"ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂಬುದೇ ಆ ನಿಯಮ. ಆಗ ಮುಠ್ಠಾಳ ಅವರಿಗೆ ಕಾಫಿ, ತಿಂಡಿ ಒದಗಿಸಬೇಕಾಗಿದ್ದುದೂ ಒಂದು ಅಲಿಖಿತ ನಿಯಮವಾಗಿತ್ತು. ಅವರು ಒಟ್ಟಿಗೆ ಇರುವುದನ್ನು ಕಂಡವರು ಆಡಿಕೊಳ್ಳುತ್ತಿದ್ದರು, 'ಶುರುವಾಯ್ತಪ್ಪಾ ಇವರ ಸತ್ತ ಸಂಗ (ಸತ್ಸಂಗ!)'. ಹಾಗೆ ಸೇರಿದಾಗ ಯಾವುದಾದರೂ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದರು. ಹಾಗೆ ಒಂದು ದಿನ ಸೇರಿದಾಗ ಮುಠ್ಠಾಳ ಕೊಟ್ಟ ಬಿಸಿ ಬಿಸಿ ಬೋಂಡಾ ತಿನ್ನುತ್ತಾ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದರು. ಯಾರೂ ಮಾತು ಪ್ರಾರಂಭಿಸದಿದ್ದರಿಂದ ಮಂಕ ಗಂಟಲು ಸರಿ ಮಾಡಿಕೊಂಡು ತಾನೇ ಶುರು ಮಾಡಿದ:
"ಗೆಳೆಯರೇ, ಈ ವಿಷಯ ನಿಮಗೆ ಮೊದಲು ಹೇಳಿರಲಿಲ್ಲ. ಈಗ ಹೇಳಿಬಿಡುತ್ತೇನೆ. ನಾನು ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದೆ. ಆ ದೇವರು ನನ್ನನ್ನು ದುರ್ಬಲನಾಗಿ ಮಾಡಿಬಿಟ್ಟ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟ. ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ನನ್ನನ್ನು ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದ, ಏಕೆಂದರೆ ನಾನು ದೇವರನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದೆ, ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದ. ಆಮೇಲೆ ನಾನು ಅವನನ್ನು ಕೇಳಿಕೊಳ್ಳಬೇಕು ಅಂತ ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲ, ಆದರೆ ಆ ದೇವರು ಅವೆಲ್ಲವನ್ನೂ ನನಗೆ ಕೊಟ್ಟ. ನಾನು ಈಗ ಎಲ್ಲರಿಗಿಂತ ಹೆಚ್ಚು ಸುಖಿಯಾಗಿದೀನಿ."
'ಅವನು ಸುಖವಾಗಿರುವ ಮುಖ ನೋಡು' ಅಂತ ಮಡ್ಡಿ ಮನಸ್ಸಿನ ಒಳಗೇ ಗೊಣಗಿಕೊಂಡವನು ಮಂಕನಿಗೆ ಕೇಳಿದ: "ಹೌದಪ್ಪಾ, ಅಂಥಾದ್ದೇನು ನೀನು ದೇವರನ್ನು ಕೇಳಿಕೊಳ್ಳದೇ ಇದ್ದದ್ದು?"
"ಅದನ್ನು ನೀವು ಕೇಳಬಾರದು, ನಾನು ಹೇಳಲೂಬಾರದು"-ಮಂಕನ ಉತ್ತರ.
ಇವರ ಮಾತು ಕೇಳುತ್ತಿದ್ದ ಮೂಢ ಮೂಗು ತೂರಿಸಿದ: "ಮಂಕ ಹೇಳೋದು ಒಂದು ರೀತಿಯಲ್ಲಿ ಸರಿ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಅವರ ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು. ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ಮಾತುಗಳನ್ನು ನಾವು ಮುಟ್ಟೋಕಾಗಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಮಂಕ ಬುದ್ಧಿವಂತ, ಅದಕ್ಕೇ ಅದೇನು ಅಂತ ಹೇಳ್ತಾ ಇಲ್ಲ. ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತೆ ಬಿಡು. ಎಷ್ಟು ದಿನಾ ಅಂತ ಅದನ್ನು ಒಳಗೇ ಇಟ್ಟುಕೊಂಡು ಒದ್ದಾಡ್ತಾನೆ."
ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ನೋಡಿದ ಮರುಳ, "ಮಾತು ಆಡಕ್ಕಾಗಲ್ವಾ? ಒಳಗೇ ಇರ್ತಾವಾ? ಹೆಂಗೆ?" ಎಂದಾಗ ಮಡ್ಡಿ, "ಅಯ್ಯೋ, ಮರುಳೆ, ನೀನು ಒಂದು ಸುಂದರ ಹುಡುಗಿ ನೋಡ್ತೀಯ, ಅವಳು ಹೆಂಡತಿಯಾಗಿ ಸಿಕ್ಕರೆ ಅಂತ ಆಸೆ ಪಡ್ತೀಯಾ ಅಂತಿಟ್ಕೋ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ದೊಡ್ಡ ಶ್ರೀಮಂತ ಅಪ್ಪ. ನೀನೋ ಅಟ್ಲಾಸ್ ಸೈಕಲ್ ಮಾಲಿಕ. ನೀನು ಅವರಪ್ಪನ್ನ ಅಥವ ಆ ಹುಡುಗೀನ ನಿನ್ನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ನಿನ್ನ ಗಂಟಲ ಕೆಳಗೇ ಉಳಿದುಹೋಗುತ್ತೆ. ಅರ್ಥ ಆಯ್ತಾ? ಇನ್ನೊಂದು ಉದಾಹರಣೆ ಹೇಳಬೇಕು ಅಂದರೆ, ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಕೋ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗೀಗೂ ಅದೇ ಕಥೇ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಕೋ. ಇಬ್ಬರೂ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರ್ತಾವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗುತ್ತವೆ" ಎಂದವನೇ ತಾನು ಎಷ್ಟು ಬುದ್ಧಿವಂತ ಎಂಬಂತೆ ಉಳಿದವರ ಕಡೆ ಕಣ್ಣು ಹಾಯಿಸಿದ.
ಎಲ್ಲರ ತಟ್ಟೆಗಳಿಗೆ ಮತ್ತಷ್ಟು ಬೋಂಡ ತಂದು ಹಾಕುತ್ತಾ ಮುಠ್ಠಾಳ, "ಹೇಳಕ್ಕಾಗದೇ ಇದ್ರೆ ಏನಾಯ್ತು? ಒಳಗೇ ಇದ್ದರೆ ಇರಲಿ, ಏನಾಗುತ್ತೆ?" ಬೋಂಡಾದ ಮುಲಾಜಿಗೆ ಉಳಿದವರು ಅವನನ್ನು ಹಂಗಿಸಲಿಲ್ಲ. ಮೂಢ ಹೇಳಿದ, "ಹೇಳದೆ ಇದ್ದರೆ ಆ ಮಾತುಗಳು ಒಳಗೇ ಕುಣೀತಾ ಇರ್ತವೆ. ಹೊರಗೆ ಬರಲು ಚಡಪಡಿಸ್ತಾ ಇರ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ."
ಮಂಕ, "ಅನ್ನಿ, ಅನ್ನಿ. ನೀವು ನನ್ನನ್ನೇ ಅಂತಾ ಇರೋದು ಅಂತ ನನಗೆ ಗೊತ್ತು. ಒಂದು ವಿಷಯ ತಿಳ್ಕೊಳ್ಳಿ, ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು ಅನ್ನುವುದು ನೆನಪಿರಲಿ" ಅಂದ. ಎಲ್ಲರೂ ಮಂಕನ ಮೇಲೆ ಮುಗಿಬಿದ್ದರು. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀಯ? ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಸಿದ್ದಪ್ಪ ಎದೆ ಒಡೆದುಕೊಂಡ ಅಂದ ಹಾಗೆ ಆಯ್ತು ನಿನ್ನ ಮಾತು" ಎಂದರು. ಮಂಕನಿಗೆ ಸಿಟ್ಟು ಬಂದು ಹೇಳಿದ, "ನಾನು ಹೇಳಿದ್ದರಲ್ಲಿ ತಪ್ಪೇನಿದೆ, ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು ಅಂತ ಹೇಳಿದ್ದು. ಏಕೆಂದರೆ ಅವೇ ಮಾತುಗಳಾಗಿ ಹೊರಬರೋದು." "ಆಂ?" ಅಂತ ಎಲ್ಲರೂ ತಲೆ ಕೆರೆದುಕೊಂಡರು. 'ಬಾಯಿ ಬಿಟ್ಟರೆ ಬಣ್ಣಗೇಡು' ಅಂತ ಅವನ ಬಗ್ಗೆ ಆಡಿಕೊಳ್ತಾ ಇದ್ದವರು ಮಂಕ ಈರೀತಿ ಮಾತು ಎಲ್ಲಿ ಕಲಿತ ಅಂತ ಆಶ್ಚರ್ಯಪಟ್ಟರು.
"ಆಡಲು ಏನೋ ಇದೆ, ಆದರೆ ಆಡಲಾಗುವುದಿಲ್ಲ ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಬುದ್ಧಿವಂತರು ಏನೋ ಹೇಳುತ್ತಾರೆ, ಅವರಿಗೆ ಏನೋ ಹೇಳಲು ಇರುತ್ತದೆ. ದಡ್ಡರೂ ಏನೋ ಹೇಳಬೇಕು ಅಂತಾ ಹೇಳ್ತಾರೆ"-ಮೂಢ ಹೇಳಿದ ಈ ಮಾತು ಯಾರಿಗೂ ಅರ್ಥವಾಗಲಿಲ್ಲ. ಮರುಳ ಕೇಳೇಬಿಟ್ಟ, "ಹಂಗಂದ್ರೆ?" ಮೂಢ ಹೇಳಿದ, "ನಂಗೂ ಸರಿಯಾಗಿ ಗೊತ್ತಿಲ್ಲ, ನಮ್ಮ ಗುರುಗಳು ಮೊನ್ನೆ ಹೇಳಿದರು, ಅದನ್ನೇ ನಿಮಗೆ ಹೇಳಿದೆ."
ಇಷ್ಟು ಹೊತ್ತು ಸುಮ್ಮನೇ ಇದ್ದ ಮಡ್ಡಿ ಇನ್ನೂ ಸುಮ್ಮನೆ ಇದ್ದರೆ ತನ್ನನ್ನು ದಡ್ಡ ಅನ್ನುತ್ತಾರೆ ಅಂದುಕೊಂಡು ಬಾಯಿಬಿಟ್ಟ, "ಎಲ್ಲರೂ ಯಾಕೆ ಚರ್ಚೆ ಮಾಡುತ್ತಾರೆ ಗೊತ್ತಾ, ದೊಡ್ಡ ಬಾಯಿ ಮಾಡಿ ಬೇರೆಯವರ ಬಾಯಿ ಮುಚ್ಚಿಸುತ್ತಾರೆ ಗೊತ್ತಾ? ತಾವೇ ಬುದ್ಧಿವಂತರು, ತಮಗೇ ಹೆಚ್ಚು ತಿಳಿದಿದೆ, ಉಳಿದವರಿಗಿಂತ ತಾವೇ ಒಳ್ಳೆಯವರು, ತಾವೇ ಹೆಚ್ಚು ಕಷ್ಟಪಟ್ಟವರು, ತಾವೇ ಹೆಚ್ಚು ಅಂತ ತೋರಿಸಿಕೊಳ್ಳೋಕೆ. ತಮ್ಮ ಮಾತು ಕೇಳಿದರೆ ಪ್ರಪಂಚ ಉದ್ಧಾರ ಆಗುತ್ತೆ ಅಂತ ಅವರು ಅಂದುಕೊಳ್ತಾರೆ." ಗಂಟಲು ದೊಡ್ಡದು ಮಾಡಿಕೊಂಡು ವಿಷಯಕ್ಕೆ ಸಂಬಂಧಿಸದಿದ್ದ ಮಾತನಾಡಿದ ಮಡ್ಡಿಯನ್ನು ಎಲ್ಲರೂ ಬಾಯಿಬಿಟ್ಟುಕೊಂಡು ನೋಡಿದರು. ಯಾರಿಂದಲೂ ಪ್ರತಿಕ್ರಿಯೆ ಬರದಿದ್ದರಿಂದ ಮಡ್ಡಿಯ ಮುಖ ದಪ್ಪಗಾಯಿತು.
"ಅಪ್ಪಂದಿರಾ, ಇನ್ನು ಬೋಂಡಾ ಇಲ್ಲ, ಮುಗೀತು. ಕಾಫಿ ಕುಡಿದು ಜಾಗ ಖಾಲಿ ಮಾಡಿ. ಅಪ್ಪಾ, ಮೂಢೋತ್ತಮ, ವಂದನಾರ್ಪಣೆ ಮಾಡಿ ಮುಗಿಸಿಬಿಡು" - ಮುಠ್ಠಾಳ ಆರ್ಡರ್ ಮಾಡಿದಾಗ, ಎಲ್ಲರಿಗೂ ಏನೋ ಆಡಬೇಕು ಅನ್ನಿಸಿದರೂ ಆಡದೆ ಸುಮ್ಮನಾದರು. ಮೂಢ ಎಲ್ಲರ ಮುಖವನ್ನೂ ನೋಡುತ್ತಾ ಹೇಳಿದ: "ಗೆಳೆಯರೆ, ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳೋಣ. ಸರ್ವಜ್ಞನ ವಚನ ಹೇಳಿ ಮಾತು ಮುಗಿಸುತ್ತೇನೆ. 'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಆಡಿಯೂ ಮಾಡದವ ಅಧಮ ಸರ್ವಜ್ಞ'." ಮೂಢ ಮಾತು ಮುಗಿಸುತ್ತಿದ್ದಂತೆಯೇ "ಆಡುವುದಕ್ಕೆ ಆಗದೆ ಇರುವವನು?" ಎಂಬ ಮಾತು ಕೇಳಿಬಂತು. ಎಲ್ಲರೂ ತನ್ನನ್ನು ದುರುಗುಟ್ಟಿ ನೋಡಿದರೂ ನಸುನಗುತ್ತಾ ಇದ್ದ ಮುಠ್ಠಾಳನಿಗೆ ಗೊತ್ತಿತ್ತು, ಕಾಫಿ, ತಿಂಡಿ ಮುಲಾಜಿಗೆ ಯಾರೂ ಏನೂ ಆಡಲಾರರು ಅಂತ!
********************
-ಕ.ವೆಂ.ನಾಗರಾಜ್.
Comments
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by makara
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by ಗಣೇಶ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by partha1059
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by ಗಣೇಶ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by ಗಣೇಶ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by venkatb83
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by makara
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by partha1059
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by Jayanth Ramachar
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by H A Patil
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by kamala belagur
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by swara kamath
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ
In reply to ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ by Chikku123
ಉ: "ಆಡದ ಮಾತುಗಳು" - ಒಂದು ವಿಚಾರ ಸಂಕಿರಣ