ಆಟದೊಂದಿಗೆ ಮಾತು ಮುಗಿಸಿದ ಕ್ರಿಕೆಟ್ ಆಟಗಾರ- ಡೀನ್ ಜೋನ್ಸ್

ಆಟದೊಂದಿಗೆ ಮಾತು ಮುಗಿಸಿದ ಕ್ರಿಕೆಟ್ ಆಟಗಾರ- ಡೀನ್ ಜೋನ್ಸ್

ಅಂದು ಆಗಸ್ಟ್ ೭, ೨೦೦೬ರಂದು ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಪ್ರವಾಸೀ ದಕ್ಷಿಣ ಆಫ್ರಿಕಾ ನಡುವೆ ಆಡಲಾಗುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ. ಫೀಲ್ಡಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಾಶಿಂ ಆಮ್ಲಾ ಒಂದು ಕ್ಯಾಚ್ ಪಡೆದುಕೊಳ್ಳುತ್ತಾರೆ. ಆಗ ಅವರನ್ನು ವೀಕ್ಷಕ ವಿವರಣೆ ನೀಡುತ್ತಿದ್ದ ವ್ಯಕ್ತಿ ‘ಭಯೋತ್ಪಾದಕ ಇನ್ನೊಂದು ವಿಕೆಟ್ ಪಡೆದುಕೊಂಡ' ( the Terrorist gets another wicket) ಎಂದು ವಿವರಿಸುತ್ತಾರೆ. ಹಾಶಿಂ ಆಮ್ಲಾ ಮುಸಲ್ಮಾನನಾಗಿದ್ದು, ಉದ್ದನೆಯ ಗಡ್ಡ ಬಿಟ್ಟಿರುತ್ತಾರೆ. ಆ ಕಾರಣದಿಂದ ಈ ‘ಭಯೋತ್ಪಾದಕ' ಎಂಬ ಮಾತು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ವೀಕ್ಷಕ ವಿವರಣೆ ನೀಡಿದ ವ್ಯಕ್ತಿ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಆ ವ್ಯಕ್ತಿ ಯಾರು ಗೊತ್ತಾ? ತಾನು ಕ್ರಿಕೆಟ್ ಆಡುವ ಸಮಯದಲ್ಲಿ ಅತ್ಯುತ್ತಮ ದಾಂಡಿಗ, ಕ್ಷೇತ್ರ ರಕ್ಷಕ ಎಂದು ಹೆಸರು ಮಾಡಿದ್ದ ಆಸ್ಟ್ರೇಲಿಯಾದ ಡೀನ್ ಜೋನ್ಸ್. ಅಂದು ಡೀನ್ ಜೋನ್ಸ್ ಬಾಯಿತಪ್ಪಿ ಆಡಿದ ಮಾತು ಅವರನ್ನು ಕಮೆಂಟರಿ ಟೀಂನಿಂದ ಹೊರ ಹೋಗುವಂತೆ ಮಾಡುತ್ತದೆ. ಮಾತು ಮನೆ ಕೆಡಿಸಿತು ಎನ್ನುವುದು ಡೀನ್ ಜೋನ್ಸ್ ಅವರ ವಿಷಯದಲ್ಲಿ ನೂರು ಶೇಕಡಾ ನಿಜವಾಗುತ್ತದೆ.

ಡೀನ್ ಮರ್ವಿನ್ ಜೋನ್ಸ್ ಎಂಬ ವ್ಯಕ್ತಿ ೮೦-೯೦ರ ದಶಕದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಪಡೆದ ಆಟಗಾರ. ೧೯೬೧ ಮಾರ್ಚ್ ೨೪ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಹುಟ್ಟಿದ ಡೀನ್ ಜೋನ್ಸ್ ೧೯೮೪ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡುತ್ತಾರೆ. ೧೯೮೪ರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಜೋನ್ಸ್ ಆಯ್ಕೆಯಾಗುತ್ತಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿ ೪೮ರನ್ ಗಳಿಸುತ್ತಾರೆ. ನಂತರದ ದಿನಗಳಲ್ಲಿ ಡೀನ್ ಜೋನ್ಸ್ ಹಿಂದಿರುಗಿ ನೋಡಿದ್ದೇ ಇಲ್ಲ. ೮೦-೯೦ರ ದಶಕದಲ್ಲಿ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ೧೯೮೪ ರಿಂದ ೧೯೯೨ರವರೆಗೆ ಟೆಸ್ಟ್ ಆಡಿದ ಇವರು ೫೨ ಇನ್ನಿಂಗ್ಸ್ ಗಳಲ್ಲಿ ೧೧ ಶತಕ ಸೇರಿ ೩೬೩೧ ರನ್ ಗಳಿಸಿದ್ದರು. ಈ ಪೈಕಿ ಇವರ ಮನಮೋಹಕ ಆಟ ದಾಖಲಾದದ್ದು ಭಾರತದ ಎದುರಿನ ೧೯೮೬ರ ಟೆಸ್ಟ್ ಪಂದ್ಯದಲ್ಲೇ. ಅಂದಿನ ಮದ್ರಾಸ್ ನಲ್ಲಿ ನಡೆದ ಈ ಪಂದ್ಯದಲ್ಲಿ ನಿರ್ಜಲೀಕರಣದ ಸಮಸ್ಯೆಯ ನಡುವೆಯೂ ದ್ವಿಶತಕ ಬಾರಿಸಿದ್ದು ಡೀನ್ ಜೋನ್ಸ್ ಅವರ ಹೆಗ್ಗಳಿಕೆ. ಅಂದು ಅವರು ಮದ್ರಾಸಿನ ಬಿಸಿಲಿನ ಹೊಡೆತಕ್ಕೆ ತೀವ್ರವಾಗಿ ಬಳಲಿದ್ದರು. ಆದರೂ ೩೩೦ ಎಸೆತಗಳನ್ನು ಎದುರಿಸಿ ೨೭ ಬೌಂಡರಿ ಹಾಗೂ ೨ ಸಿಕ್ಸರ್ ಬಾರಿಸಿ ೨೧೦ ರನ್ ಹೊಡೆದದ್ದು ಇವರ ಅತ್ಯುತ್ತಮ ಇನ್ನಿಂಗ್ಸ್ ಗಳಲ್ಲಿ ಒಂದು. ಆಟದ ನಂತರ ಇವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿ ಡ್ರಿಪ್ಸ್ ಹಾಕಬೇಕಾಯಿತು. ಈ ಪಂದ್ಯವು ರೋಚಕ ಟೈ ಫಲಿತಾಂಶವನ್ನು ಕಂಡಿತ್ತು. ಡೀನ್ ಜೋನ್ಸ್ ಹೊಡೆದ ಆ ೨೧೦ ರನ್ ಆಸ್ಟ್ರೇಲಿಯಾದ ಆಟಗಾರನೊರ್ವನ ಭಾರತದಲ್ಲಿ ಗರಿಷ್ಟ ರನ್ ಆಗಿದೆ. 

ನಂತರದ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಗಿಂತಲೂ ಒಂದು ದಿನದ ಪಂದ್ಯಗಳಲ್ಲಿ ಅಧಿಕ ಆಸಕ್ತಿ ತೋರಿಸುವ ಡೀನ್ ಜೋನ್ಸ್ ೧೯೮೪ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಏಕದಿನ ಪಾದಾರ್ಪಣಾ ಪಂದ್ಯವನ್ನಾಡುತ್ತಾರೆ. ೧೯೮೭ರಲ್ಲಿ ನಡೆದ ಏಕದಿನ ವಿಶ್ವಕಪ್ ನ್ನು ಆಸ್ಟ್ರೇಲಿಯಾ ಜಯಿಸಿತ್ತು. ಜೋನ್ಸ್ ಆ ವಿಜೇತ ತಂಡದ ಸದಸ್ಯರಾಗಿದ್ದರು. ಆ ಪಂದ್ಯಾವಳಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯವನ್ನು ಕೇವಲ ಒಂದು ರನ್ ಅಂತರದಿಂದ ಆಸ್ಟ್ರೇಲಿಯಾ ಜಯಿಸಿತ್ತು. ಅದಕ್ಕೆ ಪರೋಕ್ಷ ಕಾರಣ ಡೀನ್ ಜೋನ್ಸ್ ಎಂದೇ ಹೇಳ ಬಹುದು. ಜೋನ್ಸ್ ಹೊಡೆದ ಒಂದು ಹೊಡೆತ ಬೌಂಡರಿ ಗೆರೆ ದಾಟಿತ್ತು. ಅದಕ್ಕೆ ಅಂಪೈರ್ ಮೊದಲು ನಾಲ್ಕು ರನ್ ಎಂದು ತೀರ್ಪು ನೀಡಿದರೂ ನಂತರ ಜೋನ್ಸ್ ಮನವಿ ಮೇರೆಗೆ ಪುನರ್ ಪರೀಶೀಲಿಸಲಾಗಿ ಅದನ್ನು ಸಿಕ್ಸ್ ಎಂದು ತೀರ್ಪು ನೀಡಲಾಗಿತ್ತು. ಈ ಕಾರಣದಿಂದಲೇ ಭಾರತ ಒಂದು ರನ್ ನಿಂದ ಸೋಲು ಅನುಭವಿಸಬೇಕಾಗಿ ಬಂತು. ಎಲ್ಲಾ ಅದೃಷ್ಟದ ಆಟ. 

ಆಸ್ಟ್ರೇಲಿಯಾದ ಮೊದಲ ವಿಶ್ವಕಪ್ ವಿಜೇತ ತಂಡ ಹಾಗೂ ೧೯೮೯ರಲ್ಲಿ ಆಶಸ್ ಜಯಿಸಿದ ತಂಡಗಳ ಸದಸ್ಯರಾಗಿದ್ದರು ಡೀನ್ ಜೋನ್ಸ್. ಏಕದಿನದಲ್ಲಿ ೧೬೪ ಪಂದ್ಯದಲ್ಲಿ ಆಡಿ ೬,೦೬೮ ರನ್ ಕಲೆ ಹಾಕಿದ್ದಾರೆ. ಇದರಲ್ಲಿ ೭ ಶತಕ ಹಾಗೂ ೪೬ ಅರ್ಧಶತಕ ಸೇರಿದೆ. ಏಕದಿನದಲ್ಲಿ ಹೆಚ್ಚಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಇವರ ಗರಿಷ್ಟ ರನ್ ೧೪೫. ಬಲಗೈ ದಾಂಡಿಗರಾಗಿದ್ದ ಇವರು ಆಫ್ ಬ್ರೇಕ್ ಬೌಲಿಂಗ್ ಸಹಾ ಮಾಡುತ್ತಿದ್ದರು. ಅತ್ಯುತ್ತಮ ಕ್ಷೇತ್ರ ರಕ್ಷಕರಾಗಿದ್ದರು. ಅತ್ಯುತ್ತಮವಾಗಿ ಆಡುತ್ತಿದ್ದ ಅವರನ್ನು ೧೯೯೨-೯೩ರಲ್ಲಿ ತಂಡದಿಂದ ಕೈ ಬಿಟ್ಟಿದ್ದರು. ಅವರ ಸಾಧನೆಗಳು ಹಿಂದಿನ ಪಂದ್ಯಗಳಲ್ಲಿ ಉತ್ತಮವಾಗಿದ್ದರೂ ಆಯ್ಕೆಗಾರರಲ್ಲಿದ್ದ ವೃತ್ತಿ ಮತ್ಸರದಿಂದಾಗಿ ಅವರನ್ನು ತಂಡದಿಂದ ಹೊರಹಾಕಲಾಗಿತ್ತು. ಉತ್ತಮ ಲಯದಲ್ಲಿದ್ದ ಆಟಗಾರನೋರ್ವನ ಕ್ರಿಕೆಟ್ ಬಾಳು ಹಾಳಾಗಿ ಹೋದದ್ದು ದುರಂತವೇ ಸರಿ. ೧೯೯೨ರಲ್ಲಿ ಅವರು ಶ್ರೀಲಂಕಾ ಎದುರು ಆಡಿದ ಟೆಸ್ಟ್ ಪಂದ್ಯವೇ ಅವರ ಅಂತಿಮ ಪಂದ್ಯವಾಯಿತು. ೧೯೯೪ರ ತನಕ ಏಕದಿನ ಪಂದ್ಯವನ್ನಾಡಿದ ಡೀನ್ ಜೋನ್ಸ್ ದಕ್ಷಿಣ ಆಫ್ರಿಕಾ ಎದುರು ಕೊನೆಯ ಪಂದ್ಯವನ್ನಾಡಿದರು. 

೧೯೯೦ರಲ್ಲಿ ಅವರಿಗೆ ವಿಸ್ಡನ್ ‘ಕ್ರಿಕೆಟರ್ಸ್ ಆಫ್ ದಿ ಇಯರ್' ಎಂದು ಅಭಿನಂದಿಸಿತ್ತು. ಆಟವಾಡುತ್ತಿರುವ ಸಮಯದಲ್ಲಿ ತಮ್ಮ ತುಟಿಗೆ ಸದಾ ಕಾಲ ಬಿಳಿಬಣ್ಣದ ಕ್ರೀಂ ಹಚ್ಚಿ ಕೊಳ್ಳುತ್ತಿದ್ದುದು ಜೋನ್ಸ್ ಗೆ ಒಂದು ಹೊಸ ಇಮೇಜ್ ತಂದುಕೊಟ್ಟಿತ್ತು. ತಮ್ಮ ನಿವೃತ್ತಿಯ ನಂತರ ಡೀನ್ ಜೋನ್ಸ್ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಹೊಸ ಇನ್ನಿಂಗ್ನ್ ಪ್ರಾರಂಭಿಸಿದರು. ಕ್ರಿಕೆಟ್ ಬಗ್ಗೆ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯಲು ಪ್ರಾರಂಭಿಸಿದರು. ಸ್ವಲ್ಪ ಸಮಯ ಕ್ರಿಕೆಟ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದರು. ಆದರೆ ವೀಕ್ಷಕ ವಿವರಣೆಯಲ್ಲಿ ಡೀನ್ ಜೋನ್ಸ್ ತಮ್ಮ ಹೊಸ ಬದುಕನ್ನು ಕಂಡರು. ಇವರ ಪಂದ್ಯದ ಬಗ್ಗೆ ವಿವರಣೆ ನೀಡುವ ಶೈಲಿ ಅಪರೂಪದ್ದಾಗಿತ್ತು. ಪಂದ್ಯಾಟದ ಮೊದಲು ವಿಶ್ವವಿದ್ಯಾನಿಲಯದ ಡೀನ್ ತರಹ ಉಡುಪನ್ನು ಧರಿಸಿ, ಕಪ್ಪು ಬೋರ್ಡ್ ಎದುರುಗಡೆ ಅಂದಿನ ಆಟದ ಬಗ್ಗೆ ವಿಶ್ಲೇಷಣೆ ನೀಡುವ ಹೊಸದಾದ ಶೈಲಿಯೊಂದನ್ನು ತಮ್ಮ ಕಮೆಂಟರಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅದಕ್ಕೆ ಅವರನ್ನು ಪ್ರೀತಿಯಿಂದ 'ಪ್ರೊಫೆಸರ್ ಡೀನೋ’ ಎಂದು ಅವರ ಸಹ ವೀಕ್ಷಕ ವಿವರಣೆಗಾರರು ಛೇಡಿಸುತ್ತಿದ್ದರು. ೨೦೦೬ರ ಆ ಘಟನೆ ಅವರನ್ನು ವೀಕ್ಷಕ ವಿವರಣೆಯಿಂದ ವಿಮುಖರನ್ನಾಗಿಸಿತು. ಆದರೆ ಸಮಯ ಕಳೆದಂತೆ ಮತ್ತೆ ಅವರು ವೀಕ್ಷಕ ವಿವರಣೆ ನೀಡಲು ಪ್ರಾರಂಭಿಸಿದ್ದರು.

೨೦೨೦ ಐಪಿಎಲ್ ಪಂದ್ಯಾವಳಿಗೆ ವೀಕ್ಷಕ ವಿವರಣೆ ನೀಡಲು ಮುಂಬಯಿಗೆ ಆಗಮಿಸಿದ್ದು. ಆದರೆ ಆ ಸಮಯದಲ್ಲೇ ಅವರಿಗೆ ಆದ ಹೃದಯಾಘಾತ ಅವರ ಜೀವವನ್ನೇ ಕಸಿಯಿತು. ಜೋನ್ಸ್ ತಮ್ಮ ಪತ್ನಿ ಜೇನ್ ಹಾಗೂ ಇಬ್ಬರು ಪುತ್ರಿಯರಾದ ಇಸಬೆಲ್ಲಾ, ಫೊಯೇಬ್ ಅವರನ್ನು ಅಗಲಿದ್ದಾರೆ. ೫೯ ವರ್ಷ ಸಾಯುವ ವಯಸ್ಸಲ್ಲ. ಆದರೂ ಡೀನ್ ಜೋನ್ಸ್ ಕ್ರಿಕೆಟ್ ಆಟದೊಂದಿಗೆ, ಮಾತಿನ ಆಟವನ್ನೂ ಮುಗಿಸಿ ಮರಳಿಬರಲಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಕ್ರಿಕೆಟ್ ಪ್ರಿಯರ ಮನದಾಳದಲ್ಲಿ ತಮ್ಮ ಅಪರೂಪದ ಶೈಲಿಯ ಆಟ ಹಾಗೂ ಮಾತು ಮೂಲಕ ಜೀವಂತವಾಗಿದ್ದಾರೆ.

ಚಿತ್ರ ವಿವರ:೧. ಆಟವಾಡುತ್ತಿರುವ ಸಂದರ್ಭದಲ್ಲಿ ಡೀನ್ ಜೋನ್ಸ್

೨. ಪ್ರೊಫೆಸರ್ ಡೀನೋ ವೇಷದಲ್ಲಿ...

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ..