ಆಗುವುದಾದರೆ ಪ್ರಳಯ, ಬೇಗ ಆಗಲಿ...

Submitted by Mohan V Kollegal on Tue, 12/04/2012 - 17:32
ಬರಹ

 

ಡಿಸೆಂಬರ್ ಇಪ್ಪತ್ತೊಂದಕ್ಕೆ ಪ್ರಳಯವಂತೆ
ಎಂಬ ಸೊಲ್ಲು ಕಿವಿಗಡರಿದ್ದೆ
ಎದ್ದು ಕುಳಿತುಕೊಂಡಿತು
ಕಂಬಳಿಯೊಳವಿತಿದ್ದ ಹರಿದ ಬಟ್ಟೆ
ಬೆರಟೊರಟು ಕೇಶ
ಒರಟು ಕೈ ಕೊಳಕು ಮೈಯೊಳಗೆ
ಕೊಳೆತಿಣುಕಿದ ರಸ್ತೆ ಬದಿ ಜೀವ
 
ಆ ಹುಣಸೆಮರದಲ್ಲಿ ತೂಗಿಕೊಂಡ
ಅರೆಬರೆ ಸತ್ತವರು
ಕಣ್ಣರಳಿಸಿದರು ಕಿವಿ ನಿಮಿರಿಸಿ
ಕೊಂಬೆರೆಂಬೆ ಮೇಲೆ ಕುಳಿತು
ಹಗ್ಗ ಕಟ್ಟುತ್ತಿದ್ದವರು-
ನೆಗೆದರು ಖುಷಿ ಇಮ್ಮಡಿಸಿ
 
ಒಂದೇ ಚರ್ಮದ ರಕ್ತದಿಬ್ಬರಲ್ಲಿ
ಸಿಂಹಾಸನದ ಮೇಲೆ
ಕುಳಿತವನು ನಡುಗಿದ
ಮನೆಮುಂದೆ ಮಲ ತೊಳೆದವನು
ಗುದ್ದಲಿಯೆಸೆದು ನಕ್ಕೇಬಿಟ್ಟ
ಬೀದಿ ಗುಡಿಸಿದವಳು
ಪೊರಕೆ ಎಸೆದು ತಲೆ ಬಾಚಿದಳು
 
ಮಿಣುಕು ಹುಳ ಅಣಕಿಸಲು
ಇರುಳ ಮಸಿ ಮೆತ್ತಿಕೊಂಡ
ಅರಳುಗಣ್ಣಿನ ಕೂಸುಗಳು
ಅಮ್ಮನೆದೆಗೆ ಬೆಂಕಿ ಬಿದ್ದು
ಅಡುಗೆಯೊಲೆ ಆರಿದಾಗ
ಮೂಲೆಯಲ್ಲಿ ನಡುಗಿದ ಕಂದಮ್ಮಗಳು
ಬೀದಿಗೆ ಬಂದವು ಕುಣಿ ಕುಣಿದು
 
ಒಂದಷ್ಟು ಭಗ್ನ ಎದೆಗಳು ಎಚ್ಚರಗೊಂಡು
ಶತಶತಮಾನದ ತುಳಿತಗಳು
ಹೆಣಕಿತ್ತಂತೆ ಭುಗಿಲೆದ್ದವು
ಕೇರಿ ಕೇರಿ ನಡುವಿನ ಗೆರೆಗಳು
ಗಲ್ಲಿಗಳಲ್ಲಿಣುಕಿದ
ಕಾಣದ ಕಾಣಿಸಿಕೊಳ್ಳದ ಬಂಧಗಳು
ಕೊಡವಿದವು ಕಂಬಳಿ 
 
ಪ್ರಳಯ ನಿಲ್ಲಿಸುವಿರಾದೆಯೊಂದಿಗೆ 
ದೇವಸ್ಥಾನದ ಘಂಟೆ ಮೊಳಗಲು
ಮಸಣದ ಮಾಚ ಕಿವಿ ಮುಚ್ಚಿಕೊಂಡ
ಕಂಬಳಿಯೊಳಗಿನ ಜೀವ 
‘ನಿಜವೇ?’ ಎಂದು ಕೂಗಿಕೊಂಡಿತು
ಹುಣಸೇಮರದ ಜೀವಗಳಿಗೆ
ಉಳಿದರ್ಧ ಜೀವ ಕಳೆವ ಸಡಗರ
ಅಪರೂಪಕ್ಕೆ ಕೆಲ ಕೂಸಗುಳು
ನಲಿದವು ಬೀದಿಪೂರ
 
ಸುಖದ ಸುಪ್ಪತ್ತಿಗೆಯಲ್ಲಿ ತೂಕಡಿಸಿದ
ಭವ್ಯಮನೆ ಮುಂದಿನ ಹಸಿರ ಮೇಲೆ
ಭಿಕ್ಷೆ ಬೇಡಿದ ಹರಕು ಬಟ್ಟೆ ಜೀವ ಹೇಳಿತು
 
‘ಆಗುವುದಾದರೆ ಪ್ರಳಯ, ಬೇಗ ಆಗಲಿ
ಸತ್ತು, ಸಾಧ್ಯವಾದರೆ ಮತ್ತೆ ಹುಟ್ಟಿ ಬಂದೊಂದಾಗೋಣ’