ಆಡಂಬರ (ಭಾಗ 1)

ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ.
ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಗುಣಗಳು ದೈವಿ ಗುಣ. ಬದುಕಿನಲ್ಲಿ ಅಂಧಕಾರ ಚೆಲ್ಲುವ ಗುಣ ಅಸುರಿಗುಣ. ಬದುಕನ್ನು ರಸಮಯಗೊಳಿಸುವ ಗುಣ ದೈವಿ ಗುಣ. ಬದುಕನ್ನು ಕಹಿ ಕಹಿಗೊಳಿಸುವ ಗುಣಗಳು ಅಸುರಿ ಗುಣಗಳು. ಬದುಕು ನಮಗೆ ಹೇಗೆ ಬೇಕು ಹಾಗೆ ಆಗುತ್ತದೆ. ಇಡೀ ಜೀವನ ರಸಪೂರ್ಣಗೊಳಿಸಬೇಕೆಂದು ನಿರ್ಣಯ ಮಾಡಿದರೆ, ಅದಕ್ಕೆ ಪೂರಕವಾದ ಗುಣಗಳನ್ನು ನಾವು ರೂಡಿಸಿಕೊಳ್ಳಬೇಕಾಗುತ್ತದೆ. ಬದುಕನ್ನೆಲ್ಲ ಕಹಿ ಕಹಿಗೊಳಿಸಬೇಕೆಂದು ಇಚ್ಛೆ ಇದ್ದರೆ, ಅದಕ್ಕೆ ಪೂರಕ ಗುಣಗಳು ಇವೆ. ಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಾಗುತ್ತದೆ. ಬೇರೆಯವರು ನಮ್ಮ ಬದುಕನ್ನು ಕಟ್ಟಲು ಆಗುವುದಿಲ್ಲ. ಜೀವ ವಿಕಾಸದಲ್ಲಿ ಮಾನವ ವಿಕಾಸ ಇತ್ತೀಚಿನದು ಎಂದು ಹೇಳುತ್ತೇವೆ. ನಿಸರ್ಗ ವಿಕಾಸ ಮಾಡುವಾಗ ಬದುಕಿಗೆ ಏನೇನು ಬೇಕು ಎಲ್ಲಾ ಅಳವಡಿಸಿದೆ. ನಮಗೆ ದೇಹ ಬೇಕು. ಮಾತುಗಳು ಬೇಕು. ಮಾತಿಗೆ ಬೇಕಾದ ಅವಯವ ಬೇಕು. ನೋಡೋದಕ್ಕೆ, ಕೇಳೋದಕ್ಕೆ, ಮುಟ್ಟೋದಕ್ಕೆ, ಮೂಸೋದಿಕ್ಕೆ, ತಿನ್ನೋದಕ್ಕೆ, ಅನುಭವಿಸಲಿಕ್ಕೆ ಮತ್ತು ವಿಚಾರ ಮಾಡೋದಿಕ್ಕೆ ಏನೇನು ಅವಯವ ಬೇಕೋ? ಅದನ್ನೆಲ್ಲ ಅಳವಡಿಸಿದೆ. ಇವುಗಳನ್ನು ಎಲ್ಲಾ ಮನುಷ್ಯರು ಹೊಂದಿಯೇ ಈ ಜಗತ್ತಿಗೆ ಬಂದಿರುತ್ತಾರೆ. ಇವುಗಳನ್ನು ಬಳಸುವುದು. ಆ ಬಳಿಕ ಬದುಕನ್ನು ಕಟ್ಟಿಕೊಳ್ಳುವುದು. ಬದುಕನ್ನು ಸಂಪತ್ತಿನಿಂದ ಕಟ್ಟುವುದಕ್ಕೆ ಆಗುವುದಿಲ್ಲ.
ರೂಪದಿಂದ, ಶಬ್ದದಿಂದ, ಸ್ಪರ್ಶದಿಂದ, ರಸದಿಂದ, ಗಂಧದಿಂದ, ಸುಖ-ದುಃಖಗಳಿಂದ ಮತ್ತು ಒಳ್ಳೆಯ ಮತ್ತು ಕೆಟ್ಟ ವಿಚಾರಗಳಿಂದ ಕಟ್ಟಿಕೊಳ್ಳಬೇಕಾಗುತ್ತದೆ. ಬದುಕು ಒಂದು ದೃಷ್ಟಿಯಿಂದ ಸಮೃದ್ಧವಾಗಿರುತ್ತಿದೆ. ಆದರೆ ಸಮೃದ್ಧಗೊಳಿಸುವ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ. ಬದುಕಿನ ಅಂಗಳದೊಳಗೆ ಏನು ಬೆಳೆಯಬೇಕು? ಎನ್ನುವುದನ್ನು ನಾವು ವಿಚಾರ ಮಾಡಬೇಕು. ಪ್ರತಿಯೊಬ್ಬ ಮನುಷ್ಯನ ದೇಹದೊಳಗಿನ ಅಂಗಳ (ಮನಸ್ಸು) ದಲ್ಲಿ ಸೌಂದರ್ಯ, ಸುಗಂಧ, ಮಧುರತೆ ತುಂಬಿರಬೇಕು. ಮನೆ ಸುಂದರವಾಗಿ ಕಾಣಬೇಕಾದರೆ ಮನೆ ಕಾಂಪೌಂಡ್ ಒಳಗೆ ಹೂಗಿಡ, ಹಣ್ಣಿನ ಗಿಡ, ಅಲಂಕಾರಿಕ ಗಿಡ ಹಾಕಿದರೆ, ಕಣ್ಣಿಗೆ ಆನಂದ, ತಂಪು. ಸುಗಂಧ, ತಂಗಾಳಿ ಬೀಸಿ, ಸೌಂದರ್ಯ ತುಂಬಿರುತ್ತದೆ. ಹಣ್ಣಿನ ಮಧುರ ರಸ ಸವಿಗೊಳಿಸುತ್ತದೆ. ಒಂದು ವೇಳೆ ಮನೆ ಕಂಪೌಂಡ್ ಒಳಗೆ ತಿಪ್ಪೆ ಹಾಕಿಕೊಂಡಿದ್ದರೆ, ಮನೆಯಲ್ಲಿದ್ದರೂ ದುರ್ವಾಸನೆ ಬೀರುತ್ತದೆ. ನಮ್ಮಲ್ಲಿರುವ ಅಂಗಳ ಬಳಸಿಕೊಳ್ಳುವುದು ಕಲಿಯಬೇಕು. ತಿಪ್ಪೆ ಹಾಕಿ ಆನಂದ ವಾಗಿರಲು ಸಾಧ್ಯವಿಲ್ಲ. ಬೆವರ ಸುರಿಸಿ, ಅಂಗಳ ಸ್ವಚ್ಛ ಮಾಡಿ, ಸುಂದರ ಗಿಡದ ಬೀಜ ಹಾಕಿ, ನಿರ್ವಹಿಸಿದರೆ, ನೀರುಣಿಸಿದರೆ, ಮನೆ ಒಳಗೆ, ಹೊರಗೆ ಆನಂದವಾಗುತ್ತದೆ. ದಾರಿಯಲ್ಲಿ ಹೋಗುವವರು ಒಂದು ಕ್ಷಣ ಒಳಗೆ ಬರಬೇಕು ಅನಿಸಬೇಕು. ಹಾಗಿರಬೇಕು. ಒಳಗೆ ಬಂದ ಕೂಡಲೇ ಕಣ್ಮುಚ್ಚಿ, ಮೂಗು ಮುಚ್ಚಿ, ಹೊರಗೆ ಹೋಗಬೇಕು ಅನಿಸಬಾರದು. ರವೀಂದ್ರನಾಥ ಠಾಕೂರ್ ಹೇಳುತ್ತಾರೆ. "ಭಗವಂತ ಪ್ರತಿದಿನ ದಾರಿಯಲ್ಲಿ ಬರುತ್ತಾನೆ. ಯಾವ ಮನೆ ಸ್ವಚ್ಛ ಇದೆ ಅಲ್ಲಿಗೆ ತಾನಾಗೆ ಬರುತ್ತಾನೆ. ಯಾವ ಮನೆ ಹೊಲಸಿದೆ ಅಲ್ಲಿಂದ ದೂರ ಹೋಗುತ್ತಾನೆ. ದೇವರನ್ನು ಬರ ಮಾಡಿಕೊಳ್ಳುವ ವಾತಾವರಣ ಮಾಡಿಕೊಳ್ಳುವುದು ಮಹತ್ವದ್ದು, ವಿನಹ ದೇವನ ಹತ್ತಿರ ಹೋಗುವುದಲ್ಲ ಅಥವಾ ದೇವರನ್ನು ಬರ ಮಾಡಿಕೊಳ್ಳುವುದಲ್ಲ. ಸ್ವಚ್ಛ ಇದ್ದರೆ ತಾನೆ ಬರುತ್ತಾನೆ."
ನಮ್ಮ ಮನಸ್ಸಿನ ಅಂಗಳ ಎಷ್ಟು ವಿಸ್ತಾರ ಅಂದರೆ ಜಗತ್ತನ್ನೇ ವ್ಯಾಪಿಸುತ್ತದೆ. ನೂರು ವರ್ಷ ವ್ಯಾಪಿಸುತ್ತಲೇ ಇರುತ್ತದೆ. ಇದರಲ್ಲಿ ನಮಗೆ ಬೇಕಾದುದನ್ನು ಬೆಳೆಯಬಲ್ಲೆವು. ಬೇಕಾದರೆ ಸವಿ ಬೆಳೆಯಬಲ್ಲೆವು. ಇಲ್ಲ ಕಹಿ ಬೆಳೆಯಬಲ್ಲೆವು. ಬೇಕಾದರೆ ಸೌಂದರ್ಯ ಬೆಳೆಯಬಲ್ಲೆವು. ಇಲ್ಲಾ ಕುರೂಪ ಬೆಳೆಯಬಲ್ಲೆವು. ಬೇಕಾದರೆ ಮಧುರ ಮಧುರ ಸುಗಂಧ ಬೆಳೆಯಬಹುದು. ಇಲ್ಲದಿದ್ದರೆ ದುರ್ಗಂಧ ತುಂಬಬಲ್ಲೆವು. ನಮ್ಮ ಕೈಯಲ್ಲಿ ನಮ್ಮ ಜೀವನ ಸಿಕ್ಕಿದೆ. ಜೀವನದ ಅಂಗಳ ಸಿಕ್ಕಿದೆ. ಹೇಗೆ ಕಟ್ಟಿದರೆ ಸಂತೋಷವಾಗುತ್ತದೆಯೋ ಹಾಗೆ ಕಟ್ಟಬೇಕು. ಜೀವನದ ತುಂಬಾ ಬರೀ ಬಡಿದಾಟವಲ್ಲ. ಸುತ್ತಮುತ್ತ ಪ್ರೇಮ ಹರಡಬಲ್ಲೆವು. ಇಲ್ಲವೇ ದ್ವೇಷ ಹರಡಬಲ್ಲೆವು. ನಮ್ಮ ಬದುಕು ಸವಿಯಾದರೆ ನಮ್ಮ ಸುತ್ತಮುತ್ತ ಸವಿಯಾಗುತ್ತದೆ. ನಮ್ಮ ಬದುಕು ಕಹಿ ಆದರೆ, ನಮ್ಮ ಸುತ್ತಮುತ್ತ ಕಹಿಯಾಗುತ್ತದೆ. ಸುಮ್ಮನೆ ಬದುಕುವುದಲ್ಲ ಅಥವಾ ಕೇವಲ ಸಂಗ್ರಹಕ್ಕೆ ಕಳೆಯುವುದಲ್ಲ. ಬದುಕನ್ನು ಸಂತೋಷಕ್ಕಾಗಿ, ಅನುಭವಕ್ಕಾಗಿ, ಆನಂದಕ್ಕಾಗಿ ಕಳೆಯಬೇಕು. ಹಾಗಾದರೆ ಹೇಗೆ ಬದುಕು ಕಟ್ಟಿಕೊಳ್ಳಬೇಕು?, ಏನು ಬೆಳೆದರೆ ಬದುಕು ಕೆಡುತ್ತದೆ ? ನೋಡೋಣ. ಅದರಲ್ಲಿ ಡಂಬಾಚಾರ ಒಂದು. ಡಂಬಾಚಾರ ಎಂದರೆ ತೋರಿಕೆಗಾಗಿ ಬದುಕಬೇಕು ಅನಿಸುತ್ತದೆ. ನಾಲ್ಕು ಜನರಿಗೆ ತೋರಿಸಬೇಕು ಅಂತ ಬದುಕುತ್ತೇವೆ. ಈ ಜೀವನ ಮೇಲು ಜೀವನ. ಆಳ ಇಲ್ಲ. ಮೇಲೆ ಬದುಕಲು ಶುರು ಮಾಡುತ್ತೇವೆ. ಒಳಗೆ ಬದುಕು ಇಲ್ಲ. ಮನೆ ಸುಂದರ ಇದೆ. ಆದರೆ ಮನೆ ಒಳಗಿನ ವಾತಾವರಣ ಸುಂದರ ಇಲ್ಲ. ಮನೆ ಅಷ್ಟು ಸುಂದರವಾಗಿದೆ. ಬಣ್ಣ ಅಪ್ಯಾಯಮಾನ. ಪೀಠೋಪಕರಣ, ಆಭರಣ ತುಂಬಿದೆ. ಆದರೆ ಒಳಗೆ ಸೌಂದರ್ಯ ಇಲ್ಲ.
(ಇನ್ನೂ ಇದೆ)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ