ಆಡಂಬರದೆಡೆ ಮನಸ ಹರಿಯಗೊಡದಿರಿ

ಆಡಂಬರದೆಡೆ ಮನಸ ಹರಿಯಗೊಡದಿರಿ

ಕವನ

ಆಡಂಬರದೆಡೆ ಮನಸ ಹರಿಯಗೊಡದಿರಿ

ಪೂಜೆ ವ್ರತ ನೇಮವನು ಶ್ರದ್ಧಾ ಭಕ್ತಿಲಿ ಮಾಡಿರಿ

ಹಸಿರ ಸೂಸುವ ಹೂಬನಗಳ ನಾಶ ಮಾಡದಿರಿ

ಇದ್ದಂತೆಯೇ ಇರಲಿ ಬಿಡಿ ನಿಮಗೇನು ಅಡ್ಡಿ ಹೇಳಿರಿ?

 

ಮುಂಬಯಿ ಕಲ್ಕತ್ತ ಅಮೇರಿಕ ಲಂಡನ್

ಬಂದ ಕುಟುಂಬಸ್ಥರೆಡೆ ಗತ್ತು ದೌಲತ್ತು ತೋರದಿರಿ

ಸರೀಸೃಪಗಳು ನಮ್ಮಂತೆ ಜೀವಿಗಳು ತಿಳಿಯಿರಿ

ಉಸಿರುಗಟ್ಟಿಸಿ ಸಾಯಿಸುವುದು ಮಾನವೀಯತೆಯೇ ಹೇಳಿರಿ

 

ಮರಗಳ ಎಲೆ ನಮಗೆಷ್ಟು ಉಪಕಾರಿ ಬಲ್ಲಿರಾ?

ಮಹಾಮಾರಿ ಕೊರೊನಾದಲ್ಲಿ ಮಹತ್ವ ಅರಿತಿಲ್ಲವೇ?

ಮಣ್ಣಿನ ಹುತ್ತ ಗಿಡಗಂಟಿ ಮರ ಬಳ್ಳಿಗಳು

ಪಕ್ಷಿ ಸಂಕುಲ ಹಾವು ಕೀಟಗಳ ನೆಲೆಯಲ್ಲವೇ?

 

ಮಾನವನ ಆಧುನಿಕತೆಗೆ ಬಲಿಯಾಗಿ ಮರುಗಿತೇ?

ದಾಹ ಎಲ್ಲೆಮೀರಿ ಮುಳುವಾಯಿತೇ?

ಕಾನನದ ಜೀವಿಗಳು ನಾಡಿಗೆ ಬರುವಂತಾಯಿತೇ?

ಕಾಂಕ್ರೀಟಿನ ಅಮಲು ತಲೆಗೇರಿ ಕುಣಿಯಿತೇ?

 

ನ್ಯೆಜತೆ ನೆಲಕಚ್ಚಿ ಕಲ್ಲನಾಗಗಳು  

ಮನುಜರ ನೋಡಿ ಗಹಗಹಿಸಿ ನಕ್ಕವು

ಜ್ಯೋತಿಷ್ಯ ವಾಸ್ತುವಿನ ಮೊರೆ ಹೊಕ್ಕು

ಒಣಪ್ರತಿಷ್ಠೆಗೆ ಬನವೆಲ್ಲ ನಾಶವಾಗಿ ಹೆಚ್ಚಿತು ಸೊಕ್ಕು

 

ಯಾರದೋ ಹಣ ಎಲ್ಲಮ್ಮನ ಜಾತ್ರೆಯಾಯಿತು

ಇನ್ನಾರದೋ ಹಣದ ಥೈಲಿ ಖಾಲಿಯಾಯಿತು

ಮನಸ್ಸಿಗೆ ನೆಮ್ಮದಿ ತೃಪ್ತಿ ಸಿಕ್ಕಿತೆಂದು ಭಾವಿಸಲಾಯಿತು

ನನ್ನವರು ತನ್ನವರಿಗೆ ಯಥಾಸ್ಥಿತಿ ಮರುಕಳಿಸಿತು

 

ಆಚರಣೆ ಆಡಂಬರ ಧನಕನಕಾದಿಗಳ ಸಮರ್ಪಣೆ

ನೆಲೆ-ಬೆಲೆ ಸ್ಥಿರತೆಗೆ ಮಾನದಂಡವಿದೆಯೇ?

ನನ್ನೊಂದಿಗೆ ಇತರರ ಉಸಿರಿಗೂ ಪ್ರಾಧಾನ್ಯತೆ ನೀಡಿ

ಸಮಾಜಕೆ ಕಿಂಚಿತ್ ಸಹಕಾರ ಸಲಿಸುತ ಅಡಿಯಿಡು

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್