ಆತ್ಮಗೌರವಕ್ಕೆ ಧಕ್ಕೆ, ರೈತ ಆತ್ಮಹತ್ಯೆಗೆ ಶರಣು

ಆತ್ಮಗೌರವಕ್ಕೆ ಧಕ್ಕೆ, ರೈತ ಆತ್ಮಹತ್ಯೆಗೆ ಶರಣು

ಕರ್ನಾಟಕದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ – ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದ ಎದುರಿನಲ್ಲೇ, ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವಾಗಲೇ - ನಿಮಗೆ ನೆನಪಿರಬಹುದು.
27 ನವಂಬರ್ 2013ರಂದು ಅಪರಾಹ್ನ ಒಂದು ಗಂಟೆಯ ಹೊತ್ತಿಗೆ ಕ್ರಿಮಿನಾಶಕ ಕುಡಿದು ಜೀವ ಬಲಿಗೊಟ್ಟವರು ರಾಯಬಾಗ್ ತಾಲೂಕಿನ ಕಂಕಣವಾಡಿ ಗ್ರಾಮದ ರೈತ ವಿಠಲ ಅರಬಾವಿ.
ಅವರೊಬ್ಬ ಕಬ್ಬು ಬೆಳೆಗಾರ. ಅವರದು ಕಡುಬಡತನದ ಬದುಕು. ತನಗಿದ್ದ ಒಂದು ಎಕರೆ ಗದ್ದೆಯನ್ನು ತಮ್ಮನಿಗೆ ಬರೆದು ಕೊಟ್ಟಿದ್ದರು – ರೂಪಾಯಿ ಮೂರು ಲಕ್ಷಕ್ಕೆ. ಅನಂತರ ಏಳು ಎಕರೆ ಜಮೀನನ್ನು ಅಣ್ಣಪ್ಪ ಹಿರೇಮಠರಿಂದ ಭೋಗ್ಯಕ್ಕೆ ಪಡೆದು ಕಬ್ಬು ಬೆಳೆಯುತಿದ್ದರು.
ವಿಠಲ ಅರಬಾವಿಗೆ ಸ್ವಂತ ಮನೆಯೂ ಇಲ್ಲ. ಭೋಗ್ಯದ ಗದ್ದೆಯಲ್ಲೇ ಗುಡಿಸಲು ಕಟ್ಟಿಕೊಂಡು ಐವರು ಮಕ್ಕಳೊಂದಿಗೆ ವಾಸ. ಕಬ್ಬಿಗೆ ಯೋಗ್ಯ ಬೆಲೆ ಕಾರ್ಖಾನೆಯಿಂದ ಸಿಕ್ಕಿದರೆ ಜಮೀನಿನ ಮಾಲೀಕರಿಗೆ ಭೋಗ್ಯದ ಹಣ 1.20 ಲಕ್ಷ ರೂಪಾಯಿ ಪಾವತಿಸಿದ ನಂತರವೂ ತನಗೆ ನಾಲ್ಕು ಕಾಸು ಉಳಿದೀತು ಎಂಬ ಭರವಸೆ. ಆ ಭರವಸೆ ಸತ್ತಾಗ ಅವರಿಗೆ ಕಂಡ ಒಂದೇ ದಾರಿ - ಆತ್ಮಹತ್ಯೆ.
ಭಾರತಾದ ಅಪರಾಧ ದಾಖಲೆ ಬ್ಯುರೋ (ಎನ್.ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಹೀಗೆ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಸುಮಾರು ಮೂರು ಲಕ್ಷ. ಈ ಆತ್ಮಹತ್ಯೆಗೆ ಕಾರಣ ಸಾಲದ ಹೊರೆ ಎಂಬುದು ಸಾಮಾನ್ಯ ಹೇಳಿಕೆ. ಆದರೆ ಆ ಪ್ರಕರಣಗಳನ್ನು ಪರಿಶೀಲಿಸಿದಾಗ, ಕಂಡು ಬರುವ ಈ ನಾಲ್ಕು ಸತ್ಯಾಂಶಗಳು ಗಮನಾರ್ಹ:
1) ಹಸುರುಕ್ರಾಂತಿಯ ಮುಂಚೂಣಿಯಲ್ಲಿದ್ದ ಐದು ರಾಜ್ಯಗಳಲ್ಲಿ - ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಪಂಜಾಬ ಮತ್ತು ಮಹಾರಾಷ್ಟ್ರ – ರೈತರ ಆತ್ಮಹತ್ಯೆಗಳು ಅಧಿಕ. ಇವುಗಳಿಗಿಂತ ಹೆಚ್ಚಿನ ಬಡತನ ಇರುವ ರಾಜ್ಯಗಳಾದ ಬಿಹಾರ ಮತ್ತು ಮಧ್ಯಪ್ರದೇಶ ಹಾಗೂ ಕೈಗಾರಿಕಾ ರಂಗದಲ್ಲಿ ಮುಂದುವರಿದ ರಾಜ್ಯಗಳಾದ ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರೈತರ ಆತ್ಮಹತ್ಯೆಗಳ ವರದಿ ಕಡಿಮೆ.
2) ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಬಹುಪಾಲು ಸಣ್ಣ ಹಿಡುವಳಿದಾರರು ಮತ್ತು ಮಧ್ಯಮ ಹಿಡುವಳಿದಾರರು. ಇವರ ಸಂಖ್ಯೆಗೆ ಹೋಲಿಸಿದಾಗ ಆತ್ಮಹತ್ಯೆ ಮಾಡಿಕೊಂಡ ದೊಡ್ಡ ಹಿಡುವಳಿದಾರರ ಸಂಖ್ಯೆ ಕಡಿಮೆ. ಭೂರಹಿತ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡದ್ದೂ ಅಪರೂಪ.
3) ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಗಣನೀಯ ಸಂಖ್ಯೆಯ ರೈತರು ಒಕ್ಕಲಿಗರು ಹಾಗೂ ಲಿಂಗಾಯತರು. ಹಿಂದುಳಿದ ವರ್ಗಗಳ ಮತ್ತು ದಲಿತ ರೈತರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
4) ಅತ್ಮಹತ್ಯೆಗೆ ಶರಣಾದ ರೈತರ ಹಿಡುವಳಿ ವಿಸ್ತೀರ್ಣ ಹಾಗೂ ಜಾತಿ ಬದಿಗಿಟ್ಟು ನೋಡಿದಾಗ ಎದ್ದು ಕಾಣುವ ಅಂಶ: ಅವರಲ್ಲಿ ಬಹುಪಾಲು ವಾಣಿಜ್ಯ ಬೆಳೆಗಳ ಬೆಳೆಗಾರರು. ಈ ಬೆಳೆಗಳಲ್ಲಿ ಉತ್ತಮ ಫಸಲು ಹಾಗೂ ಫಸಲಿಗೆ ಉತ್ತಮ ಬೆಲೆ ಸಿಕ್ಕರೆ ಲಾಭ; ಇಲ್ಲವಾದರೆ ನಷ್ಟ.
ಈ ಎಲ್ಲ ಸತ್ಯಾಂಶಗಳನ್ನು ಆಧರಿಸಿ ನಾವು ತಿಳಿಯಬೇಕಾದ್ದು: ಆತ್ಮಹತ್ಯೆಗೆ ಶರಣಾದ ರೈತರಿಗೆ ಒಳ್ಳೆಯ ಬದುಕು ಬರಲಿದೆ ಎಂಬ ಭರವಸೆ ಇತ್ತು. ಆ ಭರವಸೆ ನುಚ್ಚುನೂರಾದಾಗ, ಅವರ ಹಠಾತ್ ನಿರ್ಧಾರ: ಆತ್ಮಹತ್ಯೆ.
ವಿಠಲ ಅರಬಾವಿ ಅವರಿಗೆ ಆದದ್ದೂ ಅದೇ. ಅವರ ಕಬ್ಬಿನ ಬೆಳೆಗೆ ರಾಸಾಯನಿಕ ಗೊಬ್ಬರ ಬೇಕಾಗಿತ್ತು. ಅದಕ್ಕಾಗಿ 15 ಕಿಮೀ ದೂರದ ಹಳ್ಳೂರ ಗ್ರಾಮದ ಅಂಗಡಿಯಿಂದ ಸಾಲಕ್ಕೆ ರಾಸಾಯನಿಕ ಗೊಬ್ಬರ ಖರೀದಿಸಿದ್ದು, ಅದರ ಹಣ ರೂ.40,000 ಬಾಕಿಯಾಗಿತ್ತು. ಇದಕ್ಕೆ ಅಂಗಡಿ ಮಾಲೀಕ ಭಾರೀ ಬಡ್ಡಿ ಹಾಕಿದ್ದರಿಂದ, ಬಾಕಿ ಹಣ ರೂ.80,000 ದಾಟಿತ್ತು. ಕಳೆದ ವರುಷವೇ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಗೆ ವಿಠಲ ಅರಬಾವಿ ಕಬ್ಬು ಮಾರಿದ್ದರೂ, ಕಬ್ಬಿನ ಹಣವನ್ನು ಕಾರ್ಖಾನೆ ಪಾವತಿಸಿರಲಿಲ್ಲ. ಅದರಲ್ಲಿ ರೂಪಾಯಿ ಒಂದು ಲಕ್ಷ ವಿಠಲ ಅರಬಾವಿಗೆ ಪಾವತಿ ಬಂದದ್ದನ್ನು ಗೊಬ್ಬರ ಅಂಗಡಿಯ ಮಾಲೀಕ ತಿಳಕೊಂಡ; ಇತ್ತೀಚೆಗೆ ಮುಧೋಳದಿಂದ ಮನೆಗೆ ಮರಳುತ್ತಿದ್ದ ವಿಠಲ ಅರಬಾವಿಯವರನ್ನು ಆತ ಹಳ್ಳೂರಿನಲ್ಲಿ ತಡೆದು, ಬಾಕಿ ಹಣ ಪಾವತಿಸುವ ತನಕ ಅಂಗಡಿಯಲ್ಲೇ ಇರಿಸಿಕೊಂಡ; ಹಾಗೆ ನಾಲ್ಕು ಗಂಟೆ ಒತ್ತೆಯಾಳಿನಂತಿದ್ದು, ಕೊನೆಗೆ ರೂ.40,000 ಪಾವತಿಸಿದ ನಂತರವಷ್ಟೇ ವಿಠಲ ಅರಬಾವಿ ತನ್ನ ಮನೆಗೆ ಹೋಗಲು ಸಾಧ್ಯವಾಯಿತೆಂದು ವರದಿಯಾಗಿದೆ.
ಒಳ್ಳೆಯ ಬದುಕಿನ ಭರವಸೆ ಹಾಗಿರಲಿ. ತಮ್ಮ ಆತ್ಮಗೌರವಕ್ಕೆ ಧಕ್ಕೆಯಾದಾಗ ವಿಠಲ ಅರಬಾವಿಯಂತಹ ರೈತರು ಇನ್ನೇನು ಮಾಡಲು ಸಾಧ್ಯ? ಅನ್ನದಾತರಿಗೆ ಅವಮಾನ ಆಗದಂತೆ, ಅವರೂ ಗೌರವದ ಬದುಕು ಬಾಳಲು ಸಾಧ್ಯವಾಗುವಂತಾಗಲು ಅವಶ್ಯವಾದ ಕ್ರಮಗಳನ್ನು ಸರಕಾರಗಳು ಇನ್ನಾದರೂ ಕೈಗೊಳ್ಳಲಿ.
ಪ್ರಾತಿನಿಧಿಕ ಫೋಟೋ: ಹೊಲದಲ್ಲಿ ಸಾಯುತ್ತಿರುವ ಸಸಿಗಳ ನಡುವೆ ರೈತ … ಕೃಪೆ: ಹಿಂದೂ ದಿನಪತ್ರಿಕೆ