ಆತ್ಮನಿರ್ಭರದಿಂದ ಅನುಕೂಲ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮರುದಿನವೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿಪುಣ್ ಲ್ಯಾಂಡ್ ಮೈನ್ಸ್, ಎಫ್ ಇನ್ಸಾಸ್, ಎಲ್ ಸಿ ಎ ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿರುವುದು ಸೇನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಮಹತ್ವದ ಕ್ರಮವಾಗಿದೆ. ಈ ಸಾಧನಗಳು ಮೇಡ್ ಇನ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಫಲಶ್ರುತಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪೂರಕವೆಂದು ಹೇಳಬಹುದಾಗಿದೆ.
ಪದಾತಿ ದಳ ಸೈನಿಕರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಆಧುನಿಕ ಉಪಕರಣಗಳ ವ್ಯವಸ್ಥೆಯೇ ಫ್ಯೂಚರ್ ಇನ್ ಫ್ಯಾಂಟ್ರಿ ಸೋಲ್ಜರ್ ಆಸ್ ಎ ಸಿಸ್ಟಮ್, ೩೦೦ ಮೀಟರ್ ವ್ಯಾಪ್ತಿಯ ಎಕೆ ೨೦೩ ರೈಫಲ್ ಕೂಡ ಇದರಲ್ಲಿದೆ. ರಷ್ಯಾ-ಭಾರತ ಜಂಟಿ ಉದ್ಯಮದಲ್ಲಿಅಮೇಥಿ ಬಳಿಯ ಕೊರ್ವಾದಲ್ಲಿ ಈ ರೈಫಲ್ ತಯಾರಿಸಲಾಗುತ್ತಿದೆ ಎಂಬುದು ಗಮನಾರ್ಹ. ಎಕೆ ೪೭ ಬಂದೂಕಿನಿಂದ ಹೊಡೆದ ಗುಂಡನ್ನು ನಡೆಯುವ ಸಾಮರ್ಥ್ಯದ ಬುಲೆಟ್ ಫ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ಈ ವ್ಯವಸ್ಥೆಯಲ್ಲಿದ್ದು, ಸೈನಿಕರ ಜೀವ ಕಾಪಾಡಲು ನೆರವಾಗಲಿದೆ. ಪುಣೆಯಲ್ಲಿರುವ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಯಾರಿಸಿರುವ ನಿಪುಣ್ ಹೆಸರಿನ ನೆಲಬಾಂಬ್, ಉಗ್ರರ ಒಳನುಸುಳುವಿಕೆ ತಡೆಯಲು ಅನುಕೂಲಕರ ಎನ್ನಲಾಗಿದೆ. ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಡ್ (ಎಸಿಎ) ಸ್ವದೇಶಿ ನಿರ್ಮಿತ ದೋಣಿಯಾಗಿದ್ದು, ಗೋವಾದ ಅಕ್ವೇರಿಯಸ್ ಶಿಪ್ ಯಾರ್ಡ್ ಲಿಮಿಟೆಡ್ ಇದನ್ನು ಅಭಿವೃದ್ಧಿ ಪಡಿಸಿದೆ. ಲಡಾಖ್-ಚೀನಾ ಗಡಿಯಲ್ಲಿರುವ ಪ್ಯಾಂಗೊಂಗ್ ತ್ಸೊ ಸರೋವರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸೀಮಿತ ಸಾಮರ್ಥ್ಯಗಳ ದೋಣಿಗಳ ಬದಲಿಯಾಗಿ ಇದನ್ನು ಬಳಸಲು ಉದ್ದೇಶಿಸಲಾಗಿದೆ.
ಭಾರತವು ರಕ್ಷಣೆಗಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತಿದೆ. ೨೦೨೨-೨೩ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ವೆಚ್ಚಗಳಿಗೆ ಮೀಸಲಿಟ್ಟಿರುವ ಹಣ ೫,೨೫,೧೬೬ ಕೋಟಿ ರೂಪಾಯಿ. ಇದು ಒಟ್ಟಾರೆ ಬಜೆಟ್ ನ ಶೇ.೯.೮ರಷ್ಟು. ಆಗುತ್ತದೆ. ಅಮೇರಿಕ ಮತ್ತು ಚೀನಾದ ನಂತರ ರಕ್ಷಣೆಗಾಗಿ ಅತಿ ಹೆಚ್ಚು ವ್ಯಯ ಮಾಡುವ ರಾಷ್ಟ್ರ ಭಾರತವಾಗಿದೆ. ರಷ್ಯಾ, ಫ್ರಾನ್ಸ್, ಇಸ್ರೇಲ್, ಅಮೇರಿಕ, ಇಂಗ್ಲೆಂಡ್ ಗಳಿಂದ ಬಹುಪಾಲು ರಕ್ಷಣಾ ಸಾಧನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ೨೦೨೧ನೇ ಸಾಲಿನಲ್ಲಿ ಜಗತ್ತಿನ ಒಟ್ಟಾರೆ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ ೧೭.೨ ಇತ್ತು. ಸೇನಾ ಸಾಧನಗಳಲ್ಲಿ ವಿದೇಶಗಳ ಮೇಲೆ ಅವಲಂಬಿತರಾಗಿರುವುದರಿಂದ ಹಲವು ದೃಷ್ಟಿಕೋನಗಳಿಂದ ಅನನುಕೂಲ ಸಂಗತಿಯಾಗಿದೆ. ಶಸ್ತ್ರಾಸ್ತ್ರ ಖರೀದಿಗಾಗಿಯೇ ನಮ್ಮ ವಿದೇಶಿ ವಿನಿಮಯ ಸಂಗ್ರಹ ಕರಗಿ ಆರ್ಥಿಕ ಹೊರೆಯನ್ನುಂಟುಮಾಡುತ್ತಿದೆ. ಅಲ್ಲದೆ, ನಮಗೆ ಅಗತ್ಯವಿದ್ದ ಸಮಯದಲ್ಲಿ ಹಾಗೂ ನಾವು ಬಯಸುವಂಥ ಶಸ್ತ್ರಾಸ್ತ್ರಗಳು ಲಭಿಸುವ ಸಾಧ್ಯತೆಗಳು ಕಡಿಮೆ. ೩೬ ರೆಫೆಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ನೊಂದಿಗೆ ೨೦೧೬ರಲ್ಲೇ ಒಪ್ಪಂದವಾಗಿದ್ದರೂ, ಈಗಷ್ಟೇ ಪೂರೈಸಲಾಗಿದೆ. ದೇಶದಲ್ಲೇ ರಕ್ಷಣಾ ಉಪಕರಣಗಳಉತ್ಪಾದನೆ ಹೆಚ್ಚಿದರೆ ಉದ್ಯೋಗ ಸೃಷ್ಟಿಗೂ ಕೊಡುಗೆ ನೀಡಿದಂತಾಗುತ್ತದೆ. ಸ್ವದೇಶಿ ನಿರ್ಮಿತ ತೇಜಸ್ ಹಗುರ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಇತ್ತೀಚೆಗೆ ಸೇರ್ಪಡೆ ಮಾಡಿರುವುದು ಈ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ. ರಕ್ಷಣಾ ಕ್ಷೇತ್ರದ ಆಧುನೀಕರಣಕ್ಕಾಗಿ ಬಜೆಟ್ ನಲ್ಲಿ ಮೀಸಲಾಗಿಟ್ಟಿರುವ ಹಣದಲ್ಲಿ ಅಂದಾಜು ೭೦ ಸಾವಿರ ಕೋಟಿ ರೂಪಾಯಿಗಳನ್ನು ದೇಶೀಯವಾಗಿ ನಿರ್ಮಿಸಲಾದ ಉಪಕರಣಗಳ ಖರೀದಿಗೆ ಬಳಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿರುವುದು ಕೂಡ ಮಹತ್ವದ ಸಂಗತಿಯಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೭-೦೮-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ