ಆಡಂಬರ (ಭಾಗ 2)

ಆಡಂಬರ (ಭಾಗ 2)

ಗುರುದೇವ ರಾನಡೆಯವರು ಸಂತರು. ಒಂದು ದಿನ ರಾನಡೆ, ಮಿತ್ರ ಉಪಕುಲಪತಿ ಜೊತೆ ಪಟ್ಟಣದ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಆಗ ಮಿತ್ರ ಒಂದು ಮನೆ ತೋರಿಸಿ, ಆ ಮನೆ ಎಷ್ಟು ಸುಂದರವಾಗಿದೆ? ಅಂದರು. ಅದಕ್ಕೆ ಗುರುದೇವ ರಾನಡೆ ಹೇಳಿದರು "ಅಷ್ಟೇ ಸೌಂದರ್ಯ ಒಳಗೆ ಇದ್ದರೆ, ಆ ಮನೆ ಸೌಂದರ್ಯ ಅಂತ ಒಪ್ಪಿಕೊಳ್ಳಬೇಕು" , ಅಂದರು. "ಹೊರಗೆಷ್ಟು ಸುಂದರ ಅದೇ, ಒಳಗಿನ ಜನರು ಅಷ್ಟೇ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಸುಂದರವಾಗಿದ್ದರೆ ಸಂತೋಷವಾಗುತ್ತದೆ" ಅಂದರು. ಅಷ್ಟರಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಹಳ್ಳಿಯ ವಯಸ್ಸಾದ ಮುದುಕಿ ಹಸಿವಾಗಿತ್ತು, ಮನೆಯ ಗೇಟ್ ತೆಗೆದು ಒಳ ಹೋಗಲು ಪ್ರಯತ್ನಿಸುತ್ತಿದ್ದಳು. ಗೇಟ್ ಶಬ್ದ ಕೇಳಿ ಮಾಲೀಕ, ಮುದುಕಿಯನ್ನು ನೋಡಿ, ನಾಯಿಯನ್ನು ಛೂ ಬಿಟ್ಟನು. ಪಾಪ ಆ ವಯಸ್ಸಾದ ಮುದುಕಿ ಒಳಗೆ ಹೋಗಲು ಆಗಲಿಲ್ಲ. ಆಗ ರಾನಡೆ ಹೇಳಿದರು. "ಮನೆ ಸೌಂದರ್ಯ ಬಣ್ಣದಿಂದ ಬರುವುದಲ್ಲ ಮನೆಯಲ್ಲಿ ಇರುವವರ ಪ್ರೇಮದಿಂದ ಬರುತ್ತದೆ". ಹಾಗೆ ನಮ್ಮ ದೇಹ ಬಹಳ ಸುಂದರ, ಅದ್ಭುತ ಇರಬಹುದು. ಆದರೆ ಮನಸ್ಸು ಕುರೂಪ ಇದ್ದರೆ, ಏನು ಮಾಡುವುದು?. ದೇಹ ಕಪ್ಪು ಇದ್ದರೇನು?. ಒರಟು ಇದ್ದರೇನು?. ಮನಸ್ಸು ಪ್ರೇಮ ಇತ್ತು ಅಂದರೆ ಅದು ಸುಂದರ ದೇಹ. ಒಳ ಸೌಂದರ್ಯ ಇಲ್ಲದೆ ಹೋದರೆ, ದರ್ಪ ಬರುತ್ತದೆ. ಇದಕ್ಕೆ ಡಂಬಾಚಾರ ಎನ್ನುತ್ತೇವೆ. ಒಳಗಿಲ್ಲ, ಮೇಲಿದೆ. ನಾವು ಹೊರಗೆ ಕಟ್ಟುತ್ತೇವೆ, ಒಳಗೆ ಕಟ್ಟುವುದನ್ನು ಮರೆಯುತ್ತೇವೆ. ನಾವು ಮೇಲೆ ತೋರಿಸುತ್ತೇವೆ, ಒಳಗೆ ಏನು ಇಲ್ಲ. ಪ್ಲಾಸ್ಟಿಕ್ ಹೂವು ಬಾಡುವುದಿಲ್ಲ. ಯಾವಾಗಲೂ ಅರಳಿರುತ್ತದೆ. ಆದರೆ ಏನು ಮಾಡುವುದು?. ಅದರೊಳಗೆ ಮಕರಂದ ಇಲ್ಲ. ಯಾವ ದುಂಬಿ ಹೋಗುವುದಿಲ್ಲ. ಆದರೆ ನಿಜ ಹೂ ಬಾಡುತ್ತದೆ. ಅದರಲ್ಲಿ ಮಕರಂದ ಇದೆ. ಅಲ್ಲಿಗೆ ದುಂಬಿ ಹಾರುತ್ತವೆ. ನಿಜ ಹೂವಿಗೆ ಒಳಗಿನ ಜೀವದಿಂದ ಹೊಮ್ಮಿದ ಸೌಂದರ್ಯ ಇದೆ. ಆದರೆ ಪ್ಲಾಸ್ಟಿಕ್ ಹೊರಗೆ ಮಾತ್ರ ಸೌಂದರ್ಯ. ಪ್ಲಾಸ್ಟಿಕ್ ಹೂ ಮೆಚ್ಚಿಕೊಳ್ಳುವುದು ಡಂಬ ಜೀವನ. ನಿಜ ಹೂ ಮೆಚ್ಚಿಕೊಳ್ಳುವುದು ಸಹಜ ಜೀವನ, ಪ್ರೇಮ ಜೀವನ. ಬದುಕನ್ನು ಮೇಲಿನಿಂದ ಕಟ್ಟುವುದಲ್ಲ, ಒಳಗಿನಿಂದ ಕಟ್ಟಬೇಕಾಗುತ್ತದೆ. ಮೇಲೆ ತೋರಿಸುವುದು ಎಷ್ಟು ಮಹತ್ವವೋ, ಒಳಗಿನ ಭಾವ ಅದಕ್ಕಿಂತ ಹೆಚ್ಚು ಮಹತ್ವದ್ದು. ಇದಕ್ಕೆ ಅಂತ ಸತ್ವ ಎನ್ನುವರು. ಅಂತಸತ್ವ, ವಸ್ತುವಿಗೆ ಬೆಲೆ ತಂದು ಕೊಡುತ್ತದೆ. ಅಂತಸತ್ವ ಇಲ್ಲದಿದ್ದರೆ ಕೇವಲ ಹೊದಿಕೆ ಇರುತ್ತದೆ. ದಾನ, ಸೇವೆಯಂತಹ ಕೆಲಸದಲ್ಲಿ ಪ್ರೇಮ ಭಾವದಲ್ಲಿ ತೊಡಗಬೇಕು. ಅದರಿಂದ ಕೆಲಸ ಅಚ್ಚುಕಟ್ಟಾಗಿ ಸುಂದರವಾಗಿರುತ್ತದೆ. ಏಕೆಂದರೆ ಒಳಗೆ ಪ್ರೇಮ ಭಾವ, ಹೊರಗೆ ಕೆಲಸ. ಆ ಪ್ರೇಮ ಭಾವ ಈ ಕೆಲಸಕ್ಕೆ ಸೌಂದರ್ಯ ಕೊಟ್ಟಿದೆ. ಇದು ಆಡಂಬರಕ್ಕೆ ಮಾಡಿದ್ದಲ್ಲ ಭಾವಕ್ಕಾಗಿ ಮಾಡಿದ್ದು. ಜನ ನೋಡಲಿ ಅಂತ ಮಾಡೋದು ಆಡಂಬರ. ಭಾವತುಂಬಿ ಮಾಡುವುದು ಆತ್ಮ ಸಂತೋಷಕ್ಕೆ. ಪೂಜೆ, ಧ್ಯಾನ, ದಾನ ಮಾಡುತ್ತಾ ಇದ್ದಾಗ ನಾಲ್ಕು ಜನ ಸಂತೋಷಪಟ್ಟರೆ ಇದು ಹೊರಗಿನ ಪೂಜೆ ಅಂತ ಭಾವಿಸಬೇಕು. ನಮಗೆ ಆನಂದ ಆಗುತ್ತಿದ್ದರೆ ಒಳಗಿನ ಪೂಜೆ ಎಂದು ಭಾವಿಸಬೇಕು. ಪೂಜೆ ಸತ್ವ ಪೂರ್ಣ ಆಗುವುದಿಲ್ಲ.  ಮನುಷ್ಯನ ಕರ್ಮಗಳೆಲ್ಲ ಸತ್ವಪೂರ್ಣ ಆಗುವುದು ಭಾವದಿಂದ. ಪ್ರೇಮ ಭಾವವೇ ಅಂತಶಕ್ತಿ. ಯಾವುದೇ ಕೆಲಸವಾಗಲಿ ಪ್ರೇಮದಿಂದ ಮಾಡಿದರೆ ಆಯಿತು. ಯಾರು ನೋಡಿದರೇನು?. ಬಿಟ್ಟರೇನು?. ಮಾಡಿ ಸಂತೋಷ ಪಟ್ಟರೆ ಸಾಕು. 

ಒಬ್ಬ ಹುಡುಗನಿಗೆ ಹಸಿವು ಆಗಿದೆ, ದಾಹ ಆಗಿದೆ. ಕರೆದು ಪ್ರೀತಿಯಿಂದ ನೀಡಿದರೆ ಸತ್ವ ಪೂರ್ಣ ದಾನ. ಅದರ ಬದಲು ಯಾರು ಇಲ್ಲ ಅಂತ ಹೊರಗೆ ಕಳುಹಿಸಿದರೆ, ಯಾರಾದರೂ ನೋಡುತ್ತಾ ಇದ್ದಾಗ ಕರೆದರೆ ಡಂಭಾಚಾರ. ಗೆಳೆಯರಿದ್ದಾಗ ಕರೆದು ತಿನ್ನುವುದಕ್ಕೆ ನೀಡಿ, ಕಳುಹಿಸಿದರೆ ಗೆಳೆಯರು ಹೊಗಳಿಕೆ ಶುರು ಮಾಡಿದರೆ ಡಂಬಾಚಾರ. ಬರೀ ತೋರಿಸುವುದಕ್ಕೆ ಮಾಡುವುದು. ನಮ್ಮ ಮನಸ್ಸಿನ ಅಂಗಳದಲ್ಲಿ ಹೊಲಸು ಹಾಕಿಕೊಂಡರೆ, ಅಂತಹ ಬದುಕು ಹೊಲಸು ಬದುಕು. 

ಕನಕದಾಸರು ಹಾಡಿದಾಗ ಶ್ರೀ ಕೃಷ್ಣ ಗೋಡೆ ಸೀಳಿ ದರ್ಶನ ನೀಡಿದ, ಇದು ಅಂತಹ ಸತ್ವದಾನ. ಜನ ಇಲ್ಲ ಅಂತ ಹಾಡದೆ ಹೋಗುತ್ತಾರಲ್ಲ ಅದು ಡಂಬಾಚಾರ. ತಾಯಿ, ಹೆಂಡತಿ ಊಟ ನೀಡುವುದು ಹೃದಯದಿಂದ ಕೂಡಿದ್ದು. ಪಂಚತಾರಾ ಹೋಟೆಲ್ ನವರು ನೀಡುವುದು ಡಂಬಾಚಾರ. ಅವರು ಮಾಡುವ ನಮಸ್ಕಾರ, ಸತ್ಕಾರ ಎಲ್ಲದರ ಹಿಂದೆ ಹಣ ಇದೆ, ಪ್ರೀತಿ ಇಲ್ಲ. ಹಣ ಇಲ್ಲದಿದ್ದಾಗ ಅವರು ತೋರುವ ತಾತ್ಸಾರ ಇವೆಲ್ಲ ಡಂಬಾಚಾರ. ಇದರಿಂದ ಹೊರಗಿನ ಸುಖ ಅಷ್ಟೇ, ಒಳಗೆ ಸಂತೋಷ ಇಲ್ಲ. ನಮ್ಮ ಸುತ್ತಮುತ್ತ ಇಂತಹ ಡಂಬಾಚಾರ ಜನರೇ ತುಂಬಿದ್ದಾರೆ. ಮಕ್ಕಳೇ, ನಿಮ್ಮ ಬದುಕು ಸುಂದರವಾಗಲು ಡಂಬಾಚಾರ ಬೇಡ ಅಲ್ಲವೇ..?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ