ಆಡಳಿತ ಸುಧಾರಣೆ ಮುಖ್ಯ

ಆಡಳಿತ ಸುಧಾರಣೆ ಮುಖ್ಯ

ಕೇಂದ್ರದ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕ ಮುಂತಾದ ಮಹತ್ವದ ಹುದ್ದೆಗಳಿಗೆ ಆಯಾ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಈಗ ವಿವಾದದ ವಿಷಯವಾಗಿ ಪರಿಣಮಿಸಿದೆ. ಕಾಂಗ್ರೆಸ್ ನಾಯಕರು ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈವರೆಗೆ ಇಂತಹ ಹುದ್ದೆಗಳಿಗೆ ಐ ಎ ಎಸ್ ಸ್ತರದ ಅಧಿಕಾರಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಕೇಂದ್ರ ಲೋಕಸೇವಾ ಆಯೋಗದ ಮೂಲಕ ನಡೆಯುವ ಐ ಎ ಎಸ್ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀತಿಯನ್ನು ಪಾಲಿಸಲಾಗುತ್ತದೆ.

ಹೀಗೆ ನೇರವಾಗಿ ಅಥವಾ ಪರ್ಯಾಯವಾಗಿ ನೇಮಕ (ಲ್ಯಾಟರಲ್ ಎಂಟ್ರಿ) ಮಾಡಿಕೊಂಡರೆ ಮೀಸಲಾತಿಯನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ಎಂಬುದು ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮುಂತಾದುವುಗಳ ನಾಯಕರ ಅಭಿಮತವಾಗಿದೆ.

ಆದರೆ ಈ ಪರಿಕಲ್ಪನೆ ಆರಂಭವಾಗಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ. ಇದನ್ನು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ೨೦೦೫ರಲ್ಲಿ ಸ್ಥಾಪಿಸಲಾದ ಎರಡನೇ ಆಡಳಿತ ಸುಧಾರಣೆ ಆಯೋಗ ಕೂಡ ಬಲವಾಗಿ ಅನುಮೋದಿಸಿತ್ತು ಎಂಬ ವಿಷಯವನ್ನು ಬಿಜೆಪಿ ನಾಯಕರು ಈಗ ಬಹಿರಂಗಪಡಿಸಿದ್ದಾರೆ. ಐ ಎ ಎಸ್ ಅಧಿಕಾರಿಗಳು ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರೂ ಸಾಕಷ್ಟು ಆಯಕಟ್ಟಿನ ಹುದ್ದೆಗಳನ್ನು ಈಗಾಗಲೇ ಅಲಂಕರಿಸಿದ್ದಾರೆ. ಆಯ್ದ ಕೆಲವೇ ಕೆಲವು ಮಹತ್ವದ ಹುದ್ದೆಗಳಿಗೆ ಖಾಸಗಿ ತಜ್ಞರನ್ನು ನೇಮಕ ಮಾಡಿಕೊಳ್ಳುವುದರಿಂದ ಇಡೀ ಅಧಿಕಾರಶಾಹಿಯ ನೇಮಕಾತಿ ಪ್ರಕ್ರಿಯೆಯನ್ನೇ ಖಾಸಗೀಕರಣ ಮಾಡಿದಂತೆ ಆಗುವುದಿಲ್ಲ ಎಂಬುದನ್ನು ವಿರೋಧ ಪಕ್ಷಗಳು ಗಮನಿಸಬೇಕು. ಈ ರೀತಿಯ ಕೆಲವು ನೇಮಕಾತಿಗಳ ಮೂಲಕ ಇಡೀ ಮೀಸಲಾತಿಯ ಆಶಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಅರ್ಥೈಸುವುದು ಕೂಡ ಅವಸರದ ಪ್ರತಿಕ್ರಿಯೆ ಎನಿಸಿಕೊಳ್ಳಬಹುದು.

ಈಗಾಗಲೇ ಕೆಲವು ರಾಜ್ಯ ಸರ್ಕಾರಗಳು ಕೂಡ ಹಲವಾರು ಉನ್ನತ ಹುದ್ದೆಗಳಿಗೆ ವಿಷಯತಜ್ಞರನ್ನು ನೇಮಕ ಮಾಡಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ವಿಷಯದಲ್ಲಿ ಆರೋಪ-ಪ್ರತ್ಯಾರೋಪಗಳ ಅವಶ್ಯಕತೆ ಇಲ್ಲ. ಈ ಪ್ರಯೋಗ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಿ, ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸೂಕ್ತವಾಗುತ್ತದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೦-೦೮-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ