ಆತ್ಮನಿರ್ಭರ ರಕ್ಷಣೆಯಲ್ಲಿ ಬಲುದೊಡ್ಡ ಹೆಜ್ಜೆ

ಆತ್ಮನಿರ್ಭರ ರಕ್ಷಣೆಯಲ್ಲಿ ಬಲುದೊಡ್ಡ ಹೆಜ್ಜೆ

ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊತ್ತ ಮೊದಲ ಸಮಗ್ರ ವಾಯು ರಕ್ಷಣ ವ್ಯವಸ್ಥೆ (ಇಂಟಿಗ್ರೇಟೆಡ್ ಏರ್‌ಡಿಫೆನ್ಸ್ ವೆಪನ್ ಸಿಸ್ಟಮ್-ಐಎಡಿಡಬ್ಲ್ಯುಎಸ್) ಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸುವ ಮೂಲಕ ಭಾರತವು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ತೀರಾ ಇತ್ತೀಚೆಗೆ ನಡೆದ ಅಪರೇಶನ್ ಸಿಂದೂರ ಸಂದರ್ಭವು ವಾಯು ರಕ್ಷಣ ಶಸ್ತ್ರಾಸ್ತ್ರ ವ್ಯವಸ್ಥೆ ಎಷ್ಟು ಅತ್ಯಗತ್ಯ ಎಂಬುದಕ್ಕೆ ನಿಕಟ ಸಾಕ್ಷಿ, ಆಗ ರಷ್ಯಾದಿಂದ ಪಡೆದಿರುವ ಎಸ್-೪೦೦ ಟ್ರಯಂಫ್ ವಾಯು ರಕ್ಷಣ ವ್ಯವಸ್ಥೆ ಪಾಕಿಸ್ಥಾನದ ಆಕ್ರಮಣದಿಂದ ದೇಶವನ್ನು ಕಾಪಾಡಿತ್ತು. ಈಗ ಇಂತಹ ಸಮಗ್ರ ವಾಯು ರಕ್ಷಣ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿರುವುದು ಒಂದು ಮೈಲಿಗಲ್ಲು ಮಾತ್ರವಲ್ಲದೆ, ಹೆಮ್ಮೆಯ ವಿಷಯವೂ ಹೌದು. 

ಒಡಿಶಾ ಕರಾವಳಿಯಲ್ಲಿ ಶನಿವಾರ ಪರೀಕ್ಷೆಗೊಳಪಡಿಸಿರುವುದು ಶತ್ರು ರಾಷ್ಟ್ರಗಳಿಂದ ನುಗ್ಗಿ ಬರುವ ವಿಮಾನ, ಡ್ರೋನ್ ಮತ್ತು ಕ್ಷಿಪಣಿಗಳಂತಹ ವಾಯು ದಾಳಿಯನ್ನು ಹೊಡೆದುರುಳಿಸಬಲ್ಲ ಬಹು ಸ್ತರಗಳ ವಾಯು ರಕ್ಷಣ ವ್ಯವಸ್ಥೆ ಆಪರೇಶನ್ ಸಿಂದೂರದ ಬಳಿಕ ಮೂರು ತಿಂಗಳುಗಳಲ್ಲಿಯೇ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದೆ ಎನ್ನುವುದು ಗಮನಾರ್ಹ ಅಂಶ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆ‌ರ್ ಡಿಒ) ಮತ್ತು ಸಶಸ್ತ್ರಪಡೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ. ಪರೀಕ್ಷೆಯ ವೇಳೆ ವಿಭಿನ್ನ ದೂರ ಮತ್ತು ಎತ್ತರಗಳಲ್ಲಿ ಹಾರಾಡುತ್ತಿದ್ದ ಮೂರು ವಿಭಿನ್ನ ಗುರಿಗಳನ್ನು ಈ ರಕ್ಷಣ ವ್ಯವಸ್ಥೆಯು ಗುರುತಿಸಿ, ಕ್ಷಿಪಣಿಗಳ ಮೂಲಕ ಯಶಸ್ವಿಯಾಗಿ ಏಕಕಾಲದಲ್ಲಿ ಹೊಡೆದುರುಳಿಸಿದೆ.

ಕ್ಲಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್‌ಎಸ್‌ಎಎಂ) ಅಂದರೆ ಕಡಿಮೆ ದೂರದಲ್ಲಿರುವ ಗುರಿಗಳನ್ನು ಕ್ಷಿಪ್ರವಾಗಿ ಹೊಡೆದುರುಳಿಸಬಲ್ಲ ಕ್ಷಿಪಣಿ; ಅತ್ಯಾಧುನಿಕ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಂ (ವಿಎಸ್ ಎಚ್‌.ಆರ್‌ಎಡಿಎಸ್) ಅಂದರೆ ಅತ್ಯಂತ ಕಡಿಮೆ ದೂರದ ಗುರಿಗಳನ್ನು ನಾಶಗೊಳಿಸಬಲ್ಲ ವ್ಯವಸ್ಥೆ ಹಾಗೂ ಅತೀ ಶಕ್ತಿಶಾಲಿ ಲೇಸರ್ ಆಧರಿತ ಗುರಿ ನಿರ್ದೇಶಿತ ಶಸ್ತ್ರಾಸ್ತ್ರ (ಡಿಇಡಬ್ಲ್ಯು) ಇದರಲ್ಲಿ ಇರುವ ಮೂರು ಸ್ತರಗಳ ರಕ್ಷಣ ವ್ಯವಸ್ಥೆಗಳಾಗಿವೆ. ಈ ಮೂರು ಕೂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ ಎಂದು ರಕ್ಷಣ ಇಲಾಖೆ ತಿಳಿಸಿದೆ. ಈ ಎಲ್ಲವುಗಳ ಕಾರ್ಯಾಚರಣೆಯನ್ನು ಕೇಂದ್ರೀಕೃತ ನಿರ್ದೇಶನ ಮತ್ತು ನಿಯಂತ್ರಣ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ; ಇದು ಡಿಆರ್‌ಡಿಒ ದೇಶೀಯವಾಗಿಯೇ ಅಭಿವೃದ್ಧಿಪ ಡಿಸಿದ್ದು ಎನ್ನುವುದು ಬಹಳ ಮುಖ್ಯವಾದ ಅಂಶ. ಒಟ್ಟು ವ್ಯವಸ್ಥೆಯು ೩೦೦ ಮೀ.ಗಳಿಂದ ೩೦ ಕಿ.ಮೀ. ದೂರದ ವರೆಗಿನ ಡೋನ್ ಮತ್ತು ಇತರ ವಿಧವಾದ ವಾಯು ಮಾರ್ಗದ ಆಪತ್ತುಗಳನ್ನು ಧ್ವಂಸ ಮಾಡಬಲ್ಲುದಾಗಿದೆ. ಇದರಲ್ಲಿ ಇರುವ ಡಿಇಡಬ್ಲ್ಯುವನ್ನು ಈ ವರ್ಷದ ಎಪ್ರಿಲ್‌ನಲ್ಲಿಯೇ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಆ ಮೂಲಕ ಇಂತಹ ವ್ಯವಸ್ಥೆಯನ್ನು ಹೊಂದಿರುವ ಜಾಗತಿಕ ದೇಶಗಳ ಸಾಲಿಗೆ ಭಾರತವೂ ಸೇರಿಕೊಂಡಿತ್ತು.

ವಿಭಿನ್ನ ದೂರ, ಎತ್ತರ, ವೇಗ, ವಿಧಗಳ ಗುರಿಗಳನ್ನು ಬೇಧಿಸಬಲ್ಲಂತೆ ರೂಪುಗೊಂಡಿರುವ ಈ ವಾಯುರಕ್ಷಣ ವ್ಯವಸ್ಥೆ ದೇಶದ ರಕ್ಷಣ ವ್ಯವಸ್ಥೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವಲ್ಲಿ ಮಹತ್ವದ ಒಂದು ಹೆಜ್ಜೆಯಾಗಿದೆ. ಅದರ ವಿವಿಧ ಭಾಗಗಳು, ನಿರ್ದೇಶನ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಸ್ವದೇಶೀ ಯವಾಗಿ ನಿರ್ಮಿಸಲು ಸಾಧ್ಯವಾಗಿರುವುದು ಬಹಳ ದೊಡ್ಡ ಸಾಧನೆ. ಇದು ಭವಿಷ್ಯದಲ್ಲಿ ಹೆಚ್ಚು ದೂರ, ಎತ್ತರದ ಮತ್ತು ಸಮಗ್ರವಾದ ರಕ್ಷಣ ವ್ಯವಸ್ಥೆ-'ಸುದರ್ಶನ ಚಕ್ರ'ವನ್ನು ದೇಶೀಯವಾಗಿ ನಿರ್ಮಿಸಿ ಅಳವಡಿಸಿಕೊಳ್ಳುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನೀಯರು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೬-೦೮-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ