ಆಟಕೂಟಗಳಲ್ಲಿ ರಂಜಿಸುವ ಕಲಾಪ್ರತಿಭೆ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

ಆಟಕೂಟಗಳಲ್ಲಿ ರಂಜಿಸುವ ಕಲಾಪ್ರತಿಭೆ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

ಯಕ್ಷಗಾನವೆಂಬ ಗಂಡುಕಲೆಗೆ ಪ್ರೇಕ್ಷಕರನ್ನು ಪುರಾಣಕಾಲಕ್ಕೆ, ಪುರಾಣಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಮಾತುಗಾರಿಕೆ ಮತ್ತು ವೇಷಭೂಷಣಗಳಿಂದ ಯಕ್ಷಗಾನದ ಪಾತ್ರಧಾರಿ ಕಲಾಭಿಮಾನಿಗಳನ್ನು ಬೇರೆಯೇ ಲೋಕಕ್ಕೆ, ಬೇರೆಯೇ ಕಾಲಕ್ಕೆ ಕೊಂಡೊಯ್ಯಬಲ್ಲ. ಹೀಗಾಗಬೇಕಾದರೆ ಪಾತ್ರಧಾರಿಯು ಬಹಳಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರಸಂಗ ನಡೆ, ಕಥೆಯ ಮಾಹಿತಿ, ಪಾತ್ರದ ಸ್ವಭಾವ, ಕವಿಯ ಆಶಯ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿದರೆ ಮಾತ್ರ ಪಾತ್ರವನ್ನು ಧರಿಸಿದ ವ್ಯಕ್ತಿಯು ಸಭಿಕರನ್ನು ಪುರಾಣಲೋಕಕ್ಕೆ ಕೊಂಡೊಯ್ಯಬಲ್ಲ.

ಇಲ್ಲವಾದರೆ ಪಾತ್ರವೂ ಪ್ರಸಂಗವೂ ಪೇಲವವಾಗಿ ಪ್ರೇಕ್ಷಕರು ಲೌಕಿಕ ಲೋಕದಲ್ಲೇ ಉಳಿಯುವಂತಾಗುತ್ತದೆ. ಜತೆ ಪಾತ್ರದ ಸ್ವಭಾವವೂ ಕೆಡದಂತೆ ಅಭಿನಯಿಸುವುದೂ ಒಂದು ಕಲೆ. ಕಲಾವಿದರಿಗೆ ಅದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಹಿರಿಯ ತಲೆಮಾರಿನ ಅನೇಕ ಖ್ಯಾತ ಕಲಾವಿದರ ಕೊಡುಗೆಗಳು, ಸಂದೇಶಗಳು ನಮಗಿದೆ. ಆ ಸಂದೇಶಗಳನ್ನು ಅನುಸರಿಸುತ್ತಾ ಕಿರಿಯ ಕಲಾವಿದರು ಬೆಳೆಯುತ್ತಾ ಸಾಗಿದರೆ ಯಕ್ಷಗಾನ ಕಲೆಯು ಬಡವಾಗದು. ಹೀಗೆ ಆಳವಾಗಿ ಅಧ್ಯಯನವನ್ನು ಮಾಡುತ್ತಾ ತಾಳಮದ್ದಳೆ ಅರ್ಥಧಾರಿಯಾಗಿ ಬೆಳೆದವರು ಅನೇಕರು. ಇನ್ನು ಹಲವಾರು ಮಂದಿಗಳು ವೇಷಧಾರಿಯಾಗಿ ಹೆಸರನ್ನು ಗಳಿಸಿದರು.

ಆಟ ಕೂಟಗಳೆಂಬ ಎರಡು ವಿಭಾಗಗಳಲ್ಲೂ ಈ ಕಾಲದಲ್ಲಿ ಅನೇಕರು ಬೆಳೆಯುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂತವರ ಸ್ಥಾನದಲ್ಲಿ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಅವರನ್ನು ನಾವು ಗುರುತಿಸಬಹುದು. ಇವರು ಕಟೀಲು ಮೇಳದ ಕಲಾವಿದ. ಕಳೆದ ಹದಿನಾರು ವರ್ಷಗಳಿಂದ ವೃತ್ತಿಕಲಾವಿದನಾಗಿ ವ್ಯವಸಾಯವನ್ನು ಮಾಡುತ್ತಿದ್ದಾರೆ. 2011ರಿಂದ ತೊಡಗಿ ಕಳೆದ 12 ವರ್ಷಗಳಿಂದ ತಾಳಮದ್ದಳೆ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಶ್ರೀ ಗಣೇಶ್ ಶೆಟ್ಟಿ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ. ಶ್ರೀ ಓಬಯ್ಯ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಶ್ರೀ ಓಬಯ್ಯ ಶೆಟ್ಟಿ, ಶ್ರೀಮತಿ ಲಲಿತಾ ದಂಪತಿಗಳಿಗೆ ಮೂರು ಮಂದಿ ಮಕ್ಕಳು. (ಇಬ್ಬರು ಪುತ್ರರು, ಓರ್ವಳು ಪುತ್ರಿ) ಗಣೇಶ್ ಶೆಟ್ಟಿ ಅವರ ತಮ್ಮ ಶ್ರೀ ಮಹೇಶ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿ. ತಂಗಿ ವೈಶಾಲಿ ವಿವಾಹಿತೆ. ಇವರ ಪತಿ ಶ್ರೀ ಪ್ರಮೋದ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿ.

ಶ್ರೀ ಗಣೇಶ್ ಶೆಟ್ಟಿ ಅವರು ಓದಿದ್ದು ಪಿಯುಸಿ ವರೆಗೆ. 7ನೇ ತರಗತಿ ವರೆಗೆ ಪಡಂಗಡಿ ಶಾಲೆಯಲ್ಲಿ. ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಇದ್ದುಕೊಂಡು ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಪಿಯುಸಿ ಶಿಕ್ಷಣ ವಗ್ಗ ಸರಕಾರೀ ಕಾಲೇಜಿನಲ್ಲಿ. ಗಣೇಶ ಶೆಟ್ಟಿ ಅವರ ತಂದೆ ಶ್ರೀ ಓಬಯ್ಯ ಶೆಟ್ಟಿ ಕೃಷಿಕರು. ಗಣೇಶ್ ಅವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾಸಕ್ತಿ ಇತ್ತು. ಆಟಕೂಟಗಳಿಗೆ ತೆರಳಿ ಆಸ್ವಾದಿಸುತ್ತಿದ್ದರು. ಖ್ಯಾತ ಕಲಾವಿದರಾದ ಪೆರುವಾಯಿ ಶ್ರೀ ನಾರಾಯಣ ಶೆಟ್ಟಿ ಅವರು ಇವರ ದೂರದ ಸಂಬಂಧಿ. ಪೆರ್ಮುದೆ ಶ್ರೀ ಜಯಪ್ರಕಾಶ ಶೆಟ್ಟಿ ಅವರು ಅಣ್ಣ. (ದೊಡ್ಡಮ್ಮನ ಮಗ)

ಅಜ್ಜ ಶ್ರೀ ಬಾಯಾರು ಜತ್ತಪ್ಪ ಶೆಟ್ಟರು ಹವ್ಯಾಸಿ ಭಾಗವತ (ತಾಯಿಯ ತಂದೆ) ಇದು ಗಣೇಶ್ ಅವರಿಗೆ ಇದ್ದ ಯಕ್ಷಗಾನದ ಹಿನ್ನೆಲೆ. ಇದರಿಂದ ಅನುಕೂಲವೂ ಆಗಿತ್ತು. ಪಿಯುಸಿ ಶಿಕ್ಷಣದ ನಂತರ ಎರಡು ವರ್ಷಗಳ ಕಾಲ ಮಂಗಳೂರಿನಲ್ಲಿ ಖಾಸಗಿ ಉದ್ಯೋಗ. ಈ ಸಮಯದಲ್ಲೂ ಆಟ ತಾಳಮದ್ದಲೆಗಳ ಪ್ರೇಕ್ಷಕರಾಗಿದ್ದರು. ಕಲಾವಿದನಾಗಬೇಕೆಂಬ ಆಸೆಯಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಯುವ ಮನ ಮಾಡಿದರು. 2006ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ತರಬೇತಿ ಕೇಂದ್ರಕ್ಕೆ ತೆರಳಿದ ಶ್ರೀ ಗಣೇಶ್ ಶೆಟ್ಟಿ ಅವರು ಕೇಂದ್ರದ ಗುರು ದಿವಾಣ ಶ್ರೀ ಶಿವಶಂಕರ ಭಟ್ಟರಿಂದ ನಾಟ್ಯವನ್ನು ಕಲಿತರು.

ಲಲಿತಕಲಾ ಕೇಂದ್ರದಲ್ಲಿ ಸತೀಶ್ ಭಟ್, ಪಳ್ಳಿ ವಿಶ್ವನ್ನಾಥ ಶೆಣೈ, ಮಹೇಶ್ ಎಡನೀರು. ರಾಜೇಶ್ ಪುತ್ತಿಗೆ, ಯಶೋಧರ ಪಂಜ, ನಾಗಚಂದ್ರ ತೀರ್ಥಹಳ್ಳಿ ಇವರ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ಮೊದಲ ಪ್ರದರ್ಶನ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ವೀರಭದ್ರನಾಗಿ ರಂಗಪ್ರವೇಶ. ಬಳಿಕ ಕರ್ಣಾರ್ಜುನ ಪ್ರಸಂಗದಲ್ಲಿ ಶಲ್ಯನಾಗಿ ರಂಗವೇರಿದ್ದರು. 2006 – 2007ರಲ್ಲಿ ಇವರು ವೃತ್ತಿ ಕಲಾವಿದನಾಗಿ ತಿರುಗಾಟ ಆರಂಭಿಸಿದ್ದರು. ಮೊದಲ ತಿರುಗಾಟ ಕಟೀಲು ಮೇಳದಲ್ಲಿ. ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಪ್ರಧಾನ ಭಾಗವತರಾಗಿದ್ದ ಒಂದನೇ ಮೇಳದಲ್ಲಿ. ಮುಂದಿನ ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ. ಬಳಿಕ ಕಟೀಲು 3ನೇ ಮೇಳದಲ್ಲಿ ಹದಿಮೂರು ವರ್ಷಗಳ ಕಲಾ ಸೇವೆ.

ಪ್ರಥಮ ವರ್ಷದಲ್ಲಿ ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ದೊರೆತ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು. 1ನೇ ಮೇಳದಲ್ಲಿರುವಾಗ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು, ಸಂಪಾಜೆ ಜಯಾನಂದ ಮೊದಲಾದವರ ಮಾರ್ಗದರ್ಶನ ಸಿಕ್ಕಿತ್ತು. ಮೂರನೇ ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳು, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಮೊದಲಾದವರ ಮಾರ್ಗದರ್ಶನವೂ ದೊರೆತಿತ್ತು. ಅಲ್ಲದೆ ಭಾಗವತರುಗಳಾದ ಗೋಪಾಲಕೃಷ್ಣ ಮಯ್ಯ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪ್ರಫುಲ್ಲಚಂದ್ರ, ಬೋಂದೆಲ್ ಸತೀಶ್ ಶೆಟ್ಟಿ, ಕಲಾವಿದರುಗಳಾದ ಕೈರಂಗಳ ಕೃಷ್ಣ ಮೂಲ್ಯ, ರೆಂಜಾಳ ರಾಮಕೃಷ್ಣ ರಾವ್,  ದಾಸನಡ್ಕ ರಾಮ ಕುಲಾಲ್, ದಿನಖರ ಗೋಖಲೆ, ತೊಡಿಕಾನ ವಿಶ್ವನಾಥ ಗೌಡ,ಅಮ್ಮುಂಜೆ ಮೋಹನ, ಚಂದ್ರಮಂಡಲ ಗಣೇಶ, ಸುನಿಲ್ ಪದ್ಮುಂಜ ಮೊದಲಾದವರ ಒಡನಾಟವು ದೊರೆತಿತ್ತು.

ಶ್ರೀ ಗಣೇಶ್ ಶೆಟ್ಟಿ ಅವರು ಪ್ರಥಮ ತಿರುಗಾಟದಲ್ಲೇ ಕಿರೀಟ ವೇಷವನ್ನು ಮಾಡಿ ಅನುಭವವನ್ನು ಗಳಿಸಿದ್ದರು. (1ನೇ ಮೇಳದಲ್ಲಿ). ಕಿರೀಟ ವೇಷಧಾರಿಯಾಗಿಯೇ ಮೂರನೇ ಮೇಳವನ್ನು ಸೇರಿಕೊಂಡಿದ್ದರು.(ಮೂರನೆಯ ತಿರುಗಾಟ) ಗೇರುಕಟ್ಟೆ ಗಂಗಯ್ಯ ಶೆಟ್ಟರ ವೇಷಗಳನ್ನು ನೋಡಿ ಕಲಿಯುವುದಕ್ಕೆ ಅವಕಾಶವಾಗಿತ್ತು. ಇವರ ಪ್ರತಿಭೆಯನ್ನು ಗುರುತಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ರು ಅವಕಾಶಗಳನ್ನು ಇತ್ತು ಪ್ರೋತ್ಸಾಹಿಸಿದ್ದರು. ಅವರು ನಿರ್ವಹಿಸುವ ಪಾತ್ರಗಳನ್ನು ಗಣೇಶ್ ಅವರಲ್ಲಿ ಮಾಡಿಸಿ ಕಲಿಕೆಗೆ ಅವಕಾಶವನ್ನು ಇತ್ತಿದ್ದರು. ಪ್ರಸಂಗನಡೆಯ ವಿಚಾರದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರ ನಿರ್ದೇಶನವು ಸಿಕ್ಕಿತ್ತು.

ಮಾತುಗಾರಿಕೆಯ ವಿಚಾರದಲ್ಲಿ ನನಗೆ ಅನೇಕರು ಮಾರ್ಗದರ್ಶನವನ್ನು ನೀಡಿದ್ದಾರೆ. ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮತ್ತು ಪೆರ್ಮುದೆ ಜಯಪ್ರಕಾಶ ಶೆಟ್ಟರ ಪ್ರೋತ್ಸಾಹವೂ ಇತ್ತು. ಹಿರಿಯರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಶ್ರೀ ಶಂಭು ಶರ್ಮ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಶ್ರೀ ಜಬ್ಬಾರ್ ಸಮೋ, ಶ್ರೀ ಗಣೇಶ್ ಕೊಲೆಕಾಡಿ, ಶ್ರೀ ವಿ.ಬಿ. ಹಿರಣ್ಯ ಶ್ರೀ ವಾಸುದೇವ ರಂಗಾ ಭಟ್, ಶ್ರೀ ವಿಷ್ಣು ಶರ್ಮ ಅವರುಗಳಿಂದ ಕೇಳಿ ಕಲಿಯುತ್ತಾ ನಾನು ಬೆಳೆದವನು ಎಂಬುದು ಶ್ರೀ ಗಣೇಶ್ ಶೆಟ್ಟರ ಮನದಾಳದ ಮಾತು. ನಾಟ್ಯದ ವಿಚಾರದಲ್ಲಿ ಶ್ರೀ ಬಾಯಾರು ರಮೇಶ ಶೆಟ್ರ ನಿರ್ದೇಶನವಿದೆ.

ಶ್ರೀ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಅವರ ಸಲಹೆಯಂತೆ ವಿದುಷಿ ಮಂಜುಳಾ ಸುಬ್ರಹ್ಮಣ್ಯಂ ಅವರಿಂದ ನಾಟ್ಯ ಮತ್ತು ನಿಲುವಿನ ಬಗೆಗೆ ತರಬೇತಿಯನ್ನು ಪಡೆದಿರುತ್ತಾರೆ. ಮೇಳದ ತಿರುಗಾಟದಲ್ಲಿರುವಾಗಲೇ ಊರ ಪರವೂರಿನ ವಾರದ ಕೂಟಗಳಲ್ಲಿ ಅರ್ಥ ಹೇಳುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ದೊಡ್ಡ ಕೂಟದಲ್ಲಿ ಮೊದಲು ಭಾಗವಹಿಸಿದ್ದು 2011ನೇ ಇಸವಿ. ಸಚ್ಚರಿಪೇಟೆಯಲ್ಲಿ. ಭಾಗವತ ಕನ್ನಡಿಕಟ್ಟೆ  ರವಿಚಂದ್ರರ ಸಂಯೋಜನೆಯಲ್ಲಿ ನಡೆದ ತಾಳಮದ್ದಳೆ. ಕರ್ಣಾರ್ಜುನ ಪ್ರಸಂಗದಲ್ಲಿ ಶ್ರೀಕೃಷ್ಣನಾಗಿ ಅರ್ಥ ಹೇಳಿದ್ದರು. ವಗೆನಾಡು ದೇವಸ್ಥಾನದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ರು ಪಟ್ಲಗುತ್ತು ಸತೀಶ ಶೆಟ್ರ ನೇತೃತ್ವದ ಸಿಂಹ ಮಾಸದಲ್ಲಿ ನಡೆಯುವ ತಾಳಮದ್ದಳೆಗಳಲ್ಲಿ ನಿರಂತರ ಭಾಗವಹಿಸುತ್ತಿದ್ದುದು ಅರ್ಥಧಾರಿಯಾಗಿ ಬೆಳೆಯಲು ಕಾರಣವಾಯಿತು. 

ಎಂಟನೆಯ ತಿರುಗಾಟದಲ್ಲಿ ಶ್ರೀ ಗಣೇಶ್ ಶೆಟ್ಟಿ ಅವರಿಗೆ ಪೀಠಿಕೆವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು. ಹನ್ನೆರಡನೇ ತಿರುಗಾಟದಲ್ಲಿ ಎದುರು ವೇಷಧಾರಿಯಾಗಿ ಕಾಣಿಸಿಕೊಂಡು ಕಲಾಕ್ಷೇತ್ರದಲ್ಲಿ ಅಧ್ಯಯನಶೀಲರಾಗಿ ಕ್ಷಿಪ್ರ ಬೆಳವಣಿಗೆಯನ್ನು ಕಂಡವರು. ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಶಿವರಾಮ ಜೋಗಿ, ಅರುವ ಕೊರಗಪ್ಪ ಶೆಟ್ಟಿ ಮತ್ತು ಪೆರುವಾಯಿ ನಾರಾಯಣ ಶೆಟ್ಟರ ಅಭಿಮಾನಿಯಾಗಿ ಅವರ ವೇಷಗಳನ್ನು ಶ್ರೀ ಗಣೇಶ್ ಅವರು ಮೆಚ್ಚಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ, ಶ್ರೀ ಪದ್ಮನಾಭ ಕಟೀಲು, ಶ್ರೀ ಪ್ರಕಾಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಮುಂಬೈಯ ಕಾರ್ಯಕ್ರಮಗಳಲ್ಲೂ ಇವರು ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದಾರೆ.

ಕೂಟಗಳಲ್ಲಿ ಭಾಗವಹಿಸುತ್ತಾ ಡಾ. ಪ್ರಭಾಕರ ಜೋಷಿ, ಮೂಡಂಬೈಲು, ಶಂಭು ಶರ್ಮ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ವಾಸುದೇವ ಸಾಮಗ, ಸಿದ್ದಕಟ್ಟೆದ್ವಯರೊಂದಿಗೆ ಅರ್ಥ ಹೇಳಲು ಅವಕಾಶ ಸಿಕ್ಕಿದ್ದು ಭಾಗ್ಯ ಎಂಬುದು ಗಣೇಶ್ ಅವರ ಅನಿಸಿಕೆ. ಎದುರು ವೇಷಗಳ ಜತೆಗೆ ಇವರು ಸಾತ್ವಿಕ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಬಲ್ಲರು. ರುಕ್ಮಾಂಗದ, ಅಂಬರೀಷ, ವಿಶ್ವಾಮಿತ್ರ, ಜಾಬಾಲಿ, ವಾಲ್ಮೀಕಿ (ಮಾನಿಷಾದ ಪ್ರಸಂಗ) ದಕ್ಷಯಜ್ಞ ಪ್ರಸಂಗದ ಈಶ್ವರ ಮೊದಲಾದ ಪಾತ್ರಗಳನ್ನೂ ನಿರ್ವಹಿಸುತ್ತಾರೆ. ಎದುರು ವೇಷಧಾರಿಯಾದರೂ ಸಾತ್ವಿಕ ಪಾತ್ರಗಳ ಬಗೆಗೆ ಒಲವನ್ನು ಹೊಂದಿದ ಕಲಾವಿದರಿವರು. ಋತುಪರ್ಣ, ಅತಿಕಾಯ, ವಾಲಿ, ಜಾಂಬವ, ಅರುಣಾಸುರ, ತಾಮ್ರಧ್ವಜ, ಜನಮೇಜಯ, ರಾವಣ ಮೊದಲಾದುವು ಗಣೇಶ್ ಅವರಿಗೆ ಪ್ರಿಯವಾದ ಪಾತ್ರಗಳು.

ಸವಾಲೊಡ್ಡುವ ಪಾತ್ರಗಳನ್ನು ನಿರ್ವಹಿಸಿ ಸಾಹಸವನ್ನು ಕಲಾವಿದರು ತೋರಬೇಕೆಂಬುದು ಇವರ ಅಭಿಪ್ರಾಯ. ಈ ಬಗೆಗೆ ಗಣೇಶ್ ಅವರು ಪ್ರಯತ್ನಿಸುತ್ತಾರೆ ಮತ್ತು ಪ್ರಯತ್ನಿಸಿದ್ದಾರೆ ಎಂಬುದು ತಿರುಗಾಟದಲ್ಲಿ ನಾನು ಕಂಡ ಸತ್ಯ. ನಾಟಕೀಯ ಪ್ರಜ್ಞೆಯನ್ನು ಹೊಂದಿ ಒಳ್ಳೆಯ ರೀತಿಯಲ್ಲಿ ಸಂಭಾಷಿಸುತ್ತಾರೆ ಎಂಬುದನ್ನು ಅವರ ಸಹಕಲಾವಿದನಾಗಿ ನಾನು ತಿಳಿದುಕೊಂಡಿದ್ದೇನೆ. ಸದಾ ಓದುತ್ತಿರಬೇಕು. ಸಾಕಷ್ಟು ಸಿದ್ಧನಾಗಿಯೇ ಪಾತ್ರಧಾರಿಯು ರಂಗವೇರಬೇಕೆಂಬುದು ಕಿರಿಯ ಅಭ್ಯಾಸಿಗಳಿಗೆ ಶ್ರೀ ಗಣೇಶ್ ಶೆಟ್ಟಿ ಅವರು ನೀಡುವ ಹಿತವಚನ. ಆದರೆ ಈಗ ಮೇಳಗಳಲ್ಲಿ ಅಭ್ಯಾಸಿಗಳು ಸಾಕಷ್ಟು ಅಧ್ಯಯನ ಮಾಡುತ್ತಿಲ್ಲ ಎಂಬ ನೋವು ಇವರಿಗಿದೆ. ಮುಂಬೈ ಅಲ್ಲದೆ 2012ರಲ್ಲಿ ಸಿಂಗಾಪುರದಲ್ಲಿ ನಡೆದ ಕೆಲವು ಪ್ರದರ್ಶನಗಳಲ್ಲೂ ಇವರು ಭಾಗವಹಿಸಿರುತ್ತಾರೆ. 

ಯುವ ಕಲಾವಿದ ಆಟ ಕೂಟಗಳ ಸರದಾರ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಅವಕಾಶಗಳು ಸದಾ ಸಿಗುತ್ತಿರಲಿ. ಕಲಾಮಾತೆಯ ಅನುಗ್ರಹವು ಇವರಿಗೆ ಸದಾ ದೊರೆಯಲಿ. ಸಕಲ ಸೌಭಾಗ್ಯಗಳನ್ನೂ ಶ್ರೀ ದೇವರು ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

ಚಿತ್ರ ಕೃಪೆ: ವಿವಿಧ ಇಂಟರ್ನೆಟ್ ತಾಣಗಳು