ಆಟಿಕೆಗಳ ಅಪಾಯಗಳು (ಭಾಗ 2)
ತೊಟ್ಟಿಲಲ್ಲಿ ತೂಗುವ ಆಟಿಕೆ: ಎಳೆಮಕ್ಕಳಿಗೆ ಐದು ತಿಂಗಳು ವಯಸ್ಸಾದಾಗ ಕೈಗಳು ಮತ್ತು ಮಂಡಿಗಳನ್ನೂರಿ ಮೈ ಎತ್ತಲು ಶುರು ಮಾಡುತ್ತವೆ. ಆ ಸಮಯದಲ್ಲಿ ಎಳೆಮಕ್ಕಳ ಕೈಗೆ ಈ ತೂಗು ಆಟಿಕೆಗಳು ಎಟಕುತ್ತವೆ. ಎಳೆಮಗು ಅವುಗಳ ದಾರ ಜಗ್ಗಿದಾಗ ನೇತಾಡುವ ದಾರ ಅದರ ಕೊರಳಿಗೆ ಉರುಳಾದ ಪ್ರಕರಣಗಳಿವೆ. ಎಳೆಮಗುವಿಗೆ ದಾರದಿಂದ ಬಿಡಿಸಿಕೊಳ್ಳಲಿಕ್ಕೂ ಆಗದೆ, ಸಮತೋಲನದಿಂದ ನಿಲ್ಲಲಿಕ್ಕೂ ಆಗದೆ, ಉಸಿರುಗಟ್ಟಿ ಸಾಯುತ್ತದೆ.
ಟಿ.ವಿ. ಗಾಡಿ: ಪುಟ್ಟ ಗಾಲಿಗಳನ್ನು ಜೋಡಿಸಿದ ಟೆಲಿವಿಷನ್ ಗಾಡಿಗಳು ಮಗುಚಿಬಿದ್ದು ಮಕ್ಕಳಿಗೆ ಮೂಳೆಮುರಿತವಾಗಿದೆ. ಪ್ರತಿ ವರುಷವೂ ಇಂತಹ ದುರ್ಘಟನೆಗಳು ವರದಿಯಾಗುತ್ತಿವೆ. ಹಲವು ಪ್ರಕರಣಗಳಲ್ಲಿ ಮಕ್ಕಳು ಸತ್ತೇ ಹೋದವು. ಇವೆಲ್ಲ ದುರ್ಘಟನೆಗಳಲ್ಲೂ ಗಾಡಿಯ ಮೇಲ್ಭಾಗದ ಹಲಗೆಯಲ್ಲಿ ಟೆಲಿವಿಷನ್ ಇರಿಸಲಾಗಿತ್ತು.
ತಂತಿ/ ರಿಬ್ಬನ್ ಇರುವ ಆಟಿಕೆ: ಈ ಆಟಿಕೆಗಳ ತಂತಿ/ ರಿಬ್ಬನ್ ಮಕ್ಕಳ ಕೊರಳಿಗೆ ಸುತ್ತಿಕೊಂಡು ಸಾವುಗಳಿಗೆ ಕಾರಣವಾಗಿದೆ. ಐದು ವರುಷಗಳ ಅವಧಿಯಲ್ಲಿ ಮಕ್ಕಳ ಕುತ್ತಿಗೆಗೆ ಚೈನಿನಂತೆ ಹಾಕಿದ ಆಟಿಕೆಗಳು, ನೆಕ್ಲೇಸ್ಗಳು ಮತ್ತು ಪುಟ್ಟ ಗಿಟಾರ್-ಗಳು ಒಟ್ಟು 27 ಮಕ್ಕಳ ಪ್ರಾಣ ಬಲಿ ತೆಗೆದುಕೊಂಡವು. ಈ ಹಲವು ಪ್ರಕರಣಗಳಲ್ಲಿ ಆಟಿಕೆಯ ತಂತಿ ಅಥವಾ ರಿಬ್ಬನ್ ಯಾವುದೋ ಕೊಂಡಿಗೆ (ತೊಟ್ಟಿಲಿನ ಮೂಲೆ ಗೂಟಕ್ಕೆ, ಕುರ್ಚಿ ಅಥವಾ ಬಾಗಿಲಿನ ಹಿಡಿಕೆಗೆ) ಸಿಲುಕಿ ಮಕ್ಕಳ ಕಂಠಕ್ಕೆ ಬಿಗಿದು ಉಸಿರುಗಟ್ಟಿಸಿತು.
ದೊಡ್ಡ ಬಕೆಟ್: ಇದು ಆಟಿಕೆಯಲ್ಲ; ಆದರೆ ಅನೇಕ ಪ್ರಕರಣಗಳಲ್ಲಿ ಮಕ್ಕಳ ಮೃತ್ಯುಕೂಪವಾಗಿ ಪರಿಣಮಿಸಿದೆ. ಯು.ಎಸ್.ಎ. ದೇಶವೊಂದರಲ್ಲೇ ಪ್ರತಿ ವರುಷವೂ 50 ಎಳೆಮಕ್ಕಳು ದೊಡ್ಡ ಬಕೆಟಿನಲ್ಲಿ ತುಂಬಿಟ್ಟ ನೀರು ಅಥವಾ ದ್ರಾವಣದಲ್ಲಿ ಮುಳುಗಿ ಸಾಯುತ್ತಿವೆ. ಇಂತಹ ಬಹುಪಾಲು ಮಕ್ಕಳು 8ರಿಂದ 14 ತಿಂಗಳು ವಯಸ್ಸಿನವು.
ಐದು ಗ್ಯಾಲನ್ಗಳಿಗಿಂತ ಜಾಸ್ತಿ ಗಾತ್ರದ ಬಕೆಟ್ಗಳು ಎಳೆಮಗುವಿನ ಸೊಂಟದ ಎತ್ತರಕ್ಕಿರುತ್ತವೆ. ಇದರಲ್ಲಿ ಒಂದಡಿ ನೀರಿದ್ದರೂ ಒಳಗೆ ಬಿದ್ದ ಮಗುವಿನ ತಲೆ ಮುಳುಗಿ ಮಗು ಸಾಯುತ್ತದೆ. ನೆಲದಲ್ಲಿ ಹೊಟ್ಟೆಯೆಳೆದು ಸಾಗುವ, ಎದ್ದು ನಿಲ್ಲಲು ಹವಣಿಸುವ ಮಕ್ಕಳು ಬಕೆಟಿನ ಅಂಚು ಹಿಡಿದು ನಿಂತು, ನೀರು ತುಂಬಿದ ಬಕೆಟಿನೊಳಗೆ ಕುತೂಹಲದಿಂದ ಇಣುಕುತ್ತಿರುವಾಗ ಆಯತಪ್ಪಿ ಬಕೆಟಿನೊಳಗೆ ಬಿದ್ದರೆ ಸುಲಭವಾಗಿ ಬಲಿಯಾಗುತ್ತವೆ. ಮಗುವಿನೊಂದಿಗೆ ಇದ್ದವರು ಅರೆನಿಮಿಷ ಟೆಲಿಫೋನಿನಲ್ಲಿ ಮಾತಾಡಿ ಬರುವಷ್ಟರಲ್ಲಿ ಅನಾಹುತ ಆಗಿರುತ್ತದೆ!
ಹೊಸ ಬೆಳವಣಿಗೆ
ಈಗಂತೂ ಮಕ್ಕಳಿಗೆ ವಿಡಿಯೋ ಗೇಮ್ಗಳ ಗೀಳು ಹೆಚ್ಚುತ್ತಿದೆ. ಆಧುನಿಕ ತಂತ್ರಜ್ನಾನವನ್ನು ಮಕ್ಕಳ ಆಟಿಕೆಗಳ ರಚನೆಗೆ ಅಳವಡಿಸಿದಾಗಲೇ ವಿಡಿಯೋ ಗೇಮ್ಗಳ ಹಾವಳಿ ಶುರುವಾಯಿತು. ವಿಧವಿಧದ ವಿಡಿಯೋ ಗೇಮ್ಗಳ ಹೊಸತನ ಸಹಜವಾಗಿಯೇ ಮಕ್ಕಳನ್ನು ಆಕರ್ಷಿಸುತ್ತದೆ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಯುರೋಪಿನಲ್ಲಿ ಹಾಗೂ ಅಮೇರಿಕದಲ್ಲಿ ಬಹುತೇಕ ಎಲ್ಲ ಮಕ್ಕಳ ಕೈಯಲ್ಲಿಯೂ ವಿಡಿಯೋ ಗೇಮ್ ಆಟಿಕೆಗಳಿವೆ. ಭಾರತದಲ್ಲಿಯೂ ಹೆಚ್ಚೆಚ್ಚು ಮಕ್ಕಳಿಗೆ ಹೆತ್ತವರು ವಿಡಿಯೋ ಗೇಮ್ ಆಟಿಕೆಗಳನ್ನು ಕೊಡುತ್ತಿದ್ದಾರೆ.
ಈ ಹೊಸ ಬೆಳವಣಿಗೆಯ ಅಪಾಯಗಳು ಪತ್ರಿಕೆ/ ಟಿವಿ ಚಾನೆಲುಗಳಲ್ಲಿ ಪ್ರತಿ ವಾರವೂ ವರದಿಯಾಗುತ್ತಿವೆ. ಅನೇಕ ವಿಡಿಯೋ ಗೇಮ್ಗಳು ಹಿಂಸೆ ಅಥವಾ ಯುದ್ಧ ಒಳಗೊಂಡ ಆಟಗಳೇ ಆಗಿವೆ. ಆದ್ದರಿಂದ ಮಕ್ಕಳ ಎಳೆ ಮನಸ್ಸಿನ ಮೇಲೆ ಈ ಆಟಗಳ ಪರಿಣಾಮ ಏನೆಂದು ಸುಲಭವಾಗಿ ತಿಳಿಯಬಹುದು. ಕೆಲವು ಸಂಶೋಧನಾ ವರದಿಗಳ ಪ್ರಕಾರ ಇಂತಹ ಹಿಂಸಾಚಾರದ ಆಟಗಳ ಗೀಳು ಹಿಡಿದ ಮಕ್ಕಳು ತಮ್ಮ ವರ್ತನೆಯಲ್ಲಿ ವ್ಯಗ್ರರಾಗುವ ಸಂಭವ ಜಾಸ್ತಿ. ಆದ್ದರಿಂದ ಅಂತಹ ವಿಡಿಯೋ ಗೇಮುಗಳಿಂದ ಮಕ್ಕಳನ್ನು ದೂರವಿಡುವುದು ಹೆತ್ತವರ ಜವಾಬ್ದಾರಿ.
ಆಟಿಕೆಗಳಿಂದ ಅಪಾಯ ಆಗದಿರಲು …
ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಿರಲು ಹೆತ್ತವರು ಆಟಿಕೆ ಖರೀದಿಸುವಾಗಲೇ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಕೆಲವು ಸೂಚನೆಗಳು ಇಲ್ಲಿವೆ:
1)ಆಟಿಕೆ ಪ್ಯಾಕ್ ಆಗಿದ್ದರೆ, ಖರೀದಿಸುವ ಮುನ್ನ ಪ್ಯಾಕ್ ತೆರೆದು, ಸುರಕ್ಷಿತತೆ ಬಗ್ಗೆ ಪರೀಕ್ಷಿಸಿ - ಇದರಿಂದ ಏನಾದರೂ ಅಪಾಯ ಇದೆಯೇ? ಎಂದು. ಆಟಿಕೆಯ ಪ್ಯಾಕೇಜಿನಲ್ಲಿ ಮುದ್ರಿಸಿದ ನಿರ್ದೇಶನಗಳನ್ನು ಸರಿಯಾಗಿ ಓದಿರಿ.
2)ಆಟಿಕೆಯಲ್ಲಿ ಸುಲಭವಾಗಿ ಕಿತ್ತು ಬರುವ ಸಣ್ಣ ಭಾಗಗಳು ಇವೆಯೇ? ಎಂದು ಗಮನಿಸಿ. ಇದ್ದರೆ, ಮಕ್ಕಳು ಅವನ್ನು ನುಂಗಿ ಉಸಿರುಗಟ್ಟೀತು.
3)ಆಟಿಕೆಯಲ್ಲಿ ಹರಿತವಾದ ಅಥವಾ ಮೊನಚಾದ ಭಾಗಗಳು ಇವೆಯೇ? ಎಂದು ಪರಿಶೀಲಿಸಿ.
4)ಉದ್ದವಾದ ಹಗ್ಗ/ ತಂತಿ/ ರಿಬ್ಬನ್ ಆಟಿಕೆಯಲ್ಲಿ ಇದೆಯೇ? ಅದು ಮಕ್ಕಳ ಕೊರಳಿಗೆ ಉರುಳಾದೀತು.
5)ಹತ್ತಿ ತುಂಬಿದ ಗೊಂಬೆಗಳ ಹೊಲಿಗೆ ಭದ್ರವಾಗಿದೆಯೇ? ಎಂದು ನೋಡಿರಿ. ಆ ಹೊಲಿಗೆ ಬಿಚ್ಚಿ ಹತ್ತಿ ಹೊರಬಂದರೆ ಮಕ್ಕಳು ನುಂಗಬಹುದು.
6)ನಿಮ್ಮ ಮಗುವಿನ ವಯಸ್ಸು 3 ವರುಷಗಳಿಗಿಂತ ಕಡಿಮೆಯಿದ್ದರೆ, ಖರೀದಿಸುವ ಆಟಿಕೆ ಎಳೆಮಗುವಿಗೆ ಸುರಕ್ಷಿತವೇ? ಎಂದು ಪರೀಕ್ಷಿಸಿ. ಯಾಕೆಂದರೆ ಹಿರಿಯ ಮಕ್ಕಳಿಗೆ ಸುರಕ್ಷಿತವಾದ ಆಟಿಕೆ ಕಿರಿಯ ಮಕ್ಕಳಿಗೆ ಅಪಾಯ ತಂದೀತು.
7)ವಿಡಿಯೋ ಗೇಮ್ ಆಟಿಕೆಯಲ್ಲಿ ಹಿಂಸೆಯ ಅಥವಾ ಧಾಳಿಯ ಆಟ ಇದೆಯೇ? ಎಂದು ನೋಡಿ.
8)ಹೊಸ ಆಟಿಕೆ ಮನೆಗೆ ತಂದ ನಂತರ ಅದರೊಂದಿಗೆ ಸುರಕ್ಷಿತವಾಗಿ ಆಡುವುದನ್ನು ಮಕ್ಕಳಿಗೆ ಕಲಿಸಿರಿ.
9)ಆಟಿಕೆಯಲ್ಲಿ ಬಿರುಕುಗಳು ಮೂಡಿವೆಯೇ? ಆಟಿಕೆ ಸರಿಯಾಗಿ ಕೆಲಸ ಮಾಡುತ್ತಿದೆಯೇ? ಎಂದು ಆಗಾಗ ಪರೀಕ್ಷಿಸಿರಿ. 10)ಆಟಿಕೆ ಹಾಳಾದರೆ ಅಥವಾ ರಿಪೇರಿ ಮಾಡಲಾಗದಿದ್ದರೆ ಅದನ್ನು ಕಿತ್ತೆಸೆಯಿರಿ.
ಆಟಿಕೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಖಂಡಿತ ಸಹಕಾರಿ. ಹಾಗಂತ ಮುಗ್ಧ ಮಕ್ಕಳಿಗೆ ಅಪಾಯಕಾರಿ ಆಟಿಕೆ ನೀಡಿದರೆ ಆಟದ ಬದಲು ಕಾಟವಾದೀತು. ನೆನಪಿರಲಿ, ಮಕ್ಕಳಿಗೆ ಹೆತ್ತವರು ಅಪಾಯರಹಿತ ಆಟಿಕೆ ನೀಡುವುದು ಪ್ರೀತಿ ನೀಡುವಷ್ಟೇ ಮುಖ್ಯ ಕರ್ತವ್ಯ.