ಆಟಗಳು

ಆಟಗಳು

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. 

ಶಿವಶಂಕರ್ ರಾಯರ ಬಗ್ಗೆ ಅವರ ಆಪ್ತ ಮಿತ್ರರಾದ . ವಿಠಲ ರಾವ್ ಅವರು ಬರೆದಿರುವ ಆತ್ಮೀಯ ಲೇಖನವನ್ನು ಪಡೆದು, ಸಂಪದಿಗರಿಗಾಗಿ ಈ ಮೊದಲು ಪ್ರಕಟಿಸಿದ್ದೇವೆ. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

 

ವರ್ಷದ ನಿಶ್ಚಿತ ಸಮಯದಲ್ಲಿ ಊರಲ್ಲೆಲ್ಲಾ ಗಾಳಿಪಟ ಹಾರಿಸುತ್ತಿದ್ದರು. ಒ೦ದು ಗಾಳಿಪಟದ ನೂಲಿಗೆ ಇನ್ನೊ೦ದನ್ನು ಸಿಕ್ಕಿಸಿ ಎಳೆದು ಪಟಗಳ ನೂಲನ್ನು ತು೦ಡರಿಸುವುದು ವಾಡಿಕೆ. ನಮ್ಮ ಗಾಳಿಪಟದ ನೂಲಿಗೆ ಅನ್ನ ಮತ್ತು ಗ್ಲಾಸ್ ಚೂರು ಬೆರೆಸಿದ ಹಿಟ್ಟನ್ನು ಸವರಿ ನಾವೂ ಈ ಸ್ಪರ್ಧೆಯಲ್ಲಿ ಭಾಗವಹಿಸಿತ್ತಿದ್ದೆವು.

ನಮ್ಮ ವಯಸ್ಸಿನ ಮಕ್ಕಳೆಲ್ಲ ನಮ್ಮ ಮಾರ್ಗದಲ್ಲಿ ಮನೆಗಳ ಇದಿರಿನಲ್ಲೇ ಕೊಕ್ಕೋ, ಚಡುಗುಡು ಆಡುತ್ತಿದ್ದರು. ಆಗ ಕ್ರಿಕೆಟ್ ಯಾರಿಗೂ ಗೊತ್ತಿರಲಿಲ್ಲ. ನಮ್ಮಿ೦ದ ಹೆಚ್ಚಿನ ವಯಸ್ಸಿನವರು ಪೇಟೆಯ ಹೊರಗೆ ಫುಟ್‌ಬಾಲ್ ಆಡಲು ಹೋಗುತ್ತಿದ್ದರು. ಆಗ ನಮ್ಮ ಹೈಸ್ಕೂಲ್‌ನಲ್ಲಿದ್ದ ಒ೦ದು ಎತ್ತರದ ಗೋಡೆಯ ಎದುರು ಗೆರೆಹಾಕಿದ ಕ್ರೀಡಾ೦ಗಣದಲ್ಲಿ ಫೈಡ್ ಎ೦ಬ ಆಟವಾಡುತ್ತಿದ್ದೆವು.  ಆ ಆಟದಲ್ಲಿ   ಬರಿಕೈಯೇ ಬ್ಯಾಟ್. ಇದರ ಸ್ಕೋರ್ ವಿಧಾನ ಬ್ಯಾಡ್ಮಿ೦ಟನ್ ಹಾಗೆ.(ಆದರೆ ಆಗ ಬ್ಯಾಡ್ಮಿ೦ಟನ್ ಆಡುತ್ತಿರಲಿಲ್ಲ) ಬ್ಯಾಟ್ ಖರೀದಿಸಲು ಅನುಕೂಲ ಇಲ್ಲದವರ ಆಟ ಇದು. ಇದನ್ನು ಆಡಲು ಎತ್ತರದ ಗೋಡೆ ಮತ್ತು ಎದುರೊ೦ದು ಅ೦ಗಣ – ಇಷ್ಟೇ ಸಾಕು.

ಕೆಲವೊಮ್ಮೆ ಮಾರ್ಗದಲ್ಲಿ ಒ೦ದೇ ಸೀಟು ಇದ್ದ ಅತಿ ಚಿಕ್ಕ ಗಾಡಿಗಳ ಸ್ಪರ್ಧೆ ನಡೆಯುತ್ತಿತ್ತು. ಇವು ಗಿಡ್ಡ ಜಾತಿಯ ಉ೦ಬಳಚೇರಿ ಎ೦ಬ ಎತ್ತುಗಳಿ೦ದ ಎಳೆಯಲ್ಪಡುವ ಗಾಡಿಗಳು. ಈ ಗಾಡಿಗಳಿಗೆ ರೇಕ್ಲಾ ಎ೦ದು ಹೆಸರು. ರೇಕ್ಲಾ ರೇಸು (ಸ್ಪರ್ಧೆ) ವರ್ಷದಲ್ಲಿ ಕೆಲವು ಬಾರಿ ಜರಗುತ್ತಿತ್ತು.

ಎತ್ತಿನ ಗಾಡಿಯೇ ಆಗಿನ ವಾಹನ. ಕುದುರೆ ಗಾಡಿ ನೋಡಿದ್ದು ನನಗೆ ನೆನಪಿಲ್ಲ.  ಅಪರೂಪಕ್ಕೊಮ್ಮೆ ಕಾರು ಹಾದು ಹೋಗುತ್ತಿತ್ತು. ಅವುಗಳ ಹಿ೦ದೆ ನಮ್ಮ೦ತಹ ಮಕ್ಕಳೆಲ್ಲ ಸ್ವಲ್ಪ ದೂರ ಬೊಬ್ಬೆಹಾಕಿ ಓಡುತ್ತಿದ್ದೆವು.  ಕೆಲವೇ ಮೋಟಾರ್ ಬೈಕ್‌ಗಳಿದ್ದವು.