ಆಚರಣೆಗಳ ನೋಟ : ಬುದ್ಧಿಜೀವಿಗಳ ಹೊಯ್ದಾಟ

ಆಚರಣೆಗಳ ನೋಟ : ಬುದ್ಧಿಜೀವಿಗಳ ಹೊಯ್ದಾಟ

ಸಂತೋಷ್ ಕುಮಾರ್ ಪಿ.ಕೆ, ಮತ್ತು ಪ್ರವೀಣ್ ಟಿ.ಎಲ್.

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, 

 

ಕುಕ್ಕೆ ಸುಬ್ರಮಣ್ಯದ ಎಂಜಲೆಲೆಯ ಆಚರಣೆ ಹಾಗೂ ಐ.ಪಿಎಲ್ ನಲ್ಲಿ ಕ್ರಿಕೆಟ್ ಆಟಗಾರರ ಹರಾಜು ಇವೆರೆಡನ್ನೂ ಅವಲೋಕಿಸಿ ಕೆ.ವಿ.ಅಕ್ಷರರವರು ಉತ್ತಮವಾದ ಲೇಖನವನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಿದ್ದರು. ಪ್ರಗತಿಪರರಂತೆ ಅಕ್ಷರರವರು ಆಚರಣೆಯನ್ನು ಬೇಕಾಬಿಟ್ಟಿ ಟೀಕಿಸದೆ ಅದನ್ನು ಅರ್ಥಮಾಡಿಕೊಳ್ಳಲು ಇರಬಹುದಾದದ ಬೇರೆ ಬೇರೆ ಅಧ್ಯಯನದ ಮಾರ್ಗಗಳನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಾಧ್ಯಮಗಳಲ್ಲಿ ಆಚರಣೆಯನ್ನು ಕೇವಲ ಬಿತ್ತರಿಸುತ್ತಿರುವುದು ಮಾತ್ರವಲ್ಲದೆ ಜನರ ಮೌಢ್ಯತೆ ಎಂಬಂತೆಯೂ ಹಾಗೂ ಯಾವುದೋ ಜಾತಿಯ ಕುತಂತ್ರ ಎಂಬಂತೆಯೂ ತೋರಿಸಲಾಗುತ್ತಿದೆ. ಆದರೆ ಅದಕ್ಕೆ ವಿರುದ್ಧವಾಗಿ ಆಚರಣೆಯಲ್ಲಿ ಶೋಷಣೆ ಯಾರಿಗೆ ಆಗುತ್ತಿದೆ? ಆ ಆಚರಣೆಯನ್ನು ಶೋಷಣೆ ಎಂದು ಗ್ರಹಿಸುವುದರಲ್ಲೆ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಸ್ವಾತಂತ್ರ ಅಕ್ಷರರವರ ಲೇಖನವನ್ನು ಓದಿದವರಿಗೆ ದೊರಕುತ್ತದೆ. ಇದರ ಜೊತೆಗೆ ಅಕ್ಷರರವರಿಗೆ ಪ್ರತಿಕ್ರಿಯಿಸಿದ ವೈದೇಹಿ ಹಾಗೂ ರಘುನಂದನ ಅವರ ಲೇಖನಗಳನ್ನು ನೋಡಿದರೆ ಅವರೆಡೂ ಒಂದಕ್ಕೊಂದು ವಿರೋಧವಾದಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಗೋಚರವಾಗುತ್ತದೆ. ವೈದೇಹಿಯವರು ಆ ಆಚರಣೆಯನ್ನು ಸಮರ್ಥನೆ ಮಾಡದೆ ತಮ್ಮ ಅನುಭವದ ಮೂಲಕ ಅದನ್ನು ವಿವರಿಸುವ ಪ್ರಯತ್ನವನ್ನು ಮಾತ್ರ ಮಾಡಿರುವುದರಿಂದ ಅದರ ಕುರಿತು ಆಕ್ರೋಶವಿಲ್ಲದೆ ಕೇವಲ ವಿವರಿಸುವ ಪ್ರಯತ್ನ ಮಾತ್ರ ಕಾಣುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ಆ ಆಚರಣೆಯ ಅನುಭವವಿಲ್ಲದೆ ರಘುನಂದನರವರು ಪ್ರಗತಿಪರರ ವಿಚಾರಗಳನ್ನೆ ಪುಸರುತ್ಪಾದಿಸುವ ಕೆಲಸವನ್ನು ಮಾಡಿದ್ದಾರೆ. ಈ ಬರವಣಿಗೆಯಲ್ಲಿ ಅಕ್ಷರ ಹಾಗೂ ವೈದೇಹಿ ಗುರುತಿಸಿರುವ ಅನುಭವವನ್ನು ಮತ್ತೂ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಾಗುವುದು. ಹೀಗೆ ಮಾಡುವುದರ ಅಗತ್ಯವೇಕಿದೆ ಎಂದರೆ ಭಾರತದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಇದುವರೆಗೂ ಹಲವಾರು ಸಮಾಜ ಸುಧಾರಣಾ ಚಳುವಳಿಗಳು ಕಾರ್ಯನಿರ್ವಹಿಸುತ್ತಾ ಬಂದಿವೆ. ಅವುಗಳ ಪ್ರಯತ್ನ ಎಷ್ಟೇ ಪ್ರಬಲವಾಗಿದ್ದರೂ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ನಮ್ಮ ಸಮಾಜದಲ್ಲಿ ಉಳಿದುಕೊಂಡಿವೆ. ಇದುವರೆಗೂ ನಡೆದ ಚಳುವಳಿಗಳು ಸಮಾಜವನ್ನು ತಿದ್ದುವ, ಬದಲಾಯಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿವೆ. ಸಮಾಜವನ್ನು ಬದಲಾಯಿಸಿದರೂ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎಂದರೆ ನಾವು ಅನ್ಯ ಮಾರ್ಗವನ್ನು ಹುಡುಕಬೇಕಾಗುತ್ತದೆ. ಅಂದರೆ ಸಮಾಜವನ್ನು ಬದಲಾಯಿಸುವ ಮುನ್ನ ನಮ್ಮ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಹಾಗೆ ಅರ್ಥಮಾಡಿಕೊಳ್ಳುವ ಮೂಲಕ ಅವುಗಳಲ್ಲಿರುವ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಲು ಹಾಗೂ ಬಗೆಹರಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಿನಿಕತನದಿಂದ ಎಲ್ಲವನ್ನೂ ದೂಷಿಸುತ್ತಾ ಓಡಾಡಿಕೊಂಡಿರಬೇಕಾಗುತ್ತದೆ.

ಕುಕ್ಕೆಸುಬ್ರಮಣ್ಯದಲ್ಲಿ ನಡೆದ ಆಚರಣೆಯನ್ನು ಬ್ರಾಹ್ಮಣರ ಕುತಂತ್ರವೆಂದು ಕರೆಯಲಾಗಿದೆ ಏಕೆಂದರೆ ಬ್ರಾಹ್ಮಣರ ಎಂಜಲೆಲೆಯ ಮೇಲೆ ಬೇರೆ ಸಮುದಾಯಗಳ ಭಕ್ತರು ಹೊರಳಾಡುತ್ತಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕರಾವಳಿಯ ಕೆಲವಾರು ಪ್ರದೇಶಗಳಲ್ಲಿ ಸ್ವತಃ ಬ್ರಾಹ್ಮಣರೇ ಎಂಜಲು ಎಲೆಗಳ ಮೇಲೆ ಹೊರಳಾಡುತ್ತಿರುವುದರ ಕುರಿತೂ ಮಾದ್ಯಮವು ಸ್ಪಷ್ಟ ಪಡಿಸಿದೆ. ಒಟ್ಟಿನಲ್ಲಿ ಈ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರು ಎಲ್ಲರೂ ಪಾಲ್ಗೊಳ್ಳುತ್ತಿರುವುದಂತೂ ಸ್ಪಷ್ಟ. ಅಂದರೆ ಇದು ಜನರು ತಾವೇ ತಮ್ಮ ಇಚ್ಚೆಯಿಂದ ಮಾಡುತ್ತಿರುವ ಕ್ರಿಯಾವಿಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಬೇಕಾಬಿಟ್ಟಿಯಾಗಿ ಯಾವುದೋ ಒಂದು ಸಮುದಾಯದ ಕುತಂತ್ರ ಎಂದು ಮಾತನಾಡಿದರೆ ಸಮಾಜದ ಸ್ವಾಸ್ಥ್ಯವನ್ನು ನಾವೇ ಹಾಳುಮಾಡಿದಂತೆ ಆಗುತ್ತದೆ. ಒಂದು ಸಮುದಾಯವನ್ನು ವಿನಾಕಾರಣ ದೂಷಣೆಗೆ ಒಳಗಾಗಿಸಿ ಅವರ ವಿರುದ್ಧ ಕೆಟ್ಟ ಭಾವನೆ ಬೆಳೆಯಲು ಪ್ರಚೋದನೆ ನೀಡಿದಂತಾಗುತ್ತದೆ. ಅದನ್ನು ವಿರೋಧಿಸುವವರಿಗೆ ಬ್ರಾಹ್ಮಣರ ಕುರಿತು ವಿರೋಧವೋ ಅಥವಾ ಕೇವಲ ಆಚರಣೆಯ ಕುರಿತು ವಿರೋಧವೋ ಎಂಬುದು ಸ್ಪಷ್ಟವಾಗಬೇಕು. ಏಕೆಂದರೆ ಬ್ರಾಹ್ಮಣರ ಕುರಿತು ವಿರೋಧವಾದರೆ ನಮ್ಮ ಸಮಾಜದಲ್ಲಿ ಬ್ರಾಹ್ಮಣರನ್ನು ಜನರು ಅರ್ಥಮಾಡಿಕೊಂಡಿರುವುದಕ್ಕೂ ವಿದ್ವಾಂಸರು ಅರ್ಥಮಾಡಿಕೊಂಡಿರುವುದಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕಾಗುತ್ತದೆ. ನಿಜವಾಗಿಯೂ ಇವರಿಬ್ಬರಲ್ಲಿ ವ್ಯತ್ಯಾಸವಿದೆ. ಆದರೆ ಆ ಚರ್ಚೆಗೆ ಹೋಗುವುದು ನಮ್ಮ ಉದ್ದೇಶವಲ್ಲ, ಬದಲಿಗೆ ಇವೆರಲ್ಲರ ವಿರೋಧ ಆಚರಣೆಯ ಕುರಿತಾಗಿ ಮಾತ್ರ ಎಂಬುದಾಗಿ ಗ್ರಹಿಸಿ ಇಲ್ಲಿ ನಮ್ಮ ಅಭಿಪ್ರಾಯವನ್ನು ಮಂಡಿಸಲು ಇಚ್ಚಿಸುತ್ತೇವೆ. ಏಕೆಂದರೆ ಆಚರಣೆಗಳ ದಾರಿಯಲ್ಲಿ ಹೋದರೆ ನಮ್ಮ ವಾದವು ಆಚರಣೆಗೆ ಮಾತ್ರ ಸೀಮಿತವಾಗಿ ಯಾವುದೋ ಒಂದು ಸಮುದಾಯವನ್ನು ಸಮರ್ಥಿಸುವುದಾಗಲಿ, ಅಥವಾ ತೆಗಳುವ ಕಾರ್ಯದಿಂದ ಹೊರಗೆ ಉಳಿಯಬಹುದು. ಆಗ ಮಾತ್ರ ಆಚರಣೆಯ ಕುರಿತು ವಿಸ್ತೃತವಾಗಿ ಚರ್ಚಿಸಬಹುದು.

ಎಂಜಲೆಲೆಯ ಮೇಲೆ ಹೊರಳಾಡುವಂತಹ ಆಚರಣೆಯನ್ನು ಮೌಢ್ಯ ಹಾಗೂ ಪ್ರಜ್ಞಾವಂತರು ಮಾಡತಕ್ಕವಲ್ಲ ಹಾಗಾಗಿ ಈ ಆಚರಣೆಗಳನ್ನು ಬಲಾತ್ಕಾರವಾಗಿಯಾದರು ನಿಲ್ಲಿಸಬೇಕೆಂದು ಆಗ್ರಹಿಸುವವರು ಒಂದು ಕಡೆ ಇದ್ದಾರೆ. ಆದರೆ ಅದೇ ವೇಳೆಗೆ ನಾವು ನಮ್ಮ ಮನಸ್ಸಿನ ಶಾಂತಿಗಾಗಿ ಇದನ್ನು ಮಾಡಿಯೇ ತೀರುತ್ತೇವೆ, ನಮ್ಮ ಮೇಲೆ ಯಾರದೇ ಬಲಾತ್ಕಾರವೂ ಇಲ್ಲ ಎಂದು ಆಚರಣೆ ಮಾಡಲು ಪಟ್ಟು ಹಿಡಿದವರು ಮತ್ತೊಂದು ಕಡೆ. ಅವರಲ್ಲೂ ಬರೀ ಅನಕ್ಷರಸ್ಥ ಬಡ ಜನರು ಮಾತ್ರವೇ ಇಲ್ಲ, ಅವರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ವಿದ್ಯಾವಂತರೂ, ಶ್ರೀಮಂತರೂ ಇದ್ದಾರೆ.  ಡಾಕ್ಟರುಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಶಿಕ್ಷಕರು, ಈ ರೀತಿಯಲ್ಲಿ ಪ್ರಜ್ಞಾವಂತ ಸಮಾಜದ ಎಲ್ಲಾ ರೀತಿಯ ಪ್ರಜೆಗಳೂ ಇದ್ದಾರೆ. ಇದನ್ನು ಆಚರಿಸುವ ಬಹುಸಂಖ್ಯಾತ ಪ್ರಜ್ಞಾವಂತರಿಗೆ ತಮ್ಮನ್ನೆಲ್ಲ  ಪ್ರಜ್ಞಾವಂತರಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿ ಟೀಕಿಸುವವರೇ  ಉದ್ಧಟರಂತೆ ತೋರಿದರೆ ಆಶ್ಚರ್ಯವಿಲ್ಲ. ಆದರೆ ಏಕೆ ಮಾಧ್ಯಮಗಳಲ್ಲಿನ ವಿದ್ಯಾವಂತ ಸಮಾಜವು ಈ ಬಹುಸಂಖ್ಯಾತರೇ ಮೂಢರೆಂಬುದಾಗಿ ತೀರ್ಮಾನಕ್ಕೆ ಬಂದಿದೆ? ಅವರನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಹಾದಿಗಳೇ ಇಲ್ಲವೆ? ಇವರೆಲ್ಲರ ಅನುಭವ ಪ್ರಪಂಚವನ್ನು ಅರ್ಥಹೀನವೆಂದು ಸಾರಾಸಗಟಾಗಿ ತಳ್ಳಿಹಾಕಿದಲ್ಲಿ ಸಮಸ್ಯೆ ಬಗೆಹರಿಯುತ್ತದೆಯೆ? ಏಕೆ ಕಳೆದ ನೂರಾರು ವರ್ಷಗಳಿಂದ ಇಂಥ ಆಚರಣೆಗಳನ್ನು ತೊಡೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ? ಇಲ್ಲಿ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯವಿದೆ ಎಂಬುದು ನಮ್ಮ ಅಭಿಪ್ರಾಯ.  ಇಂಥ ಪ್ರಶ್ನೆಗಳನ್ನು ಎತ್ತುತ್ತಿರುವಾಗ ಒಂದು ಅಪಾರ್ಥ ಹೊರಡುವ ಸಂಭವವಿದೆ. ಅದೆಂದರೆ ಇಂತಹ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಕಾರ್ಯವು ನಡೆಯುತ್ತಿದೆಯೆ ಎಂದು. ಆದರೆ ಇಲ್ಲಿ ನಮ್ಮ ಉದ್ದೇಶ ಎಂಜಲೆಲೆಯ ಆಚರಣೆಯು ಅತ್ಯದ್ಭುತವಾದುದು ಹಾಗೂ ಅದನ್ನು ಮಾಡಲೇಬೇಕೆಂಬುದು ಅಲ್ಲ ಎಂಬುದನ್ನು ಒತ್ತಿಹೇಳುತ್ತೇವೆ.  ಜೊತೆಗೆ ಈ ಆಚರಣೆಯನ್ನು ಸಮರ್ಥಿಸುವ ಕಾರ್ಯವನ್ನು ಮಾಡುವುದಿಲ್ಲ. 

ಈ ಆಚರಣೆಯ ಕುರಿತು ಮಾದ್ಯಮಗಳಲ್ಲಿ ಅಷ್ಟು (ಅಪ)ಪ್ರಚಾರವಾಗುತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುವ ವಿದ್ಯಾವಂತ ಜನರೇಕೆ ಅದನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯಿಸುತ್ತಿಲ್ಲ ಎಂಬುದೂ ಒಂದು ವಿಚಿತ್ರವೇ ಆಗಿದೆ.   ಅವರನ್ನು ಸಂದರ್ಶಿಸಿದವರಿಗೂ ಅವರು ತಿಳಿಸಿದ ಪ್ರಕಾರ ಈ ಆಚರಣೆಗಳು ಹಿಂದಿನಿಂದ ನಡೆದುಕೊಂಡು ಬಂದಿವೆ, ಅವನ್ನು ಮಾಡಿದರೆ ಶಾಂತಿ ಸಿಗುತ್ತದೆ, ಚರ್ಮರೋಗವು ವಾಸಿಯಾಗುತ್ತದೆ, ಇತ್ಯಾದಿ ಉತ್ತರಗಳು ಬಂದವು. ಈ ಉತ್ತರಗಳೂ ಕೂಡ ಈ ಆಚರಣೆಗಳ ಕುರಿತು ಏನನ್ನೂ ಹೇಳುವುದಿಲ್ಲ. ಅವನ್ನು ಮಾಡಲಿಕ್ಕೆ ಜನರು ಈ ಕ್ಷೇತ್ರಗಳಿಗೆ ಬಂದಿದ್ದಾರೆಯೇ ಹೊರತೂ ಆ ಆಚರಣೆಗಳ ಕುರಿತು ಅವರಿಗೆ ಹೇಳಲಿಕ್ಕೆ ಏನೂ ಇಲ್ಲ. ಸಮರ್ಥಿಸಲಿಕ್ಕೂ ಏನೂ ವಿವರಣೆಗಳಿಲ್ಲ, ಬಿಡಲಿಕ್ಕೂ ಏನೂ ಕಾರಣಗಳಿಲ್ಲ. ಹಾಗೂ ಅವರು ಆಚರಣೆಗಳನ್ನು ಮಾಡಲಿಕ್ಕೆ ಈ ಮೇಲಿನವು ಕಾರಣಗಳೇ ಅಲ್ಲದಿರುವ ಸಾಧ್ಯತೆಯೇ ಹೆಚ್ಚು. ಈ ಆಚರಣೆಯ ಕುರಿತು ಅನಿವಾರ್ಯವಾಗಿ ಎದುರಾದ ಪ್ರಶ್ನೆಗಳಿಗೆ ಅವರು ನೀಡಿದ ತಾತ್ಕಾಲಿಕ ಉತ್ತರವಾಗಿವೆಯಷ್ಟೆ ಎನಿಸುತ್ತದೆ. 

ಇಂಥ ಆಚರಣೆಗಳ ಸಂದರ್ಭದಲ್ಲಿ ಜನರು ಕ್ರಿಯೆಗಳನ್ನು ಏಕೆ ಮಾಡುತ್ತಾರೆ ಹಾಗೂ ಆ ಕ್ರಿಯೆಗಳ ಹಿಂದಿರುವ ಉದ್ದೇಶಗಳೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅರಿಯಬಹುದು ಎಂಬ ಗ್ರಹಿಕೆ ವಿದ್ವಾಂಸರಲ್ಲಿದೆ. ಆದರೆ ಇಲ್ಲಿ ಅಂಥ ಅಧ್ಯಯನವೇ ಸಾಧ್ಯವಿಲ್ಲ. ಒಂದೊಮ್ಮೆ ಜನರು ಈ ಆಚರಣೆಗಳ ಮೂಲಕವೇ ತಮ್ಮ ಚರ್ಮದ ಖಾಯಿಲೆಗಳು ವಾಸಿಯಾಗುತ್ತವೆ ಎಂದು ನಿಜವಾಗಿಯೂ ನಂಬಿದ್ದರೆ ಅವರು ಆಸ್ಪತ್ರೆಗಳಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಜನರು ಆಸ್ಪತ್ರೆಗಳಿಗೂ ತೆರಳುತ್ತಾರೆ ಅಂತೆಯೇ ದೇವಾಲಯಗಳಿಗೂ ಹೋಗುತ್ತಾರೆ. ಅವರಿಗೆ ಆಸ್ಪತ್ರೆಗಳಿಗೆ ಯಾವಾಗ ಹೋಗಬೇಕೆಂಬುದು ಚೆನ್ನಾಗಿಯೇ ತಿಳಿದಿದೆ ಹಾಗೂ ಅವರಲ್ಲಿ ಸ್ವತಃ ಡಾಕ್ಟರುಗಳೇ ದೇವಾಲಯಕ್ಕೆ ಬಂದು ಆಚರಣೆಯನ್ನು ಮಾಡುತ್ತಾರೆ, ಆಸ್ಪತ್ರೆಗೆ ಹೋಗಿ ವೈದ್ಯಕೀಯ ವೃತ್ತಿಯನ್ನೂ ಮಾಡುತ್ತಾರೆ.  ಇದರ ಸ್ಪಷ್ಟ ಸೂಚನೆಯೆಂದರೆ  ಈ ಆಚರಣೆಗಳಿಗೂ ವಿಚಾರವಂತಿಕೆಗೂ ಇವರು ಸಂಬಂಧ ಕಲ್ಪಿಸುತ್ತಿಲ್ಲ ಅಷ್ಟೆ. ಹಾಗಾಗಿ ಅವರನ್ನು ಮೂಢರೆಂದು ಕರೆಯುವುದು ಯತಾರ್ಥವಾಗಲಾರದು. ಈ ಆಚರಣೆಯ ಕುರಿತು ಏನೇ ಟೀಕೆಯನ್ನು ಮಾಡಿದರೂ, ಅವರನ್ನು ಮೂಢರೆಂದು ಪರಿಗಣಿಸುವುದು  ಅತಾರ್ಕಿಕವಾಗುತ್ತದೆ ಹಾಗೂ ಆ ಕಾರಣಕ್ಕಾಗಿ ಅಮಾನವೀಯವೂ ಆಗುತ್ತದೆ.  ಈ ಅವರ ವಿಚಾರವಂತಿಕೆಯ ಕುರಿತು ಗೌರವವನ್ನಿಟ್ಟುಕೊಂಡೇ ತಮ್ಮ ವಿಚಾರಗಳನ್ನು ಇಡಬೇಕಾಗುತ್ತದೆ. 

ನಾವು ಈ ಆಚರಣೆಗಷ್ಟೆ ನಮ್ಮ ವಾದವನ್ನು ಸೀಮಿತಗೊಳಿಸದೆ ಅದನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತೇವೆ. ಇಸ್ರೋ ದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳೂ ಸಹ ದೇವರಿಗೆ ಪೂಜೆ ಮಾಡಿಸಿ, ರಾಹುಕಾಲ ಗಳನ್ನೆಲ್ಲಾ ಲೆಕ್ಕಹಾಕಿ ತಮ್ಮ ಕೆಲಸದಲ್ಲಿ ತೊಡಗುತ್ತಾರೆ ಎಂಬುದು ಈ ಮೇಲಿನ ವಿಚಾರವಂತರ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿರುವ ವಿಷಯವಾಗಿದೆ.  ಆದರೆ ಈ ವಿಜ್ಞಾನಿಗಳಿಗೆ ಏನೂ ತಿಳಿದೇ ಇಲ್ಲವೆ? ಅವರು ಅಂತಹ ಆಚರಣೆಗಳಲ್ಲಿ ತೊಡಗದಿದ್ದರೂ ಅವರ ವಿಜ್ಞಾನ-ತಂತ್ರಜ್ಞಾನಗಳ ಸಂದರ್ಭದಲ್ಲಿ ಅವರು ವಿಚಾರವಂತರಾಗೇ ಕೆಲಸಮಾಡುತ್ತಾರೆ. ಅವರು ಈ ಮೌಢ್ಯಗಳನ್ನು ಆಚರಿಸದವನಿಗಿಂತ ದಡ್ಡರು ಎನ್ನಬಹುದೆ? ಅವರು ಬಿಡುವ ಉಪಗ್ರಹಗಳು ಅವರು ಪೂಜೆ ಮಾಡಿದ್ದರಿಂದ ಕೆಲಸಮಾಡುತ್ತವೆ ಎಂಬುದಾಗಿ ಅವರು ನಂಬಿದ್ದರೆ ಉಪಗ್ರಹ ತಂತ್ರಜ್ಞಾನವನ್ನು ಅವರೇಕೆ ತರಗತಿಗಳಲ್ಲಿ ಬೋಧಿಸುತ್ತಾರೆ? ಕೇವಲ ಪೂಜಾರಿಗಳೆ ಉಪಗ್ರಹವನ್ನು ಉಡಾವಣೆ ಮಾಡಬಹುದಿತ್ತಲ್ಲವೇ?  ಅಂತೆಯೇ ಆಸ್ಪತ್ರೆಗಳಲ್ಲಿ ಹಲವು ಬಾರಿ ವೈದ್ಯರುಗಳೇ ಇಂತಹ ಆಚರಣೆಗಳಿಗೆ ಮೊರೆಹೋಗುವುದನ್ನ ನೋಡಬಹುದು. ಅಷ್ಟು ದೊಡ್ಡ ವಿಜ್ಞಾನಿಗಳಾಗಿದ್ದರೂ, ವೈದ್ಯರಾಗಿದ್ದರೂ ಜೊತೆಗೆ ಅವರಿಗೆ ಅಷ್ಟು ಜ್ಞಾನವಿದ್ದರೂ ಅವರೇಕೆ ಇಂತಹ ಕ್ರಿಯೆಗಳನ್ನು ಮಾಡುತ್ತಾರೆ? ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಅಪಪ್ರಚಾರಕ್ಕೆ ಏಕೆ ಉತ್ತರಿಸುವುದಿಲ್ಲ? ಈ ಎರಡೂ ಪ್ರಶ್ನೆಗಳಿಗೂ ಒಂದೇ ತೆರನಾದ ಉತ್ತರವಿದೆ ಎಂಬುದು ನಮ್ಮ  ಅಭಿಪ್ರಾಯ. ಆಚರಣೆಗಳನ್ನು ವಿವರಿಸುವ ಕಾರ್ಯ ಅದರಲ್ಲಿ ಪಾಲ್ಗೊಳ್ಳುವ ಜನರಿಗೆ ಅಗತ್ಯವಿರುವುದಿಲ್ಲ. ಅವರು ಸುಮ್ಮನೆ ಮಾಡಬೇಕು ಮಾಡುತ್ತಾರಷ್ಟೆ. ಆ ಕಾರಣದಿಂದ ಅವರನ್ನು ಮೂಢರು ಎನ್ನುವುದು ಅವಸರದ ಹೇಳಿಕೆಯಾಗುತ್ತದೆ. ಅಂದರೆ ಈ ಆಚರಣೆಗಳು ವಿವರಣೆಗಳನ್ನು ಬಯಸುವುದಿಲ್ಲ, ಅವು ಕೇವಲ ಕ್ರಿಯೆಗಳನ್ನು ಮಾತ್ರ ಬಯಸುತ್ತವೆ. ಅವು ವಿಚಾರವಂತಿಕೆಗೆ ಸಂಬಂಧಪಟ್ಟವುಗಳಲ್ಲ. ಆದ್ದರಿಂದಲೇ ಅನೇಕ  ಬೌದ್ಧಿಕ ವೃತ್ತಿಯಲ್ಲ್ಲಿರುವ ಜನರೂ ಸಹ ಅವರ ಆಚರಣೆಗಳ ಕುರಿತು ಏನೇ ಪ್ರಚಾರವಾದರೂ ಅದಕ್ಕೆ ಕಿವಿಗೊಡದೆ ಅದನ್ನು ಮಾಡುವ ಸಂದರ್ಭದಲ್ಲಿ ಮಾಡುತ್ತಾರಷ್ಟೆ.  

ಇಂದು ನಮ್ಮ ಮುಂದಿರುವ ಜಿಜ್ಞಾಸೆ ಕೇವಲ ಆಚರಣೆಗಳನ್ನು ತೊಡೆದು ಹಾಕುವ ಕುರಿತಾಗಿ ಇವೆ. ಆಚರಣೆಗಳನ್ನು ಏಕೆ ತೊಡೆಯಬೇಕು? ಏಕೆಂದರೆ ಅದರಿಂದ ತೊಂದರೆಯಾಗುತ್ತಿದೆ ಎನ್ನುವುದು ಕಾರಣವಾಗಬಹುದು. ಆದರೆ ಇಲ್ಲಿ ಆಚರಣೆ ಮಾಡುವವರು ತಮಗೆ ಶಾಂತಿ ಸಿಗುತ್ತದೆ ಎನ್ನುತ್ತಿದ್ದಾರೆ. ಅಂದರೆ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ಧರಿಸುತ್ತಿರುವವರು ಯಾರು? ನೋಡುವವರೂ ಅಲ್ಲ, ಅದರ ವರದಿಯನ್ನು ಓದಿ ಜಿಜ್ಞಾಸೆ ಮಾಡುವ ಕೆಲವು ವಿಚಾರವಂತರು. ಅಂದರೆ ಏನು ತೊಂದರೆಯಾಗುತ್ತಿದೆ ಎಂಬುದು ಆಚರಣೆ ಮಾಡುವವರಿಗೇ  ಅರಿವಿಲ್ಲದಿದ್ದರೂ ಕೆಲವು ವಿಚಾರವಂತರಿಗೆ ಅದು ಹೇಗೆ ಗೊತ್ತಾಯಿತು?   ಇದುವರೆಗೂ ಎಂಜಲೆಲೆಯ ಆಚರಣೆಯ ಕುರಿತಾದದ ಚರ್ಚೆಗೆ ಸಂಬಂಧಿಸಿದಂತೆ ಅದಕ್ಕೆ ಮೌಢ್ಯವನ್ನು ಆರೋಪಿಸಿ ಅದನ್ನು ಹೋಗಲಾಡಿಸುವ ಪ್ರಯತ್ನದಲ್ಲಿರುವವರೇ ಅದು ಅಸಹನೀಯ ಎನ್ನುತ್ತಿದ್ದಾರೆಯೇ ಹೊರತು ಆಚರಿಸುವವರ ಅನುಭವದಿಂದ ಈ ಹೇಳಿಕೆಯು ಪ್ರಮಾಣಿತವಾಗಿಲ್ಲ. ಜಿಜ್ಞಾಸೆಯನ್ನೇ ಆಧರಿಸದ ಆಚರಣೆಗಳನ್ನು ಜಿಜ್ಞಾಸೆಯ ಮೂಲಕ ನೋಡಲು ಹೋದರೆ ಇಂಥ ಅಸಂಗತ ಸನ್ನಿವೇಶ ನಿರ್ಮಾಣವಾಗುತ್ತದೆ. 

ಇದನ್ನು ಇನ್ನೂ ಸ್ಪಷ್ಟಗೊಳಿಸಿಕೊಳ್ಳುವುದಾದರೆ, ಜನರು ಬ್ರಾಹ್ಮಣರ ಎಂಜಲೆಲೆಯಿಂದ ತಮ್ಮ ರೋಗರುಜಿನ ವಾಸಿಯಾಗುತ್ತದೆ ಎಂದು ನಿಜವಾಗಿಯೂ ನಂಬಿದ್ದರೆ, ಬಹುತೇಕ ರೋಗಗ್ರಸ್ಥರು ಬ್ರಾಹ್ಮಣರ ಮನೆಯ ಮುಂದೆ ಅವರ ಎಂಜಲೆಲೆಗಳಿಗೋಸ್ಕರ ನಿಂತಿರಬೇಕಿತ್ತು. ಆದರೆ ಪರಿಸ್ಥಿತಿ ಹಾಗೆ ಇದೆಯೇ? ಖಂಡಿತ ಇಲ್ಲ, ಏಕೆಂದರೆ ನಿರ್ದಿಷ್ಟ ಸಮಯದಲ್ಲಿ ಅದೂ ದೇವಸ್ಥಾನಗಳಂತಹ ಸ್ಥಳಗಳಲ್ಲಿ ಮಾತ್ರ ಜನರು ಆ ಆಚರಣೆಯನ್ನು ಮಾಡುತ್ತಾರೆ. ಅದು ಅಲ್ಲಿ ಮಾತ್ರ ಮಾಡುವ ಕಾರ್ಯವಾಗಿದ್ದು ದೇವಸ್ಥಾನದ ಹೊರಗೆ ಅದರ ಪ್ರಸ್ತುತತೆ ಇರುವುದಿಲ್ಲ. ಆದ್ದರಿಂದ ಆಚರಣೆಗಳು ಜರುಗುವ ಸಂದರ್ಭ, ಕಾಲ, ಸ್ಥಳಗಳು ಆಚರಣೆಗಳಿಗೆ ಅರ್ಥವನ್ನು ನೀಡುತ್ತವೆಯೇ ವಿನಃ, ಅದರಿಂದ ಹೊರಬಂದರೆ ಆಚರಣೆಗಳು ಅವೈಚಾರಿಕವಾಗಿಯೇ ಕಾಣುತ್ತವೆ. ಬ್ರಾಹ್ಮಣರ ಎಂಜಲೆಲೆಯಲ್ಲಿ ಹೊರಳಾಡಿದರೆ ರೋಗ ವಾಸಿಯಾಗುವುದಿಲ್ಲ ಎಂದು ಜನರಿಗೆ ತಿಳಿದಿದೆ ಎಂದು ಜನರಿಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ ಆದರೂ ಅದು ಪೂರ್ವಕಾಲದಿಂದ ಬಂದಿದೆ ಎಂಬ ಕಾರಣಕ್ಕೋ ಅಥವಾ ತಮ್ಮ ಮನಃಶಾಂತಿಗೋ ಹಾಗೂ ಇನ್ಯಾವುದೋ ಕಾರಣಗಳಿಗೆ, ಅಥವಾ ಯಾವುದೇ ಕಾರಣಗಳಿಲ್ಲದೆಯೂ ಆ ಆಚರಣೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಜನರು ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ದಿಷ್ಟವಾದ ನಂಬಿಕೆ ಇರುತ್ತದೆ ಎಂಬ ಅವೈಚಾರಿಕ ವಿಶ್ಲೇಷಣೆ ನಮ್ಮ ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾದಿತಪ್ಪಿಸುತ್ತವೆ.

ದೇವರಿಗೆ ಅರ್ಪಿಸುವ ನೈವೇದ್ಯವಾಗಲಿ, ದೇವರ ಮುಂದೆ ಇಡುವ ಎಡೆಯಾಗಲೀ ದೇವರು ತೆಗೆದುಕೊಳ್ಳುತ್ತಾನೆ ಎಂಬುದು ಮೌಢ್ಯದಂತೆಯೇ ಕಾಣುತ್ತದೆ. ಆದರೆ ಅದನ್ನು ಮಾಡುವ ಜನರಿಗೆ ಅವುಗಳನ್ನು ದೇವರು ತಿನ್ನಲು ಸಾಧ್ಯವಿಲ್ಲ ಎಂಬ ಕ್ಷುಲ್ಲಕ ಸಂಗತಿಗಳು ತಿಳಿದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರೆ ಹಾದಿ ತಪ್ಪುತ್ತೇವೆ. ದೇವರು ಕಥೆಗಳಲ್ಲಿ ಬಿಟ್ಟರೆ ನಿಜದಲ್ಲಿ ಎಂದೂ ತಿನ್ನುವುದೂ ಇಲ್ಲ ಎಂಬುದು ಅವರ ಅನುಭವ. ಆದರೂ ಜನರೇಕೆ ಎಡೆ ಇಡುತ್ತಾರೆ? ಏಕೆ ಇಡುತ್ತಾರೆಂದರೆ ಅವರ ಪೂರ್ವಜರು ಅವರಿಗೆ ಹಾಗೆ ಹೇಳಿಕೊಟ್ಟಿದ್ದಾರೆ. ಅದನ್ನು ಮುಂದುವರೆಸುವುದರಿಂದ ಅವರಿಗೇನು ತೊಂದರೆಯೂ ಇಲ್ಲ, ಅಡ್ಡಿ ಆತಂಕಗಳೂ ಇಲ್ಲ. ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಆಚರಣೆಗಳನ್ನು ಮಾಡಲು ಇಂತದ್ದೇ ನಿರ್ದಿಷ್ಟ ಕಾರಣ ಇರಬೇಕೆಂಬ ನಿಯಮವಿಲ್ಲ, ಇನ್ನೂ ನಿರ್ದಿಷ್ಟವಾಗಿ ವೈಚಾರಿಕ ವಿವರಣೆ ಅಥವಾ ಕಾರಣಗಳ ಅಗತ್ಯವಿಲ್ಲ. ಅಂತಹ ಯಾವುದೇ ಕಾರಣಗಳಿಲ್ಲದೆಯೂ ಜನರು ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಆ ಆಚರಣೆಗಳಿಗೆ ಕಾರಣಗಳಿಲ್ಲ, ಹಾಗಾಗಿ ಮೂಢ ಆಚರಣೆಗಳು, ಆ ಕಾರಣಕ್ಕಾಗಿ ಅವುಗಳನ್ನು ನಿಲ್ಲಿಸಬೇಕು ಎನ್ನುವವರು ಮನುಷ್ಯ ವರ್ತನೆಯ ಒಂದು ವೈಜ್ಞಾನಿಕ ಸತ್ಯವನ್ನು ಅರಿತಿಲ್ಲ.  ಅದೆಂದರೆ, ಆಚರಣೆಗಳನ್ನು ಮುಂದುವರೆಸಲು  ಕಾರಣಗಳು ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರದು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು. ಇದು ಮಾನವ ಆಚರಣೆಯ ಕುರಿತು ವಿಜ್ಞಾನಿಗಳೇ ಹೇಳಿದ ವಿಚಾರ. ಹಾಗಾಗಿ ಒಂದೊಮ್ಮೆ ಜನರಿಗೆ ಯಾವುದಾದರೂ ಆಚರಣೆ ತಪ್ಪು, ಅದನ್ನು ನಿಲ್ಲಿಸಬೇಕು ಎಂದು ಅನಿಸಿದಾಗೆಲ್ಲ ಕಾಲಕ್ರಮೇಣ ಅಂತಹ ಆಚರಣೆಗಳನ್ನು ಪರಿವರ್ತಿಸಿಕೊಂಡಿದ್ದಾರೆ ಇಲ್ಲವೆ ಬಿಟ್ಟು ಬಿಟ್ಟಿದ್ದಾರೆ. ಹೀಗೆ ಎಷ್ಟೋ ಆಚರಣೆಗಳು ಅಳಿದಿವೆ, ಎಷ್ಟೋ ಹೊಸದಾಗಿ ಹುಟ್ಟಿಕೊಂಡಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ.

ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ, ಜೊತೆಗೆ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಇದರ ಸ್ಪಷ್ಟ ಸೂಚನೆ ಎಂದರೆ ಭಾಗವಹಿಸುವವರು ಎಷ್ಟೇ ವಿರೋಧವಿದ್ದರೂ ಭಾಗವಹಿಸುತ್ತಲೇ ಇದ್ದಾರೆ, ವಿರೋಧಿಸುವವರು ಜನರು ಎಷ್ಟೇ ನಿರಾಸಕ್ತಿ ತೋರಿದರೂ ವಿರೋಧಿಸುತ್ತಲೇ ಇದ್ದಾರೆ. ಇವರಿಬ್ಬರ ನಡುವೆ ಯಾವುದೋ ಒಂದು ತೆರನಾದ ಕಂದರವಿದೆ ಎಂಬುದು ನಮ್ಮ ಅಭಿಪ್ರಾಯ. ಇಲ್ಲಿರುವ ಕಂದರವನ್ನು ಹೋಗಲಾಡಿಸಲು ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ಇಂದು ನಮಗಿದೆ. ಹಾಗೆ ಅರ್ಥಮಾಡಿಕೊಳ್ಳಲು ಅಕ್ಷರ ರಂತಹ ಚಿಂತಕರ ಅಭಿಪ್ರಾಯಗಳು ನಮಗೆ ಮಾರ್ಗದರ್ಶನವಾಗಬಹುದು.

 

 

Comments