ಆಟಕ್ಕೆ ವಿದಾಯ ಹೇಳಿದ ಮಗು ಮುಖದ ‘ಪಾರ್ಥಿವ್'

ಆಟಕ್ಕೆ ವಿದಾಯ ಹೇಳಿದ ಮಗು ಮುಖದ ‘ಪಾರ್ಥಿವ್'

‘ಧೋನಿಯವರು ಭಾರತ ಟೀಂಗೆ ಬರುವ ಮೊದಲೇ ನಾನು ತಂಡದಲ್ಲಿ ಬೇರೂರಬೇಕಿತ್ತು. ಆದರೆ ನಾನು ಅದರಲ್ಲಿ ಸಫಲನಾಗಲಿಲ್ಲ. ಈಗ ಧೋನಿಯನ್ನು ದೂಷಿಸಿ ಪ್ರಯೋಜನವಿಲ್ಲ' ಎಂಬ ಅಪ್ಪಟ ಕ್ರೀಡಾ ಸ್ಪೂರ್ತಿಯ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಮುದ್ದು ಮಗು ಮುಖದ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್. ಮಹೇಂದ್ರ ಸಿಂಗ್ ಧೋನಿಯವರು ಬಂದ ಬಳಿಕ ಪಾರ್ಥಿವ್ ಪಟೇಲ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶಗಳು ಕಮ್ಮಿ ಆದುವು. ಈ ವಿಷಯವನ್ನು ಪತ್ರಿಕಾ ವರದಿಗಾರರು ಪಾರ್ಥಿವ್ ಪಟೇಲ್ ಅವರ ಬಳಿ ಕೇಳಿದಾಗ ಅವರು ಈ ಮೇಲಿನ ಮಾತುಗಳನ್ನು ಹೇಳಿದರು. ಎಷ್ಟೊಂದು ಸತ್ಯವಾದ ಮಾತುಗಳಲ್ಲವೇ? ಧೋನಿಗಿಂತಲೂ ಮೊದಲು ಭಾರತ ತಂಡಕ್ಕೆ (೨೦೦೨) ಪ್ರವೇಶ ಪಡೆದಿದ್ದ ಪಾರ್ಥಿವ್ ಆಗ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದರು. ಆ ವಿಷಯವನ್ನು ಅವರು ಪ್ರಾಮಾಣಿಕತೆಯಿಂದ ಒಪ್ಪಿಕೊಂಡಿದ್ದರು. ಆ ಸಮಯ ಅವರು ದೊರೆತ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದರೆ, ಅದೃಷ್ಟವೂ ಅವರ ಪಾಲಿಗೆ ಇದ್ದಿದ್ದರೆ, ಧೋನಿ ಭಾರತ ತಂಡದ ಒಳಗೆ ಬರುವ ಸಾಧ್ಯತೆಯೇ ಕಮ್ಮಿ ಇತ್ತು. ಆದರೆ ಒಬ್ಬರಿಗೆ ತಪ್ಪಿದ ಅವಕಾಶ ಮತ್ತೊಬ್ಬರ ಪಾಲಿಗೆ ಅದೃಷ್ಟ ಖುಲಾಯಿಸಿತು ಎಂದು ಹೇಳುತ್ತಾರಲ್ಲ, ಹಾಗೆಯೇ ಆಯಿತು. ಧೋನಿ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸಖತ್ ಆಗಿ ಮಿಂಚ ತೊಡಗಿದರು. ಉತ್ತಮ ಕೀಪಿಂಗ್, ಹೊಡಬಡಿಯ ಬ್ಯಾಟಿಂಗ್ ಅವರನ್ನು ಭಾರತ ತಂಡದ ನಾಯಕನ ಸ್ಥಾನದವರೆಗೆ ತಂದು ನಿಲ್ಲಿಸಿತು. ಆದರೆ ಪಾರ್ಥಿವ್ ಕೆಲವೇ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹಾಗೂ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಿಗಷ್ಟೇ ಸೀಮಿತರಾದರು.

ಯಾಕೆ? ಪಾರ್ಥಿವ್ ಬಳಿ ಪ್ರತಿಭೆ ಇರಲಿಲ್ಲವೇ? ಖಂಡಿತವಾಗಿಯೂ ಇತ್ತು. ಆದರೆ ಸರಿಯಾದ ಸಮಯದಲ್ಲಿ ಅವರು ಅವನ್ನು ಬಳಸಿಕೊಳ್ಳಲು ವಿಫಲರಾದರು. ೧೭ ವರ್ಷ ೧೫೩ ದಿನಗಳಿದ್ದಾಗಲೇ ಪಾರ್ಥಿವ್ ಭಾರತದ ಪರ ಮೊದಲ ಟೆಸ್ಟ್ ಆಡಿದ್ದರು. ಆ ಟೆಸ್ಟ್ ಸರಣಿಯು ಇಂಗ್ಲೆಂಡ್ ವಿರುದ್ಧ ನಡೆದಿತ್ತು. ಎರಡನೇ ಟೆಸ್ಟ್ ವೇಳೆಗೆ ಆಗ ವಿಕೆಟ್ ಕೀಪರ್ ಆಗಿದ್ದ ಅಜಯ್ ರಾತ್ರಾ ಬದಲಿಗೆ ಕೀಪಿಂಗ್ ಗ್ಲೌಸ್ ತೊಟ್ಟ ಪಾರ್ಥಿವ್ ಮೊದಲ ಇನ್ನಿಂಗ್ಸ್ ನಲ್ಲಿ ‘ಗೋಲ್ಡನ್ ಡಕ್' ಆಗಿದ್ದರು. ತಾನಾಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಸೊನ್ನೆ ಸುತ್ತಿದ ಪಾರ್ಥಿವ್, ಎರಡನೇ ಇನ್ನಿಂಗ್ಸ್ ವೇಳೆಗೆ ಮಾತ್ರ ಇಂಗ್ಲೆಂಡ್ ಬೌಲರ್ ಗಳಿಗೆ ಸಡ್ಡು ಹೊಡೆದು, ಸೋಲುತ್ತಿದ್ದ ಪಂದ್ಯವನ್ನು ಡ್ರಾ ಮಾಡಿಸಿಕೊಳ್ಳಲು ಸಫಲರಾಗಿದ್ದರು. ೮೪ ನಿಮಿಷ ಕ್ರೀಸನ್ನು ಆಕ್ರಮಿಸಿಕೊಂಡು, ೬೦ ಬಾಲ್ ಆಡಿ ಅಜೇಯ ೧೯ ರನ್ ಗಳಿಸಿ, ಸೋಲುತ್ತಿದ್ದ ಪಂದ್ಯವನ್ನು ಡ್ರಾ ಮಾಡಲು ಸಮರ್ಥರಾಗಿದ್ದರು. ಆಗಿನ್ನೂ ಅವರು ಹಾಲುಗಲ್ಲದ ಸಣ್ಣ ಹುಡುಗ ಆದರೆ ಕೆಚ್ಚದೆಯ ಆಟವಾಡಿ ಇಂಗ್ಲೆಂಡ್ ಬೌಲರ್ ಗಳಿಗೆ ಬೆವರಿಸಿಳಿಸಿದ್ದರು. ಆದರೆ ಈ ಹೋರಾಟ ಮುಂದಿನ ದಿನಗಳಲ್ಲಿ ಪಾರ್ಥಿವ್ ಅವರಿಂದ ಹೊರಬರದ ಕಾರಣ ಅವರು ಭಾರತ ತಂಡದ ಖಾಯಂ ಸದಸ್ಯರಾಗಲೇ ಇಲ್ಲ.

೧೯೮೫ ಮಾರ್ಚ್ ೯ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಜನಿಸಿದ ಇವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಈ ಮೂಲಕ ಪಾಕಿಸ್ತಾನದ ಆಟಗಾರ ಹನೀಫ್ ಮೊಹಮದ್ (೧೭ ವರ್ಷ ೩೦೦ ದಿನ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಪಾರ್ಥಿವ್ ಅವರ ವಿಶೇಷತೆಯೆಂದರೆ ಅವರು ರಣಜಿ ಪಂದ್ಯಾವಳಿಗಳನ್ನು ಆಡುವ ಮೊದಲೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡಿದರು. ಅವರು ತಮ್ಮ ಮೊದಲ ರಣಜಿ ಪಂದ್ಯವನ್ನು ಆಡಿದ್ದು ೨೦೦೪ರಲ್ಲಿ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡು ವರ್ಷಗಳ ಬಳಿಕ. ೨೦೦೪ರ ಬಳಿಕ ಧೋನಿ ಭಾರತ ತಂಡದ ಖಾಯಂ ಸದಸ್ಯರಾದರು. ಪಾರ್ಥಿವ್ ಅವರಿಗೆ ಅವಕಾಶಗಳು ಕಮ್ಮಿ ಆದುವು. ಅಲ್ಲೊಂದು ಇಲ್ಲೊಂದು ಅವಕಾಶಗಳು ಸಿಕ್ಕರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ.

ಎಡಗೈ ದಾಂಡಿಗರಾಗಿದ್ದ ಇವರು ‘ಧೈರ್ಯಶಾಲಿ ದಾಂಡಿಗ’ ಎಂದೇ ಹೆಸರುವಾಸಿ, ಏಕೆಂದರೆ ಪಾರ್ಥಿವ್ ಅವರ ಎತ್ತರ (೫.೩ ಅಡಿ) ತುಂಬಾನೇ ಕಮ್ಮಿ. ಆದರೂ ಅವರು ತನ್ನ ಎದೆಯೆತ್ತರಕ್ಕೆ ಬರುತ್ತಿದ್ದ ಎಸೆತಗಳನ್ನು ಧೈರ್ಯದಿಂದ ಎದುರಿಸುತ್ತಿದ್ದರು. ಸುಮಾರು ೧೮ ವರ್ಷಗಳ ಅಂತರಾಷ್ಟ್ರೀಯ ಕ್ರೀಡಾ ಬದುಕಿಗೆ ಪಾರ್ಥಿವ್ ಈಗ ವಿದಾಯ ಘೋಷಿಸಿಕೊಂಡಿದ್ದಾರೆ. ಐಪಿಎಲ್ ನಲ್ಲೂ ತನ್ನ ಛಾಪು ಮೂಡಿಸಿದ ಪಾರ್ಥಿವ್ ಗೆ ೨೦೨೦ ವರ್ಷ ಮಾತ್ರ ಕಹಿಯಾಗಿಯೇ ಕೊನೆಯಾಯಿತು. ಈ ವರ್ಷ ಆರ್ ಸಿ ಬಿ ತಂಡದ ಸದಸ್ಯರಾಗಿದ್ದರೂ ಒಂದೇ ಒಂದು ಪಂದ್ಯಗಳಲ್ಲಿ ಅವರಿಗೆ ಆಡುವ ಅವಕಾಶ ಸಿಗದಿದ್ದುದು ಮಾತ್ರ ವಿಪರ್ಯಾಸ. ಇವರು ಐಪಿಎಲ್ ನಲ್ಲಿ ವಿವಿಧ ೬ ತಂಡಗಳಲ್ಲಿ ಆಡಿದ್ದಾರೆ. ಚೆನ್ನೈ, ಕೊಚ್ಚಿ, ಡೆಕ್ಕನ್, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರು. 

ಪಾರ್ಥಿವ್ ಪಟೇಲ್ ೨೫ ಟೆಸ್ಟ್ ಪಂದ್ಯಗಳನ್ನಾಡಿದ್ದು ೯೩೪ ರನ್ ಗಳಿಸಿದ್ದಾರೆ. ಅದರಲ್ಲಿ ೬ ಅರ್ಧ ಶತಕ ದಾಖಲಾಗಿದೆ. ಗರಿಷ್ಟ ಮೊತ್ತ ೭೧. ವಿಕೆಟ್ ಕೀಪಿಂಗ್ ನಲ್ಲಿ ೬೨ ಕ್ಯಾಚ್ ಹಾಗೂ ೧೦ ಸ್ಟಂಪಿಂಗ್ ಮಾಡಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೂ ಶತಕ ಬಾರಿಸಲು ಆಗದಿರುವುದು ಮಾತ್ರ ಬೇಸರದ ಸಂಗತಿ. ಒಂದು ದಿನದ ಪಂದ್ಯದಲ್ಲಿ ಇವರ ಗರಿಷ್ಟ ಗಳಿಕೆ ೯೫ ರನ್. ೩೮ ಏಕದಿನ ಪಂದ್ಯಗಳನ್ನು ಆಡಿ ೭೩೬ ರನ್ (೪ ಅರ್ಧ ಶತಕ) ಕಲೆ ಹಾಕಿದ್ದಾರೆ. ೩೦ ಕ್ಯಾಚ್, ೯ ಸ್ಟಂಪಿಂಗ್ ಇವರ ಏಕದಿನದ ಸಾಧನೆ. ಪಾರ್ಥಿವ್ ೨ ಟಿ-ಟ್ವೆಂಟಿ ಪಂದ್ಯಗಳನ್ನೂ ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಾವಳಿಗಳಲ್ಲಿ ೧೯೪ ಪಂದ್ಯಗಳನ್ನು ಆಡಿ ೧೧,೨೪೦ ರನ್ (೨೭ ಶತಕ, ೬೨ ಅರ್ಧ ಶಕತ)ಗಳಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರ ಗರಿಷ್ಟ ರನ್ ೨೦೬. ಕೀಪಿಂಗ್ ನಲ್ಲಿ ೪೮೬ ಕ್ಯಾಚ್ ಹಾಗೂ ೭೭ ಸ್ಟಂಪಿಂಗ್ ಇವರ ಸಾಧನೆ. 

ಅಂತಾರಾಷ್ಟೀಯ ಪಂದ್ಯಗಳಲ್ಲಿ ಇವರಿಗೆ ನಿರಾಶೆಯಾದರೂ ದೇಶೀಯ ಕ್ರಿಕೆಟ್ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು ತಾನು ಪ್ರತಿನಿಧಿಸುವ ಗುಜರಾತ್ ತಂಡಕ್ಕೆ ಜಯಿಸಿಕೊಟ್ಟಿದ್ದಾರೆ ಪಾರ್ಥಿವ್. ಅವರ ನಾಯಕತ್ವದಲ್ಲಿ ೨೦೧೬-೧೭ರ ಸಾಲಿನ ರಣಜಿ ಪಂದ್ಯಾವಳಿಗಳಲ್ಲಿ ಗುಜರಾತ್ ಜಯ ಸಾಧಿಸಿ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದಲ್ಲಿ ಬಲಿಷ್ಟ ಮುಂಬೈ ವಿರುದ್ಧ ಗುಜರಾತ್ ಜಯಿಸಲು ಪಾರ್ಥಿವ್ ಅವರ ಕೆಚ್ಚದೆಯ ಬ್ಯಾಟಿಂಗ್ ಕಾರಣವಾಗಿತ್ತು. ೩೧೨ ರನ್ ಗುರಿ ಪಡೆದಿದ್ದ ಗುಜರಾತ್ ಪಾರ್ಥಿವ್ ಪಟೇಲ್ ಅವರ ೧೪೩ ರನ್ ಸಹಾಯದಿಂದ ಗೆದ್ದು ಚಾಂಪಿಯನ್ ಆಗಿತ್ತು. ಮೊದಲ ಇನ್ನಿಂಗ್ಸ್ ನಲ್ಲೂ ಪಾರ್ಥಿವ್ ೯೦ ರನ್ ಹೊಡೆದಿದ್ದರು. 

ಸ್ವಾರಸ್ಯದ ಸಂಗತಿಯೆಂದರೆ ೨೦೦೨ರಲ್ಲಿ ಇಂಗ್ಲೆಂಡಿನ ನಾಟಿಂಗಂ ಟೆಸ್ಟ್ ಪಂದ್ಯದ ಮೊದಲು, ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿ ಮೊದಲ ಟೆಸ್ಟ್ ಆಡಲು ಇಳಿದ ಪಾರ್ಥಿವ್ ಪಟೇಲ್ ಗೆ ಟೆಸ್ಟ್ ಕ್ಯಾಪ್ ನೀಡಿದ್ದರು. ಆ ಕ್ಯಾಪ್ ನಲ್ಲಿ ಪಾರ್ಥಿವ್ ಅವರ ಹೆಸರು ‘ಪಾರ್ಟಿವ್’ ಎಂದು ತಪ್ಪಾಗಿ ಮುದ್ರಿತವಾಗಿತ್ತಂತೆ. ತಮ್ಮ ಮೊದಲ ನಾಯಕ ಸೌರವ್ ಗಂಗೂಲಿಯನ್ನು ಮತ್ತು ಖ್ಯಾತ ಸ್ಪಿನ್ನರ್ ಹಾಗೂ ಮಾಜಿ ನಾಯಕ ಅನಿಲ್ ಕುಂಬ್ಳೆಯವರನ್ನು ಸದಾ ಸ್ಮರಿಸುವ ಪಾರ್ಥಿವ್ ಇವರಿಬ್ಬರ ನಾಯಕತ್ವದ ಗುಣ ಕ್ರಿಕೆಟ್ ಮೈದಾನದ ಆಚೆಯೂ ಸ್ಪೂರ್ತಿಕೊಡುತ್ತಿತ್ತು ಎಂದು ಗುಣಗಾನ ಮಾಡಿದ್ದಾರೆ. ಪಾರ್ಥಿವ್ ಪಟೇಲ್ ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂಬುದೇ ನಮ್ಮ ಹಾರೈಕೆ

ಚಿತ್ರ ಕೃಪೆ: ಅಂತರ್ಜಾಲ ತಾಣ