ಆಟಿ ಕಳಂಜ
ಕವನ
ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನ ಡೆನ್ನಾನ
ಬರುತಿಹನು ಆಷಾಡ ಮಾಸದಲಿ
ಮನೆ ಮನೆಗೆ ಆಟಿ ಕಳಂಜನು ||
ಈಶ್ವರ ಸೃಷ್ಟಿಯ ಕಂದನು ಇವನು
ಜನರ ರಕ್ಷಣೆಗಾಗಿ ಧರೆಗೆ ಬಂದವನು ಕಳಂಜ |
ತಲೆಗೆ ಕದಿರು ಮುಡಿಯನು ಕಟ್ಟಿರುವನು
ಓಲೆಗರಿಯ ಶೃಂಗಾರ ಮಾಡಿರುವ ಕಳಂಜ ||
ಕೈಯಲ್ಲಿ ಓಲೆ ಗರಿಯ ಕೊಡೆ ಹಿಡಿದಿರುವನು
ರಂಗು ರಂಗಿನ ಬಣ್ಣದೊಳು ಕಾಣಿಸುವೆ ಕಳಂಜ |
ಕೆಂಪು ಚಲ್ಲಣ ಗೆಜ್ಜೆಯ ಧರಿಸಿರುವೆ
ಎಂಥ ಅಂದ ನಿನ್ನ ಚಂದ ಕಳಂಜ ||
ಧೋ ಎಂದು ಸುರಿವ ಮಳೆಯನು ಲೆಕ್ಕಿಸದೆಯೆ
ಕಡು ಬಿಸಿಲಾದರು ಬರುವೆ ನೀನು ಕಳಂಜ |
ಬಂದ ಮಾರಿಯನು ಕಳೆಯುವೆ
ರೋಗ ರುಜಿನವ ದೂರ ಮಾಡುವೆ ಕಳಂಜ ||
ಕಷ್ಟ ಕಾರ್ಪಣ್ಯಗಳನು ಹೋಗಲಾಡಿಸುವೆ
ತುಳು ನಾಡಿನ ಜನರ ಭಯ ಭೀತಿ ಕಳೆವೆ ಕಳಂಜ |
ಡೋಲಿನ ಶಬ್ದಕೆ ನಿನ್ನಯ ಕುಣಿತವು
ಕುಣಿಯುತ ಕುಣಿಯುತ ಮನರಂಜಿಸುವೆ ಕಳಂಜ ||
-ಸುಭಾಷಿಣಿ ಚಂದ್ರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್