ಆಗ ಬೆಳ್ಳಿಲೋಟದಲ್ಲಿ ಹಾಲು, ಈಗ ಸ್ಟೀಲ್‍ಲೋಟದಲ್ಲಿ ಕಪ್ಪುಚಹಾ
"ಕಳೆದ ಹತ್ತು ವರುಷಗಳಲ್ಲಿ ರೈತರ, ಹಳ್ಳಿಗರ, ಬಡವರ ಬದುಕಿನ ಬವಣೆ ಹೆಚ್ಚುತ್ತಿದೆ. ಆದರೆ, ಜಗತ್ತಿನ ಶ್ರೀಮಂತ ಕಂಪೆನಿಗಳಾದ ಫಾರ್ಚೂನ್ 500 ಕಂಪೆನಿಗಳ ಲಾಭ ಹೆಚ್ಚುತ್ತಿದೆ. ಈ ಕಂಪೆನಿಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿರುವ ಕಂಪೆನಿಗಳನ್ನು ಗಮನಿಸಿ. ಅವುಗಳಲ್ಲಿ ನಾಲ್ಕು ಕಂಪೆನಿಗಳು "ಆಹಾರ ಮಾರಾಟ ಮಾಡುವ ಕಂಪೆನಿಗಳು". ಹಾಗಾಗಿ, ಆಹಾರದ ಉತ್ಪಾದನೆ ಸಂಕಷ್ಟದ ಮೂಲ; ಆದರೆ ಆಹಾರದ ವ್ಯವಹಾರ ಸಂಪತ್ತಿನ ಮೂಲ ಎಂದು ಹೇಳಬೇಕಾಗುತ್ತದೆ. ಈ ಮಾತನ್ನು ಒಂದು ನೂರು ವರುಷಗಳ ಮುಂಚೆಯೇ ಹೇಳಿದವರು ಮಹಾಕವಿ ರವೀಂದ್ರನಾಥ ಠಾಗೋರ್. ಆ ಮಾತು ಇಂದಿಗೂ ನಿಜವಾಗಿ ಉಳಿದಿದೆ" ಎಂದವರು ಪಾಲಗುಮ್ಮಿ ಸಾಯಿನಾಥ್. 1976ರಲ್ಲಿಯೇ "ಎವರಿಬಡಿ ಲವ್ಸ್ ಎ ಗುಡ್ ಡ್ರೌಟ್" ಎಂಬ ಕ್ರಾಂತಿಕಾರಿ ಪುಸ್ತಕವನ್ನು ಬರೆದು, ಗ್ರಾಮೀಣ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆಳೆದ ಸಾಯಿನಾಥ್, ಮಂಗಳೂರಿನಲ್ಲಿ ಉಪನ್ಯಾಸ ನೀಡುತ್ತಾ ಭಾರತದ ಗ್ರಾಮೀಣ ಪರಿಸ್ಥಿತಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಅಧ್ವಾನಗಳನ್ನು ಮನಮುಟ್ಟುವಂತೆ ವಿವರಿಸಿದರು.
ಕಳೆದ ಎರಡು ದಶಕಗಳಲ್ಲಿ (1990 - 2010) ಗ್ರಾಮೀಣ ಭಾರತದ ಕುಟುಂಬಗಳ ಆರ್ಥಿಕ ಪತನವನ್ನು ಕಣ್ಣಿಗೆ ಕಟ್ಟುವಂತೆ ಅವರು ಚಿತ್ರಿಸಿದ್ದು ಹೀಗೆ: 1990ರ ದಶಕದ ಆರಂಭದಲ್ಲಿ ನಾನು ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದಾಗ, ನನಗೆ ಬೆಳ್ಳಿಯ ಲೋಟದಲ್ಲಿ ಹಾಲು ಕೊಡುತ್ತಿದ್ದರು. ಅದು ಅಲ್ಲಿ ಹಳ್ಳಿಗರು ಅತಿಥಿಗಳನ್ನು ಸತ್ಕರಿಸುವ ರೀತಿ. ಕೆಲವು ವರುಷಗಳ ನಂತರ ಹಳ್ಳಿಗಳಿಗೆ ಹೋದಾಗ ನನಗೆ ಬೆಳ್ಳಿಯ ಲೋಟದಲ್ಲಿ ಕುಡಿಯಲು ಕೊಟ್ಟದ್ದು ಚಹಾ. ಆಗಲೇ ಹಳ್ಳಿಮನೆಗಳಿಂದ ಹಾಲು ಮಾಯವಾಗಿತ್ತು. ಅನಂತರ ನಾನು ಹೋದಾಗ ನನ್ನನ್ನು ಉಪಚರಿಸಲು ನನಗೆ ಕೊಟ್ಟದ್ದು ಸ್ಟೀಲ್ ಲೋಟದಲ್ಲಿ ಚಹಾ. ಯಾಕೆಂದರೆ ಅಷ್ಟರಲ್ಲಿ ಬೆಳ್ಳಿಲೋಟಗಳು ಅವರ ಮನೆಗಳಿಂದ ಮಾಯವಾಗಿದ್ದವು. ಈಗ ಅಲ್ಲಿಗೆ ಹೋದರೆ ನನಗೆ ಸ್ಟೀಲ್ ಲೋಟದಲ್ಲಿ "ಕಪ್ಪು ಚಹಾ" ಕೊಡುತ್ತಾರೆ. ಯಾಕೆಂದರೆ, ಹಳ್ಳಿಯ ಮನೆಗಳಲ್ಲಿ ಹಾಲಿಲ್ಲ. ತಾವು ದನಎಮ್ಮೆಗಳಿಂದ ಕರೆದ ಹಾಲನ್ನೆಲ್ಲ ಹಳ್ಳಿಗರು ಮಾರುತ್ತಾರೆ; ತಮ್ಮ ಮಕ್ಕಳಿಗಾಗಿಯೂ ಒಂದು ಲೋಟ ಹಾಲು ಉಳಿಸಿಕೊಳ್ಳುವುದಿಲ್ಲ.
ಭಾರತದ ಮಹಾಜನಗಣತಿಯ ಅಂಕೆಸಂಖ್ಯೆಗಳನ್ನು ಉಲ್ಲೇಖಿಸುತ್ತಾ ಪಿ. ಸಾಯಿನಾಥ್ ತಿಳಿಸಿದ ಸತ್ಯ ಯಾರನ್ನೂ ಬೆಚ್ಚಿ ಬೀಳಿಸುತ್ತದೆ. 2001ರ ರೈತರ ಸಂಖ್ಯೆಯನ್ನು ೧೯೯೧ರದ್ದಕ್ಕೆ ಹೋಲಿಸಿದಾಗ 7.4 ಮಿಲಿಯ ಕುಸಿತ ಕಂಡು ಬರುತ್ತದೆ. ಹಾಗೆಯೇ 2011ರ ರೈತರ ಸಂಖ್ಯೆಯನ್ನು 2001ರದ್ದಕ್ಕೆ ಹೋಲಿಸಿದಾಗ, ಆಗಿರುವ ಕುಸಿತ 7.7 ಮಿಲಿಯ. ಅಂದರೆ, ಇಪ್ಪತ್ತು ವರುಷಗಳಲ್ಲಿ ಭಾರತದ ರೈತರ ಸಂಖ್ಯೆ 15 ಮಿಲಿಯ (ಒಂದೂವರೆ ಕೋಟಿ) ಕಡಿಮೆಯಾಗಿದೆ. ಹೀಗೆಯೇ ಮುಂದುವರಿದರೆ, ಇನ್ನು ಕೆಲವು ಜನಗಣತಿಗಳ ನಂತರ ರೈತರು ಎನಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾದೀತು. ಅಮೆರಿಕದ ಯುಎಸ್‍ಎಅ ದೇಶದಲ್ಲಿ ಈಗಾಗಲೇ ಹೀಗಾಗಿದೆ. ಅಲ್ಲಿಯ ಜನಗಣತಿಯಲ್ಲಿ "ರೈತರು" ಎಂಬ ಪ್ರತ್ಯೇಕ ವರ್ಗ ಇಲ್ಲ. "ಇತರ ಜನರು" ಎಂಬ ವರ್ಗದಲ್ಲಿ ಅನ್ನದಾತರಾದ ರೈತರು ಒಂದು ಪುಟ್ಟ ಭಾಗ, ಅಷ್ಟೇ. ಯಾಕೆಂದರೆ ಅಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ರೈತರ ಸಂಖ್ಯೆ ಶೇಕಡಾ ಒಂದಕ್ಕಿಂತಲೂ ಕಡಿಮೆ.
ನಮ್ಮ ದೇಶದಲ್ಲಿ ಮುಂಚೆ ರೈತರಾಗಿದ್ದ ಒಂದೂವರೆ ಕೋಟಿ ಜನರು ಈಗ ಏನಾಗಿದ್ದಾರೆ? ಹಲವು ತಲೆಮಾರುಗಳಿಂದ ಉಳಿಸಿಕೊಂಡಿದ್ದ ತಮ್ಮ ಜಮೀನು ಕಳೆದುಕೊಂಡು ಈಗ ಕೃಷಿಕಾರ್ಮಿಕರಾಗಿದ್ದಾರೆ! ಇದಕ್ಕೆ ಪುರಾವೆ; ಮಹಾಜನಗಣತಿಯ ಅನುಸಾರ, ಕೃಷಿಕಾರ್ಮಿಕರ ಸಂಖ್ಯೆಯಲ್ಲಿ ಆಗಿರುವ ಮೂರು ಪಟ್ಟು ಹೆಚ್ಚಳ ಎಂದು ಬೆರಳೆತ್ತಿ ತೋರಿಸಿದರು ಸಾಯಿನಾಥ್.
ತಮ್ಮ ಕೃಷಿ ಚಟುವಟಿಕೆಯ ಯಾವುದೇ ಅಂಗದ ಮೇಲೆ ರೈತರಿಗೆ ನಿಯಂತ್ರಣವಿಲ್ಲ. ಬೀಜ, ರಾಸಾಯನಿಕ ಗೊಬ್ಬರ, ಪೀಡೆನಾಶಕಗಳು - ಇವು ಬೃಹತ್ ಕಂಪೆನಿಗಳ ನಿಯಂತ್ರಣದಲ್ಲಿವೆ. ಫಸಲಿನ ಮಾರಾಟ ವ್ಯವಸ್ಥೆ ವ್ಯಾಪಾರಿಗಳ ಕೈಯಲ್ಲಿದೆ. ಕೃಷಿಗೆ ಬೇಕಾದ ವಿದ್ಯುತಿನ ಉತ್ಪಾದನೆ ಮತ್ತು ವಿತರಣೆ ಸರಕಾರದ ವಿದ್ಯುತ್ ಮಂಡಲಿಯ ಹತೋಟಿಯಲ್ಲಿದೆ. ಹೆಚ್ಚೆಚ್ಚು ರಾಜ್ಯಗಳು ನೀರನ್ನೂ ಖಾಸಗಿ ಕಂಪೆನಿಗಳ ನಿಯಂತ್ರಣಕ್ಕೆ ಒಳಪಡಿಸುತ್ತಿವೆ. ಹಾಗಾಗಿ, ರೈತರು ಇತರರ ಅಂಕಿತಕ್ಕೆ ಒಳಪಟ್ಟೇ ಕೃಷಿ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪೂರೈಕೆದಾರರು ಕೃಷಿಯ ಒಳಸುರಿಗಳ ದರಗಳನ್ನು ಮನಬಂದಂತೆ ಏರಿಸಿ, ಲಾಭದ ಕೊಳ್ಳೆ ಹೊಡೆಯುತ್ತಾರೆ. ಅಸಹಾಯಕರಾದ ಅನ್ನದಾತರಿಗೆ ದಕ್ಕುವುದು ಸಂಕಷ್ಟ ಮಾತ್ರ.
ಈ ಸಂಕಟದ ಪರಿಸ್ಥಿತಿಯಿಂದ ರೈತರು ಪಾರಾಗಲು ಪಿ. ಸಾಯಿನಾಥ್ ಸೂಚಿಸುವ ಎರಡು ದಾರಿಗಳು: ಹೆಚ್ಚೆಚ್ಚು ಜಮೀನಿನಲ್ಲಿ ಆಹಾರ ಉತ್ಪಾದಿಸುವುದು ಮತ್ತು ದುಬಾರಿ ಬಾಹ್ಯ ಒಳಸುರಿಗಳ ಬದಲಾಗಿ, ಕಡಿಮೆ ವೆಚ್ಚದ ಆಂತರಿಕ ಒಳಸುರಿಗಳನ್ನ್ಜು ಬಳಸಿ ಕೃಷಿ ಮಾಡುವುದು. ಇದುವೇ ನಿಜವಾದ ಆಹಾರ ಭದ್ರತೆ, ಎನ್ನುತ್ತಾರೆ ಸಾಯಿನಾಥ್.
(7 ಸಪ್ಟಂಬರ್ 2013ರಂದು ಮಂಗಳೂರಿನಲ್ಲಿ ಪಿ. ಸಾಯಿನಾಥ್ ನೀಡಿದ ಉಪನ್ಯಾಸದ ಮುಖ್ಯಾಂಶಗಳು.)
ಫೋಟೋ 1: ಪಿ. ಸಾಯಿನಾಥ್ …. ಕೃಪೆ: ಡೆಕ್ಕನ್ ಹೆರಾಲ್ಡ್
ಫೋಟೋ 2: “ಎವರಿಬಡಿ ಲಸ್ವ್ ಎ ಗುಡ್ ಡ್ರೌಟ್” ಪುಸ್ತಕದ ಮುಖಪುಟ