ್ವಲ ಆದರ್ಶವನ್ನು ಬಿಟ್ಟು ಹೋಗುತ್ತಿದ್ದಾರೆ. ರಾಷ್ಟ್ರಪತಿ ಸ್ಥಾನದ ಘನತೆ, ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸಿ ಹೋಗುತ್ತಿದ್ದಾರೆ. 

ಕೆಲವರು ಎರಡನೆ ಅವಧಿ ಸಿಗುವುದಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆ, ಪೆಟ್ಟಿಗೆ ಕಟ್ಟಲು ಶುರು ಮಾಡುತ್ತಾರೆ. ತಮಗೆ ಬಂದ ಉಡುಗೊರೆಯಿಂದ ಹಿಡಿದು ಕರ್ಟನ್, ಕಾರ್ಪೆಟ್, ಹೂಕುಂಡಗಳನ್ನೂ ಬಿಡದೇ ರಾಷ್ಟ್ರಪತಿ ಭವನದಿಂದ ಸಾಗಿಸುತ್ತಾರೆ. ಅಂಥ ರಾಷ್ಟ್ರಪತಿಗಳನ್ನೂ ನಾವು ಕಂಡಿದ್ದೇವೆ. ಅಂಥವರಿಗೆ ಬಿಟ್ಟು ಹೋಗಲು ಏನೂ ಇಲ್ಲದಿರುವುದರಿಂದ ಕೈಗೆ ಸಿಕ್ಕಿದ್ದೆಲ್ಲವನ್ನೂ ಎತ್ತಿ ಕೊಂಡು ಹೋಗುತ್ತಾರೆ, ಬಿಡಿ.”

ವಿಶ್ವೇಶ್ವರ ಭಟ್ ಅವರು ಈ ಪುಸ್ತಕವನ್ನು ಪ್ರದೀಪ್ ಒಡೆಯರ್ ಅವರ ನಗು, ಸ್ನೇಹ ಹಾಗೂ ಪ್ರೀತಿಗೆ ಅರ್ಪಣೆ ಮಾಡಿದ್ದಾರೆ. ಸುಮಾರು ನೂರು ಪುಟಗಳ ಈ ಪುಸ್ತಕದ ಬಿಡಿಬರಹಗಳನ್ನು ಯಾವಾಗ ಬೇಕಾದರೂ ಬಿಡುವು ಮಾಡಿಕೊಂಡು ಓದಬಹುದು.