ಆಗ್ರಾ: ಪೇಟಾದ ಊರಲ್ಲಿ ಟೋಪಿ ಗ್ಯಾರಂಟಿ!

ಆಗ್ರಾ: ಪೇಟಾದ ಊರಲ್ಲಿ ಟೋಪಿ ಗ್ಯಾರಂಟಿ!

ಪ್ರೇಮದ ಶ್ರೇಷ್ಠ ಪ್ರತೀಕವೆನಿಸಿರುವ  ತಾಜ್ ಮಹಲನ್ನು ನೋಡುವುದು  ಅದರ ಬಗ್ಗೆ ಓದಿದವರೆಲ್ಲರ ಕನಸಾಗಿರುತ್ತದೆ. ಕಳೆದ 30ವರ್ಷಗಳಲ್ಲಿ ಮೂರು ಬಾರಿ  ತಾಜ್ ನೋಡಲು ಆಗ್ರಾಕ್ಕೆ ಹೋಗಿ ಬಂದಿದ್ದೇನೆ. ಜಗತ್ತಿನ ಅದ್ಭುತಗಳಲ್ಲಿ ಒಂದೆನಿಸಿರುವ ಈ ಮನೋಹರ ಮಹಲನ್ನು ನೋಡುವುದು ಕಣ್ನಿಗೆ ಹಬ್ಬವೇನೋ ಹೌದು. ಆದರೆ ಜಗತ್ತಿನಾದ್ಯಂತದಿಂದ ಬರುವ ಪ್ರವಾಸಿಗರಿಂದಾಗಿ ಆಗ್ರಾ ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆದಿರುವಂತೆ ಸುಲಿಗೆಯ ತಾಣವೂ ಆಗಿರುವುದು ವಿಶೇಷ. ಅದಕ್ಕೇ ಪ್ರತಿಬಾರಿ ಹೋಗುವಾಗಲೂ ಈ ಬಾರಿ ಟೋಪಿ ಬೀಳುವುದಿಲ್ಲವೆಂದು ದೃಢ ನಿಶ್ಚಯ ಮಾಡಿಕೊಂಡಿರುತ್ತೇನೆ. ಆದರೆ ಗೊತ್ತಾಗದ ಹಾಗೆ ಟೋಪಿ ಬಿದ್ದಿರುವುದು ಮನೆಗೆ ಬಂದಮೇಲಷ್ಟೇ ಗಮನಕ್ಕೆ ಬರುತ್ತದೆ! ನಮ್ಮ ಪ್ರವಾಸೀ ತಾಣಗಳೆÉಲ್ಲವೂ ಈ ಬಗೆಯ ಸಣ್ಣಪುಟ್ಟ ಮೋಸಗಳಿಗೆ  ಕುಖ್ಯಾತವಾಗಿದ್ದರೂ ಅದರಲ್ಲಿ ಆಗ್ರಾದ್ದೇ ಒಂದು ಮಟ್ಟ. ಹಾಗೂ ಮಟ್ಟು!  ಅಲ್ಲಿ ಹೆಜ್ಜೆಹೆಜ್ಜೆಗೆ ಅಕರ್ಷಿಸುವ ಸಣ್ಣಪುಟ್ಟ ವಸ್ತುಗಳ ಮಾರಾಟಗಾರರ ಪಟ್ಟುಗಳು ನಿಮ್ಮನ್ನು ಯಾಮಾರಿಸುವ ಪರಿ ನಿತ್ಯನೂತನ ಹಾಗೂ ನವನವೀನ. ಎದ್ದುಕಾಣುವ ಅಲ್ಲಿಯ ಬಡತನದ ಮಧ್ಯೆ ಇದು  ಸಹನೀಯ ಎನಿಸಿದರೂ ಪ್ರತಿಬಾರಿ ಆಗ್ರಾಕ್ಕೆ ಹೋಗಿ ಬಂದಾಗಲೂ ನನ್ನನ್ನೇ ನಾನು ನೋಡಿ ನಗುವ ಸ್ಥಿತಿ ತಪ್ಪಿಲ್ಲ!

ಈ ಬಾರಿ ಆಗ್ರಾಕ್ಕೆ ಹೊರಟು ನಿಂತಾಗ ಜೊತೆಯಲ್ಲಿ ಹೆಂಡತಿ ಮಕ್ಕಳೂ ಇದ್ದುದರಿಂದ ಅವರೆದುರು ಮಂಗನಾಗಬಾರದು ಎಂದು ಅಂದುಕೊಂಡಿದ್ದೆ. ಆದರೆ ಆಗ್ರಾ ನನ್ನನ್ನು ಸೋಲಿಸಿಬಿಟ್ಟಿತು ಎಂಬುದು ಈಗ ತಮಾಷೆಯ ಹಾಗು ವಿಷಾದದ ವಿಷಯ. ಆಗ್ರಾಕ್ಕೆ ಹೊರಟಾಗಲೇ ಮಕ್ಕಳಿಗೆ ಅಲ್ಲಿ ಮೋಸಹೋಗುವ ಸಾಧ್ಯತೆಗಳ ಬಗ್ಗೆ ಹೇಳಿದ್ದೆ. ಸೂಚನೆಗಳನ್ನೂ ಕೊಟ್ಟಿದ್ದೆ. ಆದರೂ ಕೊನೆಗೆ ಪೆಗ್ಗು ಬಿದ್ದದ್ದು ನಾನೇ!

ಈಸಾರಿ ಹೋಗುವಾಗಲೇ ತಡವಾದ್ದರಿಂದ ತಾಜ್ ಮಹಲನ್ನು ಬಿಟ್ಟು ಆಗ್ರಾದ ಇತರ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸಮಯವಾಗಲಿಲ್ಲ, ಆದ್ದರಿಂದ ಮಕ್ಕಳಿಗೆ ಅವುಗಳ ಪರಿಚಯವಾದರೂ ಆಗಲಿ ಎಂಬ ಕಾರಣದಿಂದ ಆಗ್ರಾದ ಸಮಗ್ರ ಪರಿಚಯವುಳ್ಳ ಪುಸ್ತಕವೊಂದನ್ನು ಕೊಳ್ಳುವ ಮನಸ್ಸಾಯಿತು. ಹಾಗಂತ ಬೀದಿ ಬದಿ ಮಾರುವ ಕಡಿಮೆ ರೇಟಿನ ಪುಸ್ತಕಗಳು ಹೇಗೆ ದಾರಿತಪ್ಪಿಸುತ್ತವೆಯೆಂಬುದು ನಮಗೆ ಈ ಹಿಂದೆಯೇ ಪರಿಚಯವಾಗಿತ್ತು. ಕುರುಕ್ಷೇತ್ರ ನೋಡಲು ಹೋಗಿದ್ದಾಗ ಅಲ್ಲಿಯ ಚರಿತ್ರೆಯ ಪುಸ್ತಕ ನೋಡಲು ಹೋದೆ. ದಾರಿ ಬದಿಗೆ ಎಲ್ಲಾ ಭಾಷೆಗಳ ಅಂಥ ಪುಸ್ತಕ ಮಾರುತ್ತಿದ್ದರು. ನೋಡುತ್ತೇನೆ, ಕನ್ನಡವೂ ಅಲ್ಲಿದೆ. ಖುಷಿಯಿಂದ ಕನ್ನಡದಲ್ಲಿ ಬರೆದ ಕುರುಕ್ಷೇತ್ರ ಪುಸ್ತಕ  ಕೊಂಡು ಕಾರಿಗೆ ಬಂದು ಕುಳಿತು ತೆರೆದು ನೋಡುತ್ತೇನೆ, ಶೀರ್ಷಿಕೆ- ಕುರುಕ್ಷೇತ್ರ ಪರಿಯಚ ಅಂತ ಇದೆ. ಒಳಗೆ ತೆಗೆದರೆ ಒಂದು ಪದವೂ ಸರಿಯಿಲ್ಲದ ಹಾಗೆ ಮುದ್ರಣಗೊಂಡಿದೆ! ಇದು ಕನ್ನಡವೆಂದರೆ ನಾಚಿಕೆಯಾಗುತ್ತದೆ. ಕನ್ನಡ ಗೊತ್ತಿಲ್ಲದವರು ಗೂಗಲ್ ಭಾಷಂತರದಿಂದ ಮುದ್ರಿಸಿದ ಪುಸ್ತಕವಿದು! ಒಂದೊಂದು ಪುಟ ಓದುವುದಕ್ಕೂ ಹೊಸದಾಗಿ ಕನ್ನಡ ಕಲಿಯಬೇಕಾಗಿ ಬರುತ್ತದೆ! ಈ ಅನುಭವದ ಹಿನ್ನೆಲೆಯಲ್ಲಿ ಈ ಸಾರಿ ಪ್ರತಿಷ್ಠಿತ ಪ್ರಕಾಶಕರ ಪುಸ್ತಕವನ್ನೇ ಕೊಳ್ಳುವುದೆಂದು ನಿರ್ಧರಿಸಿದ್ದೇವೆ. ತಾಜ್ ಮಹಲು ಭಾರತೀಯ ಪುರಾತತ್ವ ಸವೇಕ್ಷಣಾಲಯಕ್ಕೆ ಸೇರಿದ್ದು. ಅವರೇ ಮುದ್ರಿಸಿದ ಪುಸ್ತಕಕ್ಕಿಂತ ಅಧಿಕೃತ ಪ್ರಕಟಣೆ ಇರುವುದು ಸಾಧ್ಯವೇ? ಹೀಗಾಗಿ ಏಎಸ್‍ಐ ಅವರ ಆಧಿಕೃತ ಮಳಿಗೆಯಲ್ಲಿ ಆಗ್ರಾದ ಬಗ್ಗೆ ಅಧಿಕೃತ ಪುಸ್ತಕ ಕೊಂಡುಕೊಂಡೆವು.

ಈ ಪುಸ್ತಕದ ವಿಷಯ ಹಾಗೂ ಅಂದ ಚೆಂದದ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ತಾಜ್ ಮಹಲಿನಿಂದ ಹೊರಬಂದು ಅಲ್ಲಿ ಗಲ್ಲಿ ಅಂಗಡಿಗಳಲ್ಲಿ ಓಡಾಡುವಾಗ ನಾವು ಕೊಂಡ ಪುಸ್ತಕವೇ ಅಲ್ಲಿ ಮಾರಾಟಕ್ಕಿರುವದು ಕಂಡುಬಂತು. ದರ- ನಾವು ಕೊಂಡಿದ್ದರ ಅರ್ಧ! ಅಯ್ಯೋ ದೇವರೇÀ ಪುಸ್ತಕದಲ್ಲೂ ಹೀಗೆ ಮೋಸಹೋಗುವುದೇ ಎಂದು ಅಲವತ್ತುಕೊಂಡಿದ್ದೇ ಬಂತು!
  
ಯಾವುದೇ ಪ್ರವಾಸೀ ತಾಣಕ್ಕೆ ಹೋಗಿ, ನೀವು ನಿಮ್ಮ ವಾಹನದಿಂದ ಇಳಿಯುವ ಮೊದಲೇ ಗೈಡುಗಳು ಗಂಟುಬೀಳುತ್ತಾರೆ. ನಿಜಕ್ಕೂ ಅವರು ವೃತ್ತಿಪರರಾಗಿದ್ದರೆ ಅವರಿಂದ ಪ್ರಯೋಜನವೂ ಇರುತ್ತದೆ. ಆದರೆ ಹೆಚ್ಚಿನವರು ಹೊಟ್ಟೆಪಾಡಿಗೆ ಪ್ರವಾಸಿಗರನ್ನು ಸುಲಿಯುವ ಮಿಸ್ ಗೈಡುಗಳೇ ಆಗಿರುತ್ತಾರೆ ಎಂಬುದು ವಿಷಾದನೀಯ. ಆಗ್ರಾದಲ್ಲಿ ಹೀಗೆ ನಿಮ್ಮನ್ನು ಬಂದು ಮಾತನಾಡಿಸುವ ಗೈಡು ಸಾವಿರದಿಂದ ಆರಂಭಿಸಿ ನೂರಕ್ಕೆ ಇಳಿದು ಕೊನೆಗೆ ನೀವು ಕೊಟ್ಟಷ್ಟಕ್ಕೆ ಗೈಡು ಮಾಡುತ್ತಾನೆ! ಅವನ ಹೊಟ್ಟೆಪಾಡು ಎಂದು ನಾವೇ ಕನಿಕರಿಸಿ ಕರೆಯುತ್ತೇವೆ. ಹಾಗೆ ಬರುವ ಗೈಡುಗಳು ನಿಮಗೆ ಪದೇ ಪದೇ ಒಂದು ಉಚಿತ ಸಲಹೆ ಕೊಡುತ್ತಾರೆ. ಅದೆಂದರೆ ಹೊರಗೆಲ್ಲೂ ಆಗ್ರಾ ಪೇಟಾ ಕೊಳ್ಳಬೇಡಿ, ಅದು ಡೂಪ್ಲಿಕೇಟ್ ಆಗಿರುತ್ತದೆ. ನಾನು ಒಂದು ಅಂಗಡಿಗೆ ಕರೆದುಕೊಂಡು ಹೋಗುತ್ತೇನೆ ಅದು ಆಗ್ರಾದಲ್ಲಿ ಬಹಳ ರುಚಿಯಾದ ಒರಿಜಿನಲ್ ಪೇಟಾ ಸಿಗುವ ಅಂಗಡಿ ಎಂಬುದಾಗಿ. ಅವನು ಪದೇ ಪದೇ ಇದನ್ನು ಹೇಳುವಾಗ ನಿಮಗೆ ಸಂಶಯ ಬರಬೇಕು. ನನಗೂ ಈ ಹಿಂದಿನ ಅನುಭವಗಳಿಂದಾಗಿ ಈ ಎಚ್ಚರಿಕೆ ಇತ್ತು. ಆದರೆ ತಾಜ್ ಮಹಲು ನೋಡಿ ಹೊರಬರುವಾಗ ಅದು ಮರೆತುಹೋಯ್ತು. ಗೈಡು ನಮ್ಮನ್ನು ಅವನು ಹೇಳುವ ಒರಿಜಿನಲ್ ಪೇಟಾಗಳ ಅಂಗಡಿಗೆ ಕರೆದೊಯ್ದ. ಅಲ್ಲಿ ಹೊಸ ಹೊಸ ಮಾದರಿಯ ಪೇಟಾಗಳು ರುಚಿಯಾಗೇನೋ ಇದ್ದವು. ಈ ಅವಸರದಲ್ಲಿ ನಾವು ದರವನ್ನು ಚೌಕಾಶಿ ಮಾಡಲು ಹೋಗಲಿಲ್ಲ. ಎರಡು ಕೆಜಿ ಪೇಟಾ ತಗೊಂಡು ಬಂದೆವು. ನಾವು ಹೊರಬಂದಮೇಲೆ ಗೈಡು ಒಳಹೊಕ್ಕು ಅವನ ಹಕ್ಕು ಸಂಪಾದಿಸಿಕೊಂಡು ಬಂದುದು ನಮ್ಮ ಕಣ್ಣೆದುರಿಗೇ ನಡೆಯಿತು. ಇರಲಿ ಅದು ಅವನ ಬದುಕು, ಅದನ್ನು ಟೀಕಿಸಲು  ನಮಗೇನು ಹಕ್ಕು ಎಂದುಕೊಂಡೆ. ನಂತರ ಅವನನ್ನು ಬೀಳ್ಕೊಂಡು  ತಾಜಮಹಲಿನಿಂದ ಹೊರಟು ಮುಂದೆಬಂದೆವು. ಚಹಾಕುಡಿಯಲು ಒಂದು ಅಂಗಡಿಯ ಬಳಿ ಕಾರು ನಿಲ್ಲಿಸಿದಾಗ ಪಕ್ಕದ ಸ್ವೀಟ್ ಅಂಗಡಿಯಲ್ಲಿ ಕುತೂಹಲಕ್ಕಾಗಿ ಪೇಟಾದ ರೇಟು ವಿಚಾರಿಸಿ ಪೆಚ್ಚಾದೆ. ಯಾಕೆಂದರೆ ನಮ್ಮ ಗೈಡು ತೋರಿಸಿದ ಅಂಗಡಿಯಲ್ಲಿ ಅದಕ್ಕೆ ಒಂದೂವರೆ ಪಟ್ಟು ತೆತ್ತಿದ್ದೆವು!

ಈಬಾರಿ ತಾಜಮಹಲಿಗೆ ಭೇಟಿಯಿತ್ತಾಗ ಸುಲಿಗೆಯ ಹೊಸ ಉದ್ಯಮ ಆರಂಭಗೊಂಡಿರುವುದು ಕಂಡುಬಂತು. ಅದೆಂದರೆ ತಾಜ್ ನೋಡಲು ಹೋಗುವಾಗ ಬರಿಗಾಲಲ್ಲಿ ಹೋಗಬೇಕಂತೆ ಅಥವಾ ನಮ್ಮ ಷೂಗಳಿಗೆ ಅವರು ಮಾರುವ ಬಟ್ಟೆಯ ಚೀಲ ಹಾಕಿಕೊಂಡು ಹೋಗಬೇಕಂತೆ. ಹತ್ತು ರೂಪಾಯಿಗೆ ಒಂದು ಜೊತೆಯಂತೆ ಈ ಬಟ್ಟೆಯ ಕಾಲು ಚೀಲ ಮಾರುವವರು ಆಗ್ರಾ ಸಿಕ್ಕುವ ಪೂರ್ವದಲ್ಲೇ ಸಿಗುತ್ತಾರೆ. ಮೊದಲಿಗೆ 20 ರೂಪಾಯಿ ಹೇಳಿ ನೀವು ಅನುಮಾನಿಸಿದರೆ ಹತ್ತಕ್ಕೆ ಕೊಡುತ್ತಾರೆ. ಈ ಹೊಸ ದಂಧೆಯ ಪರಿಣಾಮ ತಾಜ್ ಮಹಲಿನ  ಅಮೃತ ಶಿಲೆಯ ವೇದಿಕೆಯ ಮೇಲೆ ಎಲ್ಲೆಲ್ಲೂ ಈ ಕಾಲುಚೀಲಗಳು ಬಿದ್ದು ಉರುಳಾಡುತ್ತಿವೆ. ಬಹುಶಃ ಜನರು ತೊಟ್ಟು ಬಿಸುಟುವ ಈ ಕಾಲುಚೀಲಗಳನ್ನು ಮರುಬಳಕೆ ಮಾಡುತ್ತಾರೆ. ಆದ್ದರಿಂದಲೇ ನಿಮಗೆ ಸಿಕ್ಕುವ ಕಾಲುಚೀಲ ಹೊಸದಾಗಿ ಕಾಣುವುದಿಲ್ಲ! ಇದು ತಾಜ್ ಆವರಣವನ್ನೇ ಕೆಡಿಸಿದೆ ಮಾತ್ರವಲ್ಲ ಪ್ರವಾಸಿಗರಿಗೆ ಅನಗತ್ಯ ಹೊರೆ ಹೇರಿದಂತೆ ಆಗಿದೆ.
ಜನಸಾಮಾನ್ಯರಿಗೆ ಆಗ್ರಾಕ್ಕೆ ಭೇಟಿ ನೀಡಿದಾಗ ಆಗುವ ಈ ಸಣ್ಣಪುಟ್ಟ ಸುಲಿಗೆಗಳ ಅನುಭವ ತಾಜ್ ಮಹಲಿನ ಸೌದರ್ಯದಷ್ಟೇ  ಪ್ರಮುಖವಾಗಿ ನೆನಪಲ್ಲಿ  ಅಚ್ಚೊತ್ತಿ ನಿಂತುಬಿಡುತ್ತದೆ. ನೀವು ಇಲ್ಲಿ ಮತ್ತೊಮ್ಮೆ ಮೋಸಹೋಗುವುದಿಲ್ಲವೆಂದು ಶಪಥಮಾಡಿ ಹೋದರೂ ನೀವು ಸೋತವರಾಗುತ್ತೀರಿ. ನಮ್ಮ ಮೈಸೂರನ್ನೂ ಹಿಡಿದು ಪ್ರವಾಸಿಸ್ಥಳಗಳಲ್ಲಿ ಇಂಥ ಸುಲಿಗೆಗಳು ಮಾಮೂಲಿಯಾದರೂ ಆಗ್ರಾ ಮಾತ್ರ ಅವುಗಳ ರಾಜಧಾನಿ! ಆಗ್ರಾಕ್ಕೆ ಹೋದವರು  ತಾಜ್ ಮಹಲಿನ ಸೌಂದರ್ಯವನ್ನು,  ಇಲ್ಲಿನ ಪೇಟಾಗಳ  ರುಚಿಯನ್ನು ಹಾಗೂ ಇಲ್ಲಿ ಟೋಪಿಹಾಕುವವರ ಕಸುಬುಗಾರಿಕೆಯನ್ನು, ನವನವೀನ ಪಟ್ಟುಗಳನ್ನು  ಎಂದೆಂದಿಗೂ ಮರೆಯಲಾರರು!