ಆಡಳಿತ ಯಂತ್ರ ಚುರುಕಾಗಲಿ
ಸಿದ್ಧರಾಮಯ್ಯ ೨.೦ ಸರ್ಕಾರ, ಅಂದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಅವಧಿ ಶುರುವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಐದು ಭರವಎಶಳ ಈಡೇರಿಕೆಯು ನೂತನ ಸರಕಾರಕ್ಕೆ ಬಲುದೊಡ್ಡ ಸವಾಲಾಗಿದೆ. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ, ೧೦ ಕೆಜಿ ಅಕ್ಕಿಯ ಅನ್ನಭಾಗ್ಯ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಈ ಐದು ಭರವಸೆಗಳನ್ನು ಅನುಷ್ಟಾನ ಗೊಳಿಸಲು ಪ್ರಥಮ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆಯಾದರೂ ಎಲ್ಲರಿಗೂ ಇದರ ಫಲ ದೊರೆಯುತ್ತದೆಯೋ ಅಥವಾ ಷರತ್ತುಗಳನ್ನು ಹಾಕಿ ಕೆಲವರಿಗೆ ಸೀಮಿತಗೊಳಿಸಲಾಗುತ್ತದೆಯೋ ಎಂಬ ಅನುಮಾನಗಳು ತಲೆದೋರಿವೆ. ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸುತ್ತಿಲ್ಲ ಎಂಬ ವಾಗ್ದಾಳಿಯನ್ನು ಪ್ರತಿಪಕ್ಷ ಬಿಜೆಪಿ ಈಗಾಗಲೇ ಪ್ರಾರಂಭಿಸಿದೆ. ಇಂದು ಆರಂಭವಾಗುತ್ತಿರುವ ೧೬ನೇ ವಿಧಾನಸಭೆಯ ಪ್ರಥಮ ಅಧಿವೇಶನದಲ್ಲಿಯೂ ಈ ವಿಷಯವಾಗಿ ವಾಗ್ಯುದ್ಧ, ಜಟಾಪಟಿ ನಡೆಯುವ ಸಾಧ್ಯತೆಗಳೇ ಹೆಚ್ಚು. ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾರ್ಚ್ ೨೯ರಿಂದಲೇ ಮಾದರಿ ನೀರಿ ಸಂಹಿತೆ ಜಾರಿಗೊಳಿಸಲಾಗಿತ್ತು. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು ಜಾರಿಯಲ್ಲಿತ್ತು. ಈ ನೀತಿ ಸಂಹಿತೆ ಜಾರಿಗಾಗಿ ಹಾಗೂ ಚುನಾವಣೆ ಕಾರ್ಯಗಳಿಗಾಗಿ ಆಯೋಗವು ಬಹುತೇಕವಾಗಿ ಸರ್ಕಾರಿ ಸಿಬ್ಬಂದಿಗಳನ್ನೇ ಬಳಸಿಕೊಂಡ ಪರಿಣಾಮವಾಗಿ ಅಂದಾಜು ೨ ತಿಂಗಳುಗಳವರೆಗೆ ಸರ್ಕಾರಿ ಕಚೇರಿಗಳಲ್ಲಿ ಬಹುತೇಕವಾಗಿ ಕೆಲಸಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಅಡಚಣೆಗಳನ್ನು ಎದುರಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದು ನೂತನ ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದ್ದು, ಇನ್ನು ಮುಂದಾದರೂ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ಸಾಗಲಿ ಎಂದು ಆಶಿಸಬಹುದಾಗಿದೆ. ಈ ನಿಟ್ಟಿನಲ್ಲಿ ನೂತನ ಸರಕಾರ ಅಗತ್ಯ ಗಮನ ನೀಡಬೇಕಾಗಿದೆ. ಮಳೆಗಾಲ ಆರಂಭವಾಗುವ ಮುಂಚಿತವಾಗಿಯೇ ಅಡ್ಡಮಳೆಯಿಂದ ಬೆಂಗಳೂರಿನಲ್ಲಿ ಸಾವು-ನೋವು ಸಂಭವಿಸಿದ್ದು, ಮುಂಬರುವ ಮಳೆಗಾಲವು ರಾಜಧಾನಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರಿನ ಕೆ ಆರ್ ವೃತ್ತದ ಕೆಳಸೇತುವೆಯಲ್ಲಿ ಸಂಗ್ರಹಗೊಂಡಿದ್ದ ನೀರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಯುವತಿಯೊಬ್ಬರು ಅಸು ನೀಗಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ, ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈಗ ಸುರಿದ ಒಂದೆರಡು ದಿನಗಳ ಮಳೆಯಿಂದಾಗಿ ಮರಗಳು, ಕಂಬಗಳು ಅಲ್ಲಲ್ಲಿ ಧಾರಾಶಾಯಿಯಾಗಿವೆ. ವಿಧಾನಸೌಧದ ಬಳಿಯಲ್ಲಿಯೇ ವಿದ್ಯುತ್ ಕಂಬ ಉರುಳಿಬಿದ್ದಿದ್ದು ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಈಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಾದುದು ಅಪೇಕ್ಷಣೀಯ. ಶೀಘ್ರವೇ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜಿಸುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸಬೇಕಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೨-೦೫-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ