ಆತಂಕವಾದಿಗಳೂ... ಮಾದಕವಸ್ತುಗಳೂ...

ಆತಂಕವಾದಿಗಳೂ... ಮಾದಕವಸ್ತುಗಳೂ...

ಬರಹ

ಹೊಸ ಹೊಸ ರೀತಿಯಲ್ಲಿ ನಮ್ಮ ದೇಶದ ಮೇಲೆ ಆಕ್ರಮಣ ಮಾಡುವುದು ಆತಂಕವಾದಿಗಳಿಗೆ ಒಂದು ಆಟವೇ ಆಗಿ ಹೋಗಿದೆ. ಮುಂಬೈ, ಪುಣೆ, ದೆಹಲಿ, ಬೆಂಗಳೂರು, ಹೈದರಾಬಾದ್, ಹೀಗೆ ಯಾವುದೇ ನಗರದಲ್ಲಿ ಸಂಭವಿಸಿರುವ ಉಗ್ರವಾದಿ ದಾಳಿಗಳನ್ನೇ ತೆಗೆದುಕೊಂಡರೂ ಇವುಗಳಲ್ಲಿ ಎದ್ದು ಕಾಣುವುದು ಈ ಮಂದಿಗೆ ಇಷ್ಟೆಲ್ಲಾ ಸಂಪನ್ಮೂಲಗಳು ಹೇಗೆ ಒದಗಿಬರುತ್ತವೆ ಎಂಬುದು. ನಮ್ಮದೇ ದೇಶದ ಕೆಲವರು ಇದಕ್ಕೆ ಸಹಕಾರಿಯಾಗಿಯೇ ಇದ್ದಾರೆಂದೇ ತಿಳಿದರೂ, ಇಷ್ಟೆಲ್ಲಾ ಕಾರ್ಯಾಚರಣೆಗಳನ್ನು ನಡೆಸಲು ತಗಲುವ ಸಮಯ, ಮಾನವ ಸಂಪನ್ಮೂಲಗಳನ್ನು ಹೊರತುಪಡಿಸಿ ಬಹುಮುಖ್ಯವಾದ “ಹಣ” ಎಂಬ ಸಂಪನ್ಮೂಲ ಎಲ್ಲಿಂದ ಬರುತ್ತಿದೆ ಎಂಬದರ ಬಗ್ಗೆ ನನಗೆ ಬಹಳ ಕುತೂಹಲವಿತ್ತು. ಇತ್ತೀಚೆಗೆ ಆಕಸ್ಮಿಕವಾಗಿ ಬಿ.ಬಿ.ಸಿ. ವೆಬ್ಸೈಟಿನಲ್ಲಿ ಸಿಕ್ಕಿದ ಮಾಹಿತಿಯ ಜಾಡು ಹಿಡಿದು ಹೊರಟಾಗ ತಿಳಿಯಿತು ಈ ಧನ ಸಂಪನ್ಮೂಲದ ಗುಟ್ಟು: ಅದುವೇ ಮಾದಕ ವಸ್ತುಗಳ (ಅಂದರೆ ಗಾಂಜಾ ಹಾಗೂ ಹೆರಾಯಿನ್) ಮಾರಾಟ ಜಾಲ. ಇಷ್ಟೇ ಅಲ್ಲ, ಅನೇಕ ಪ್ರಮುಖ ದೇಶಗಳು, ವಾಲ್ ಸ್ಟ್ರೀಟ್, ಮುಂತಾದ ಪ್ರಮುಖ ಹಣಕಾಸು ಕೇಂದ್ರಗಳು, ಬಿನ್ ಲಾಡೆನ್, ಜಾರ್ಜ್ ಬುಷ್, ದಾವೂದ್ ಮುಂತಾದ ವ್ಯಕ್ತಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಒಳಗೊಂಡ  ಒಂದಕ್ಕೊಂದು ಸುತ್ತಿಕೊಂಡಿರುವ ನಿಗೂಢ ವ್ಯವಹಾರವೊಂದರ ಪರಿಚಯ.

 

ಯೂರೋಪ್, ಅಮೆರಿಕಾ, ದಕ್ಷಿಣ ಏಶ್ಯಾಗಳ ದೇಶಗಳಲ್ಲಿಯೇ ಈ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಅಲ್ಲಿಯೇ ಬಾಂಬ್ ಸಿಡಿಸುವ ಈ ಅಸಾಮಾನ್ಯ ಉಪಾಯ ಬಹುಶಃ ಅತ್ಯುತ್ತಮ ಬಿಸಿನೆಸ್ ಮ್ಯಾನೇಜ್ಮೆಂಟ್ ತಂತ್ರಗಳಲ್ಲಿ ಒಂದಿರಬಹುದು. ಇದಕ್ಕೆ ಬಹುಶಃ ಚೀನಾದಲ್ಲಿ ಬ್ರಿಟಿಷರು ಅನುಸರಿಸಿದ ಓಪಿಯಂ ವಾರ್–ನಿಂದ ಪ್ರೇರಣೆ ದೊರೆತಿರಬಹುದೇನೋ. ಇನ್ನೊಂದು ಚೋದ್ಯವೆಂದರೆ ರಷ್ಯನ್ನರು ಆಫ್ಘನ್ ಮೇಲೆ ಆಕ್ರಮಣ ಮಾಡಿದ್ದಾಗ ಎಷ್ಟು ಮಂದಿ ಆಫ್ಘನ್ ಪ್ರಜೆಗಳು ಹತರಾಗಿದ್ದರೋ ಅದಕ್ಕಿಂತ ಹೆಚ್ಚು ಮಂದಿ ರಷ್ಯನ್ನರು ಆಫ್ಘನ್ ಮೂಲದ ಗಾಂಜಾ ಸೇವನೆಯಿಂದ ಪ್ರತಿ ವರ್ಷ ಸಾಯುತ್ತಿದ್ದಾರೆ.

 

ಈ ಕಳ್ಳತನದ ಮಾದಕ ವಸ್ತಗಳ ವ್ಯಾಪಾರದ ಕೇಂದ್ರಬಿಂದುವೇ ಅಫ್ಘಾನಿಸ್ತಾನ. (ಬೇರೆ ಯಾವುದರಲ್ಲಿಯೂ ಈ ದೇಶದ ಹೆಸರು ಕೇಳಿಬರದಿದ್ದರೂ ಇಂಥಾ ವಿಷಯಗಳಲ್ಲಿ ಮಾತ್ರ ಇವರು ಸದಾ ಮುಂದೆ, ಅಲ್ಲವೇ?). ವಿಶ್ವದ ಗಾಂಜಾ ಉತ್ಪಾದನೆಯ 92% (3500 ಟನ್) ಮಾಲನ್ನು ಅಫ್ಘಾನಿಸ್ತಾನದಲ್ಲಿ ಬೆಳೆಯಲಾಗುತ್ತಿದೆ, ಹಾಗೂ ಈ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಇದರಲ್ಲಿ ಕೇವಲ 2% ಮಾಲು ಸಿಕ್ಕಿಹಾಕಿಕೊಳ್ಳುತ್ತದೆ. ಪಾಕಿಸ್ತಾನ, ಮಧ್ಯ ಏಶ್ಯಾದ ದೇಶಗಳು ಹಾಗೂ ಇರಾನ್ ಈ ಸರಬರಾಜು ಸರಪಳಿಯಲ್ಲಿ ಪ್ರಮುಖ ಪಾಲುದಾರರು. ಕಾಬೂಲ್-ನಲ್ಲಿ ಮೂರು ಡಾಲರ್ ಬೆಲೆ ಇರುವ ಮಾಲು ಲಂಡನ್ ನಲ್ಲಿ 100 ಡಾಲರ್ ಬೆಲೆಬಾಳುತ್ತದೆ!!

 

ವಿಶ್ವದಾದ್ಯಂತ ಈ ವ್ಯಾಪಾರದ ಮೌಲ್ಯ (ವಿಶ್ವಸಂಸ್ಥೆ ಅಂದಾಜಿನಂತೆ) ಸುಮಾರು 65 ಬಿಲಿಯನ್ ಡಾಲರುಗಳು!! (ಇನ್ನೊಂದು ಅಂದಾಜಿನ ಪ್ರಕಾರ ಅಮೆರಿಕವೊಂದರಲ್ಲೇ ಇದರ ಮೌಲ್ಯ 250-300 ಬಿಲಿಯನ್ ಡಾಲರುಗಳು!!!!) ಇದರಿಂದಾಗಿ ಸುಮಾರು 15 ಮಿಲಿಯನ್ ಜನರು ಮಾದಕ ವ್ಯಸನಿಗಳಾಗಿದ್ದಾರೆ, ಹಾಗೂ ಸುಮಾರು ಒಂದು ಲಕ್ಷ ಜನರು ಸಾಯುತ್ತಿದ್ದಾರೆ.ಸುಮಾರು 160 ಮಿಲಿಯನ್ ಡಾಲರ್ ಹಣವು ಮಾದಕ ವಸ್ತು ವ್ಯಾಪಾರದಿಂದ ಉಗ್ರವಾದಿಗಳ ಕೈಸೇರುತ್ತದೆ ಪ್ರತಿ ವರ್ಷವೂ. ಈ ಹಣದಿಂದ ಈ ಉಗ್ರವಾದಿಗಳು ಆಧುನಿಕ ತಂತ್ರಗಳೊಂದಿಗೆ ಕಾರ್ಯಾಚರಿಸುತ್ತಿದ್ದಾರೆ.

 

ಆದರೆ ಈಗ ಸಿಕ್ಕಿರುವ ಅಗಾಧ ಮಾಹಿತಿಯ ಪೂರ್ಣ ಸಾರಾಂಶ ಬರೆಯುವ ವ್ಯವಧಾನವಾಗಲೀ, ತಾಳ್ಮೆಯಾಗಲೀ ನನಗಿಲ್ಲ. ಹೀಗಾಗಿ ಕೆಲವು ಪ್ರಮುಖ ಆಕರಗಳ ಲಿಂಕ್-ಗಳನ್ನು ಈ ಕೆಳಗೆ ನೀಡಿದ್ದೇನೆ. ತುಂಬಾ ಕುತೂಹಲಕರವಾಗಿದೆ. ಹಾಗಾದರೆ ಈ ಜಾಲವನ್ನು ಏಕೆ ಬಗ್ಗುಬಡಿಯಲಾಗುತ್ತಿಲ್ಲ/ಬಗ್ಗುಬಡಿಯುತ್ತಿಲ್ಲ ಎಂಬುದೇ ಮೊದಲಾಗಿ ಅನೇಕ  ವಿವರಗಳಿಗಾಗಿ ಈ ಕೆಳಗಿನ ಆಕರಗಳನ್ನು ಓದಿ ನೋಡಿ.

 

http://www.countercurrents.org/maitra060109.htm

http://www.cam.net.uk/home/aaa315/peace/opium.htm

http://news.bbc.co.uk/2/hi/south_asia/6957238.stm

http://news.bbc.co.uk/2/hi/8319249.stm

 

ಎರಡನೇ ಲಿಂಕಿನ ಆಕರದಲ್ಲಿರುವುದು ಎಷ್ಟು ಕಲ್ಪಿತವೋ ಎಷ್ಟು ನೈಜವೋ ಗೊತ್ತಿಲ್ಲ, ಆದರೂ ಒಂದು ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುವುದಂತೂ ನಿಜ. ಓದಿ ನೋಡಿ.

 

ಸಾಧ್ಯವಾದರೆ From Paris with Love (2010) ಸಿನೆಮಾವನ್ನೂ ನೋಡಿ. :)