ಆಟಿಯ ಸುತ್ತ ಮುತ್ತ - ಭಾಗ 2
ತುಳುವರಿಗೆ ನಾಲ್ಕನೆಯ ತಿಂಗಳು. ಇಂದು ನಾವು ಆಟಿಯನ್ನು ನಾನಾ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತೇವೆ. ಆಟಿದ ಕೂಟ, ಆಟಿದ ಲೇಸ್, ಆಟಿಡ್ ಕೆಸರ್ಡೋಂಜಿ ದಿನ, ಆಟಿದ ಅಟ್ಟಿಲ್, ಆಟಿದ ನೆಂಪು, ಆಟಿದ ವಣಸ್, ಆಟಿದ ಕಮ್ಮೆನ ಹೀಗೆ ಜನರ ಬೌದ್ಧಿಕ ಚಾತುರ್ಯದ ಆಧಾರದಲ್ಲಿ ಹೆಸರುಗಳಿದ್ದರೂ, ನಮ್ಮ ಹಿರಿಯರ ಕಾಲದ ಕಹಿ ಅಥವಾ ಕಷ್ಟ ಜೀವನದ ವಾಸ್ತವವನ್ನು ನೆನಪಿಸುವ ದಿನವಿದು. ಆಟಿ (ಕರ್ಕಾಟಕ) ಬಹಳ ಕಷ್ಟದ ತಿಂಗಳಾದುದರಿಂದ ನಮ್ಮ ಹಿರಿಯರಿಗೆ ಆಟಿ ಬರುತ್ತಲೇ ಭಯ ಆರಂಭಗೊಳ್ಳುತ್ತದೆ. ಎಲ್ಲ ಬವಣೆಗಳು ಕಳಚಿ ಯಾವಾಗ “ಸೋಣ” (ಸಿಂಹ ಮಾಸ) ತಿಂಗಳು ಬರಲಿಲ್ಲ ಎಂದು ಇದಿರು ನೋಡುವ, ರೋಗ ರುಜಿನಗಳು ಹೆಚ್ಚು ಪೀಡಿಸುವ ದಿನಗಳವು. ಇದಕ್ಕೆ ಕಾರಣ ಮಳೆಯ ಪ್ರಧಾನ ನಕ್ಷತ್ರಗಳಾದ ಪುಷ್ಯ ಮತ್ತು ಪುನರ್ವಸು ಆಟಿಯಲ್ಲೇ ಬರುತ್ತವೆ. ಅದರಿಂದಾಗಿ ವಿಪರೀತ ಮಳೆ, ಗಾಳಿ ಮಳೆ ಯೆಂದರೂ ತಪ್ಪಲ್ಲ. ಆಟಿ ನಿಷಿದ್ಧ ತಿಂಗಳು, ಆಟಿ ಕೆಟ್ಟ ತಿಂಗಳು ಎಂದು ಕೆಲವರು ಹೇಳುವುದುಂಟು. ಆದರೆ ಯಾವುದೇ ನಿಷಿದ್ಧ ಅಥವಾ ಕೆಡುಕು ಎಂಬುದು ಯಾವುದೇ ಕಾಲಮಾನಕ್ಕಿಲ್ಲ. ಪ್ರಕೃತಿಯ ನಿಯಮವನ್ನು ಯಾವ ಕಾಲಮಾನವೂ ಮೀರುವಂತಿಲ್ಲ. ಹೊರಗೆ ಹೋಗಲು ಆಗದೇ ಇರುವುದರಿಂದ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ.
ಆಟಿಯಲ್ಲಿ ನಮ್ಮ ಹಿರಿಯರ ಬದುಕು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನಾವು ತಿಳಿದಿರಬೇಕು. ಕೊರೊನಾವನ್ನು ನಾವೊಮ್ಮೆ ನೆನಪಿಸಿದರೆ ಅದು ಘನಘೋರ. ಆದರೆ ಹಿರಿಯರಿಗೆ ಆಟಿಯು ಕೊರೊನಾಕ್ಕಿಂತ ಹೆಚ್ಚು ಘೋರ ಎಂದು ಹೇಳಬಹುದು. ನಮಗಾದರೋ ವರ್ಷದ ಮುನ್ನೂರ ಅರುವತ್ತೈದು ದಿನಗಳೂ ಸಮಾನ. ವಿಪರೀತ ಬಿಸಿಲು, ವಿಪರೀತ ಮಳೆ, ವಿಪರೀತ ಚಳಿಯಿದ್ದರೂ ನಮ್ಮ ಬದುಕಿನಲ್ಲಿ ವ್ಯತ್ಯಯಗಳು ಬಹಳ ಕಡಿಮೆ. ಯಾಕೆಂದರೆ ಇಂದು ಜನ ಜೀವನದ ಮೂಲಭೂತ ಅಗತ್ಯಗಳಾದ ರಸ್ತೆ, ವ್ಯಾಪಾರ ಕೇಂದ್ರ, ಶಾಲೆ, ಆಸ್ಪತ್ರೆ, ಸಂಪರ್ಕ ಮಾಧ್ಯಮಗಳು ಸುಲಭ ಲಭ್ಯವಿವೆ. ಕೆಲವೆಡೆ ಸುನಾಮಿ, ಭೂಕುಸಿತ, ಭೂಜಾರುವಿಕೆ, ಭೂ ಕೊರೆತ, ಜಲಪ್ರವಾಹ, ಬಿಸಿ ಗಾಳಿ, ಶೀತಗಾಳಿ, ಹಿಮ ಪಾತ, ಹಿಮ ಪ್ರವಾಹ, ಕಟ್ಟಡ ಪತನಗಳಾಗುತ್ತವೆ. ಇಂದು ಸಾರ್ವಜನಿಕರ ಮತ್ತು ಸರಕಾರಗಳ ನೆರವು ಅಲ್ಲಿಗೆ ಧಾವಿಸುವುದಿದೆ. ಅಂದು ಆಟಿಯ ತಿಂಗಳಿನಲ್ಲಿ ಅನುಭವಿಸುವ ಕಷ್ಟಗಳನ್ನು ಹಂಚಲು ನಮ್ಮ ಹಿರಿಯರಿಗೆ ನೆರೆ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ. ಮಾಧ್ಯಮಗಳನ್ನು ತಲುಪಲಾಗದ ಕಾಲವದು. ದೂರವಾಣಿಯಿಲ್ಲ, ವಿದ್ಯುತ್ ಇಲ್ಲ, ರಸ್ತೆಯಿಲ್ಲ, ವಾಹನವಿಲ್ಲ, ವೈದ್ಯರಿಲ್ಲ, ಆಸ್ಪತ್ರೆಯಿಲ್ಲ ಹೀಗೆ ಅನೇಕ ಇಲ್ಲಗಳ ನಡುವಿನ ಅವರ ಬದುಕು ನಾನಾ ಬವಣೆಗಳ ರಾಶಿ.
ಪೂರ್ವಜರು ಅನುಭವಿಸಿದ ಆಟಿಯಲ್ಲಿ ಮಳೆ ವಿಪರೀತ. ಕೃಷಿ ಕಾಯಕಗಳಿರುವುದಿಲ್ಲ. ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿರುತ್ತಿದ್ದರು. ಇಂದಿನ ಸೆಂಟ್ರಿಂಗ್, ಪೈಂಟಿಂಗ್, ಬಡಗಿ ಕೆಲಸ ಇತ್ಯಾದಿ ಕೌಶಲ್ಯಾಧಾರಿತ ಕೆಲಸಗಳು ಬಹಳ ಕಡಿಮೆ. ಕಟ್ಟಡಗಳನ್ನು ಹೆಚ್ಚಾಗಿ ಸೋಗೆ, ಮುಳಿಹುಲ್ಲು, ಬಿದಿರುಗಳನ್ನು ಬಳಸಿ ನಿರ್ಮಿಸುತ್ತಿದ್ದರು. ಗೋಡೆ ಮಣ್ಣಿನದು. ಈ ಕೆಲಸಗಳನ್ನು ಮಳೆಗಾಲದಲ್ಲಿ ಮಾಡಲಾಗದು. ಆದುದರಿಂದ ಮಳೆಗಾಲದಲ್ಲಿ ಬಹುತೇಕ ಎಲ್ಲರೂ ಕೆಲಸವಿಲ್ಲದೆ ಮನೆಯಲ್ಲೇ ಇರಬೇಕಾಗುತ್ತಿತ್ತು. ಹಣ ಸಂಪಾದನೆ ಕಡಿಮೆ. ಅಂದಿನದು ಅವಿಭಜಿತ ಕುಟುಂಬಗಳು ಎಂಬುದನ್ನು ನೆನಪಿಸಬೇಕು. ಜೊತೆಗೆ ಕುಟುಂಬ ಯೋಜನೆಯ ಕಾಳಜಿಯೂ ಇರಲಿಲ್ಲ. ಒಂದೊಂದು ಮನೆಯಲ್ಲಿ 20-30-40 ಹೀಗೆ ಜನರಿರುತ್ತಿರುವುದನ್ನೂ ಕಾಣಬಹುದಿತ್ತು. ಬೇಸಗೆಯಲ್ಲಿ ಮಿಗತೆಯಾದ ಆಹಾರವಸ್ತುಗಳನ್ನು ಆಟಿಗಿರಲಿ ಎಂದು ಶೇಖರಿಸುತ್ತಿದ್ದರು. ಹೆಚ್ಚು ಜನರಿದ್ದ ಕುಟುಂಬಗಳಿಗೆ ಈ ದಾಸ್ತಾನು ಸಾಲದೆ, ತಿಂಗಳ ಬಹುದಿನ ಆಹಾರಕ್ಕಾಗಿ ಪರದಾಡುತ್ತಿದ್ದರು. ಸಾಲವಾದರೂ ತರೋಣವೆಂದರೆ ಸಾಲ ಕೊಡುವವರೂ ಇರುತ್ತಿರಲಿಲ್ಲ. ಸಾಲ ವಹಿವಾಟು ಶ್ರೀಮಂತರಿಗೆ ಮೀಸಲು. ಹಸಿವಿನ ಬಾಧೆಯಿಂದ ಮಕ್ಕಳು ಕೂಗುವಾಗ ಹೆತ್ತವರಿಗೆ ಆಗುವ ನೋವನ್ನು ಯೋಚಿಸಿದರೆ ಮನಸ್ಸು ಕರಗದಿರದು. ವಾತಾವರಣ ಶೀತವಾಗಿ ಕೆಮ್ಮು, ಜ್ವರ, ಗಂಟಲು ಕೆರೆತ, ಸಿಂಬಳ ಬಾಧೆಗಳು ಸಾಮಾನ್ಯವಾಗಿದ್ದುವು. ಇಂದು ಕಾಣುವ ಮಹಾ ಕಾಯಿಲೆಗಳು ಅಂದೂ ದೊಡ್ಡ ಪ್ರಮಾಣದಲ್ಲಿದ್ದುವು. ಗಿಡ ಮೂಲಿಕೆಗಳೇ ಅವರಿಗೆ ಔಷಧ.
ಆಟಿಯು ಸೃಷ್ಟಿಯ ತಿಂಗಳು ಎನ್ನುತ್ತೇವೆ. ಆಟಿಯಲ್ಲಿ ನಾನಾ ಗಿಡಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಸುವು, ಹರಿವೆ, ಚಾಗಟೆ, ಪುಂಡಿ ಕೇನೆ, ಒಂದೆಲಗ ಇತ್ಯಾದಿ. ಬಹುತೇಕ ಗಿಡ ಮರಗಳು ಹುಲುಸಾಗಿ ಚಿಗುರುತ್ತವೆ. ಬಾಳೆ, ಹಲಸು, ಅನಾನಸು, ದೀವಿ ಹಲಸು, ಪೇರಳೆ, ಕಾನ ಕಲ್ಲಟೆ, ನೋಕಟ್ಟೆ, ಇವೆಲ್ಲ ಆಟಿಯಲ್ಲೂ ಇರುತ್ತವೆ. ಎಲ್ಲರಿಗೂ ಇವು ಆಹಾರವಾಗಿ ಬಳಕೆಯಾಗುತ್ತಿತ್ತು. ಬೇಸಗೆಯ ಅಂತ್ಯದಲ್ಲಿ ಅಥವಾ ಮಳೆಯ ಆರಂಭದಲ್ಲಿ ಉಪ್ಪಿನಲ್ಲಿ ಹಾಕಿದ ಸೊಳೆ ದೋಸೆಯಾಗಿ, ರೊಟ್ಟಿಯಾಗಿ, ಹಬೆ ಉಂಡುಳುಕವಾಗಿ, ಪಲ್ಯವಾಗಿ ಅವರಿಗೆ ಹೊಟ್ಟೆ ತುಂಬಿಸುತ್ತಿತ್ತು. ಹಲಸಿನ ಬೀಜ, ಗೆಣಸು, ಮರಗೆಣಸು, ಹಪ್ಪಳ, ಸೌತೆ, ಸಿಹಿ ಕುಂಬಳ, ಬೂದು ಕುಂಬಳ ಇವೇ ಇತರ ಆಹಾರ. ಕಡಿಮೆ ಅನ್ನ, ಹೆಚ್ಚು ಪಲ್ಯ ತಿಂದು ಜನ ಬದುಕುತ್ತಿದ್ದರು. ಅಕ್ಕಿಯೇ ಇಲ್ಲದ ದಿನಗಳೂ ಇರುತ್ತಿದ್ದುವು. ಯಾರಾದರೂ ಮನೆಯವರು ಅರ್ಧ ಸೇರು ಅಕ್ಕಿ ಕೊಟ್ಟರೆ ಅದನ್ನು ಬಟ್ಟೆಯಲ್ಲಿ ಕಟ್ಟಿ ಕುದಿಯುವ ನೀರಿನಲ್ಲಿ ಹತ್ತರಿಂದ ಹದಿನೈದು ನಿಮಿಷ ಇರಿಸಿ ಆ ಕುದಿದ ನೀರನ್ನು ತಣಿಸಿ ಕುಡಿದು, ಅಕ್ಕಿಯನ್ನು ಮುಂದಿನ ದಿನಗಳಿಗೆ ತೆಗೆದಿಡುತ್ತಿದ್ದರು. ಅಕ್ಕಿ ಕುದಿಸಿದ ತಿಳಿಯೆ ಅಂದಿನ ಗ್ಲುಕೋಸ್. “ದಡ್ಡರಿ” ಎಂದು ಕೊಳಕೆ ಬೆಳೆಯಿಂದ ತೆಗೆದಿಡುತ್ತಿದ್ದರು. ನಿಜವಾಗಿಯೂ ಇದು ಊಟದ ಅಕ್ಕಿಯಲ್ಲ. ಸ್ವಲ್ಪ ಕಹಿಯಾದುದರಿಂದ ರುಚಿಸದು. ಆಟಿಯ ದಿನಗಳಲ್ಲಿ ಇದು ಕೂಡಾ ಗಂಜಿಗೆ ಬಳಕೆಯಾಗುತ್ತಿತ್ತು. ಅಂದು ಇಂದಿನಂತೆ ಉಚಿತ ರೇಷನ್ ಇರಲಿಲ್ಲ. ಅಂಗಡಿಯಿಂದ ಗೋಧಿ ತಂದರೆ ಅದನ್ನು ಅರೆದು ಅಕ್ಕಿಯೊಂದಿಗೆ ಮಣ್ಣಿಯಂತೆ ಬೇಯಿಸಿ ತೆಂಗಿಕಾಯಿ ತುರಿ ಹಾಕಿ ಉಪ್ಪು ಬೆರೆಸಿ ಕುಡಿಯುತ್ತಿದ್ದ ಕಷ್ಟದ ದಿನಗಳವು. ಹಲಸಿನ ಬೀಜದಿಂದ ಪಲ್ಯ, ಪಾಯಸ, ಹೋಳಿಗೆ, ಸಾಂಬಾರು, ಸಾಂತಾಣಿ, ಉಂಡೆ, ಬೇಯಿಸಿ ಗುದ್ದಿ ಪುಡಿ ಮಾಡಿ ಒಗ್ಗರಣೆ.. ಹೀಗೆ ಬಹುವಿಧ ತಿಂಡಿಗಳು. ಆಟಿ ತಿಂಗಳಿಗಿರಲಿ ಎಂದು ಬೇಸಗೆಯ ಅಂತ್ಯದಲ್ಲಿ ನಾಲ್ಕಾರು ಮಂಡೆ (ಮಣ್ಣಿನ ಹಂಡೆ) ಗಳಲ್ಲಿ ಸೊಳೆಯನ್ನು ಉಪ್ಪು ಬೆರಸಿ ಶೇಖರಿಸುತ್ತಿದ್ದರು. ಬೇರೆಯವರಿಗೂ ಕೊಡುತ್ತಿದ್ದರು. ಮಳೆಗಾಲದಲ್ಲಿ ಕರು ಕುರು ಎಂದು ತಿನ್ನಲು ಹಲಸಿನ ಹಪ್ಪಳ, ಗೆಣಸಿನ ಹಪ್ಪಳ, ಗೋಧಿ ಹಪ್ಪಳ, ಮರಗೆಣಸಿನ ಹಪ್ಪಳ, ಬಾಳೆ ಹಪ್ಪಳ, ದೀವಿ ಹಲಸಿನ ಹಪ್ಪಳ, ಬಟಾಟೆ ಹಪ್ಪಳ, ಸಂಡಿಗೆಗಳನ್ನು ಮಾಡಿ ವಿವಿಧ ಡಬ್ಬಿಗಳಲ್ಲಿ ಪೇರಿಸಿಡುತ್ತಿದ್ದರು. ಹಲಸು ಮತ್ತು ಮಾವಿನ ಮಾಂಬಳಗಳೂ ಆಟಿಯಲ್ಲಿ ಬಳಕೆಯಾಗುತ್ತಿದ್ದುವು.
ಸುಮಾರು ಅರುವತ್ತು ವರ್ಷಗಳ ಹಿಂದೆ ಹೋದರೆ ಅಂದಿನ ಕಷ್ಟದ ಸ್ಥಿತಿ ನೆನಪಿಗೆ ಬರುತ್ತವೆ. 1964ರ ಆಸು ಪಾಸಿನ ನನ್ನ ಅನುಭವದ ಸಮಯದಲ್ಲಿ ಬರಗಾಲವಿತ್ತು. ಅದು ಒಂದು ಹಿಡಿ ಅಕ್ಕಿಗೆ ಪರದಾಡಿದ ಕಾಲ. ಒಂದು ಸೇರು ಅಕ್ಕಿಗೆ ಐದಾರು ರೂಪಾಯಿ ಕೊಟ್ಟರೂ ಸಿಗದ ಕಾಲ. ಆಗ ಗೋಧಿ, ಮರಗೆಣಸು, ಸಿಹಿ ಗೆಣಸು, ಪಚ್ಚೆಸರು, ಜೋಳ, ಬಾಳೆ ಮುಂತಾದುವು ಸ್ವಲ್ಪ ಅಗ್ಗ. ಗೋಧಿ ವಿದೇಶದಿಂದ ಬಹಳ ಕಡಿಮೆಗೆ ಬರುತ್ತಿತ್ತು. ಉದ್ದು, ಹುರುಳಿ, ಪಚ್ಚೆಸರನ್ನು ರೈತರು ಎರಡನೇ ಕಟಾವು ಆದ ನಂತರ ಗದ್ದೆಯಲ್ಲಿ ಬಿತ್ತುತ್ತಿದ್ದರು. ಬೆಳೆಸಿದ ಹೆಸರು ಉದ್ದು ಹುರುಳಿಗಳನ್ನು ಕಡಿಮೆಗೆ ಮಾರುತ್ತಿದ್ದರು. ಇಂದು ಅವು ದುಬಾರಿ. ಇವನ್ನು ಬೆಳೆಸುವವರಿಲ್ಲ. ಒಂದು ರೂಪಾಯಿಗಿಂತ ಕಡಿಮೆಗೆ ಇತರೆ ದವಸ ಧಾನ್ಯಗಳು ಸಿಕ್ಕರೆ ಅಕ್ಕಿ ಬಹಳ ದುಬಾರಿಯಾಗಿತ್ತು. ಇಂದು ಹಲಸು ನಮಗೆ ಹೊಲಸು. ಅದರ ಬೀಜ ತಿಂದರೆ ದುರ್ಗಂಧಯುಕ್ತ ಆಪಾನವಾಯು ಬರುತ್ತದೆ ಎಂದು ಹೇಸುವವರೇ ಅಧಿಕ. ಹಲಸಿನ ಬೀಜ ಪೌಷ್ಠಿಕ ಆಹಾರ ಎಂಬುದರಲ್ಲಿ ವಿಶೇಷಣವಿಲ್ಲ. ಮಾಂಬಳ ನೋಡದ ಮಕ್ಕಳೆಷ್ಟೋ ಮಂದಿ............
(ಮುಂದುವರಿಯುತ್ತದೆ)
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ