ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ

ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ

ಮಕ್ಕಳ ಕುತೂಹಲದ ಮಟ್ಟ ತುಂಬಾ ದೊಡ್ಡದು. ಎಲ್ಲವನ್ನೂ ಕುತೂಹಲವಾಗಿ ನೋಡುವ ಅವುಗಳ ದೃಷ್ಟಿ ಮತ್ತು ಆ ಕುತೂಹಲವನ್ನು ಉಳಿಸಿಕೊಳ್ಳುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಚಲನೆ ತುಂಬಾ ಇಷ್ಟ. ಒಂದೇ ಕಡೆ ಇರುವ ಮತ್ತು ಚಲನೆಯೇ ಇಲ್ಲದ ವಸ್ತುಗಳೆಡೆಗೆ ಅವುಗಳ ಗಮನ ಬೇಗ ಹೋಗದು. ಹಾಗಾಗಿ ಆಟ ಅವುಗಳಿಗೆ ತುಂಬಾ ಪ್ರಿಯವಾದುದ್ದಾಗಿದೆ. ಕುಣಿಯುವುದು, ಹಾರುವುದು, ನೆಗೆಯುವುದು, ಜಾರುವುದು, ಬೀಸುವುದು, ಎಲ್ಲವೂ ಅತಿಯಾದ ಚಲನೆಯನ್ನು ತೋರಿಸುವುದೇ ಆಗಿದೆ. ಒಂದು ವೇಳೆ ಆ ಚಲನೆ ಸಿಗದೇ ಇದ್ದರೆ... ಹೌದು ಪೋಷಕರು ಆ ಚಲನೆಗಳಿಗೆ ಪೋಷಕಾಂಶವನ್ನು ನೀಡದೆ ಇದ್ದರೆ ಅವುಗಳು ಕಣ್ಣಿನಲ್ಲಿ ಚಲನೆಯೆಂದು ತೋರುವುದನ್ನು ಆರಿಸಿಕೊಳ್ಳುತ್ತವೆ. ಒಂದೇ ಕೂತು ಪರದೆಯಲ್ಲಿ ಬರುವ ಚಲನ ಚಿತ್ರಗಳನ್ನು ನೋಡುವುದು ಅವುಗಳಿಗೆ ಖುಷಿ ಕೊಟ್ಟುಬಿಡುತ್ತದೆ. ಮೆದುಳು , ಪರದೆಯಲ್ಲಿ ಬರುವ ಚಲನೆಯನ್ನು ಮಗುವೇ ಚಲಿಸುತ್ತಿದೆಯೇನೋ ಎನ್ನುವಂತೆ ಭ್ರಮಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಮಕ್ಕಳು ಆ ಪರದೆಯಲ್ಲಿ ಬರುವ ಆಟ/ಚಲನ ಚಿತ್ರಗಳಲ್ಲಿ ಲೀನವಾಗುವುದು. ತಾವೇ ಅದರಲ್ಲಿ ಇದ್ದೇವೆನ್ನುವ ಭ್ರಮೆಯಲ್ಲಿ ಬದುಕುವುದು. ಇವೆಲ್ಲಾ ಸ್ವಲ್ಪ ದಿನ ಮಾತ್ರ ನಡೆಯುತ್ತದೆ ಕೆಲವು ದಿನಗಳಾದ ಮೇಲೆ ಬಿಟ್ಟು ಹೋಗುತ್ತದೆ ಎಂದು ಭಾವಿಸಿದರೆ ತಪ್ಪು.ಇದು ವ್ಯಸನವಾಗುವ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತದೆ. ಇನ್ನು ವಿಷಯಕ್ಕೆ ಬರೋಣ. ದಿನಾಂಕ ೨೮ ಏಪ್ರಿಲ್ ೨೦೧೮ರಂದು ಪ್ರಜಾವಾಣಿಯ ಸಪ್ಲಿಮೆಂಟರಿಯಲ್ಲಿ ಬಂದ ಲೇಖನ ’ಚಿಂತೆ ಬಿಡಿ ಮಗುವಿನ ಕೈಗೆ ಮೊಬೈಲ್ ಕೊಡಿ’ ಎಂಬ ಲೇಖನದಲ್ಲಿ ಮಕ್ಕಳನ್ನು ದಿಕ್ಕು ತಪ್ಪಿಸುವ ಮತ್ತು ಪೋಷಕರು ಮಕ್ಕಳನ್ನು ವ್ಯಸನಿಗಳನ್ನಾಗಿಸುವ ಅಂಶಗಳಿಂದ ಕೂಡಿದೆ. ಇಡೀ ಲೇಖನ ಮಕ್ಕಳ ಬುದ್ದಿಮತ್ತೆಯನ್ನು ಪ್ರಚೋದಿಸುವ ಆಪ್ ಗಳ ಬಗ್ಗೆ ಇದೆ ಆದರೆ ಅದರಿಂದ ಮಕ್ಕಳಿಗಾಗುವ ತೊಂದರೆಗಳನ್ನು ಮರೆಮಾಚಿದೆ. 
 
* ಯುಟ್ಯೂಬ್/ಅರ್ಟ್ ಆಪ್ ಮತಿತರ ವೀಡಿಯೋಗಳಿಂದಾಗುವ ತೊಂದರೆಗಳು. ವೀಡಿಯೋಗಳಲ್ಲಿ ಹಲವಾರು ಪಾಠ, ಪ್ರ್ರಯೋಗಗಳನ್ನು ಕೊಟ್ಟಿರುತ್ತಾರೆ ಅವುಗಳಿಂದ ಮಕ್ಕಳ ಮನೋವಿಕಾಸವಾಗುತ್ತದೆ ಎಂಬುದು ವಾದ. ವೀಡಿಯೋಗಳನ್ನು ನೋಡುತ್ತಿರುವ ಮೆದುಳು ಎಲ್ಲವನ್ನೂ ಮಾಡಿಬಿಟ್ಟಿದ್ದೇನೆ ಎನ್ನುವ ಭ್ರಮೆಗೆ ಒಳಗಾಗಿಬಿಡುತ್ತದೆ. ಕಾರಣ ಅಲ್ಲಿ ಪ್ರಯೋಗದ ಪ್ರಾತ್ಯಕ್ಷಿತೆ ಎರಡು ಆಯಾಮಗಳಲ್ಲಿ ಮಾತ್ರವಿರುತ್ತದೆ. ಮತ್ತು ಮಕ್ಕಳು/ದೊಡ್ಡವರು ಅದನ್ನು ಪೂರ್ಣವಾಗಿ ನೋಡಿ ’ಓಹ್ ಇದು ಮಾಡಬಹುದು’ ಎಂಬ ಸ್ಥಿತಿಗೆ ಬರುತ್ತಾರೆ. ಆ ವೀಡಿಯೋದ ಕೆಳಗೆ ಇನ್ನೂ ಹಲವಾರು ವೀಡಿಯೋಗಳು ಮನಸ್ಸನ್ನು ಆಕರ್ಷಿಸುತ್ತಿರುತ್ತದೆ. ’ಅದೇನಿರಬಹುದು’,ಇದೇನಿರಬಹುದು’, ಓಹ್ ಅದು ತುಂಬಾ ಸುಲಭ’ ಎಂಬಂತಹ ಭಾವ ಮೂಡಿ ಮನಸ್ಸು ಇನ್ನೂ ಚಂಚಲವಾಗುತ್ತದೆ. ಅಲ್ಲಿ ತೋರಿಸುವ ಪ್ರತಿಯೊಂದು ಆರ್ಟ್ ವರ್ಕ್ , ಪ್ರಯೋಗಗಳು, ಕ್ರಾಫ್ಟ್ ಗಳನ್ನು ತಾವೇ ಮಾಡಿ ಮುಗಿಸಿದ್ದೇವೆ ಎನ್ನುವ ಭ್ರಮೆಗೆ ಒಳಗಾಗಿಬಿಡುತ್ತಾರೆ. ಸಹಪಾಠಿಗಳೊಂದಿಗೆ, ಬಂಧುಗಳೊಂದಿಗೆ ತಾವು ಅದನ್ನೆಲ್ಲಾ ಮಾಡುತ್ತೇವೆ ಅಥವಾ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುವ ಉದಾಹರಣೆಗಳೂ ಇಲ್ಲದಿಲ್ಲ.
* ಯೋಚನಾಶಕ್ತಿಯ ಮೇಲಾಗುವ ಪರಿಣಾಮಗಳು: ಆಪ್ ಗಳು ರೆಡಿ ಫುಡ್ ಗಳಿದ್ದಂತೆ. ಮೊದಲೇ ಡಿಸೈನ್ ಮಾಡಿದ, ಇಟರೇಟಿವ್ ಮತ್ತು ಲೂಪ್ ಗಳನ್ನು ಹೊಂದಿದ ಆಟಗಳಲ್ಲಿ ಯಾವ ಹೊಸತನವನ್ನೂ ಕಾಣೆವು. ಮಕ್ಕಳೇ ಸ್ವತಂತ್ರ್ಯವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳಲು ಇದು ಸಾಕು. ಕೈಯಿಂದ ಮುಟ್ಟದೆ, ಅನುಭವಕ್ಕೆ ಬಾರದೆ ಆಡುವ ಆಟಗಳು ಮೆದುಳನ್ನು ಉತ್ತೇಜಿಸುವುದಿಲ್ಲ. ಸ್ಪರ್ಷವು ನೇರವಾಗಿ ಮೆದುಳಿಗೆ ಸಂಪರ್ಕವನ್ನು ಹೊಂದಿದೆ ಎನ್ನುವುದು ನಿರ್ವಿವಾದ, ಸ್ಪರ್ಶವೇ ಇಲ್ಲದೆ, ಬರಿಯ ಕೈ ಬೆರಳುಗಳನ್ನು ಪರದೆಯ ಮೇಲೆ ಆಡಿಸುತ್ತಾ ಆಡುವ ಆಟಗಳು ಕಣ್ಣಿಗೆ ಹೆಚ್ಚು ಶ್ರಮವನ್ನು ಕೊಡುತ್ತವೆ ಜೊತೆಗೆ ಮೆದುಳಿಗೆ ಭ್ರಮೆಯನ್ನು ಮತ್ತು ಒತ್ತಡವನ್ನು ಕೊಡುತ್ತವೆ. ಕ್ರಮೇಣ ಮಕ್ಕಳ ಮೆದುಳು ಸ್ವಂತವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಂಡು ಎಲ್ಲದಕ್ಕೂ ಆಪ್ ಗಳ ಗೂಗಲ್ ನ ಸಹಾಯವನ್ನು ಬೇಡುತ್ತದೆ. ಉದಾಹರಣೆಗೆ ದಾರಿ ಕೇಳಿ ಹೋಗುವುದರಿಂದ ಜನರೊಂದಿಗಿನ ಒಡನಾಟ ಮಾತುಕತೆ ಬೆಳೆಯುತ್ತದೆ. ಜಿಪಿಎಸ್ ಇಂದ ಆ ಕಮ್ಯುನಿಕೇಶನ್ ಕಡಿತವಾಗುತ್ತದೆ. ಹಲವಾರು ಆಟಗಳಲ್ಲಿ ಉತ್ತರವನ್ನು ಮತ್ತು ಉತ್ತರ ಬರುವ ಹಂತಗಳನ್ನೂ ಫೀಡ್ ಮಾಡಲಾಗಿರುತ್ತದೆ. ಒಂದೆರಡು ಬಾರಿ ತಪ್ಪಾದಾಗ ,ಮಕ್ಕಳು ಆ ಉತ್ತರವನ್ನು ನೋಡಿಕೊಂಡು ಮುಂದುವರೆಯುತ್ತಾರೆ . ಅಲ್ಲಿಗೆ ಆಲೋಚನೆ ಮತ್ತು ಮೆದುಳನ್ನು ಉಪಯೋಗಿಸುವ ಶಕ್ತಿ ನಾಶವಾದಂತೆಯೇ. ಈ ಎಲ್ಲಾ ದುಷ್ಪರಿಣಾಮಗಳು ಆ ಕ್ಷಣಕ್ಕೆ ಅಥವಾ ಬಲು ಬೇಗ ಕಾಣುವಂತಹುದಲ್ಲ. ಆದರೆ ಮಕ್ಕಳಲ್ಲಿನ ಸ್ವಭಾವದ ಬದಲಾವಣೆ ನಿಮಗೆ ನಂತರದ ದಿನಗಳಲ್ಲಿ ಕಾಣಿಸುತ್ತದೆ.
* ಐ ಹ್ಯಾಂಡ್ ಕೋಆರ್ಡಿನೇಶನ್ ಸಮಸ್ಯೆಗಳು: ನಮಗೆಲ್ಲಾ ತಿಳಿದಿರುವಂತೆ ಕೈಕಾಲುಗಳ ಚಲನೆಗಳು ಮತ್ತು ಕಾರ್ಯವಿಧಾನದಲ್ಲಿ ಮೆದುಳಿನ ಪಾತ್ರವೇ ಮುಖ್ಯ. ಯಾವುದೂ ಇನ್ವಾಲಂಟರಿ ಆಕ್ಷನ್ ಅಲ್ಲ. ಮೆದುಳು ಸಂಜ್ಞೆಗಳನ್ನು ಕಳುಹಿಸಿದ ಮೇಲೆ ಅಂಗಗಳು ಕೆಲ್ಸ ಮಾಡುತ್ತವೆ. ಉದಾಹರಣೆಗೆ ಚೆಂಡನ್ನು ಹಿಡಿಯಲು, ಅದು ಬರುವ ದಿಕ್ಕು ವೇಗ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಕೈಗಳನ್ನು ಯಾವ ಶೈಲಿಯಲ್ಲಿಟ್ಟರೆ ಚೆಂಡು ಕೈಯೊಳಗೆ ಬೀಳುತ್ತದೆ ಎನ್ನುವುದು. ಎಂಟರಿಂದ ಹತ್ತು ಕೆಲ್ಸಗಳನ್ನು ಘಳಿಗೆಯಲ್ಲಿ ಯೋಚಿಸಿ ಸಂಜ್ಞೆ ಕಳಿಸುವ ಮೆದುಳಿಗೆ ಆಪ್ ಮೂಲಕ ಅಡುವ ಆಟದಲ್ಲಿ ಏನು ರುಚಿ ಸಿಕ್ಕೀತು? ಎರಡು ಬೆರಳುಗಳಲ್ಲಿ ಪರದೆಯನ್ನು ಆಡಿಸುತ್ತಾ ಲೆಕ್ಕಾಚಾರ ಹಾಕುವುದು ಮೆದುಳಿನ ಬೀಳುವ ಒತ್ತಡ. ಕೈ ಕಾಲು ಕಣ್ಣುಗಳ ಚಲನೆಗೆ ಅವಕಾಶವಿಲ್ಲ. ಈಗ ಹೆಚ್ಚಿನ ಮಕ್ಕಳಲ್ಲಿ ಬರೆಯುವ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತಿದೆ. ಕಾರಣ ಈ ಆಪ್ ಗಳು ಮತ್ತು ಗ್ಯಾಡ್ಜೆಟ್ ಗಳು. ಕೆಲವು ಶಾಲೆಗಳಲ್ಲಿ ಟಾಬ್ಲೆಟ್ ಗಳನ್ನು ಕೊಟ್ಟು ರೆಕಾರ್ಡೆಡ್ ಪಠ್ಯವನ್ನು ಓದಿಸುತ್ತಾರೆ ಮತ್ತು ಅಲ್ಲೇ ಉತ್ತರಗಳನ್ನು ಟೈಪಿಸುವಂತೆ ಹೇಳುತ್ತಾರೆ. ಇಂಥ ಸನ್ನಿವೇಶದಲ್ಲಿ ಮಕ್ಕಳು ಬರೆಯುವುದನ್ನು ಕಲಿಯುವ ಮಾತಿರಲಿ ಅಭ್ಯಾಸವನ್ನೂ ಮಾಡಲಾರರು. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಬರೆಯುವ ಕ್ರಮವಿರುವುದು ಅವರಿಗೆ ತೊಡಕಾಗಿ ಪರಿಣಮಿಸುತ್ತದೆ. ವಸ್ತುಗಳನ್ನು ಮುಟ್ಟಿ ಅದರ ಆಕಾರವನ್ನು ತಿಳಿಯುವ ಕಲೆ ಅಳಿಸಿ ಹೋಗುವುದು ಈ ಆಪ್ ಗಳು ಕೊಡುವ ಶಿಕ್ಷಣಕ್ರಮದಿಂದ. ನಿಜವಾಗಿ ಬಣ್ಣ ಬಳಿಯುವ ಆಟದಲ್ಲಿ ಎಷ್ಟು ಪ್ರಮಾಣದಲ್ಲಿ ಬಣ್ಣ ತೆಗೆದುಕೊಳ್ಳಬೇಕು, ಎಷ್ಟು ಒತ್ತಡ ಹಾಕಿದರೆ ಗಾಢ ಬಣ್ನ ಬರುತ್ತದೆ ಎಂದೆಲ್ಲಾ ಯೋಚಿಸಬೇಕಾಗುತ್ತದೆ ಆದರೆ ಆಪ್ ಗಳಲ್ಲಿ ರೆಡಿ ಫುಡ್ ಗಳಿವೆ. ಯೋಚನೆಗೆ ಜಾಗವಿಲ್ಲ.
* ನಡುವಳಿಕೆ ಮತ್ತು ವ್ಯಕ್ತಿತ್ವದಲ್ಲಿ ಉಂಟಾಗುವ ತೊಂದರೆಗಳು: ಸದಾ ಕಾಲ ಮೊಬೈಲ್ ಗಳಲ್ಲಿ ಮುಳುಗಿದ್ದರೆ ಎದುಗಿರುವವರೊಂದಿಗೆ ಸಂಭಾಷಿಸಲು ಬಾರದ ಸ್ಥಿತಿ ನಿರ್ಮಾಣವಾಗುತ್ತದೆ. ಸದಾ ಓದು ಮತ್ತು ಗ್ಯಾಡ್ಜೆಟ್ ಗಳೊಂದಿಗೆ ಸಂಭಾಷಿಸುವ ಮಕ್ಕಳಿಗೆ ಸಂವಹನ ಕಲೆ ತೊಡಕಾಗಿಬಿಡುವ ಸಂಭವ ಹೆಚ್ಚು. ಮೊಬೈಲ್ ಗೇಮ್ ಗಳನ್ನು ಆಡೂವ ಮಕ್ಕಳಲ್ಲಿ ಗೆಲ್ಲುವ ಹುಚ್ಚು ಅತಿಯಾಗಿ ಸಣ್ಣ ಸೋಲನ್ನೂ ಎದುರಿಸುವ ಶಕ್ತಿ ಇಲ್ಲವಾಗಿಬಿಡುತ್ತದೆ. ಇದು ಅಪಾಯಕಾರಿ. ಗೇಮ್ ಗಳು ಉದ್ವೇಗಗೊಳಿಸುವ ಅಂಶಗಳನ್ನು ಹೊಂದಿದ್ದರೆ ಹೊಡಿ ಬಡಿ ಕೊಲ್ಲೆಂಬ ರೌದ್ರವೇ ಕಣ್ಣಲ್ಲಿ ಕಾಣುತ್ತದೆ. ಹಠದ ಸ್ವಭಾವ, ಕೋಪ, ಅತಿಯಾದ ಭಾವ ತೀವ್ರತೆಗಳು ಮಕ್ಕಳಲ್ಲಿ ಹೆಚ್ಚಾಗುವುದಕ್ಕೆ ಮೊಬೈಲ್ ಆಪ್ ಗಳು ಗೇಮ್ ಗಳು ಹೆಚ್ಚಿನ ಕಾಣ್ಕೆಯನ್ನು ಕೊಟ್ಟಿವೆ. ಸ್ಪಂದಿಸುವ ಮತ್ತು ಪ್ರತಿಸ್ಪಂದಿಸುವ ಗುಣವನ್ನು ಈ ಮೊಬೈಲ್ ಮತ್ತು ಆಪ್ ಗಳು ಕಿತ್ತುಕೊಳ್ಳುತ್ತಿವೆ. ವಾಯ್ಸನ್ನು ಕಳುಹಿಸಿ ಉತ್ತರವನ್ನು ಪಡೆದುಕೊಳ್ಳುವ ಆಪ್ ಗಳು ಆನ್ಲೈನ್ ಗೇಂ ಗಳಲ್ಲಿ ಆಡುವ ಮಾತುಗಳು ಕೇವಲ ಭ್ರಮೆಯನ್ನು ಮಾತ್ರ ಸೃಷ್ಟಿಸಬಲ್ಲದು. ಅವುಗಳಲ್ಲಿ ಎದುರಿಗಿನವನ ಮುಖ, ಮಾತು, ಧ್ವನಿ ಯಾವುದೂ ಇಲ್ಲದಿರುವುದರಿಂದ ಹುಸಿ ಮತ್ತು ಮಾನಿಪ್ಯುಲೇಟ್ ಆದ ಅಕ್ಷರಗಳೇ ಕಾಣುತ್ತವೆ. 
* ಕಲ್ಪನಾಶಕ್ತಿಗಾಗುವ ತೊಂದರೆಗಳು: ಹುಟ್ಟುವಾಗ ಮಕ್ಕಳಿಗೆ ಕತೆಗಳನ್ನು ಹೇಳಿ ಬೆಳೆಸುತ್ತೇವೆ (ಬೆಳೆಸಬೇಕು). ಆದರೆ ಇತ್ತೀಚಿನ ದಿನಗಳಲ್ಲಿ ಕತೆ ಹೇಳುವುದಕ್ಕೂ ಆಪ್ ಗಳಿವೆ. ಪೋಷಕರಿಗೆ ಸಮಯದ ಅಭಾವದಿಂದ ತಮ್ಮ ಪೋಷಕ ಸ್ಥಾನವನ್ನು ಮೊಬೈಲ್ ಗಳಿಗೆ ವರ್ಗಾಯಿಸಿಬಿಟ್ಟಿದ್ದಾರೆ. ಮಕ್ಕಳು ಹಠ ಮಾಡಿದಾಗ ಟಿವಿ ಅಥವಾ ಮೊಬೈಲ್ ಕೊಟ್ಟು ಕೂರಿಸುವುದು ಸಾಮಾನ್ಯ. ಕತೆ ಹೇಳುವ ಆಪ್ ಗಳು ಎರಡು ಆಯಾಮದಲ್ಲಿ ಕೈಕಾಲುಗಳನ್ನು ಆಡಿಸಿ ಅಥವಾ ಧ್ವನಿಯ ಮೂಲಕ ಕತೆಯನ್ನು ಹೇಳುತ್ತದೆ, ಕತೆಗಳಲ್ಲಿ ಹೊಸತನವಿರುವುದಿಲ್ಲ. ಅದೇ ಕತೆಗಳೇ ಪುನರುಕ್ತಿಯಾಗುತ್ತದೆ. ಆಂಗಿಕವಾಗಿ ಕತೆಗಳನ್ನು ಹೇಳುತ್ತಾ ಮಕ್ಕಳ ಕಲ್ಪನಾಶಕ್ತಿಯನ್ನು ವಿಕಾಸಗೊಳಿಸುವುದರಲ್ಲಿ ಆಪ್ ಗಳು ಸೋಲುತ್ತವೆ. ಮಕ್ಕಳಿಗೆ ಕಲ್ಪನಾಶಕ್ತಿಯಿಲ್ಲದಿದ್ದರೆ , ಉತ್ತರಪತ್ರಿಕೆಯಲ್ಲಿ ಉರುಹೊಡೆದ ಉತ್ತರಗಳನ್ನು ಮಾತ್ರ ಬರೆಯಬೇಕಾದ ಸ್ಥಿತಿ ಬರುತ್ತದೆ,. ಸ್ವಂತವಾಕ್ಯಗಳನ್ನು ರಚಿಸಲು ಅಸಮರ್ಥರಾಗುತ್ತಾರೆ. ಮತ್ತೆ ಸಂವಹನಕ್ಕೆ ತೊಂದರೆ. ಅದರಿಂದ ಮುಂದಿನ ಹಂತಗಳಲ್ಲಿ (ಕೆಲಸಕ್ಕೆ ಸೇರಿಕೊಂಡಾಗ) ಪ್ರೆಸೆಂಟೇಶನ್ ಸ್ಕಿಲ್ ಎನ್ನುವುದು ಕಷ್ಟವಾಗಬಹುದು. 
* ವ್ಯಸನವಾಗುವ ತೊಂದರೆ: ಮೇಲೆ ಹೇಳಿದ ಎಲ್ಲ ಸಮಸ್ಯೆಗಳಿಗಿಂದ ಹೆಚ್ಚಿನ ಸಮಸ್ಯೆ ಗೀಳುರೋಗದ್ದು. ಮೊಬೈಲ್ ಗಳು ಮಕ್ಕಳಿಗೆ ಅಡಿಕ್ಷನ್ ಆಗಿಬಿಡುತ್ತವೆ. ಮೊಬೈಲ್ ಗಳಿಲ್ಲದೆ ಏನನ್ನೂ ಮಾಡಲಾರದ ಸ್ಥಿತಿಗೆ ತಲುಪುತ್ತದೆ. ಅರೆಘಳಿಗೆಯೂ ಮೊಬೈಲ್ ಸ್ಕ್ರೀನನ್ನು ಮುಟ್ಟದೆ ಇರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ( ಈಗಾಗಲೇ ನಿಮ್ಹಾನ್ಸ್ ನಲ್ಲಿ ಸ್ಕ್ರೀನ್ ಅಡಿಕ್ಷನ್ ಗೆ ಪ್ರತ್ಯೇಕ ಡಿಪಾರ್ಟ್ಮೆಂಟ್/ಚಿಕಿತ್ಸಾ ಕೋಣೆಯನ್ನು ತೆರೆಯಲಾಗಿದೆ) ಕೈಗಳು ಹಪಹಪಿಸುತ್ತವೆ. ಸಿಟ್ಟು, ಹಠ, ಹೊಡೆಯುವುದು, ಬೈಯುವುದು, ಹೀಗೆ ಮನಸ್ಥಿತಿಯೇ ಬದಲಾಗಿಬಿಡುತ್ತದೆ. ಇದೇ ಸ್ಥಿತಿ ಮುಂದುವರೆದರೆ ಮಾದಕ ವ್ಯಸನಕ್ಕಿಂತಲೂ ಅಪಾಯಕಾರಿಯಾಗಿ ಈ ವ್ಯಸನ ಪರಿಣಮಿಸಿಬಿಡುತ್ತದೆ. ಹೈಸ್ಕೂಲ್ ನಲ್ಲಿರುವ ಅನೇಕ ಮಕ್ಕಳು ವ್ಯಾಟ್ಸಾಪ್ ನಲ್ಲಿದ್ದಾರೆ , ಸದಾ ಅದರಲ್ಲಿ ಬರುವ ಮೆಸೇಜ್ ಗಳನ್ನು ನೋಡುವುದು, ವೀಡಿಯೋಗಳನ್ನು ನೋಡುವುದು ರಿಪ್ಲೈ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ.

Comments