ಆಟಿಕೆಗಳ ಅಪಾಯಗಳು (ಭಾಗ 1)

ಆಟಿಕೆಗಳ ಅಪಾಯಗಳು (ಭಾಗ 1)

ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣಿಟ್ಟು ಕಾಯಬೇಕಾಗುತ್ತದೆ.

ಏಕೆಂದರೆ ಆಟಿಕೆಗಳ ಬೃಹತ್ ವಹಿವಾಟಿನಲ್ಲಿ ಉತ್ಪಾದಕರ ಬೇಜವಾಬ್ದಾರಿಯ ಹಲವು ನಿದರ್ಶನಗಳಿವೆ. ಭಾರತದಲ್ಲಿ ಕೆಲವು ಕಂಪೆನಿಗಳ ಆಟಿಕೆಗಳ ವಾರ್ಷಿಕ ಮಾರಾಟ ತಲಾ ರೂಪಾಯಿ 3 - 4 ಕೋಟಿ ದಾಟಿದೆ! ಅದಲ್ಲದೆ ಲಿಯೋ, ಲಿಗೋ, ಬಾರ್ಬಿ ಇಂತಹ ಜಗತ್ಪ್ರಸಿದ್ಧ ಮಕ್ಕಳ ಆಟಿಕೆ ಕಂಪೆನಿಗಳೂ ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತಿವೆ. ಇಂತಹ ದಂಧೆಯಲ್ಲಿ ಉತ್ಪಾದಕರ ಲಾಭದಾಸೆಗೆ ಮಕ್ಕಳು ಬಲಿಯಾಗದಂತೆ ಹೆತ್ತವರೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಅಧ್ಯಯನದ ಫಲಿತಾಂಶ
ಭಾರತದಲ್ಲಿ ಮಕ್ಕಳ ಪ್ರಾಣಕ್ಕೇ ಕುತ್ತಾಗಬಲ್ಲ ಆಟಿಕೆಗಳ ಆಕಾರ, ಗಾತ್ರ, ಅವುಗಳ ತಯಾರಿಗೆ ಬಳಸಲಾಗುವ ದೋಷಪೂರ್ಣ ಅಥವಾ ವಿಷಯುಕ್ತ ವಸ್ತು/ ಪೈಂಟ್ ಇತ್ಯಾದಿಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು. ಆಟಿಕೆಗಳ ಮಾರಾಟಗಾರರು, ಹೆತ್ತವರು ಹಾಗೂ ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಯಿತು. ಅಂತಿಮವಾಗಿ ಆಟಿಕೆಗಳ ಸುರಕ್ಷಿತತೆ ಮತ್ತು ಗುಣಮಟ್ಟದ ಮಾನದಂಡ ನಿರ್ಧರಿಸಿ, ಅದನ್ನು ಕಾಯ್ದುಕೊಳ್ಳಲು ಮತ್ತು ಆಟಿಕೆಗಳಿಂದಾಗುವ ದುರ್ಘಟನೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸಲು ರಾಷ್ಟ್ರ ಮಟ್ಟದ ಅಧಿಕಾರ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಅಧ್ಯಯನ ತಂಡವು ಶಿಫಾರಸ್ ಮಾಡಿದೆ.

ಈ ಅಧ್ಯಯನದಲ್ಲಿ ಗುರುತಿಸಲಾದ ಕೆಲವು ಅಪಾಯಕಾರಿ ಆಟಿಕೆಗಳ ವಿವರ ಹೀಗಿದೆ:
1) ಮರದ ರೈಲು, ವಿಮಾನ: ಇವುಗಳ ಮೊಳೆಗಳಿಂದ ಎಳೆಮಕ್ಕಳಿಗೆ ಗಾಯವಾದ್ದರಿಂದ ಟಿಟಿನಸ್ ರೋಗಕ್ಕೆ ಚಿಕಿತ್ಸೆ ನೀಡಬೇಕಾಯಿತು.
2) ಪ್ಲಾಸ್ಟಿಕ್ ಚುಚ್ಚುಪಿನ್ ಮತ್ತು ತೂತು ಫಲಕ: ಇದು ತೂತು ಫಲಕದಲ್ಲಿ ವಿಭಿನ್ನ ಚುಚ್ಚುಪಿನ್‌ಗಳನ್ನು ಚುಚ್ಚಿ, ವಿವಿಧ ಆಕೃತಿಗಳನ್ನು ರಚಿಸುವ ಆಟಿಕೆ. ಆ ಚುಚ್ಚುಪಿನ್‌ಗಳನ್ನು ಕಿತ್ತು ತೆಗೆಯುವಾಗ ಮಕ್ಕಳ ಚರ್ಮ, ಬೆರಳುಗಳು ಮತ್ತು ಉಗುರುಗಳಿಗೆ ಘಾಸಿಯಾಗುತ್ತದೆ.
3) ಆಟದ ಗನ್: ಸಾಬೂನಿನ ಗುಳ್ಳೆಗಳನ್ನು ಚಿಮ್ಮಿಸುವ ಆಟದ ಗನ್ನಿನಿಂದ ರಾಸಾಯನಿಕಗಳನ್ನು ಮಕ್ಕಳು ನೆಕ್ಕಿ ಅಥವಾ ನುಂಗಿ ಅನಾರೋಗ್ಯದಿಂದ ಬಾಧೆ ಪಡುತ್ತವೆ.
4) ಬ್ಯಾಟರಿ ಚಾಲಿತ ಆಟಿಕೆಗಳು: ಇವುಗಳ ಪುಟ್ಟ ಬ್ಯಾಟರಿಗಳು ಮಕ್ಕಳಿಗೆ ಕಾಣುವಂತಿದ್ದು, ಅವನ್ನು ಮಕ್ಕಳು ಸುಲಭವಾಗಿ ಕಿತ್ತು, ಬಾಯಿಯಿಂದ ಕಚ್ಚಿದಾಗ ಅಪಾಯವಾಗುತ್ತದೆ.
5) ಹಣ್ಣಿನ ಪರಿಮಳದ ಬಾಲ್: ಇದರ ಪರಿಮಳ ಹಾಗೂ ಆಕರ್ಷಕ ಬಣ್ಣವು ಮಕ್ಕಳು ಬಾಲ್ ನೆಕ್ಕಲು ಪ್ರೇರೇಪಿಸಿ, ಬಾಲ್‌ನ ವಿಷಭರಿತ ಪೈಂಟ್ ಮಕ್ಕಳ ಹೊಟ್ಟೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಆಟಿಕೆಗಳ ಅಪಾಯಗಳು:
ಮನೆಗೆ ತಂದ ಆಟಿಕೆಗಳೊಡನೆ ಮಕ್ಕಳು ತಕ್ಷಣವೇ ಆಡಲು ಶುರು ಮಾಡುತ್ತಾರೆ. ಅವು ಪುಟ್ಟ ಗಾತ್ರದ ಅಥವಾ ಹರಿತ ಭಾಗಗಳಿರುವ ಆಟಿಕೆಗಳಾಗಿದ್ದು, ಮಕ್ಕಳು ಬಾಯಿಗೆ ಹಾಕಿಕೊಂಡರೆ ಗಾಯವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲವು ನಿರ್ದಿಷ್ಟ ಆಟಿಕೆಗಳ ಅಪಾಯಗಳು ಹೀಗಿವೆ:
ಗೊಂಬೆಗಳು: ಆಕರ್ಷಕ ತುಪ್ಪಳದ ಬೊಂಬೆಗಳು ಅಪಾಯರಹಿತ ಅನಿಸಬಹುದು. ಆದರೆ ಅವುಗಳ ಕಣ್ಣಿನ ಮಣಿಗಳು ಕಿತ್ತು ಬಂದಾಗ, ಮಕ್ಕಳು ಮಣಿ ನುಂಗಿ ಉಸಿರುಗಟ್ಟಿ ಅಪಾಯವಾದ ಪ್ರಕರಣಗಳಿವೆ. ಗೊಂಬೆಗಳ “ಪೀಂ ಪೀಂ” ಸಿಳ್ಳೆ ಗುಂಡಿಗಳೂ ಕಿತ್ತು ಬಂದಾಗ ಮಕ್ಕಳು ಅವನ್ನು ಬಾಯಿಗೆ ಹಾಕಿಕೊಂಡು ಫಜೀತಿಯಾದ ನಿದರ್ಶನಗಳೂ ಇವೆ.

ಆಟಿಕೆಗಳನ್ನು ಮಕ್ಕಳು ಬಾಯಿಗೆ ಹಾಕಿ ಕಚ್ಚಿದಾಗ ಪೈಂಟ್ ಕಳಚಿ ಬರುವಂತಿದ್ದರೆ ಅಪಾಯ. ಅದಕ್ಕಾಗಿ “ಸತು ಇರುವ ಪೈಂಟ್‌ಗಳನ್ನು ಆಟಿಕೆಗಳಿಗೆ ಹಚ್ಚಬಾರದು” ಎಂಬ ನಿಷೇಧ ವಿಧಿಸಲಾಗಿದೆ.

ಚೆಂಡು: ಪುಟಿಯುವ ಚೆಂಡುಗಳಿಂದ ಮಕ್ಕಳ ಪ್ರಾಣಹರಣವಾದೀತೆಂದರೆ ನಂಬುವಿರಾ? ಹದಿನೇಳು ವರುಷಗಳ ಅಂಕೆಸಂಖ್ಯೆಗಳ ಅನುಸಾರ ಯು.ಎಸ್.ಎ. ದೇಶದಲ್ಲಿ 40 ಮಕ್ಕಳ ಗಂಟಲಿನಲ್ಲಿ ಚೆಂಡು ಸಿಲುಕಿ ಉಸಿರುಗಟ್ಟಿ ಸತ್ತರು. ಅವರೆಲ್ಲ 6 ತಿಂಗಳಿನಿಂದ 12 ವರುಷ ನಡುವಣ ವಯಸ್ಸಿನವರು. ಅವರಲ್ಲಿ 36 ಮಕ್ಕಳು 5 ವರುಷ ಅಥವಾ ಕಡಿಮೆ ಪ್ರಾಯದವರು. ಈ ದುರ್ಘಟನೆಗಳಲ್ಲಿ ಬಾಯಿಗೆ ಹಾಕಿಕೊಂಡ ಚೆಂಡು ಗಂಟಲಿಗೆ ಜಾರಿ ವಾಯುನಾಳವನ್ನೇ ಮುಚ್ಚಿ ಬಿಟ್ಟಿತು. ಆ ಚೆಂಡುಗಳಲ್ಲಿ ಅತಿ ದೊಡ್ಡದರ ವ್ಯಾಸ ಒಂದೂವರೆ ಇಂಚುಗಳು. ಆದ್ದರಿಂದ, ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುವ ಮಕ್ಕಳಿಗೆ ಸಣ್ಣ ಚೆಂಡುಗಳು ಹಾಗೂ ದುಂಡಗಿನ ವಸ್ತುಗಳು ಕೈಗೆ ಸಿಗದಂತೆ ತೆಗೆದಿರಿಸಬೇಕು.

ಬೆಲೂನ್: ಗಾಳಿ ತುಂಬಿದ ಬೆಲೂನುಗಳು ನೋಡಲು ಚಂದವಾದರೂ ಪ್ರಾಣಕ್ಕೆ ಕುತ್ತಾಗಬಲ್ಲವು. ಮಕ್ಕಳು ಉಸಿರುಗಟ್ಟಿ ಸತ್ತ ಪ್ರಕರಣಗಳಲ್ಲಿ ಸಾವಿಗೆ ಮುಖ್ಯ ಕಾರಣ ಬೆಲೂನುಗಳು. ಗಾಳಿ ತುಂಬದ ಬೆಲೂನುಗಳು ಅಥವಾ ಬೆಲೂನಿನ ತುಂಡುಗಳು ಗಂಟಲಲ್ಲಿ ಸಿಕ್ಕಿಕೊಂಡು ನೂರಾರು ಮಕ್ಕಳು ಜೀವ ಕಳೆದುಕೊಂಡಿವೆ. ಇವರಲ್ಲಿ ಬಹುಪಾಲು ಮಕ್ಕಳು ಆರು ವರುಷಕ್ಕಿಂತ ಕಡಿಮೆ ಪ್ರಾಯದವರು.

ಹಲವು ದುರ್ಘಟನೆಗಳಲ್ಲಿ ಮಕ್ಕಳು ಬೆಲೂನಿಗೆ ಗಾಳಿಯೂದಲು ಪ್ರಯತ್ನಿಸುವಾಗ ಬೆಲೂನ್ ಬಾಯಿಯೊಳಗೆ ಸೆಳೆಯಲ್ಪಟ್ಟಿತು. ಬೆಲೂನ್ ಒಡೆದಾಗಲೂ ಹಿರಿಯರು ಅದನ್ನು ಮಕ್ಕಳ ಕೈಯಿಂದ ತೆಗೆದುಬಿಡಬೇಕು. ಇಲ್ಲವಾದರೆ, ಆ ಬೆಲೂನಿನ ತುಂಡಿನಲ್ಲಿ ಮಕ್ಕಳು ಗಾಳಿಯ ಗುಳ್ಳೆಯುಬ್ಬಿಸುವ ಆಟವಾಡುವಾಗ ಅದು ಸುಲಭವಾಗಿ ಗಂಟಲಿಗೆ ಸೆಳೆಯಲ್ಪಡುತ್ತದೆ. ಬೆಲೂನುಗಳನ್ನು ತಯಾರಿಸುವುದೇ ಒಳ ಸೇರಿದ ಗಾಳಿ ಹೊರಕ್ಕೆ ಬಾರದಂತೆ ತಡೆ ಹಿಡಿಯಲಿಕ್ಕಾಗಿ. ಗಂಟಲಿನಲ್ಲಿ ಸಿಕ್ಕಿಕೊಂಡಾಗಲೂ ಬೆಲೂನ್ ಗಾಳಿ ಸಂಚಾರ ಬಂದ್ ಮಾಡುತ್ತದೆ. ಆದ್ದರಿಂದ , ಮಕ್ಕಳು ಬೆಲೂನಿನಲ್ಲಿ ಆಡುತ್ತಿರುವಾಗ ಹಿರಿಯರು ಮಕ್ಕಳ ಮೇಲೆ ಕಣ್ಣಿಟ್ಟಿರಲೇ ಬೇಕು.

ಬೇಬಿ ವಾಕರ್: ಇದು ಆರು ಪುಟ್ಟ ಚಕ್ರಗಳಿರುವ ವೃತ್ತಾಕಾರದ ಗಾಡಿ. ಇದರ ಸೀಟಿನಲ್ಲಿ ಕುಳಿತು ಮಗು ಕಾಲುಗಳಿಂದ ತಳ್ಳಿದರೆ ಗಾಡಿ ಮುಂದೆ ಹೋಗುತ್ತದೆ. ಆದರೆ ಇದಕ್ಕೆ ಬ್ರೇಕ್ ಇಲ್ಲ! ಆದ್ದರಿಂದ, ಇದರಲ್ಲಿ ಕುಳಿತ ಮಗುವನ್ನು ಗಮನಿಸುತ್ತಲೇ ಇರಬೇಕು. ಇಲ್ಲವಾದರೆ, ಬಿರುಸಿನಿಂದ ಓಡುವ ಬೇಬಿ ವಾಕರ್ ಅಡ್ಡಬಿದ್ದು ಅಥವಾ ಮೆಟ್ಟಲುಗಳಿಂದ ಉರುಳಿ ಬಿದ್ದು ಮಗುವಿನ ಕೈಕಾಲು ಮುರಿದೀತು; ಪ್ರಾಣವೂ ಹೋದೀತು. ಇಂತಹ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಒಂದೇ ವರುಷದಲ್ಲಿ ಬೇಬಿ ವಾಕರಿನಿಂದಾಗ 27,800 ಅಪಘಾತಗಳಿಗೆ ಆಸ್ಪತ್ರೆಗಳ ಎಮರ್ಜೆನ್ಸಿ ಘಟಕಗಳಲ್ಲಿ ಚಿಕಿತ್ಸೆ ನೀಡಬೇಕಾಯಿತು. ಇವುಗಳಲ್ಲಿ ಬಹುಪಾಲು ಅಪಘಾತಗಳಿಗೆ ಕಾರಣ ಬೇಬಿ ವಾಕರ್ ಮೆಟ್ಟಲಿನಿಂದ ಉರುಳಿ ಬಿದ್ದುದು.
(ಭಾಗ 2ರಲ್ಲಿ ಮುಂದುವರಿದಿದೆ.)