ಆಡು ಮೇಕೆಗಳ ವರ್ಷ (ಚೀನಿ ಹೊಸವರ್ಷ)

ಆಡು ಮೇಕೆಗಳ ವರ್ಷ (ಚೀನಿ ಹೊಸವರ್ಷ)

 

ಈ ವರ್ಷದ ಬಾರಿ
ಚೀನಿ ಹೊಸ ವರ್ಷದ ಪ್ರಾಣಿ
ಮೇಕೆಯ ದರಬಾರು
ಆಡುಗಳದೂ ಸಹ-ಗಮನ ||

ಹಬ್ಬಕ್ಕಿರಬೇಕು ಔತಣ
ಶ್ಯಾವಿಗೆ ತರಕಾರಿ ಮಾಮೂಲು ಬಿಡಿ
ಸಾಸು ಕಲಚಿ, ಪುಡಿ ಎರಚಿ
ಅಡಿಗೆ ಮೀನು-ಮಾಂಸಾದಿ ಚಪ್ಪಡಿ ||

ವಾಹ್! ಕಲಾ ಪ್ರದರ್ಶನ..
ಜೋಡಿಸಿಟ್ಟಲಂಕರಣ ಜಾಗಟೆ ಸದ್ದು
ಸಂಪತ್ಸೂಚಿ ಕಣ್ಬಿಟ್ಟ ಮೀನುಟ್ಟು
ನಿರ್ಜೀವದಲು ಲವಲವಿಕೆ ದಿರಿಸು ||

ಕುರಿ, ಆಡು, ಮೇಕೆ, ಹೋತ
ಕೆಂಪು ಮಾಂಸ ಗಿರಾಕಿಗಳ ಜಾತ್ರೆ
ಸಿಪ್ಪೆಯಂತೆ ತರಿದು ಸುರುಳಿ
ಸುತ್ತಿದ ಕೆಂಪು ಸೀರೆಗು ಬಿಳಿ ಸೆರಗು ||

ನಿಲದಷ್ಟಕೆ ಭಕ್ಷ್ಯ ಭೋಜ್ಯ
ಸಾಗರೋತ್ಪನ್ನ ವರಹಾನಂದಿ ಜತೆಗೆ
ತರತರಾಕಾರ ಬೆಂದ ಪಕ್ವಾಪಕ್ವ
ಸೊಪ್ಪಾಡುವ ಸೂಪು, ಅನ್ನದ ಬಟ್ಟಲು ||

ಸೇರಿದೆ ಬಂಧು ಬಳಗವೆಲ್ಲ
ಮುನ್ನಾದಿನದ ಸಂಜೆಯಾ ಮಿಲನ
ಮೋಜಲಿ ನೆರೆದು ಮೇಜ ಸುತ್ತ
ಬಾಯ್ಕಡ್ಡಿಯಲೆತ್ತಿದೆತ್ತರ ವರ್ಷದುಡುಕು ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by nageshamysore Wed, 02/25/2015 - 22:01

In reply to by kavinagaraj

ಕವಿಗಳೆ ನಮಸ್ಕಾರ. ಅವರು ಪ್ರತಿ ವರ್ಷಕ್ಕೊಂದು ಪ್ರಾಣಿಯ ಹೆಸರಿನ ವರ್ಷವನ್ನೆ ಆಚರಿಸಿದರು, ಆ ಪ್ರಾಣಿಗಳಿಗೇನು ವಿನಾಯ್ತಿ ಸಿಗುವಂತಿಲ್ಲ ಬಿಡಿ. ನಿಜ ಹೇಳುವುದಾದರೆ, ಆಡು, ಕೋಳಿಗಳನ್ನು ಅವುಗಳ ವರ್ಷದಲ್ಲಿ ಮಾತ್ರವಲ್ಲದೆ, ಬೇರೆ ಪ್ರಾಣಿಗಳ ವರ್ಷದಲ್ಲೂ ಯಥೇಚ್ಛವಾಗಿ ಮಾರಣ ಹೋಮ ಮಾಡಿ ಕಬಳಿಸುವುದು ಸತ್ಯದ ಸಂಗತಿ. ಹೀಗಾಗಿ, ಕುದುರೆ, ಹುಲಿ, ಹಾವುಗಳಂತಹ ಪ್ರಾಣಿಗಳೆ ಪುಣ್ಯವಂತರು. ಅವುಗಳ ವರ್ಷವಾಗಲಿ, ಬೇರೆ ಪ್ರಾಣಿಗಳ ವರ್ಷವಾಗಲಿ ಬಲಿಯಾಗುವ ಸಂಖ್ಯೆ ಕಡಿಮೆಯೆ - ಕುರಿ, ಕೋಳಿ, ದನಗಳಿಗೆ ಹೋಲಿಸಿದರೆ!