ಆಡುವ ಕೈಗಳು ಮಾಡಿದ ತೋಟ (ಭಾಗ 1)

ಆಡುವ ಕೈಗಳು ಮಾಡಿದ ತೋಟ (ಭಾಗ 1)

ಹಸಿದವನಿಗೆ ಮೀನು ಕೊಟ್ಟರೆ ಇವತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ಜೀವನವಿಡೀ ಊಟ ಮಾಡುತ್ತಾನೆ. ನಿಮ್ಮಿಂದ ಯಾವುದು ಆದೀತು?
 
ಈ ಶಾಲೆ ಎರಡನ್ನೂ ಮಾಡುತ್ತದೆ. ಇವತ್ತು ಅವನ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ಅವನ ನಾಳೆಗಳನ್ನೂ ರೂಪಿಸುತ್ತದೆ. ಬಹುಶಃ ಗಣಿತ – ವಿಜ್ಞಾನದ ಜೊತೆಗೆ ಗುದ್ದಲಿ - ಸೊಟ್ಟಗಗಳನ್ನು ಹಿಡಿಯಲು ಕಲಿಸುವ ಏಕಮಾತ್ರ ಶಾಲೆ ಇದು.
 
“ರತ್ನಮಾನಸ" ಧರ್ಮಸ್ಥಳದವರು ನಡೆಸುವ ವಸತಿ ಶಾಲೆ, ಹೈಸ್ಕೂಲು ಮಕ್ಕಳಿಗೆ. ರಾಜ್ಯದ ನಾನಾ ಕಡೆಯ 90 ಮಕ್ಕಳು ಇಲ್ಲಿ ಉಳಿಯುತ್ತಾರೆ. ಆದರೆ ಬರೇ ಶಾಲೆ ಕಲಿತು ಊಟ ಮಾಡಿ ಮಲಗುವುದಕ್ಕಲ್ಲ ಇಲ್ಲಿ ಉಚಿತವಾಗಿ ವಸತಿ ಇರುವುದು. ಬೆಳಿಗ್ಗೆ ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಮೈಮುರಿದು ದುಡಿಯಬೇಕು. ಅಯ್ಯೋ ತಮ್ಮ ಮಕ್ಕಳಿಗೆ ಇಂಥಾ ಶಕ್ಷೆಯೇ ಎನ್ನುವಿರಾದರೆ ಅಂಥ "ಸುಖ ಪುರುಷ"ರಿಗಲ್ಲ ಈ ಶಾಲೆ ಇರೋದು!
 
ನಿಜ. ಎಲ್ಲ ಮಕ್ಕಳೂ ಈ ಶಾಲೆಯನ್ನೂ ದಕ್ಕಿಸಿಕೊಳ್ಳಲಾರರು. ಆಯ್ಕೆಯಲ್ಲೇ ಅಂಥವರು ಹೊರ ಬಂದಾರು. ಯಾಕೆಂದರೆ ಮಕ್ಕಳಿಗೆ ಸಂದರ್ಶನವೇ ಮೂರು ದಿವಸ. ಅಲ್ಲಿ ಹುಡುಗನ ನಿಜವಾದ ಸತ್ವ ಪರೀಕ್ಷೆ. ಸೆಗಣಿ ತೆಗಿ, ಪಾತ್ರೆ ತೊಳೆ, ಗೊಬ್ಬರ ಹೊರು ಮುಂತಾಗಿ ಕೆಲಸ ಮಾಡಿಸಿ ನೋಡುವಾಗ ಅನೇಕರು ಆಗಲೇ ಓಡಿಹೋಗುತ್ತಾರೆ. ಉಳಿದವರಲ್ಲಿ ಕೆಲಸ, ಪಾಠ, ಆಟ ಎಲ್ಲದರಲ್ಲೂ ಚುರುಕಿನ ಹುಡುಗ ಸಿಲೆಕ್ಟು.
 
“ರತ್ನ ಮಾನಸ" ವಸತಿ ಶಾಲೆಯ ಜೊತೆಗೇ ಗ್ರಾಮೀಣ ಬದುಕಿನ ತರಬೇತಿ ಶಾಲೆ. ಬೆಳಗಾದರೆ, ಸಂಜೆ ಪಾಠ ಮುಗಿದರೆ ಆಟದ ಯೋಚನೆ ಬಿಟ್ಟು ಕೆಲಸ ಮಾಡಬೇಕು. ಈ ಕಾಲದಲ್ಲಿ ಕೈ ಕೆಸರಾದರೆ ಬಾಯಿ ಮೊಸರು ಆಗುತ್ತದೋ ಇಲ್ಲವೋ. ಆದರೆ ರತ್ನಮಾನಸದಲ್ಲಿ ಮಾತ್ರ ಕೈ ಕೆಸರಾಗದೇ ಬಾಯಿ ಮೊಸರಾಗದು .
 
ಉಜಿರೆಗೆ ದೊಡ್ಡ ಡೈರಿ ರತ್ನಮಾನಸದ್ದು. ಸುಮಾರು 35 ಆಕಳು ಖಾಯಂ ಅಲ್ಲಿದ್ದಾವೆ. ವರ್ಷವರ್ಷ ಆಕಳು- ಕರುಗಳ ವ್ಯಾಪಾರವು ನಡೆಯುತ್ತದೆ. ಜೊತರಗೆ ನೂರು ಮಕ್ಕಳಿಗೆ ಹಾಲೆರೆದು ಮಿಕ್ಕಿದ ಸುಮಾರು 100 ಲೀ. ಹಾಲು ಮಾರಾಟ. ಇಷ್ಟು ದೊಡ್ಡ ಡೈರಿ ನಡೆಸುವುದೇನು ಹುಡುಗಾಟಿಕೆಯೇ?
 
ನಿಜ. ರತ್ನಮಾನಸದಲ್ಲಿ ಅದೊಂದು ಹುಡುಗಾಟಿಕೆಯೇ ! ದನಗಳಿಗೆ ಹುಲ್ಲು - ನೀರು ಕೊಡುವುದರಿಂದ ಹಿಡಿದು ಹಾಲು ಕರೆದು ಮನೆಗಳಿಗೆ ಹಂಚುವ ವರೆಗೆ ಎಲ್ಲಾ ಹುಡುಗರದೇ ಕೆಲಸ. ಎರಡು ತಂಡ ಕೊಟ್ಟಿಗೆಗೆ ನುಗ್ಗಿಬಿಟ್ಟರೆ ಕೆಲಸಗಳೆಲ್ಲಾ ಝಟ್ ಪಟ್. ಮತ್ತೆ, ಮೂರು ವರ್ಷಗಳಲ್ಲಿ ಪ್ರತಿ ಹುುಡುಗನಿಗೂ ಸ್ವಯಂ ಆಗಿ ಡೈರಿ ನಡೆಸುವಷ್ಟು ತರಬೇತಿ ಸಿಕ್ಕಿರುತ್ತದೆ.
 
ಎಂಟೆಂಟು ಜನರ ಎರಡು ತಂಡ ಕೊಟ್ಟಿಗೆಗೆ ನುಗ್ಗಿದರೆ ಇನ್ನೆರಡು ತಂಡ ಅಡಿಗೆ ಭಟ್ಟರ ಸಹಾಯಕ್ಕೆ ಬರುತ್ತಾರೆ. ದಿನಾ ಚಟ್ನಿ - ಮಳೆಗಾಲದಲ್ಲೊಮ್ಮೊಮ್ಮೆ ಹಲಸಿನ ಕಡುಬು - ಮಕ್ಕಳೇ ರುಬ್ಬಿ ಮಾಡುವುದು. ತಾವೇ ಮಾಡಿಕೊಂಡ ಕಡುಬು ತಿನ್ನುವಾಗಲಂತೂ, ಆಹಾ, ಸ್ವರ್ಗಕ್ಕೆ ಇನೆಷ್ಟು ಗೇಣು?
 
ಈ ಶಾಲೆಯ ಹೆಗ್ಗಳಿಕೆ ಇರೋದು ಅವರು ಅಭಿವೃದ್ಧಿಪಡಿಸಿರುವ ತೋಟದಲ್ಲಿ. 1973ರಲ್ಲಿ ರತ್ನಮಾನಸ ಆರಂಭಗೊಂಡಾಗ ನಿರುಪಯೋಗಿಯಾಗಿದ್ದ ಹತ್ತೆಕರೆ ಭೂಮಿಯಲ್ಲಿ ಈ ಮಕ್ಕಳು ಕೈಗೊಂಡ ಪ್ರಾಯೋಗಿಕ ಕೃಷಿ ಆಜನ್ಮ ರೈತಾಪಿ ಜನರೂ ಬಂದು ಕಲಿಯುವಂತಿದೆ. ಒಟ್ಟಾರೆ ಈ ಮಕ್ಕಳ ಸಾಧನೆ ಎಂಥದೆಂದರೆ ಅವರ ದುಡಿತ ಇಡೀ ಹಾಸ್ಟೆಲಿನ ಖರ್ಚಿನ ಅರ್ಧ ಭಾಗವನ್ನು ನಿಭಾಯಿಸುತ್ತದೆ.
 
 
(ಲೇಖನ ಬರೆದ ವರ್ಷ 1991)