ಆಟಿಯ ಸುತ್ತ ಮುತ್ತ - ಭಾಗ 3
ನಮ್ಮ ಇಂದಿನ ಆಹಾರ ಕ್ರಮ ಬಹಳ ವಿಚಿತ್ರ. ನಮಗೆ ಪಿಝ್ಝಾ, ಬರ್ಗರ್, ಮಂಚೂರಿ, ಗೋಬಿ, ಪಾನಿ ಪೂರಿ, ನೂಡೆಲ್ಸ್ ಗಳಂತಹ ಆಹಾರವೇ ಇಷ್ಟ. ಹಣ್ಣುಗಳಲ್ಲೂ ಪ್ರಾದೇಶಿಕತೆ ದೂರವಾಗಿದೆ. ನಮ್ಮ ನೂತನ ಆಹಾರ ಕ್ರಮಗಳು ನಮ್ಮ ಪಚನ ಕ್ರಿಯೆಗೆ ಸಹಜವಾಗಿವೆಯೆಂದು ಹೇಳುವಂತಿಲ್ಲ. ನಮಗೆ ಬಾಳೆ ಹಣ್ಣು ಬೇಡ. ಆಪಲ್ ಬೇಕು, ನೇರಳೆ ಬೇಡ ಖರ್ಜೂರ ಬೇಕು, ಪೇರಳೆ ಬೇಡ ದಾಳಿಂಬೆ ಬೇಕು. ಹೀಗೆ ಯಾವುದೇ ಪ್ರಾದೇಶಿಕ ಹಣ್ಣುಗಳು ನಮಗೆ ಎಲರ್ಜಿ. ನಮ್ಮ ಹಲಸು ಹತ್ತು ಹಲವು ರೀತಿಯಲ್ಲಿ ಆರೋಗ್ಯ ವರ್ಧಕ ಮತ್ತು ರೋಗ ನಿರೋಧಕ. ಆದರೆ ನಮಗೆ ಹಲಸೆಂದರೆ ವಾಕರಿಕೆ. ಹಣ ಮಾಡುವ ದಂಧೆಯಲ್ಲಿ ನಮ್ಮ ವ್ಯವಹಾರಗಳು ವಿಷಯುಕ್ತಗೊಳ್ಳುತ್ತಿವೆ. ಮಣ್ಣಿಗೆ ಸೇರಿಸುವುದು ವಿಷ, ಗಿಡಗಳಿಗೆ ರೋಗ ಬಾರದಂತೆ ಸಿಂಪಡಿಸುವುದು ವಿಷ. ಹಣ್ಣು ತರಕಾರಿಗಳು ಕೆಡದಂತಿರಲು ವಿಷಯುಕ್ತ ನೀರಿನಲ್ಲಿ ಮುಳುಗಿಸಿ ತೆಗೆಯುತ್ತಾರೆ. ಕಾಯಿಗಳು ಬೇಗ ಮಾಗಲು ವಿಷಭರಿತ ಹಾರ್ಮೋನ್ ಇಂಜೆಕ್ಟ್ ಮಾಡಲಾಗುತ್ತಿದೆ. ಆದರೂ ನಮಗೆ ವಿಷ ಚುಚ್ಚಿದ ರುಚಿಗೆಟ್ಟ, ಹದಗೆಟ್ಟ ಪರವೂರಿನ ಹಣ್ಣುಗಳೇ ಬೇಕು. ವಿಷರಹಿತ ಮತ್ತು ರಾಸಾಯನಿಕ ಮುಕ್ತವಾದ ನಮ್ಮ ಕಾಡು ಮಾವು ಯಾರಿಗೂ ಇಷ್ಟವಿಲ್ಲ. ನಾವು ಸ್ಥಳೀಯ ಆಹಾರವನ್ನೇ ಸೇವನೆ ಮಾಡಬೇಕು.
ಆಟಿಯಲ್ಲಿ ಅಧಿಕ ಕ್ರಿಮಿಕೀಟಗಳು ಹುಟ್ಟುತ್ತವೆ, ಇದರಿಂದಾಗಿ ಕೃಷಿಗೆ ರೋಗ ಜಾಸ್ತಿ. ನೀರು ಜಾಸ್ತಿಯಾಗಿಯೂ ಮರಗಿಡಗಳು ಸಾಯುವುದಿದೆ. ಇತರ ಹೊಸ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುವುದೂ ಇವೆ. ಈ ಗಿಡಗಳಲ್ಲಿ ಹೆಚ್ಚಿನವುಗಳಿಗೆ ಔಷಧದ ಗುಣವಿರುತ್ತದೆ. ತುಳುವಿನಲ್ಲಿ ಹೇಳುವ ‘ತಜಂಕ್’ (ಚಾಗಟೆ), “ತೇವು (ಕೆಸುವು)’, ‘ತಿಮರೆ (ಒಂದೆಲಗ),’ ‘ನುರ್ಗೆ’, ಕಲ್ ಶುಂಟಿ, ‘ಗುದನೆ’, ‘ಮರತೇವು’, ’ಪುಂಡಿ ಕೇನೆ’, ನೋಕಟ್ಟೆ ಕಾಯಿ, ಕಣಿಲೆ (ಬಿದಿರಿನ ಮೊಳಕೆ)... ಮುಂತಾದುವು ಈ ವರ್ಗಕ್ಕೆ ಸೇರಿವೆ. ರೈತ ಮಿತ್ರನಾದ ಎರೆಹುಳು ಕೂಡಾ ಅತ್ಯಧಿಕ ಮರಿಗಳನ್ನಿಡುತ್ತವೆ. ಅವು ಸೊಗಸಾಗಿ ಬೆಳೆಯುತ್ತವೆ, ಮಣ್ಣನ್ನು ಫಲಭರಿತಗೊಳಿಸಲು ಸಹಕರಿಸುತ್ತವೆ. ಎರೆಹುಳವನ್ನು ತುಳುವಿನಲ್ಲಿ ನಕ್ಕುರು ಎನ್ನುವರು.
ನಕ್ಕುರಿನ ಅಹಂಕಾರದ ಕುರಿತು ಒಂದು ಕಥೆಯಿದೆ. ಬೆಳೆದು ಕೊಬ್ಬಿದ ನಕ್ಕುರಿಗೆ ಮದುವೆಯಾಗಲು ಆಸೆಯಾಯಿತು. ತನಗೆ ಸರಿಸಮಾನ ಹೆಣ್ಣು ಯಾರು ಇರುವರೆಂದು ಹುಡುಕಿತು. ಸರ್ಪಿಣಿ ಕಾಣಿಸಿದಳು. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿತು. ಸರ್ಪಿಣಿ ಅಪ್ಪ ನಾಗರಾಜನಿಗೆ ವಿಷಯ ತಿಳಿಸಿತು. ನಕ್ಕುರಿಗೆ ಸರ್ಪಿಣಿಯನ್ನು ಮದುವೆ ಮಾಡಿ ಕೊಡಲು ನಾಗರಾಜ ಒಪ್ಪಿದ. ಮದುವೆಯನ್ನು ಬೇಸಗೆಯಲ್ಲಿ ಮಾಡಿ ಕೊಡುವುದಾಗಿ ಹೇಳಿತು. ನಕ್ಕುರು ಸಮ್ಮತಿಸಿತು. ಆದರೆ ಬೇಸಗೆಯಲ್ಲಿ ನಕ್ಕುರು ಕೃಷವಾಗಿ ದುರ್ಬಲಗೊಳ್ಳುತ್ತವೆ. ಮದುವೆಯ ಆಸೆಯನ್ನು ಕೈಬಿಡುತ್ತದೆ. ಮನುಷ್ಯರಿಗೂ ಸ್ವಲ್ಪ “ಪಸೆ” ಆದರೆ ಅಹಂಕಾರ ಬರುವುದುಂಟು. ಅಸಾಧ್ಯವಾದುದನ್ನು ಪಡೆಯಲು ಹಾತೊರೆಯುವುದೂ ಇದೆ. ಮತ್ತೆ “ಪಸೆ” ಜಾರಿದಾಗ ಪಶ್ಚಾತ್ತಾಪಿಸುವುದೂ ಇದೆ.
ಆರೋಗ್ಯ ರಕ್ಷಣೆಗೆ ನಮ್ಮ ಹಿರಿಯರು ಹೆಚ್ಚು ಗಮನ ಕೊಡುತ್ತಿದ್ದರು. ಪುಂಡಿ ಕೇನೆ ಮಳೆಗಾಲದಲ್ಲಿ ಗುಡ್ಡಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಅದನ್ನು ಅಂಬಟೆ ಸೊಪ್ಪಿನೊಂದಿಗೆ ಬೇಯಿಸಿ ತಣಿಸಿ ಸಿಪ್ಪೆ ತೆಗೆದು ಸ್ವಲ್ಪ ಅಕ್ಕಿ ಸೇರಿಸಿ ರುಬ್ಬಿ ಪುಂಡಿ ಮಾಡಿ ತಿನ್ನುತ್ತಿದ್ದರು. ಇದು ಬಹಳ ಪೌಷ್ಟಿಕ ಮತ್ತು ಹಸಿವು ನಿವಾರಕ. ಪಚ್ಚೆಸರು ತಂಪು. ಪಚ್ಚೆಸರಿಗೆ ಸ್ವಲ್ಲ ಅಕ್ಕಿ ಸೇರಿಸಿ ಪಾಯಸದಂತೆ ಮಾಡಿ ಸೇವಿಸುತ್ತಿದ್ದರು. ನಮ್ಮ ಹಿರಿಯರು ಸೇವಿಸುತ್ತಿದ್ದ ನಾನಾ ಸೊಪ್ಪು, ಚಿಗುರು ಮತ್ತು ಗೆಡ್ಡೆಗಳು, ಹಳಸಿನ ಸೊಳೆ, ಬೀಜ, ನುಗ್ಗೆ ಸೊಪ್ಪು ಮೊದಲಾದುವು ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ.
ಹಿಂದಿನ ದಿನವೇ ಹಗ್ಗ ಕಟ್ಟಿ ಗುರುತಿಸಿದ ಹಾಲೆ ಮರದಿಂದ ಮುಂಜಾನೆ ರಸವನ್ನು ತೆಗೆದು ಮನೆಗೆ ತಂದು ಕಾಳು ಮೆಣಸು, ಬೆಳ್ಳುಳ್ಳಿ, ಬಿಳಿ ಕಲ್ಲು ಸೇರಿಸಿ ಒಗ್ಗರಣೆ ಹಾಕಿ ಕಷಾಯದಂತೆ ಕುಡಿಯುತ್ತಿದ್ದರು. ಈಗಲೂ ಪಾಲೆ ಕಷಾಯ ಸೇವಿಸುವ ಸಂಪ್ರದಾಯವಿದೆ. ಹಾಲು ತೆಗೆಯಬೇಕಾದ ಪಾಲೆಮರದ ಬದಲು, ಮುಂಜಾವ ಅರೆನಿದ್ದೆ ಮತ್ತು ನಸುಕಿನಲ್ಲಿ ಮರ ಗುರುತಿಸುವಾಗ ಎಡವಟ್ಟಾದ ಸಂದರ್ಭದಲ್ಲಿ ಬೇರೆ ಮರದ ಹಾಲನ್ನು ಪಾಲೆ ಮರದ ಹಾಲೆಂದು ಭ್ರಮಿಸಿ ಸೇವಿಸಿ ಸಾವುಗಳಾದ ಸುದ್ದಿಗಳೂ ಬರುತ್ತವೆ. ಹಾಲು ತೆಗೆಯುವವರು ಬಹಳ ಹುಷಾರಿರಬೇಕು. ಪಾಲೆ ಕಷಾಯ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಸಂಶೋಧಕರ ಅಭಿಪ್ರಾಯ.
ಕಾರ್ತಿಕ ಮಾಸದಲ್ಲಿ ನಾಟಿಯ ಮುಕ್ತಾಯದಲ್ಲಿ “ಕಾಪು” ಕಟ್ಟುವ ಕ್ರಮವಿದೆ. ಈ ಕಾಪು ಹಕ್ಕಿಗಳಿಂದ ಮತ್ತು ಕ್ರಿಮಿ ಕೀಟಗಳಿಂದ ಬೆಳೆಯನ್ನು ರಕ್ಷಿಸುತ್ತವೆ. ಕಾಪು ಕಟ್ಟಲು ಬಳಸುವ ಕಾಸರಕನ ಕೊಂಬೆ ತನ್ನ ಕಹಿಯನ್ನು ಹೊಲದ ನೀರಿಗೆ ಬಿಡುವುದರಿಂದ ಮಣ್ಣಿನಲ್ಲಿ ಕ್ರಿಮಿಗಳು ಹುಟ್ಟುವುದಿಲ್ಲ ಎಂಬುದು ವಾಡಿಕೆಯ ಮಾತು.
ಆಟಿಯಲ್ಲಿ ದುಡಿಮೆ ಸಿಗದೆ ಕಾರ್ಮಿಕರು ಬಳಲುವರೆಂದು ತಿಳಿದು ಊರ ಶ್ರೀಮಂತರು ಮತ್ತು ನಗರದ ಶ್ರೀಮಂತರು ದಾನ ಕೊಡುತ್ತಿದ್ದರು. ಹಣ, ವಸ್ತ್ರ, ದಿನಸಿ, ತಿಂಡಿ ಹೀಗೆ ದಾನ ಕೊಡುವವರಿದ್ದರು. ಆ ದಾನ ಸ್ವೀಕರಿಸಲು ದಂಡು ದಂಡಾಗಿ ಜನ ಬರುತ್ತಿದ್ದರು. ಸಿಗುವ ದಾನವು ಕುಟುಂಬಕ್ಕೆ ಸಣ್ಣ ಪರಿಹಾರವೇ ಹೊರತು ಭಾರೀ ಸಹಾಯವಲ್ಲ. ಹಾಗೆ ದಾನ ನೀಡುವಾಗ ಹಿರಿಯರಿಗೆ ಒಂದು ಸೇರು ಕೊಟ್ಟರೆ ಕಿರಿಯರಿಗೆ ಅರ್ಧ ಸೇರು ಎಂಬ ದಾಮಾಶಯದಲ್ಲಿ ಕೊಡುತ್ತಿದ್ದರು. ಒಮ್ಮೆ ದಾನ ಪಡೆದವನು ಮತ್ತೆ ಸರದಿ ಸಾಲಿನಲ್ಲಿ ಕೈ ಚಾಚಿ ನಿಲ್ಲದಿರುವಂತೆ ಎಚ್ಚರಿಕೆ ಕ್ರಮವಾಗಿ ಬೆರಳಿಗೆ ಶಾಯಿ ಗುರುತು ಹಾಕುತ್ತಿದ್ದರು, ಇಂದು ಮತದಾನದಲ್ಲಿ ಶಾಯಿ ಗುರುತು ಹಾಕುವುದನ್ನು ನಾವು ಸ್ಮರಿಸಬಹುದು.
ಮರಣಿತ ಹಿರಿಯರಿಗೆ ಆಟಿಯಲ್ಲಿ ಸರಳವಾಗಿ ಅಗೆಲು ನೀಡುವ ಸಂಪ್ರದಾಯ ಕೆಲವರಲ್ಲಿದೆ. ಅದೇ ರೀತಿ ನೂತನ ಸೊಸೆಯನ್ನು ತವರಿನಲ್ಲಿ ಕುಳಿತುಕೊಳ್ಳಲು ತವರಿಗೆ ಕಳುಹಿಸುವ ಕ್ರಮವಿದೆ. ತುಳುವಿನಲ್ಲಿ “ಆಟಿ ಕುಲ್ಲುನೆ” ಎಂದು ಹೇಳುವರು. ಆಟಿಯ ಹೊಸ ವಾತಾವರಣದಿಂದ ಅನಾರೋಗ್ಯ ಬರಬಾರದು, ಆಟಿಯಲ್ಲಿ ಗರ್ಭಧಾರಣೆಯಾಗಿ ಏಪ್ರಿಲ್ ಯಾ ಮೇ ತಿಂಗಳ ಸೆಖೆಗೆ ಹೆರಿಗೆಯಾಗಬಾರದು ಎಂಬ ಚಿಂತನೆ “ಆಟಿ ಕುಲ್ಲುನೆ” ಯ ಆಶಯವೆನ್ನುವರು. ತವರಿಗೆ ಹೋಗುವಾಗ ಮತ್ತು ತವರಿನಿಂದ ಸೊಸೆಯನ್ನು ಕರೆ ತರುವಾಗ ಉಭಯ ಕಡೆ ಸರಳವಾದ ಸನ್ಮಾನಗಳು ನಡೆಯುತ್ತವೆ. ಇದೇ ಮಾಮಿ ಸಂಮಾನವಿರಬೇಕು. ಆಟಿಯಲ್ಲಿ ಯಾವುದೇ ದೈವಗಳಿಗೆ ನೇಮವಿರುವುದಿಲ್ಲ. ಆದರೆ ರಾಹು, ಗುಳಿಗ ಮತ್ತು ಕಲ್ಲರ್ಟಿಗಳಿಗೆ ಅಗೆಲು ಹಾಕುವ ಪರಿಪಾಠವಿದೆ. ಆಟಿಯಲ್ಲಿ ದೈವಗಳು ಘಟ್ಟಕ್ಕೆ ಹೋಗುತ್ತವೆ, ಹಾಗಾಗಿ ಆಟಿಯಲ್ಲಿ ದೈವಗಳಿಗೆ ಸೇವೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ದೈವ ಶಕ್ತಿಯಿದ್ದೇ ಇರುತ್ತದೆ. ಘಟ್ಟಕ್ಕೆ ಹೋಗುತ್ತವೆ ಎಂದರೆ ಗುಡ್ಡ ಹತ್ತಿವೆ ಎಂದರ್ಥವಲ್ಲ, ದೈವಗಳು ಅವರ ಪೂರ್ವ ಲೋಕಕ್ಕೆ ಹೋಗಿರುತ್ತಾರೆ, ಭೂಮಿ ಮತ್ತು ಸ್ವರ್ಗಗಳ ನಡುವೆ “ಮಾಯಕ” ಎಂಬ ಲೋಕವಿದೆ. ಈ ಲೋಕದಲ್ಲಿದ್ದು ಭಕ್ತರಿಗೆ ಅನುಗ್ರಹಿಸುತ್ತಾರೆ ಎಂಬ ವಾದವೂ ಇದೆ. ಪರಿಸರದಲ್ಲಿ ಹೂವಿಗೂ ತತ್ವಾರವಿರುವುದರಿಂದ ದೈವ ಮಣೆಗಳಿಗೆ ಅಥವಾ ದೈವ ಮಂಚಗಳಿಗೆ ಹೂ, ದೀಪ ಇರಿಸುತ್ತಿಲ್ಲ. ಸಲಕರಣೆಗಳ ಜೋಡಣೆ ಕಷ್ಟವಾಗಿದ್ದುದರಿಂದ ದೈವಗಳಿಗೆ ಸೇವೆ ನಡೆಸದ ಪರಿಪಾಠ ಬೆಳೆಯಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಆಟಿಯಲ್ಲಿ “ಆಟಿದ ಕಳಂಜ” ಎಂಬ ವೇಷದ ತಿರುಗಾಟವಿದೆ. ಇದು ದೈವ ದೇವರುಗಳ ಸಾಲಿಗೆ ಸೇರದ ಆಟಿ ತಿಂಗಳಿಗೆ ಮೀಸಲಾದ ನರ್ತನ ಪ್ರಕಾರ ಎನ್ನಲಾಗುತ್ತದೆ. ಆಟಿಯ ತಿಂಗಳಲ್ಲಿ ದೈವ ನರ್ತನವಿಲ್ಲದಿರುವುದರಿಂದ ದೈವ ನರ್ತಕರು ಮನೆ ಮನೆಗೆ ಸಣ್ಣ ಹುಡುಗನನ್ನು ಕಳಂಜನ ವೇಷ ತೊಡಿಸಿ ತಿರುಗಾಡುತ್ತಿದ್ದರು. ಕಳಂಜನ ಹಾಡುಗಳಲ್ಲಿ (ಪಾಡ್ದನ) “ಆಟಿ ಕಳಂಜೆ ಆಟಿದ ಮಾರಿ ಕಳೆವೆ” ಎಂದು ಉಲ್ಲೇಖವಿದೆ. ಆಟಿ ಊರಿಗೆ ಮಾರಕ. ಮಾರಕಕ್ಕೆ ಕಾರಣವಾದುವುಗಳನ್ನು ಕಳಂಜ ಕಳೆಯುತ್ತಾನೆ. ಅದಕ್ಕಾಗಿ ಆಟಿ ಕಳಂಜ ಮನೆಗೆ ಬಂದಾಗ ಪಡಿ ಅಕ್ಕಿ, ತೆಂಗಿನ ಕಾಯಿ ನೀಡಿ ಮಾರಿ ಕಳೆಯಿರಿ ಎಂದು ಹೇಳಲಾಗುತ್ತಿತ್ತು. ಕಳಂಜ ಕರಾವಳಿಯ ಒಂದು ಕಲಾ ಪ್ರಕಾರ. ಕಳಂಜನಿಗೆ ಲಿಂಗವಿಲ್ಲ. ಪುಲ್ಲಿಂಗ ನಪುಂಸಕ ಲಿಂಗವಾಗಿ ಕಳಂಜನನ್ನು ಗುರುತಿಸುವುದಿಲ್ಲ. ಆದರೂ ಹುಡುಗ ವೇಷ ಹಾಕುವುದರಿಂದ ಅವನು, ಇವನು ಎನ್ನುತ್ತೇವೆ. ಕಳಂಜನಿಗೆ ವೇಷವಿದೆ. ಆಭೂಷ ಆಭರಣಗಳಿಲ್ಲ. ವಸ್ತ್ರದ ಒಳ ಉಡುಪು, ಹೊರ ಉಡುಪು ಮತ್ತು ಶೃಂಗಾರದಲ್ಲಿ ತೆಂಗಿನ ಎಳೆಯ ಗರಿಗಳಿಗೆ ವಿಶೇಷ ಸ್ಥಾನ. ಕೆಲವೆಡೆ ಕಳಂಜ ಬರುವ ಮೊದಲು ಒಲೆಯ ಬೂದಿಯಿಂದ ಲಡ್ಡು ಮಾಡುವರು. ಕಳಂಜ ಮನೆಗೆ ಬಂದು ನರ್ತಿಸಿ ಹೊರಡುವಾಗ ಅವನಿಗೆ ಮನೆಯೊಡತಿ “ದಾನ” ಕೊಡುತ್ತಾರೆ. ಆಗ ಕಳಂಜ ಅಂಗಳದ ಬದಿಯಲ್ಲಿದ್ದ ಯಾವುದಾದರೂ ಸಣ್ಣ ಗಿಡವನ್ನು ಕಿತ್ತು ಓಡುವುದುಂಟು. ಓಡುತ್ತಿರುವ ಕಳಂಜನಿಗೆ ಮನೆಯವರು ಬೂದಿಯ ಲಡ್ಡುಗಳನ್ನು ಎಸೆಯುತ್ತಾರೆ. ಈ ಕ್ರಮ “ಮಾರಿ ಗಿಡಪ್ಪುನ” ಎಂದು ಪ್ರಚಲಿತವಾಗಿದೆ. ಮನೆಯವರಿಗೆ ಮಾರಿ ಓಡಿಸಿದ ತೃಪ್ತಿ ದೊರೆತು ನಿರಾಳರಾಗುತ್ತಾರೆ. ನಂಬಿಕೆಯೇ ದೇವರಲ್ಲವೇ?
ನಮ್ಮ ಹಿರಿಯರಿಗೆ ಆಟಿಯೆಂದರೆ ನಿರಾಸಕ್ತಿ. ನಮಗೆ ಆಟಿಯೆಂದರೆ ಆಸಕ್ತಿ. ಆಟಿಯನ್ನು ಹಬ್ಬವೆಂದು ಪರಿಗಣಿಸಿ ಗಮ್ಮತ್ ಮಾಡುವ ದಿನಕ್ಕಾಗಿ ಆಟಿಯನ್ನು ಸ್ವಾಗತಿಸುತ್ತೇವೆ. ಆಟಿಯು ಒಂದು ದಿನದ ಹಬ್ಬವಾಗಿ ಉಳಿಯದೆ ನಿತ್ಯದ ಬದುಕಿಗೆ ಮಾರ್ಗದರ್ಶಕ ವಾಗಬೇಕು. ಹಿರಿಯರ ಬದುಕಿನ ವಾಸ್ತವಿಕ ಕಹಿಯನ್ನು ಅರ್ಥೈಸಿ ಮುಂದಿನ ದಿನಗಳು ಸಿಹಿಯಾಗಿರುವಂತೆ ಎಚ್ಚರದಿಂದಿರಬೇಕು. ಪರಿಸರವನ್ನು ನಂಬಿ ಬದುಕುತ್ತಿದ್ದ ಅವರ ಮುಂದೆ ಪರಿಸರ ನಾಶ ಮಾಡುತ್ತಾ ಬದುಕುವ ನಾವು ಕುಬ್ಜರು. ಕೇರಳದ ವಯನಾಡಿನಂತಹ ಭೂಜಾರುವಿಕೆ, ಉಡುಪಿಯ ಶೀರೂರಿನಂತಹ ಭೂಕುಸಿತ ಎಲ್ಲೂ ಮರುಕಳಿಸಬಾರದು. ಪ್ರಕೃತಿಗೆ ನಾವೇ ವರ ಮತ್ತು ನಾವೇ ಶಾಪ ಎಂಬ ಜಾಗೃತವಾವಸ್ಥೆ ಎಲ್ಲರಲ್ಲೂ ಇರಲಿ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ