ಆಟ, ತಾಳಮದ್ದಳೆಯಲ್ಲಿ ಕುಂಬಳೆಯವರದು ಸೌಮ್ಯ ಮಾರ್ಗ

ಆಟ, ತಾಳಮದ್ದಳೆಯಲ್ಲಿ ಕುಂಬಳೆಯವರದು ಸೌಮ್ಯ ಮಾರ್ಗ

ಸುಮಾರು ಐದು ದಶಕಗಳ ಕಾಲ ರಂಗವನ್ನಾವರಿಸಿ ಯಕ್ಷಗಾನ ಕಲಾಪ್ರಕಾರವನ್ನು ಇನ್ನಷ್ಟು ಎತ್ತರಕ್ಕೇರಿಸಿದ ಮಹಾನ್ ಕಲಾವಿದ, ಸಾಂಸ್ಕೃತಿಕ ಲೋಕದ ಸಾಧಕ ಕುಂಬಳೆ ಸುಂದರ ರಾವ್ ಇವರು. ಯಕ್ಷಗಾನ ಕಲಾವಿದರೊಬ್ಬರು ವಿಧಾನ ಸಭಾ ಸದಸ್ಯರಾದ ಉದಾಹರಣೆಗೆ ಪಾತ್ರರಾದವರು ಸುಂದರ ರಾಯರು. ನವೆಂಬರ್ ೩೦ರಂದು ನಿಧನರಾದ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ ಅವರ ಬಗ್ಗೆ ಸಾಹಿತಿ, ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಪುಸ್ತಕವೊಂದರಲ್ಲಿ ಬರೆದ ಮಾತುಗಳನ್ನು ಯಥಾವತ್ತಾಗಿ ಆಯ್ದು ಪ್ರಕಟಿಸುತ್ತಿರುವೆ. 

ಪ್ರಾಸ ಮತ್ತು ಕುಂಬಳೆ ಸುಂದರ್ ರಾವ್ ಅವರ ಮಾತುಗಾರಿಕೆ ಒಂದು ಬಿಟ್ಟು ಇನ್ನೊಂದಿಲ್ಲ ಅನ್ನುವಂತಿದ್ದ ಕಾಲವೂ ಇತ್ತು. ಪ್ರಾಸದ ಮಹಿಮೆಯಿಂದಾಗಿ ಇತರ ಕಲಾವಿದರಿಂದ ಭಿನ್ನವಾಗಿ ಗುರುತಿಸಲ್ಪಟ್ಟವರು. ಅವರು ಮಾತುಗಾರಿಕೆಯಿಂದ ಅವರು ಜನರನ್ನು ಸೆಳೆಯುತ್ತಿದ್ದುದರಲ್ಲಿ ದೊಡ್ಡ ಪಾಲು, ಆಶ್ಚರ್ಯಕರವೆಂಬಷ್ಟು ವಿಪುಲವಾಗಿ ಧುಮ್ಮಿಕ್ಕುತ್ತಿದ್ದ ಪ್ರಾಸದ್ದೇ. ಯಾವ ಕಲಾವಿದನಾದರೂ ತನಗೆ ಈ ಪ್ರಮಾಣದ ಜನಪ್ರೀತಿಯನ್ನು ಗಳಿಸಿಕೊಟ್ಟ ಸಂಗತಿಯ ಕುರಿತು ಮೋಹವಶನಾದರೆ ಅಚ್ಚರಿಯಿಲ್ಲ ಎನ್ನುತ್ತಾರೆ ಲೇಖಕ ರಾಧಾಕೃಷ್ಣ ಕಲ್ಚಾರ್. ಅವರು 'ಸುಂದರಕಾಂಡ' ಅಭಿನಂದನಾ ಗ್ರಂಥಕ್ಕೆ‌ ಬರೆದಿದ್ದ ಲೇಖನ ನಿಮ್ಮ ಓದಿಗಾಗಿ..

ಹತ್ತಿಯ ರಾಶಿಯಂತೆ ಬಿಳುಪಾದ ತಲೆಗೂದಲು. ಮುಖದ ಗಾಂಭೀರ್ಯಕ್ಕೆ‌ ಪುಟ ನೀಡುವ ಕನ್ನಡಕ‌. ವಯಸ್ಸಿಗೆ ತಕ್ಕಂತೆ ಹಿಗ್ಗಿದ, ಆದರೆ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸಿದ ಕೊಂಚ ಸ್ಥೂಲವಾದ ಕಾಯ, ಮಿದು ಮಾತು, ನಿಧಾನ ಚಲನೆ- ಇದು ಹೊರನೋಟಕ್ಕೆ ದಕ್ಕುವ ಕುಂಬಳೆ ಸುಂದರ ರಾಯರ ವ್ಯಕ್ತಿಚಿತ್ರ,

ಅವರಿಗೆ ವಯಸ್ಸಾಯಿತು ಎನ್ನುತ್ತಾರೆ. ಕೆಲವು ಬಾರಿ ಅವರೇ ಅದನ್ನು ನೆನಪಿಸಿಕೊಳ್ಳುವುದುಂಟು. “ಪ್ರಾಯವಾಯಿತು ಮಾರಾಯರೆ, ಶರೀರ ಮೊದಲಿನ ಹಾಗೆ ಹೇಳಿದ್ದು ಕೇಳುವುದಿಲ್ಲ"

ಹೌದೇ? ವೇದಿಕೆಯ ಮೇಲೆ ಅವರನ್ನು ನೋಡಿದರೆ ಹಾಗನ್ನಿಸುವುದಿಲ್ಲ. 'ಸುಧನ್ವ ಮೋಕ್ಷ' ದ ಸುಧನ್ವನಿರಲಿ, 'ಭರತಾಗಮನ' ದ ಭರತನಿರಲಿ, 'ಸಂಧಾನ' ದ ಕೃಷ್ಣನಿರಲಿ, ಆ ಪಾತ್ರದಲ್ಲಿ ತುಂಬಿ ಸೂಸುವ ಉತ್ಸಾಹ, ಉಲ್ಲಾಸ, ನಿರರ್ಗಳ ಮಾತುಗಾರಿಕೆಯನ್ನು ಕಂಡು ಕೇಳಿದವರಿಗೆ ಕುಂಬಳೆಯವರಿಗೆ ವಯಸ್ಸಾಯಿತು ಎಂಬುದು ಸುಳ್ಳು ಅಂತನ್ನಿಸುತ್ತದೆ. ದಶಕಗಳ ಹಿಂದಿದ್ದ ಮಾತುಗಾರಿಕೆಯ ಓಘ, ವೇಗಗಳು ಇಂದಿಗೂ ಹಾಗೆಯೇ ಇದೆ.

ಆಟ, ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಅವರದು ಸೌಮ್ಯ ಮಾರ್ಗ, ಅವರು ನಿರ್ವಹಿಸುವ ಪಾತ್ರಗಳ ಹಾಗೆಯೇ. ಅದರ ಅರ್ಥ ಬೇರೆ ಪಾತ್ರಗಳನ್ನು ಅವರು ಮಾಡಲಾರರು ಎಂದಲ್ಲ. ಒಂದೆರಡು ವರ್ಷಗಳ ಹಿಂದೆ ಪಾರ್ಥ ಸಾರಥ್ಯದ ಬಲರಾಮನನ್ನು ಇನ್ನಿಲ್ಲವೆಂಬಂತೆ ಚಂದಗಾಣಿಸಿಕೊಟ್ಟ ನೆನಪು ನನಗುಂಟು.

ಪಾತ್ರ ನಿರ್ವಹಣೆಯಲ್ಲಿ ಹೇಗೋ ಹಾಗೆಯೇ ಅವರು ದಿನ ನಿತ್ಯದ ವ್ಯವಹಾರದಲ್ಲೂ ಸೌಮ್ಯ ಮಾರ್ಗ. ಕಟು ಮಾತು ಬರುವುದು ತೀರಾ ವಿರಳ. ಇಲ್ಲವೆಂದೇ ಹೇಳಬಹುದು. ತನಗೆ ಇಷ್ಟವಿಲ್ಲದುದನ್ನು ಒಂದೇ ಶಬ್ದದಲ್ಲಿ 'ಇಷ್ಟವಿಲ್ಲ' ಎಂದಷ್ಟೇ ಹೇಳಿ ಮುಗಿಸುವ ಜನ ಅವರು. ಅನಗತ್ಯ ಟೀಕೆ, ಅವಹೇಳನ ಮಾಡುವ ಮಾತು ಅವರಿಂದ ಬಾರದು. ಅತಿರೇಕವನ್ನು, ವಿಪರೀತವನ್ನು ಕಂಡಾಗ, "ಎಂಥದು ಮಾರಾಯ್ರೆ ಇದು?' ಎಂದು ಕೊಂಚ ದಿಗ್ಟಾಂತಿಯಿಂದ ಪ್ರಶ್ನಿಸಿ ಮೌನವಾದಾರು ಹೊರತು, ಬಯ್ಯುವ, ನಿಂದನೆಯ ಮಾತು ಆಡುವ ಕ್ರಮ ಅವರದಲ್ಲ.

ಪಡೀಲಿನ ಅವರ ಮನೆ 'ಯಕ್ಷಾನುಗ್ರಹ' ಕ್ಕೆ ಹೋದವರನ್ನು 'ಚಹ ಕುಡಿಯದಿದ್ರೆ ಹೇಗೆ?' ಎಂದು ಆದರಿಸುವ ಸದ್ಗೃಹಸ್ಥ. ಅವರ ಮನೆಯ ಗೋಡೆ ಕಾಣಿಸದಷ್ಟು ಸನ್ಮಾನ ಪತ್ರ, ಸ್ಮರಣಿಕೆಗಳು ಹುಂಬಿಕೊಂಡಿವೆ. ಕುಂಬಳೆಯವರು ಪಡೆದ ಖ್ಯಾತಿ, ಉನ್ನತಿ, ರಾಜಕೀಯದ ರಾಜ ವೈಭವವನ್ನು ಇನ್ನೊಬ್ಬ ಗಳಿಸುವುದು ಕಷ್ಟ. ಹಾಗೆ ಪಡೆದರೂ, ಪಡೆದವನ ಕಾಲು ನೆಲದಲ್ಲಿ ನಿಲ್ಲಲಾರದು. ಆದರೆ ಎಲ್ಲವನ್ನೂ ಯಥೇಚ್ಛವಾಗಿ ಪಡೆದವರು ಕುಂಬಳೆ, ಅವರಿನ್ನೂ ನೆಲದಲ್ಲಿಯೇ ಕಾಲೂರಿದ್ದಾರೆ.

ಹಾಸ್ಯ ಮನೋಧರ್ಮ ಅವರಲ್ಲಿ ಸದಾ ಜಾಗೃತ. ಒಮ್ಮೆ ಉಡುಪಿಯಲ್ಲಿ ತಾಳಮದ್ದಳೆ. ಒಟ್ಟಿಗೆ ಕಾರಲ್ಲಿ ಹೋಗೋಣ' ಎಂದರು. ನನ್ನ ಅರ್ಥಗಾರಿಕೆ ಮುಗಿವವರೆಗೆ ಕಾದು, ಕರೆದೊಯ್ದರು. 'ನೋಡಿದ್ರ, ನನಗೂ ಉಪಕಾರ ಮಾಡುವ ಬುದ್ದಿ ಉಂಟು ಗೊತ್ತಾಯ್ತೊ?' ಎಂಬ ಕುಶಾಲಿನ ಒಗ್ಗರಣೆ. ಒಮ್ಮೆ ಅವರ ಕೈಗೆ ಪೆಟ್ಟಾಯಿತು, ಬಿದ್ದ ನೆಪಕ್ಕೆ ನಗೆಯ ಲೇಪ ಹಚ್ಚಿ ಅವರದನ್ನು ವರ್ಣಿಸುತ್ತಿದ್ದುದೇ ಕೇಳುವವನನ್ನು ನಗಿಸಿಬಿಡುತ್ತಿತ್ತು,

*******

ಧರ್ಮಸ್ಥಳ ಮೇಳದ ವೈಭವದ ಕಾಲದಲ್ಲಿ ಮೇಳದ ಅಗ್ರಮಾನ್ಯ ವೇಷಧಾರಿಗಳಲ್ಲಿ ಒಬ್ಬರಾಗಿದ್ದ ಕುಂಬಳೆ ಸುಂದರರಾಯರು ಜನರನ್ನು ಹುಚ್ಚುಗಟ್ಟಿಸಿ ಬಿಡುತ್ತಿದ್ದರು. ಅವರ ವೇಷಕ್ಕೆ ವಿಶೇಷವಾದ ಒಂದು ಆಕರ್ಷಣೆ. ಅದರಲ್ಲೂ ಹುಡುಗಾಟದ ಪುಂಡುವೇಷದಲ್ಲಿ ಕುಂಬಳೆಯವರನ್ನು ನೋಡುವುದು ಒಂದು ಹಬ್ಬವೇ.

ಏಕೀ ಆಕರ್ಷಣೆ? ಏನು ಅವರಲ್ಲಿರುವ ಚುಂಬಕ ಶಕ್ತಿ? ಎಲ್ಲರಿಗೂ ಮೋಡಿ ಮಾಡುವಲ್ಲಿ ಯಾವ ಕೃಷ್ಣತ್ವ? ಅಷ್ಟಕ್ಕೂ ಅವರ ಅಭಿನಯ, ನಾಟ್ಯಗಳು ಬಹಳ ಲಾಲಿತ್ಯಪೂರ್ಣವೇನಲ್ಲ. ನಿರರ್ಗಳ ಮಾತುಗಾರಿಕೆಯೋ, ಅದರಲ್ಲಿ ಹಾಸುಹೊಕ್ಕಾಗಿರುವ ಭಾವ ಪ್ರವಾಹವೋ, ವೇಷ, ಮುಖವರ್ಣಿಕೆ, ಆಂಗಿಕಾಭಿನಯಗಳ ಅಂದವೋ ಅಥವಾ ಎಲ್ಲದರ ಒಟ್ಟು ಮೊತ್ತವೋ- ಪ್ರೇಕ್ಷಕನಿಗಂತೂ ಕುಂಬಳೆಯವರು ಬೇಕು. ಅವರ ವೇಷ ಬೇಕು, ಜನಪ್ರಿಯತೆಯ ನಕ್ಷೆಯಲ್ಲಿ ಅವರ ರೇಖೆ ಯಾವತ್ತೂ ಏರು ಮುಖವೇ. ತನ್ನದೇ ಶಕ್ತಿಯಿಂದ ಪ್ರೇಕ್ಷಕರನ್ನು ಆಟಕ್ಕೋ, ಕೂಟಕ್ಕೊ ಸೆಳೆಯಬಲ್ಲ ಕೌಶಲ ಅವರಲ್ಲಿ ಸದಾ ಉಂಟು.

ಪ್ರಾಸ ಮತ್ತು ಕುಂಬಳೆಯವರ ಮಾತುಗಾರಿಕೆ ಒಂದು ಬಿಟ್ಟು ಇನ್ನೊಂದಿಲ್ಲ ಅನ್ನುವಂತಿದ್ದ ಕಾಲವೂ ಇತ್ತು. ಪ್ರಾಸದ ಮಹಿಮೆಯಿಂದಾಗಿ ಇತರ ಕಲಾವಿದರಿಂದ ಭಿನ್ನವಾಗಿ ಗುರುತಿಸಲ್ಪಟ್ಟವರು. ಅವರು ಮಾತುಗಾರಿಕೆಯಿಂದ ಅವರು ಜನರನ್ನು ಸೆಳೆಯುತ್ತಿದ್ದುದರಲ್ಲಿ ದೊಡ್ಡ ಪಾಲು, ಆಶ್ಚರ್ಯಕರವೆಂಬಷ್ಟು ವಿಪುಲವಾಗಿ ಧುಮ್ಮಿಕ್ಕುತ್ತಿದ್ದ ಪ್ರಾಸದ್ದೇ. ಯಾವ ಕಲಾವಿದನಾದರೂ ತನಗೆ ಈ ಪ್ರಮಾಣದ ಜನಪ್ರೀತಿಯನ್ನು ಗಳಿಸಿಕೊಟ್ಟ ಸಂಗತಿಯ ಕುರಿತು ಮೋಹವಶನಾದರೆ ಅಚ್ಚರಿಯಿಲ್ಲ. ಆದರೆ ಕುಂಬಳೆಯವರ ದಾರಿ ಬೇರೆ. ಯಾವಾಗ ತನ್ನ ಪ್ರಾಸನಿರ್ಮಾಣ ಕೌಶಲವನ್ನು ಇತರರು ಮೆಚ್ಚಿಕೊಂಡು, ಅದನ್ನು ತಮ್ಮ ಮಾತುಗಳಲ್ಲಿ ಅನುಕರಿಸುತ್ತಾ, ಹಾಸ್ಯಾಸ್ಪದವಾಗಿ ಮಾಡಿದರೋ ಆ ಕ್ಷಣ ಅವರು ಅದರಿಂದ ದೂರವೇ ಆದರು. ಇಂದು ಅವರ ಮಾತಿನಲ್ಲಿ ಪ್ರಾಸ ಒಂದು ಲಕ್ಷಣವಲ್ಲ. ಅಪರೂಪಕ್ಕೆ ಬಳಸುತ್ತಾರಾದರೂ, ಅದನ್ನೇ ಮೆರೆಸುವುದಿಲ್ಲ. ನನಗೆ ಅದು ಸಲ್ಲದು ಎಂದು ತೋರಿದ ಕೂಡಲೇ ಬಿಟ್ಟು ಬಿಟ್ಟ ಈ ನಿರ್ಮೋಹ ಒಂದು ವಿಸ್ಮಯವೇ.

ಕುಂಬಳೆಯವರು ತಮ್ಮ ಜನಪ್ರಿಯತೆಯ ಬಲದಿಂದ ಶಾಸಕರಾದರು. ನಾಮಕರಣದ ಮೂಲಕವಲ್ಲ. ಚುನಾವಣೆಯ ರಣರಂಗದಲ್ಲಿ ಕಾದಾಡಿ, ಪರಾಕ್ರಮದಿಂದ ಗೆದ್ದವರು ಅವರು. ಹಾಗಾಗಿ ಅಧಿಕಾರದ ಮತ್ತು ತಲೆಗೆ ಏರಬಹುದಿತ್ತು. ಇನ್ನಷ್ಟು ಅಧಿಕಾರಕ್ಕಾಗಿ ಯತ್ನಿಸುತ್ತ ರಾಜಕೀಯದಲ್ಲಿ ಉಳಿಯಬಹುದಿತ್ತು. ಆದರೆ ಅವರು ಅಧಿಕಾರಕ್ಕೆ ಅಂಟುವ ಮನಸ್ಸು ಮಾಡಲಿಲ್ಲ. ಮತ್ತೆ ಯಕ್ಷಗಾನಕ್ಕೆ ಮರಳಿದರು. ಶಾಸಕರಾಗಿದ್ದಾಗಲೂ ಅಷ್ಟೇ. ಅದೊಂದು ದೊಡ್ಡ ವಿಷಯವೆಂಬಂತೆ ವರ್ತಿಸಿದವರಲ್ಲ. ಸರಳತೆಯನ್ನು ಬಿಟ್ಟು ಕೊಡಲಿಲ್ಲ. ಸಹಕಲಾವಿದರ ಜತೆಗಿನ ಅವರ ಸಂಬಂಧ ಬದಲಾಗಲಿಲ್ಲ. ಮೊದಲು ಹೇಗಿದ್ದರೋ ಶಾಸಕನಾಗಿದ್ದಾಗಲೂ ಹಾಗೆಯೇ. ಆ ಮೇಲೂ ಅಷ್ಟೇ, ತನ್ನದೇ ಆದ ಛಾಪೊಂದನ್ನು ಯಕ್ಷಗಾನ ರಸಿಕರ ಹೃದಯದಲ್ಲಿ ಮೂಡಿಸಿದ ಕುಂಬಳೆಯವರು, ಆ ಅನನ್ಯತೆಯಿಂದಾಗಿಯೇ ಯಕ್ಷಗಾನ ಪ್ರಪಂಚದಲ್ಲಿ ಬಹುಕಾಲ ಬೆಳಗುತ್ತಿರುತ್ತಾರೆ.

('ಸುಂದರಕಾಂಡ' ಅಭಿನಂದನಾ ಗ್ರಂಥಕ್ಕೆ‌ ರಾಧಾಕೃಷ್ಣ ಕಲ್ಚಾರ್ ಅವರು ಬರೆದಿದ್ದ ಲೇಖನ)

(ಸಂಗ್ರಹ) - ಸಂತೋಷ ಕುಮಾರ್, ಸುರತ್ಕಲ್

ಚಿತ್ರ ಕೃಪೆ: ಇಂಟರ್ನೆಟ್ ತಾಣ