ಆತ್ಮ
ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು. ಕೆಲವರಂತೂ ಹೀಗೆ ಕಂತು ಕಂತುಗಳಲ್ಲಿ ಓದಲು ಪ್ರಾರಂಭಿಸಿದರೆ ಈ ಘಟನೆಗಳೆಲ್ಲಾ ನಮ್ಮ ಜೀವನದಲ್ಲಿ ನಡೆಯುತ್ತದೆ ಅನಿಸುತ್ತದೆ. ಇನ್ನಷ್ಟು ಓದುವ ಚಪಲ ಕಾಣಿಸುತ್ತದೆ. ಹಿಂದೆಯೇ ಭಯವೂ ಕಾಡುತ್ತದೆ. ಅದಕ್ಕೆ ಬೇಗ ಪುಸ್ತಕ ಮಾಡಿ ನಮ್ಮ ಕೈಗಿಡಿ ಎಂದು ಓದುಗರ ಕೋರಿಕೆಯಾಗಿತ್ತು. ರವಿಯವರ ಮಾತಿನಂತೆ' ಇದನ್ನು ಮತ್ತೊಮ್ಮೆ ಬರೆದೆನೆಂದರೆ ನನ್ನಿಂದ ಇನ್ನು ಬರೆಯಲಾಗುವುದಿಲ್ಲ. ಹಿಂದೆ ‘ಮಾಟಗಾತಿ' ಬರೆದೆ. ಅದರ ಹಿಂದೆಯೇ ‘ಸರ್ಪ ಸಂಬಂಧ' ಬರೆದೆ. ಈ ಕಾದಂಬರಿ ಅವೆರಡರ ಮುಂದುವರಿಕೆಯಂಥದ್ದು. ಹಾಗಂತ ಪೂರ್ತಿ ಮುಂದುವರಿಕೆಯಲ್ಲ.’
ರವಿ ಬೆಳಗೆರೆಯವರ ಯಾವುದೇ ಕಾದಂಬರಿಯಾಗಲೀ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ೨೩೨ ಪುಟಗಳ ಈ ಕಾದಂಬರಿಯನ್ನು ಅವರ ಸೊಸೆಯಾದ ಲಕ್ಷ್ಮಿಗೆ ಅರ್ಪಿಸಿದ್ದಾರೆ.