ಆಡು ಆನೆಯ ನುಂಗಿ…

ಆಡು ಆನೆಯ ನುಂಗಿ…

ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ‌ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ

ಆಡು ಆನೆಯ ನುಂಗಿ,

ಗೋಡೆ ಸುಣ್ಣವ ನುಂಗಿ,

ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ!

ಕೋಡಗನ ಕೋಳಿ ನುಂಗಿತ್ತಾ…

ಆಡು ಕ್ರಿಯಾಪದವಾದರೆ ಆಡುವುದು ಎನ್ನುತ್ತೇವೆ. ಅದೇ ಆಡು ನಾಮ ಪದವಾದರೆ ಒಂದು ಪ್ರಾಣಿ, ಅಥವಾ ಜೀವಿ. ಮೇಕೆಯೆಂದೂ ಹೇಳುತ್ತೇವೆ. ಸಂಸ್ಕೃತದಲ್ಲಿ ಆಡಿಗೆ ಅಜ ಎನ್ನುವರು. ಅಜ ಎಂದರೆ ಜನ್ಮವಿಲ್ಲದ ಅಥವಾ ಶಾಶ್ವತವಾದ ಎಂಬ ಅರ್ಥವೂ ಇದೆ. ಜನ್ಮವಿಲ್ಲದ್ದು ಎಂದರೆ ಅದು ಬ್ರಹ್ಮ, ಬ್ರಹ್ಮನಿಗೆ ಜನನ ಮರಣಗಳಿಲ್ಲ. ಇದ್ದರೂ ಅದು ನಮ್ಮ ಉಹೆಗೆ ನಿಲುಕದ ಮಾತು. ಇಲ್ಲಿ ಆನೆಯೆಂದರೆ ಮದಗಜ ಎಂದೇ ಅರ್ಥ. ಮದೋನ್ಮತ್ತ ಅಥವಾ ಸೊಕ್ಕಿದ ಆನೆಯೆಂದು ವಿಶ್ಲೇಷಿಸಬಹುದು. ಮನುಷ್ಯನಲ್ಲಿ ದುರಹಂಕಾರ ಅಥವಾ ಮದವಿರುವುದು ಸಹಜ. ಈ ಮದವನ್ನು ಅಥವಾ ಸೊಕ್ಕನ್ನು ಇಳಿಸುವ ಶಕ್ತಿ ವಿವೇಕಿಯಲ್ಲಿರುತ್ತದೆ. ವಿವೇಕಿಗಳಾಗಲು ಬ್ರಹ್ಮಜ್ಞಾನವಿರಬೇಕು. ಆಡು ಆನೆಯನ್ನು ನುಂಗಿತೆಂದರೆ ಬ್ರಹ್ಮ ಜ್ಞಾನವು ಮನುಷ್ಯನೊಳಗಿರುವ ಅಹಂಕಾರವನ್ನು ನುಂಗಿತು ಅಥವಾ ನಾಶಗೊಳಿಸಿತು ಎಂದು ವಿಶಾಲ ಅರ್ಥ. ನಿರಹಂಕಾರಿಗಳಾಗಲು ಬ್ರಹ್ಮ ಜ್ಞಾನಿಗಳಾಗಬೇಕು. ಜ್ಞಾನಾಂಕುಶ ಅಹಂಕಾರವನ್ನು ನುಂಗುತ್ತದೆ.

ಬಹಳ ಹಿಂದೆ ಮನೆಯ ಗೋಡೆಗಳನ್ನು ಮಣ್ಣಿನಿಂದ ರಚಿಸುತ್ತಿದ್ದರು. ಇಂದು ಮಣ್ಣಿನ ಗೋಡೆಯ ಕಟ್ಟಡ ನಿರ್ಮಿಸುವುದು ವಿರಳಾತಿ ವಿರಳ. ಶಿಶುನಾಳ ಶರೀಫರ ಕಾಲಮಾನ 19ನೇಯ ಶತಮಾನ. ಆ ದಿನಗಳಲ್ಲಿ ಆಧುನಿಕ ಮಾದರಿಯ ಗೋಡೆಗಳು ಅಪರೂಪವಾಗಿರ ಬಹುದಾದ ದಿನಗಳು. ಅವರು ಗೋಡೆಯೆಂದಿರುವುದು ಮಾನವನ ದೇಹವನ್ನು. ದೇಹ ಪಂಚಭೂತಗಳಿಂದಾದುದಲ್ಲವೇ? ಪಂಚಭೂತಗಳಲ್ಲಿ ಮಣ್ಣೂ ಒಂದು ಅಂಶ. ಸುಣ್ಣ ಎಂದರೆ ಬಿಳಿ ಬಣ್ಣ. ಹಿಂದೆ ಗೋಡೆಗಳಿಗೆ ಇಂದಿನಂತೆ ವಿವಿಧ ಬಣ್ಣಗಳನ್ನು ಹಚ್ಚುವ ಕ್ರಮವಿರಲಿಲ್ಲ. ಅಲಂಕಾರಕ್ಕೆಂದು ಸುಣ್ಣವನ್ನು ನೀರಿನಲ್ಲಿ ಕರಗಿಸಿ ಗೋಡೆಗೆ ಲೇಪಿಸುತ್ತಿದ್ದರು. ಮೃಣ್ಮಯವಾದ ದೇಹವನ್ನು ಚಿನ್ಮಯಗೊಳಿಸುವುದು ಎಂಬರ್ಥದಲ್ಲಿ ಗೋಡೆಗೆ ಸುಣ್ಣ ಅಥವಾ ಬಣ್ಣ ಎಂದು ಶರೀಫರು ಸಾಲನ್ನು ಶೃಂಗರಿಸಿದ್ದಾರೆ. ಮೃಣ್ಮಯ ದೇಹವನ್ನು ಚಿನ್ಮಯವಾದ ದೇಹ ನುಂಗಬೇಕು. ಆ ಮೂಲಕ ಜೀವನ ಸಾರ್ಥಕವಾಗಬೇಕು. 

ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ ಎಂಬ ಸಾಲು ಬಲುರೋಚಕವಾಗಿದೆ. ಪಾತ್ರದವಳು ಎಂದರೆ ಪಾತ್ರಧಾರಿಣಿ. ನಾಟಕ, ನೃತ್ಯಗಳಲ್ಲಿ ಪಾತ್ರಧಾರಿಗಳಿರುತ್ತಾರೆ. ಅವರು ತಮ್ಮ ಪ್ರದರ್ಶನದ ಮೂಲಕ ನೋಡುಗರ ಮನಸನ್ನು ಸೆಳೆಯುತ್ತಾರೆ ನಮ್ಮ ಮನಸ್ಸು ಸಹಜವಾಗಿಯೇ ಮನರಂಜನೆಗಳಿಗೆ ಸೂರೆಗೊಳ್ಳುತ್ತದೆ. ಮದ್ದಲಿಯು ವಾದನ. ಅದರಿಂದ ಹೊರ ಬರುವ ಧ್ವನಿ ಓಂಕಾರ, ಎಂದರೆ ಪ್ರಣವ ಬೀಜಾಕ್ಷರ. ಮನಸನ್ನು ಭಗವಂತನಲ್ಲಿ ಕೇಂದ್ರೀಕರಿಸುವ ಶಕ್ತಿ ಮದ್ದಲಿ (ಮದ್ದಳೆ) ಗಿದೆ. ಮದ್ದಲಿಯೆಂದರೆ ಜಾಗೃತಿಯ ಪ್ರತಿಮೆ. ವಿವಿಧ ಲೌಕಿಕ ಸಂಗತಿಗಳಿಂದ ಮತ್ತು ಆಕರ್ಷಣೆಗಳಿಂದ ಸೂರೆಗೊಳ್ಳುವ ಮನಸ್ಸನ್ನು ವಿಮುಖಗೊಳಿಸಿ ಭಗವಂತನೆಡೆಗೆ ಕೇಂದ್ರೀಕರಿಸಲು ಮದ್ದಲೆ ಪಾತರದವಳನ್ನು ನುಂಗಬೇಕು ಎಂದು ಶಿಶುನಾಳರು ವಿವರಿಸಿದ್ದಾರೆ. ಎಂತಹ ಒಳನೋಟ ಎಂದೆನಿಸುವುದಲ್ಲವೇ? ಪಾತರದವಳು ಮನಸನ್ನು ಸೂರೆ ಮಾಡುತ್ತಾಳೆಯಾದರೆ ಮದ್ದಳೆ ಜಾಗೃತಗೊಳಿಸುತ್ತದೆ.

ಒಳ್ಳು ಒನಕಿಯ ನುಂಗಿ

ಕಲ್ಲು ಗೂಟವ ನುಂಗಿ

ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ! ಕೋಡಗನ ಕೋಳೀ ನುಂಗಿತ್ತಾ….

ಇಂದಿನ ಪೀಳಿಗೆಗೆ ಒರಳು ಮತ್ತು ಒನಕೆಗಳ ಪರಿಚಯ ಅತಿ ವಿರಳ. ಹಿಂದೆ ಕುಟ್ಟಣದ ಕೆಲಸಗಳಿಗೆ, ವಿಶೇಷವಾಗಿ ಭತ್ತ ಕುಟ್ಟಿ ಅಕ್ಕಿ ಮಾಡಲು ಒರಳು ಮತ್ತು ಒನಕೆ ಬಳಸುತ್ತಿದ್ದರು. ಕುಟ್ಟುವ ಕೆಲಸ ಅತ್ಯಂತ ವ್ಯಾಯಾಮದಾಯಕ ಮತ್ತು ತ್ರಾಸದಾಯಕ. ಒರಳಿಗೆ ಒಂದು ಸ್ಥಾಯಿತ್ವವಿದೆ. ಅದನ್ನು ಮಣ್ಣಿನಲ್ಲಿ ಸ್ಥಿರವಾಗಿ ಸ್ಥಾಪನೆ ಮಾಡುತ್ತಾರೆ. ಒರಳಿನಲ್ಲಿ ವಸ್ತುವಿದ್ದಾಗ ಮಾತ್ರ ಒನಕೆಗೆ ಕೆಲಸ. ಮನುಷ್ಯನಿಗೆ ಸಂಬಂಧಿಸಿ ಹೇಳುವುದಾದರೆ ಆಸೆಯೆಂಬ ವಸ್ತುವನ್ನು ಸ್ಥಿರವಾದ ಮನಸ್ಸಿನಿಂದ ಕುಟ್ಟಿದಾಗ ಆಸೆಯು ನಾಶವಾಗಿ ನಿರಾಳವಾಗುತ್ತದೆ. ಒರಳಿನಲ್ಲಿರುವ ಆಸೆಯೆಂಬ ವಸ್ತು ಒನಕೆಯಿಂದ ಕುಟ್ಟಲ್ಪಟ್ಟು ಹದಗೊಳ್ಳುತ್ತದೆ, ವಸ್ತು ಖಾಲಿಯಾದಾಗ ಒನಕೆಗೆ ಆರಾಮ. ನಮ್ಮ ಆಸೆಗಳು ಕೊನೆಗೊಂಡಾಗ ನಲಿವು ಲಭಿಸುತ್ತದೆ. ಮನಸ್ಸಿನಲ್ಲಿ ಆಸೆಗಳು ಚಿಗುರವುದಿಲ್ಲ. ಮನಸ್ಸು ಆಸೆಗಳಿಂದ ಮುಕ್ತವಾಗಿ ಆರಾಮವಾಗುತ್ತದೆ. ಜೀವನವು ಸಹ್ಯವೂ ಸಭ್ಯವೂ ಆಗಬೇಕಾದರೆ ಒರಳು ಒನಕೆಯನ್ನು ನುಂಗಬೇಕು. ಒನಕೆಯನ್ನು ನುಂಗಬೇಕಾದರೆ ಒರಳಿನಲ್ಲಿ (ಮನದಲ್ಲಿ) ಆಸೆಯೆಂಬ ವಸ್ತು ಇರಬಾರದು.

ಕಲ್ಲು ಗೂಟವ ನುಂಗಿ…. ಈ ಸಾಲಿನ ಕಲ್ಲು; ಬೀಸುವ ಕಲ್ಲು. ಬೀಸುವ ಕಲ್ಲಿನಲ್ಲಿ ಎರಡು ಭಾಗಗಳಿವೆ. ಮೇಲ್ಭಾಗದ ಕಲ್ಲಿನಲ್ಲಿ ಮರದ ಹಿಡಿಕೆಯಿದೆ. ಮಧ್ಯೆ ರಂಧ್ರವಿದೆ, ತಳ ಭಾಗದ ಕಲ್ಲಿನಲ್ಲಿ ಮಧ್ಯೆಯಿರುವ ಗೂಟಕ್ಕೆ ಮೇಲಿನ ಕಲ್ಲನ್ನು ರಂಧ್ರದ ಮೂಲಕ ಪೋಣಿಸಲಾಗುತ್ತದೆ. ರಂಧ್ರಭಾಗದಲ್ಲಿ ಹಾಕಿದ ಕಾಳು ಗೂಟದ ಮೂಲಕ ಕೆಳಗಿನ ಕಲ್ಲಿಗಿಳಿದಂತೆ ಮೇಲಿನ ಕಲ್ಲನ್ನು ಹಿಡಿಕೆಯ ಸಹಾಯದಿಂದ ತಿರುಗಿಸಲಾರಂಭಿಸುತ್ತೇವೆ. ಗೂಟದಿಂದಾಗಿ ಮೇಲಿನ ಕಲ್ಲು ಹೊರಗೆ ಬಾರದು, ಕೆಳಗಿನಕಲ್ಲು ಅತ್ತಿತ್ತ ಕದಲದು. ಕದಲಾಗದ ನಿಸ್ತೇಜ ಸ್ಥಿತಿಗೆ ಕಲ್ಲು ಸಾಕ್ಷಿಯಾದರೆ ಗೂಟವು ಚಾಲಕ ಶಕ್ತಿ. ನಾವು ಕೆಲವೊಮ್ಮೆ ಮೇಲೇರದೆ ಇದ್ದಲ್ಲಿಯೇ ನಿಸ್ತೇಜರಾಗಿ ಉಳಿದುಬಿಡುತ್ತೇವೆ. ನಮಗೆ ಮೇಲೇರಲು, ಕದಲಲು ಚೈತನ್ಯ ಬೇಕು. ಆ ಚೈತನ್ಯ ಗೂಟದೋಪಾದಿಯ ಭಗವಂತ. ಭಗವಂತನ ಅನುಗ್ರಹ ಇಲ್ಲದೆ ನಮ್ಮ ಉತ್ಥಾನ ಸಾಧ್ಯವಿಲ್ಲ. ನಮ್ಮನ್ನು ಬೇಕಾದಂತೆ ನಡೆಸುವ ಮತ್ತು ನಿಯಂತ್ರಿಸುವ ಗೂಟ ಭಗವಂತನೆಂಬ ಸತ್ಯದ ಅರಿವು ನಮಗಿರಬೇಕು ಎನ್ನುವುದು ಶರೀಫರ ಇಂಗಿತವಾದಂತೆ ಕಾಣುವುದಿಲ್ಲವೇ?

ಮೆಲ್ಲಲು ಬಂದ ಮುದುಕಿಯನ್ನು…. ಈ ಸಾಲು ಇನ್ನೂ ಮನೋಜ್ಞ. ನೆಲ್ಲು ಎಂದರೆ ಫಲ. ಮುದುಕಿಯೆಂದರೆ ನಶ್ವರವಾದ ದೇಹ. ಈ ಶರೀರ ಬಿದ್ದು ಹೋಗುತ್ತದೆ. ಆಗ ಜೀವಾತ್ಮಕ್ಕೆ ಮೋಕ್ಷ ದೊರೆಯಬೇಕು. ಮೋಕ್ಷವು ದೊರೆಯದಿದ್ದರೆ ಮತ್ತೆ ಹುಟ್ಟು ಸಾವುಗಳನ್ನು ಅನುಭವಿಸಬೇಕು. ಜೀವಾತ್ಮಕ್ಕೆ ಮೋಕ್ಷ ದೊರೆತಾಗ ಮರುಜನ್ಮ ಕಳಚುತ್ತದೆ, ಮೋಕ್ಷವೇ ಜೀವನದ ಪರಮ ಪವಿತ್ರ ಗುರಿ ಮತ್ತು ಬಹು ಅಪೇಕ್ಷಿತ ಫಲ. ಎಲ್ಲ ಆಸೆಗಳನ್ನು ಕಳಚಿ, ಬ್ರಹ್ಮ ಜ್ಞಾನದ ಮೂಲಕ ಜಗದೊಡೆಯನೇ ನಮ್ಮ ಚಾಲಕ, ಅವನೇ ಸತ್ಯ ಎಂಬ ಅರಿವಾದಾಗ ನಮ್ಮ ಅಲೌಕಿಕ ಜೀವಾತ್ಮ ಮೋಕ್ಷ ಪಡೆದು ಲೌಕಿಕ ದೇಹವು ನಾಶವಾಗುತ್ತದೆ. ಆದುದರಿಂದ ನಮ್ಮ ಕರ್ಮಗಳು ಸುಕರ್ಮಗಳೇ ಆಗಿದ್ದು ಸತ್ಯ ಪಥದಲ್ಲಿರಬೇಕು ಎಂದು ಶಿಶುನಾಳ ಶರೀಫರು ಹೇಳುವ ತತ್ವ.

ಮುಂದೆಯೂ ಇದೆ…

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ