ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ

ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ

ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ ತಿರುಚುತ್ತಿದೆ. ಅದನ್ನು ರಕ್ಷಿಸಲಿಕ್ಕಾಗಿ ಅವರು ಅಲ್ಲಿಗೆ ಬಂದಿದ್ದಾರೆ.

ಕಳೆದ ಶತಮಾನದಲ್ಲಿ ಪಶ್ಚಿಮ ಘಟ್ಟಗಳ ಶೇಕಡಾ 35 ಅರಣ್ಯ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಕಾಳಿಂಗ ಸರ್ಪಗಳ ವಾಸಸ್ಥಳದ ವ್ಯಾಪ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಅವು ಆಹಾರ ಹುಡುಕಿಕೊಂಡು ಅರಣ್ಯದ ಅಂಚಿನ ಹೊಲಗಳಿಗೆ ಬರುತ್ತಿವೆ. ಅಂದರೆ, ಮನುಷ್ಯರ ಮನೆಗಳ ಹತ್ತಿರ ಹೆಚ್ಚೆಚ್ಚಾಗಿ ಬರುತ್ತಿವೆ. ಆದ್ದರಿಂದ, ಸಂಶೋಧನಾ ಕೇಂದ್ರದ “ಕಾಳಿಂಗ ರಕ್ಷಣಾ ತಂಡ"ಕ್ಕೆ ಹಾವು ಹಿಡಿಯಲಿಕ್ಕಾಗಿ ಆಗಾಗ ಫೋನ್ ಕರೆಗಳು ಬರುತ್ತಿವೆ.

“ಕಾಳಿಂಗ ಸರ್ಪಗಳು ನಾಚಿಕೆ ಸ್ವಭಾವದವು. ಅವನ್ನು ಉದ್ರೇಕಿಸದಿದ್ದರೆ ಅವು ದಾಳಿ ಮಾಡೋದಿಲ್ಲ" ಎನ್ನುತ್ತಾರೆ ಅಜಯ್ ಗಿರಿ. ಇದನ್ನು ಅನುಮೋದಿಸುತ್ತಾರೆ, ಸಂಶೋಧನಾ ಕೇಂದ್ರದ ಸ್ಥಾಪಕರಾದ ಸರ್ಪತಜ್ನ ರೋಮುಲಸ್ ವಿಟೆಕರ್. ಅವರ ಅನುಸಾರ, “ಬಹುಪಾಲು ಜನರು ಕಾಳಿಂಗ ಸರ್ಪ ಭಯಾನಕ ಸರ್ಪವೆಂದು ಭಾವಿಸುತ್ತಾರೆ. ಆದರೆ, ಕಾಳಿಂಗ ಸರ್ಪಗಳು ಮನುಷ್ಯರಿಗೆ ಕಚ್ಚಿದ ದಾಖಲೆಗಳು ತೀರಾ ಅಪರೂಪ.”  

ಕಾಳಿಂಗ ಸರ್ಪದ ವೈಜ್ನಾನಿಕ ಹೆಸರು ಒಫಿಯೋಫೇಗಸ್ ಹನ್ನಾ. ಅದು ಹಾವುಗಳನ್ನು ತಿನ್ನುವ ಹಾವು ಎಂಬುದನ್ನು ಈ ಹೆಸರು ಸೂಚಿಸುತ್ತದೆ. ಅಜಯ್ ಗಿರಿ ಜೊತೆಗೆ ಹೆಗ್ಗೋಡಿಗೆ ಬಂದಿರುವ ಸಂಶೋಧನಾ ಕೇಂದ್ರದ ಅಧಿಕಾರಿ ಮೇಘನಾ ನಾಗರಾಜ್ ಅಲ್ಲಿ ನೆರೆದಿರುವ ಜನರಿಗೆ ಕಾಳಿಂಗ ಸರ್ಪ ಪರಿಸರದಲ್ಲಿ ಯಾಕೆ ಇರಬೇಕೆಂಬುದನ್ನು ವಿವರಿಸುತ್ತಾರೆ: ಹೊಲಗಳಿಗೆ ಇಲಿ ಇತ್ಯಾದಿ ದಂಶಕ ಪ್ರಾಣಿಗಳು ಬಂದೇ ಬರುತ್ತವೆ. ಅವನ್ನು ಹಿಡಿದು ತಿನ್ನಲು ವಿಷದ ಹಾವುಗಳ ಸಹಿತ ಹಲವು ಹಾವುಗಳೂ ಬರುತ್ತವೆ. ಕಾಳಿಂಗ ಸರ್ಪವು ಇತರ ಹಾವುಗಳನ್ನು ತಿಂದು ಬದುಕುವ ಕಾರಣ ಪರಿಸರದ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.

ಬಹುಪಾಲು ಭಾರತೀಯರಂತೆ ಇಲ್ಲಿನ ಜನಸಾಮಾನ್ಯರೂ ಕಾಳಿಂಗ ಸರ್ಪವೆಂದರೆ ಹೆದರುತ್ತಾರೆ. ಜೊತೆಗೆ, ಅದು ಪೂಜನೀಯ ಹಾವು ಎಂದೂ ಅವರು ನಂಬಿದ್ದಾರೆ. ಇದರಿಂದಾಗಿ, ಕಾಳಿಂಗ ಸರ್ಪಗಳಿಗೆ ಹಾನಿ ಮಾಡಬಾರದು, ಅವನ್ನು ಕೊಲ್ಲಬಾರದು; ಬದಲಾಗಿ ಸಂಶೋಧನಾ ಕೇಂದ್ರದ ಸಿಬ್ಬಂದಿಯನ್ನು ಕರೆತರಬೇಕು ಎಂದು ಜನಸಾಮಾನ್ಯರನ್ನು ಒತ್ತಾಯಿಸಲು ಆಕೆಗೂ ಆಕೆಯ ಸಹೋದ್ಯೋಗಿಗಳಿಗೂ ಸಹಾಯವಾಗಿದೆ. 2005ರಲ್ಲಿ ಸ್ಥಾಪನೆಯಾದ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರವು ಆರಂಭದಿಂದಲೂ ಕಾಳಿಂಗ ಸರ್ಪಗಳಿಗೆ ಹಾನಿ ಮಾಡದೆ ಅವನ್ನು ರಕ್ಷಿಸಲು ಶ್ರಮಿಸುತ್ತಿದೆ.

ಆ ದಿನ ರೈತನೊಬ್ಬ ತನ್ನ ಮನೆಯ ಹತ್ತಿರ ಕಾಳಿಂಗ ಸರ್ಪವನ್ನು ಕಂಡು ಸಂಶೋಧನಾ ಕೇಂದ್ರಕ್ಕೆ ವಿಷಯ ತಿಳಿಸಿದ್ದ. ಅದು ಗಾಯಗೊಂಡ ಕೇರೆ ಹಾವೊಂದನ್ನು ಅಟ್ಟಿಸಿಕೊಂಡು ಬಂದಿತ್ತು. ಅದನ್ನು ರಕ್ಷಿಸಲಿಕ್ಕಾಗಿ ಬಂದವರು ಅಜಯ್ ಗಿರಿ ಮತ್ತು ಎಸ್.ಎಸ್. ಕುಮಾರ್ (ಈ ವೃತ್ತಿಯಲ್ಲಿ 27 ವರುಷಗಳ ಅನುಭವಿ.) ಕುಮಾರ್ ಹಾವನ್ನು ಅಜಯ್ ಗಿರಿ ಕಡೆಗೆ ಓಡಿಸುತ್ತಾರೆ. ಇವರು, ಕೊಕ್ಕೆಯ ಸಹಾಯದಿಂದ ಹಾವನ್ನು ನಿಯಂತ್ರಿಸಿ, ಅದನ್ನು ಬಾಲದಿಂದ ಎತ್ತಿ ಹಿಡಿಯುತ್ತಾರೆ. ಅನಂತರ,  ಹತ್ತಿರದಲ್ಲಿದ್ದ “ಟ್ರಾಪ್" ಕಡೆಗೆ ಹಾವು ಚಲಿಸುವಂತೆ ಮಾಡುತ್ತಾರೆ. “ಟ್ರಾಪ್" ಅಂದರೆ, ಸುಮಾರು ಎರಡಡಿ ಉದ್ದದ ಪಿವಿಸಿ ಪೈಪಿನ ಒಂದು ತುದಿಗೆ ಕಟ್ಟಿರುವ ಬಟ್ಟೆ ಚೀಲ. ಕಾಳಿಂಗ ಸರ್ಪ ಟ್ರಾಪಿನ ಒಳಗೆ ಹೋಗುವ ಬದಲಾಗಿ ಹೆಡೆಯೆತ್ತಿ ಫೂತ್ಕರಿಸುತ್ತಾ ಗಿರಿಯ ಕಡೆಗೆ ನುಗ್ಗುತ್ತದೆ. ಕೊಕ್ಕೆಯನ್ನು ಬಳಸಿ ಗಿರಿ ಹಾವನ್ನು ದೂರಕ್ಕೆ ಸರಿಸುತ್ತಾರೆ.

ಮೂರೇ ನಿಮಿಷಗಳಲ್ಲಿ ಕಾಳಿಂಗ ಸರ್ಪ ಟ್ರಾಪಿನ ಒಳಹೋಗುವಂತೆ ಮಾಡುತ್ತಾರೆ ಗಿರಿ. ತಕ್ಷಣವೇ ಕುಮಾರ್ ಹಾವಿರುವ ಚೀಲದ ಬಾಯಿ ಕಟ್ಟಿ, ಅದನ್ನು ತೂಗುತ್ತಾರೆ. ಹಾವಿನ ತೂಕ ಮತ್ತು ಇತರ ವಿವರಗಳನ್ನು ಬರೆದುಕೊಳ್ಳುತ್ತಾರೆ.

ಭಾರತದಲ್ಲಿ ಪೂರ್ವ ಘಟ್ಟಗಳ ಶ್ರೇಣಿ ಮತ್ತು ಈಶಾನ್ಯ ರಾಜ್ಯಗಳ ಕಾಡುಗಳೂ ಕಾಳಿಂಗ ಸರ್ಪಗಳು ವಾಸಪ್ರದೇಶಗಳು. ಆಗ್ನೇಯ ಏಷ್ಯಾ ದೇಶಗಳಲ್ಲಿ ಮತ್ತು ದಕ್ಷಿಣ ಚೀನಾದಲ್ಲಿಯೂ ಇವುಗಳ ವಾಸಪ್ರದೇಶಗಳಿವೆ. ಇಂತಹ ಕೆಲವು ಪ್ರದೇಶಗಳಲ್ಲಿ ಇವುಗಳ ಚರ್ಮಕ್ಕಾಗಿ ಅಥವಾ ಭಯದಿಂದ ಇವನ್ನು ಕೊಲ್ಲುತ್ತಾರೆ.

ಕೆಲವರು ಕಾಳಿಂಗ ಸರ್ಪ ಕಚ್ಚಿದ್ದರಿಂದಾಗಿ ಸತ್ತಿದ್ದಾರೆ ಎಂದಾದರೆ ಅದಕ್ಕೆ ಅವರ ತಪ್ಪು ವರ್ತನೆಯೇ ಕಾರಣ. "ಹಾವು ರಕ್ಷಕರೆಂದು ಕರೆದುಕೊಳ್ಳುವ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಲಿಕ್ಕಾಗಿ ಕಾಳಿಂಗ ಸರ್ಪಗಳಿಗೆ ನೋವು ಮಾಡಿ ಅವನ್ನು ಉದ್ರೇಕಿಸುತ್ತಾರೆ. ಇನ್ನೂ ಕೆಲವರು, ಹಾವುಗಳನ್ನು ಚುಂಬಿಸುವ ದೃಶ್ಯದ ಫೋಟೋ ತೆಗೆಯಲು ಪ್ರಯತ್ನಿಸಿ, ಸಾವಿನ ಚುಂಬನ ಪಡೆಯುತ್ತಾರೆ" ಎನ್ನುತ್ತಾರೆ ಗಿರಿ.

ಕಳೆದ ದಶಕದಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರವು ಹಾವುಗಳ ರಕ್ಷಣೆಗಾಗಿ ಸ್ಪಂದಿಸಿದ ಕರೆಗಳ ಸಂಖ್ಯೆ 2,000; ಅವುಗಳಲ್ಲಿ 500 ಕರೆಗಳು ಕಾಳಿಂಗ ಸರ್ಪದ ರಕ್ಷಣೆಗಾಗಿ ಎಂದು ಅಂದಾಜಿಸುತ್ತಾರೆ ಗಿರಿ. 2008ರಲ್ಲಿ ಸಂಶೋಧನಾ ಕೇಂದ್ರವು ಜಗತ್ತಿನಲ್ಲೇ ಮೊದಲನೆಯ ಕಾಳಿಂಗ ಸರ್ಪಗಳ ರೇಡಿಯೋ ಟ್ರಾಕಿಂಗ್ ಯೋಜನೆ ಶುರು ಮಾಡಿದೆ. ಕೇಂದ್ರದ ಸಿಬ್ಬಂದಿ ತಾವು ರಕ್ಷಿಸಿದ ಕೆಲವು ಕಾಳಿಂಗ ಸರ್ಪಗಳ ಚರ್ಮದೊಳಗೆ ಇಲೆಕ್ಟ್ರಾನಿಕ್ ಟ್ಯಾಗ್ ಅಳವಡಿಸಿ ಅವನ್ನು ಕಾಡಿನಲ್ಲಿ ಬಿಟ್ಟಿದ್ದಾರೆ. ಇದರಿಂದ ಅವುಗಳ ದೈನಂದಿನ ಚಲನೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿದೆ.

ಹೀಗೆ ಸಂಗ್ರಹಿಸಿದ ದತ್ತಾಂಶ ಕಾಳಿಂಗ ಸರ್ಪಗಳ ಬಗ್ಗೆ ಅಪೂರ್ವ ಮಾಹಿತಿ ಒದಗಿಸಿದೆ. ಉದಾಹರಣೆಗೆ, ಹೆಣ್ಣು ಕಾಳಿಂಗ ಸರ್ಪ ಗೂಡು ಕಟ್ಟುತ್ತದೆ. ಬೇರೆ ಯಾವುದೇ ಜಾತಿಯ ಹಾವುಗಳಲ್ಲಿ ಈ ವರ್ತನೆ ಕಂಡು ಬಂದಿಲ್ಲ. ಇನ್ನೊಂದು ಮಾಹಿತಿ: ಒಂದು ಕಾಳಿಂಗ ಸರ್ಪದ ವಾಸಸ್ಥಳದ ವ್ಯಾಪ್ತಿ (ಹೋಮ್ ರೇಂಜ್) 15 - 20 ಚದರ ಕಿಲೋಮೀಟರ್. ಅವನ್ನು ಈ ವ್ಯಾಪ್ತಿಯಿಂದ ಹೊರಕ್ಕೆ ಓಡಿಸಿದರೆ ಅವು ಸತ್ತು ಹೋಗಬಹುದು. ಆದ್ದರಿಂದಲೇ, ಸಂಶೋಧನಾ ಕೇಂದ್ರದವರು ರಕ್ಷಿಸಿದ ಕಾಳಿಂಗ ಸರ್ಪಗಳನ್ನು ರಕ್ಷಿಸಿದ ಜಾಗದಿಂದ ಒಂದೆರಡು ಕಿಮೀ ದೂರದಲ್ಲಿ ಪುನಃ ಕಾಡಿನೊಳಗೆ ಬಿಡುತ್ತಾರೆ.

"ನಾವು ರಕ್ಷಿಸಿದ ಕಾಳಿಂಗ ಸರ್ಪಗಳನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕೊಡೋದಿಲ್ಲ. ಯಾಕೆಂದರೆ ಅವು ಇರಬೇಕಾದ್ದು ಕಾಡಿನಲ್ಲಿ" ಎನ್ನುತ್ತಾ, ಆಗ ತಾನೇ ಹಿಡಿದಿದ್ದ ಕಾಳಿಂಗ ಸರ್ಪವಿದ್ದ ಚೀಲವನ್ನು ಜೀಪಿನ ಮುಂಭಾಗದ ಸೀಟಿನ ಕೆಳಗಡೆ ಇಟ್ಟರು  ಗಿರಿ. ಅನಂತರ, ಜೀಪನ್ನು ಚಲಾಯಿಸಿ, ಸುಮಾರು ಒಂದು ಕಿಮೀ ಸಾಗಿ, ಹುಲ್ಲು ಬೆಳೆದಿದ್ದ ಜಾಗವೊಂದರ ಹತ್ತಿರ ನಿಲ್ಲಿಸಿದರು. ಹಾವಿದ್ದ ಚೀಲವನ್ನು ಎತ್ತಿಕೊಂಡು ಕಾಡಿನತ್ತ ನಡೆದರು. ಚೀಲದೊಳಗಿದ್ದ ಕಾಳಿಂಗ ಸರ್ಪ ಭುಸುಗುಡುತ್ತಲೇ ಇತ್ತು. ಕಾಡಿನ ಅಂಚಿನಲ್ಲಿ ನಿಂತು, ಚೀಲದ ಕಟ್ಟು ಬಿಚ್ಚಿ, ನೆಲದತ್ತ ಚೀಲದ ಬಾಯಿ ತೆರೆದರು. ತಕ್ಷಣವೇ ಹೊರಕ್ಕೆ ಬಂದ ಕಾಳಿಂಗ ಸರ್ಪ ಕಾಡಿನತ್ತ ಸರಿದು ಹೋಯಿತು. ಜೀವಜಾಲದ ಅದ್ಭುತ ಕೊಂಡಿಯೊಂದು ಪುನಃ ಜೀವಜಾಲದ ಆಸರೆಯಾದ ಪ್ರಕೃತಿಯ ಮಡಿಲು ಸೇರಿತು.

ಫೋಟೋ 1: ಕಾಡಿನಲ್ಲಿ ಕಾಳಿಂಗ ಸರ್ಪ
ಫೋಟೋ 2: ಇನ್ನೊಂದು ಹಾವನ್ನು ಕಚ್ಚಿ ಕೊಲ್ಲಲು ಪ್ರಯತ್ನಿಸುತ್ತಿರುವ ಕಾಳಿಂಗ
ಫೋಟೋ 3: ಕಾಳಿಂಗ ಸರ್ಪವನ್ನು ಹಿಡಿದು ಚೀಲದೊಳಕ್ಕೆ ನುಗ್ಗಿಸಲು ಯತ್ನಿಸುತ್ತಿರುವ ಅಜಯ್ ಗಿರಿ
ಫೋಟೋ 4: ಚೀಲದಲ್ಲಿರುವ ಕಾಳಿಂಗ ಸರ್ಪವನ್ನು ತೂಗುತ್ತಿರುವ ಎಸ್.ಎಸ್. ಕುಮಾರ್
ಕೃಪೆ: ಫೋಟೋ 1 ಮತ್ತು 2: ಜಾಲತಾಣಗಳು; ಫೋಟೋ: 3 ಮತ್ತು 4: ಮಹಿಮಾ ಎ. ಜೈನ್