ಆಡಳಿತದಲ್ಲಿ ಹೊಸ ಸುಧಾರಣೆಗಳನ್ನು ತಂದ ಹಮ್ಮುರಾಬಿ

ಆಡಳಿತದಲ್ಲಿ ಹೊಸ ಸುಧಾರಣೆಗಳನ್ನು ತಂದ ಹಮ್ಮುರಾಬಿ

ನಾವು ಶಾಲಾ ದಿನಗಳಲ್ಲಿ ಹಮ್ಮುರಾಬಿ ಶಾಸನದ ಬಗ್ಗೆ ಓದಿಯೇ ಇರುತ್ತೇವೆ. ಹಮ್ಮುರಾಬಿ ಎಂಬ ರಾಜ ತನ್ನ ಚಾಣಾಕ್ಷತನದ ಆಡಳಿತದ ಬುನಾದಿಯೊಂದಿಗೆ ಭವಿಷ್ಯದಲ್ಲಿ ಸಾಮ್ರಾಜ್ಯವನ್ನು ಮುನ್ನಡೆಸುವವರಿಗೆ ಮಾರ್ಗದರ್ಶಕನಾಗಿದ್ದಾನೆ ಎಂದರೆ ತಪ್ಪಾಗಲಾರದು. ಅತಿ ಪ್ರಾಚೀನ ಮಾನವ ನಾಗರಿಕತೆಗಳಲ್ಲಿ ಮೆಸಪಟೋಮಿಯಾ ಎಂಬ ನಾಗರಿಕತೆಯೂ ಒಂದು. ಯೂಫ್ರೆಟಿಸ್ ಹಾಗೂ ಟೈಗ್ರಿಸ್ ಎಂಬ ಎರಡು ನದಿಗಳ ನಡುವೆ ಇರುವ ಪ್ರಾಂತ್ಯವೊಂದರಲ್ಲಿ (ಈಗಿನ ಇರಾಕ್) ಈ ನಾಗರಿಕತೆಗಳು ಬೆಳೆದವು ಎಂಬುವುದಕ್ಕೆ ದಾಖಲೆಗಳು ದೊರಕುತ್ತವೆ. ಪ್ರಥಮವಾಗಿ ಸುಮೇರಿಯನ್ನರು, ತದ ನಂತರ ಇತರ ವಿವಿಧ ಜನಾಂಗದವರು ಈ ಪ್ರಾಂತ್ಯವನ್ನು ಮುನ್ನಡೆಸಿದರು. ಕ್ರಿ.ಪೂ. ೧೭೯೨ರಲ್ಲಿ ಬ್ಯಾಬಿಲಾನ್ ಎಂದು ಕರೆಯಲಾಗುವ ರಾಜ್ಯಕ್ಕೆ ‘ಹಮ್ಮುರಾಬಿ' ಎಂಬ ವ್ಯಕ್ತಿಯು ರಾಜನಾದನು.

ಹಮ್ಮುರಾಬಿ ಎಂಬ ವ್ಯಕ್ತಿಯು ಕ್ರಿ.ಪೂ. ೧೮೧೦ರಲ್ಲಿ ಜನಿಸಿದನು. ಬ್ಯಾಬಿಲಾನ್ ನಲ್ಲಿ ಆಡಳಿತ ನಡೆಸುತ್ತಾ ಕ್ರಮೇಣ ಇತರ ಅನೇಕ ನಗರ ರಾಜ್ಯಗಳನ್ನು ತಮ್ಮ ಅಧೀನದೊಳಗೆ ತೆಗೆದುಕೊಂಡು ಒಟ್ಟು ಮಸಪಟೋಮಿಯಾ ಪ್ರಾಂತ್ಯದಲ್ಲಿ ತನ್ನ ಅಧಿಕಾರಕ್ಕೆ ಲೋಪಬರದಂತೆ ಆಡಳಿತ ನಡೆಸಿದನು. 

ಹಮ್ಮುರಾಬಿಯ ಆಡಳಿತ ಆತನ ಹಿಂದೆ ಆಳಿದ ರಾಜರಿಗಿಂತ ಏಕೆ ವಿಭಿನ್ನವಾಗಿತ್ತು? ಇದಕ್ಕೆ ಉತ್ತರವೆಂದರೆ ಆತನ ಹಿಂದಿನ ರಾಜರು ತಾವೇ ಸ್ವತಃ ದೇವರ ಅವತಾರ ಅಥವಾ ದೇವರಿಗೇ ಸಮಾನ ಎಂಬ ಮನಸ್ಥಿತಿಯಲ್ಲಿ ರಾಜ್ಯವನ್ನಾಳುತ್ತಿದ್ದರು. ತಮ್ಮ ಪ್ರಜೆಗಳೂ ಸಹ ತಮ್ಮನ್ನು ದೇವರಂತೆಯೇ ನೋಡಿಕೊಳ್ಳಬೇಕೆಂದು ರಾಜಾಜ್ಞೆಯನ್ನು ವಿಧಿಸಿದ್ದರು. ಆದರೆ ಹಮ್ಮುರಾಬಿಯು ತನ್ನನ್ನು ದೇವರೆಂದು ಅಥವಾ ದೇವರ ಅವತಾರವೆಂದು ಕರೆಸಿಕೊಳ್ಳಲು ಬಯಸಲಿಲ್ಲ. ಆತ ಪ್ರಜೆಗಳ ನಡುವೆಯೇ ಬಾಳಿ ಬದುಕಿದ. ತನ್ನ ಪ್ರಜೆಗಳ ಒಳಿತಿಗಾಗಿಯೇ ಅನೇಕ ಉತ್ತಮ ಕಾರ್ಯಗಳನ್ನು ಕೈಗೊಂಡ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದ. ಜನರ ಒಳಿತಿಗಾಗಿ ಹೊಸ ಕಾನೂನುಗಳನ್ನು ರೂಪಿಸಿದ. ತನ್ನ ರಾಜ್ಯದ ಸ್ತ್ರೀಯರಿಗಾಗಿ ಉತ್ತಮ ಸ್ಥಾನಮಾನಗಳನ್ನು ನಿಗದಿ ಪಡಿಸಿದ. ಬಡವರಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದ. ಈ ರೀತಿಯ ಜನಪರ ಕಾರ್ಯಕ್ರಮಗಳಿಂದ ಹಮ್ಮುರಾಬಿಯು ಬಹುಬೇಗನೇ ಜನಪ್ರಿಯನಾದ.

ಆದರೆ ಆತನ ರಾಜ್ಯದಲ್ಲಿ ತಪ್ಪು ಕೆಲಸ, ಮೋಸ ವಂಚನೆ, ಕಳ್ಳತನ, ಕೊಲೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆಗಳು ಕಾದಿದ್ದವು. ಅವರನ್ನು ಯಾವುದೇ ದಯೆ ದಾಕ್ಷಿಣ್ಯವಿಲ್ಲದೇ ಶಿಕ್ಷೆಗೆ ಗುರಿಮಾಡುತ್ತಿದ್ದ. ಈ ಕಾರಣದಿಂದ ಜನರೂ ಪ್ರಾಮಾಣಿಕತೆಯಿಂದ ಬದುಕುವುದನ್ನು ರೂಢಿ ಮಾಡಿಕೊಂಡರು. ಇಂತಹ ಕಠಿಣ ಕ್ರಮಗಳಿಂದಾಗಿ ಬ್ಯಾಬಿಲೋನಿಯಾದ ಜನರಲ್ಲಿ ಶಾಂತಿ ಹಾಗೂ ಸುಖ ಸಂತೋಷಗಳು ನೆಲೆಗೊಂಡವು. ರಾಜಧಾನಿ ಬ್ಯಾಬಿಲೋನ್ ನಲ್ಲಿ ಐಶ್ವರ್ಯ-ಸಂಪತ್ತಿಗೆ ಕೊರತೆಯಿರಲಿಲ್ಲ. ಇಂತಹ ಜನಪರ ಆಡಳಿತ ನೀಡಿದ ಹಮ್ಮುರಾಬಿಯು ಕ್ರಿ.ಪೂ.೧೭೫೦ರಲ್ಲಿ ನಿಧನ ಹೊಂದಿದನು.

ಆದರೆ ಅವನು ಉತ್ತಮ ರಾಜ್ಯ, ಸಮಾಜಕ್ಕೆ ಹಾಕಿದ ಭದ್ರ ಅಡಿಪಾಯದಿಂದಾಗಿ, ಅವನ ನಂತರವೂ ಬ್ಯಾಬಿಲೋನಿಯಾ ಸಾಮ್ರಾಜ್ಯವು ೬೦೦ ವರ್ಷಗಳ ಕಾಲದವರೆಗೆ ಜೀವಂತವಾಗಿತ್ತು. ಓರ್ವ ದೂರದರ್ಶಿತ್ವ ಹೊಂದಿದ ರಾಜನ ಆಡಳಿತವು ಎಷ್ಟೆಲ್ಲಾ ಉತ್ತಮ ಪರಿಣಾಮಗಳನ್ನು ಬೀರುತ್ತವೆ ಎಂಬುವುದನ್ನು ಹಮ್ಮುರಾಬಿಯ ಆಡಳಿತ ವ್ಯವಸ್ಥೆಯಿಂದ ಅರಿವಾಗುತ್ತದೆ. ಈಗಲೂ ಉತ್ತಮ ಆಡಳಿತಕ್ಕೆ ಉದಾಹರಣೆಯಾಗಿ ಹಮ್ಮುರಾಬಿಯ ಆಡಳಿತವನ್ನೇ ಕೊಡುತ್ತಾರೆ. ಹಮ್ಮುರಾಬಿಯ ಶಾಸನಗಳಲ್ಲೂ ನಾವದನ್ನು ಗಮನಿಸಬಹುದಾಗಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ