ಆಜಾದಿ

ಆಜಾದಿ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ರಾಜೀವ್ ದೀಕ್ಷಿತ್, ಕನ್ನಡಕ್ಕೆ : ರಾಘವೇಂದ್ರ ಜೋಷಿ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ : ಮೇ ೨೦೦೧

‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರತೀ ವಾರ ಪ್ರಕಟ ಮಾಡುತ್ತಿದ್ದರು. ಹಾಯ್ ಬೆಂಗಳೂರು ಸಂಪಾದಕರಾದ ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದದ್ದು ಹೀಗೆ..."ಈ ದೇಶದ ರೈತ ಬೆಳೆದ ಎಳನೀರು- ಅವನ ಶೃದ್ಧೆ, ಶ್ರಮ, ಬೆವರು, ರಕ್ತ, ಕನಸು, ಆಸೆಗಳ ಸಾಂದ್ರರೂಪ. ಅದರ ಬೆಲೆ ಬರೀ ಎರಡೇ ರೂಪಾಯಿ. ಈ ದೇಶಕ್ಕೆ ಎಲ್ಲಿಂದಲೋ ಬಂದು ಬೀಳುವ ‘ಪೆಪ್ಸಿ' - ಅದು ಕೊಳಕು ನೀರು, ಕೆಮಿಕಲ್ಲು ಮತ್ತು ಅಂತರಾಷ್ಟ್ರೀಯ ವ್ಯಾಪಾರೀ ದುರಾಸೆಗಳ ಮೋಸದ ಸೀಸೆ. ಅದರ ಬೆಲೆ ಹತ್ತು ರೂಪಾಯಿ! ನಮ್ಮ ಅಂಗಳದ ಬೇವಿನ ಮರದ ಮೇಲೆ ಅಮೇರಿಕದವನ ಹಕ್ಕು. ನಾವು ಬೆಳೆದ ಅಕ್ಕಿ ಮುಗ್ಗಲು ಹಿಡಿದು ಬಿದ್ದಿದ್ದರೆ ನಮ್ಮ ರಾಷ್ಟ್ರ ನಾಯಕರಿಗೆ ಚೀನದಿಂದ ಅಕ್ಕಿ ತರಿಸಿಕೊಳ್ಳುವ ಸಡಗರ.”

“ಇಡೀ ಭಾರತವನ್ನು ಅದರ ನೂರು ಕೋಟಿ ಜನತೆಯ ಸಮೇತ ಒತ್ತೆಯಿಟ್ಟು ಬರುವ ಇವತ್ತಿನ ರಾಜನೀತಿಗೊಂದು ಧಿಕ್ಕಾರವಿರಲಿ ! ನಮ್ಮ ದೇಶ , ನಾವು ಬೆಳೆದ ಬೆಳೆ, ನಮ್ಮ ಇತಿಹಾಸ ಮತ್ತು ನಮ್ಮ ಭವಿತವ್ಯ - ಇದನ್ನು ಪ್ರೀತಿಸಲಾಗದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮೆಲ್ಲರಿಗೂ ಸರ್ವನಾಶ ಕಾದಿದೆ. ಹಾಗಂತ ಎಚ್ಚರಿಸಿದ ‘ಹಾಯ್ ಬೆಂಗಳೂರ್ !’ ಪತ್ರಿಕೆಯ ಅತ್ಯಂತ ಜನಪ್ರಿಯ ಅಂಕಣವೇ ಆಜಾದಿ.”

ರಾಜೀವ್ ದೀಕ್ಷಿತ್ ಅವರು ತಮ್ಮ ವಿಚಾರ ಧಾರೆಯನ್ನು ಪ್ರಕಟಿಸಿ ಎರಡು ದಶಕಗಳೇ ಕಳೆದರೂ ಈಗಲೂ ಅದು ಪ್ರಸ್ತುತವೆನಿಸುತ್ತಿದೆ. ಈಗಲೂ ನಾವು ಎಳನೀರು, ಲಿಂಬೆ ರಸ, ಮೊಸರು-ಮಜ್ಜಿಗೆಗಳ ಬದಲು ಪೆಪ್ಸಿ, ಕೋಲಾಗಳನ್ನೇ ಕುಡಿಯುತ್ತಿದ್ದೇವೆ. ವಿದೇಶೀ ವಸ್ತುಗಳಿಗೇ ಬೆನ್ನು ಬೀಳುತ್ತಿದ್ದೇವೆ. ನಮ್ಮ ರೈತ ಬೆಳೆದ ಬೆಳೆ ಚರಂಡಿ ಪಾಲಾಗುತ್ತಿದೆ. ಪ್ರತೀ ವಿದೇಶಿ ವಸ್ತುಗಳಿಗೆ ತಕ್ಕ ಸ್ವದೇಶಿ ವಸ್ತುಗಳು ಲಭ್ಯವಿರುವಾಗ ನಮಗೆ ಯಾಕೆ ವಿದೇಶಿ ಮೋಹ ಎನ್ನುತ್ತಾರೆ ರಾಜೀವ್ ದೀಕ್ಷಿತ್. 

ಕನ್ನಡಕ್ಕೆ ಅನುವಾದ ಮಾಡಿದ ರಾಘವೇಂದ್ರ ಜೋಷಿಯವರು ತಮ್ಮ ಮೊದಲ ಮಾತು ಇದರಲ್ಲಿ ಒಂದೆಡೆ ಬರೆಯುತ್ತಾರೆ “...ನಂತರದ ದಿನಗಳಲ್ಲಿ ಅದೇ ಗೆಳೆಯನ ಮೂಲಕ ತಿಳಿದು ಬಂದ ಸಂಗತಿಯೇನೆಂದರೆ, ಭಾರತದಂಥ ಬಡರಾಷ್ಟ್ರದಲ್ಲಿ ಮಲ್ಟಿನ್ಯಾಶನಲ್ ಕಂಪೆನಿಗಳು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಆ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಗೇ ಕೊಡಲಿಯೇಟು ನೀಡುತ್ತಿವೆ. ಇಂಥ ಎಮ್ಮೆನ್ಸಿ ಕಂಪೆನಿಗಳ ಭರಾಟೆಯಲ್ಲಿ ಇಲ್ಲಿನ ಗುಡಿಕೈಗಾರಿಕೆಗಳು ನಿಧಾನವಾಗಿ ಕಣ್ಮುಚ್ಚ ತೊಡಗಿವೆ. ಪರಿಣಾಮವಾಗಿ ಕೋಟ್ಯಾಂತರ ಜನ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಇನ್ನೊಂದು ಕಡೆ ಈ ವಿದೇಶಿ ಕಂಪೆನಿಗಳ ವಿರುದ್ಧ ‘ಅಜಾದಿ ಬಚಾವೋ ಆಂದೋಲನ' ವೆಂಬ ಸಂಘಟನೆ ದೊಡ್ದ ದನಿಯಲ್ಲಿ ಕೂಗು ಹಾಕುತ್ತಿದೆ. ಅದರ ರಾಷ್ಟ್ರೀಯ ಪ್ರವರ್ತಕನಾದ ರಾಜೀವ್ ದೀಕ್ಷಿತ್ ಎಂಬ ಮೂವತ್ತಾರರ ಬ್ರಹ್ಮಚಾರಿ ತನ್ನ ಪ್ರಖರ ಭಾಷಣಗಳ ಮೂಲಕ, ತಾರ್ಕಿಕವಾದ ವಾದದ ಮೂಲಕ ಇಲ್ಲಿನ ಜನತೆಯಲ್ಲಿ ಸ್ವದೇಶಿ ಜಾಗೃತಿಯನ್ನು ಮೂಡಿಸುವುದರಲ್ಲಿ ಸಫಲನಾಗುತ್ತಿದ್ದಾನೆ..."

ಅನುವಾದಕರಾದ ರಾಘವೇಂದ್ರ ಜೋಷಿಯವರು ರಾಜೀವ್ ದೀಕ್ಷಿತ್ ಅವರ ವಿಚಾರ ಧಾರೆಗಳನ್ನು ಸೊಗಸಾಗಿ ಭಾವಾನುವಾದ ಮಾಡಿರುವುದು ಈ ಪುಸ್ತಕದ ಪ್ಲಸ್ ಪಾಯಿಂಟ್. ಪುಟ್ಟ ಪುಟ್ಟ ಅಧ್ಯಾಯಗಳನ್ನು ಯಾವಾಗ ಬೇಕಾದರೂ ಓದಬಹುದು. ಸುಮಾರು ೧೩೦ ಪುಟಗಳ ಈ ಪುಸ್ತಕವನ್ನು ಅನುವಾದಕರು ತಮ್ಮ ಅಮ್ಮನಿಗೆ ಅರ್ಪಿಸಿದ್ದಾರೆ.