'ಆಡು ಹುಲಿ' ಈಗ ಆಂಡ್ರಾಯ್ಡ್ ಮೊಬೈಲಿನಲ್ಲಿ

'ಆಡು ಹುಲಿ' ಈಗ ಆಂಡ್ರಾಯ್ಡ್ ಮೊಬೈಲಿನಲ್ಲಿ

ನ್ನಡದ ಜಾನಪದ ಲೋಕದ ಇತಿಹಾಸ ಶ್ರೀಮಂತವಾದದ್ದು. ಹುಟ್ಟಿದ ಮಗುವಿಗೆ ಅಕ್ಕರೆಯ ಜೋಗುಳ, ಬೆಳೆಯುತ್ತಿರುವ ಬಾಲ ಬಾಲೆಯರಿಗೆ ನೀತಿ ಪಾಠಗಳು, ಗಂಡನ ಮನೆಗೆ ಹೊರಟ ಎಳೆ ವಧುವಿಗೆ ದಾಂಪತ್ಯದ ಗುಟ್ಟುಗಳು, ಯುವಕರಿಗೆ ಬದುಕಿನ ಒಳನೋಟಗಳು, ಹಬ್ಬ ಹರಿದಿನಕ್ಕೆ ನೂರಾರು ಬಗೆಯ ಅಡುಗೆಗಳು, ಹಸೆ ಹಾಡುಗಳು ಇತ್ಯಾದಿ.

ನಮ್ಮ ಜಾನಪದದಲ್ಲಿ ಕ್ರೀಡಾ ವಿನೋದಗಳಿಗೂ ಕೊರತೆಯಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕಿಯರವರೆಗೆ ಎಲ್ಲರೂ ಆಡಬಹುದಾದ ತರಹೇವಾರಿ ಆಟಗಳಿವೆ. ಮನೆಯ ಅಟ್ಟದಲ್ಲಿ, ಜಗುಲಿಯ ಮೇಲೆ, ಮನೆಯ ಹಿತ್ತಿಲು, ಅಂಗಳದಲ್ಲಿ, ಊರಿನ ಕೆರೆಯ ಬದುವಿನಲ್ಲಿ, ಬಾವಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಆಡಬಹುದಾದ ಅನೇಕ ಆಟಗಳನ್ನು ಜಾನಪದ ಲೋಕ ಹೊಂದಿದೆ.

ಇಂತಹ ಆಟಗಳಿಗೆ ದುಬಾರಿ ಸಲಕರಣೆಗಳ ಅಗತ್ಯವೂ ಇರಲಿಲ್ಲ. ಒಂದು ತೊಳ್ಗಾತ್ರದ ದುಂಡನೆಯ ಕೋಲು, ಚಿಕ್ಕದೊಂದು ತೋರು ಬೆರಳುದ್ದದ್ದ ಕಟ್ಟಿಗೆಯ ತುಂಡು ಸಿದ್ಧ ಮಾಡಿಕೊಂಡರೆ ಚಿನ್ನಿ - ದಾಂಡು (ಗಿಲ್ಲಿ ದಾಂಡು). ಹತ್ತಿಪ್ಪತ್ತು ಹುಣಸೆ ಬಿಕ್ಕ ಆಯ್ದು ತಂದರೆ ಅಳಿಗುಳಿ (ಚೆನ್ನಮಣೆ), ಬಳೆ ಚೂರುಗಳನ್ನು ಸೇರಿಸಿದರೆ ಚೌಕಾಬಾರ...

ಕೋಟೆ, ದೇವಾಲಯ, ಮನೆಯ ಜಗುಲಿ ಹೀಗೆ ಬಿಡುವಿನಲ್ಲಿ ನಾಲ್ಕು ಮಂದಿ ಕಲೆಯಬಹುದಾದ ಜಾಗಗಳಲ್ಲಿ ನೆಲದಲ್ಲಿ ಕೊರೆಯಲ್ಪಟ್ಟ ತ್ರಿಕೋನಾಕಾರದ ಒಂದು ಆಟದ ಪಟವನ್ನು ನೀವು ಗಮನಿಸಿರಬಹುದು. ಇದು ಆಡು ಹುಲಿ ಎಂದು ಕರೆಯಲ್ಪಡುವ ಆಟದ ಪಟ. ಮೂರು ಹುಲಿಗಳು ಹಾಗೂ ಹದಿನೈದು ಆಡುಗಳನ್ನು ನಡೆಸುವ ಆಟ. ಪಟದಲ್ಲಿ ಒಂದು ಬಿಂದುವಿನಿಂದ ಇನ್ನೊಂದಕ್ಕೆ ಜಿಗಿಯುತ್ತ ಹುಲಿ ಆಡುಗಳನ್ನು ಬೇಟೆ ಆಡಿದರೆ, ಆಡುಗಳು ಹುಲಿಗೆ ಜಿಗಿಯಲು ಆಸ್ಪದ ಕೊಡದಂತೆ ಒಗ್ಗಟ್ಟಿನಲ್ಲಿ ಮಂದೆಯನ್ನು ರಕ್ಷಿಸಿಕೊಂಡು ಹೋಗುತ್ತವೆ. ಚಾಣಾಕ್ಷ ಕೌಶಲ್ಯಪೂರ್ಣ ನಡೆಗಳಿಂದ ಆಟ ಮುಂದುವರೆದು ಹುಲಿಗಳು ಐದು ಆಡುಗಳನ್ನು ಹಿಡಿದರೆ ಇಲ್ಲವೇ ಆಡುಗಳು ಹುಲಿಗಳಿಗೆ ಜಿಗಿಯಲು ಜಾಗವಿಲ್ಲದಂತೆ ಅವನ್ನು ಸುತ್ತುವರಿದರೆ ಆಟ ಪೂರ್ಣವಾಗುತ್ತದೆ.

ಈ ರೋಮಾಂಚನಕಾರಿ ಆಟವನ್ನು ಇಂದಿಗೂ ದಕ್ಷಿಣ ಭಾರತದ ಅನೇಕ ಹಳ್ಳಿಗಳಲ್ಲಿ ಆಡುತ್ತಾರೆ. ದಕ್ಷಿಣ ಭಾರತದ ಜನಪ್ರಿಯ ಜಾನಪದ ಆಟವಾದ 'ಆಡು ಹುಲಿ' ಆಟವನ್ನು ನೀವೀಗ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಆಡಬಹುದು!

ಸಾರಂಗ ಇನ್ಫೋಟೆಕ್ ಅಭಿವೃದ್ಧಿ ಪಡಿಸಿರುವ "ಆಡು ಹುಲಿ" ಅಪ್ಲಿಕೇಶನ್ ಈಗ ಗೂಗಲ್ ಪ್ಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡು ಬಳಸಬಹುದು.

ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಇಲ್ಲಿ ಭೇಟಿ ಕೊಡಿ.

"ಆಡು ಹುಲಿ" ನಿಮಗಿಷ್ಟವಾದರೆ ಉತ್ತಮ ರೇಟಿಂಗ್ ನೀಡಿ ಪ್ರೋತ್ಸಾಹಿಸಿ.