ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸೋಣ...

ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸೋಣ...

ಚುನಾವಣಾ ವರ್ಷದಲ್ಲಿ ಇನ್ನೆಷ್ಟು ಗಲಭೆಗಳು, ಇನ್ನೆಷ್ಟು ಹೊಡೆದಾಟ ಬಡಿದಾಟಗಳು, ಇನ್ನೆಷ್ಟು ಕೀಳು ಭಾಷೆಗಳು, ಇನ್ನೆಷ್ಟು ಸಮಾಜ ಒಡೆಯುವ ಕೆಲಸಗಳು, ಇನ್ನೆಷ್ಟು ಪಕ್ಷಾಂತರಗಳಿಗೆ ನಾವು‌ ಸಾಕ್ಷಿಯಾಗಬೇಕೋ ಆತಂಕವಾಗುತ್ತಿದೆ ಮತ್ತು ಕೋಪ ಬರುತ್ತಿದೆ. ನಾಗರಿಕ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ. ಬೇಡ ಬೇಡವೆಂದರೂ, ನಮ್ಮ ದೇಶದ ರಾಜಕಾರಣಿಗಳ ನಿಯತ್ತು, ಮತದಾರರ ಮನಸ್ಸು, ಮಾಧ್ಯಮಗಳ ಎಡಬಿಡಂಗಿತನ, ಜನಪ್ರಿಯರ ಆತ್ಮವಂಚನೆ, ಬಗ್ಗೆಯೇ ಮನಸ್ಸು ಹೊರಳುತ್ತಿದೆ.

ಅಬ್ಬಾ, ಅದೆಷ್ಟು ನಿಯತ್ತು ಈ ರಾಜಕಾರಣಿಗಳದು. ನಿನ್ನೆಯವರೆಗೂ ಅವರ ಪಕ್ಷ ನಿಷ್ಠೆ ಕೇಳಿದರೆ ರಾಮ ಭಕ್ತ ಹನುಮ ಇವನೇ ಇರಬೇಕು ಎನಿಸುತ್ತದೆ. ಪಕ್ಷ ನಮಗೆ ದೇವಾಲಯ, ಪಕ್ಷದ ಮುಖ್ಯ ನಾಯಕನೇ ದೇವರು, ಪಕ್ಷದ ನಿಯಮಗಳೇ ಪ್ರಾರ್ಥನೆ ಎಂಬಷ್ಟು ಮಾತನಾಡುತ್ತಾರೆ. ಕೇವಲ ಚುನಾವಣೆಯಲ್ಲಿ ಅವರಿಗೆ ಆ ಪಕ್ಷದ ಟಿಕೆಟ್ ಸಿಗಲಿಲ್ಲವೆಂದರೆ ಆ ಕ್ಷಣವೇ ಅವರ ಹೇಳಿಕೆಗಳು ಬದಲಾಗುತ್ತವೆ. ಪಕ್ಷವೆಂಬ ದೇವಸ್ಥಾನ ಸ್ಮಶಾನವಾಗುತ್ತದೆ, ದೇವರೆಂಬ ನಾಯಕ ರಾಕ್ಷಸನಾಗುತ್ತಾನೆ. ಪಕ್ಷಗಳ ನಿಯಮಗಳು ಕೆಲಸಕ್ಕೆ ಬಾರದ ಘೋಷಣೆಗಳಾಗುತ್ತವೆ.

ಅಂದರೆ ತಿಳಿಯಿತೆ ಈ ಜನರ ತತ್ವ ಸಿದ್ದಾಂತ ಪಂಥ ವಾದಗಳ ಕಪಟತನ. ಇದು ಬಹುತೇಕ ರಾಜಕಾರಣಿಗಳ ಮನಸ್ಥಿತಿ. ನಾವು ಗೆಳೆಯರು ನೋಡಿದರೆ ಈ ಆತ್ಮವಂಚಕರ ಪರ ವಾದ ಮಾಡಿ ನಮ್ಮ ನಮ್ಮಲ್ಲೇ ಮನಸ್ಸು ಕೆಡಿಸಿಕೊಳ್ಳುತ್ತೇವೆ. ಅಧಿಕಾರಕ್ಕಾಗಿ ಸ್ವಾರ್ಥದ ಪರಮಾವಧಿ ತಲುಪಿರುವ ಬಹುತೇಕ ರಾಜಕಾರಣಿಗಳ ಪರ ನಿಂತು ಅವರನ್ನು ಸಮರ್ಥಿಸಿಕೊಳ್ಳುವ ಗೆಳೆಯರೆ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಅವರ ಪರವಾಗಿ ವಾದ ಮಂಡಿಸಿ ನಿಮ್ಮ ಮನಸ್ಸುಗಳನ್ನು ಮಲಿನ ಮಾಡಿಕೊಳ್ಳ ಬೇಡಿ. ವ್ಯಕ್ತಿಗತ ಟೀಕೆಗಿಂತ, ಪಕ್ಷ ಪಂಥಗಳ ಸಮರ್ಥನೆಗಿಂತ ವ್ಯವಸ್ಥೆಯ ಸಂಪೂರ್ಣ ಹಿತ ನಿಮ್ಮ ಮನದಲ್ಲಿರಲಿ.

ಹಾಗೆಯೇ, ಈ ಸ್ವಾರ್ಥಿಗಳನ್ನೂ ಗೆಲ್ಲಿಸುವ ಮತದಾರನ ಮನಸ್ಥಿತಿಯ ಬಗ್ಗೆಯೂ ಯೋಚಿಸಬೇಕಾಗಿದೆ. ಈ ದ್ರೋಹಿಗಳನ್ನು ಕರೆತಂದು ಅವರಿಗೆ ಮಹಾನ್ ವಂಚನೆಯಾಗಿದೆ ಎಂದು ಮಾಧ್ಯಮಗಳಲ್ಲಿ ಅವರ ಬಗ್ಗೆ ಸಹಾನುಭೂತಿ ಸೃಷ್ಟಿಸುವ ದೃಶ್ಯ ಮಾಧ್ಯಮಗಳ ವಿವೇಚನಾರಹಿತ ಬೇಜವಾಬ್ದಾರಿ ವರ್ತನೆಗಳನ್ನೂ ಗಮನಿಸಬೇಕಿದೆ. ಇನ್ನು, ಈ ಜನಪ್ರಿಯ ವ್ಯಕ್ತಿಗಳು ಪ್ರತಿನಿತ್ಯ "ಮತದಾನ ಒಂದು ಪವಿತ್ರ ಕರ್ತವ್ಯ. ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ" ಎಂದು ಹೇಳುವ ನಾಟಕವಾಡುತ್ತಾರೆ. ಅವರಿಗೆ ಕೇಳಬೇಕಿದೆ.

" ಬುದ್ದಿ ಹೇಳಬೇಕಿರುವುದು, ಜಾಗೃತಿ  ಮೂಡಿಸುಬೇಕಿರುವುದು ಮತದಾರರನ್ನಲ್ಲ, ಮತ ಪಡೆದು ಆಯ್ಕೆಯಾಗಿ ಹಗಲು ದರೋಡೆಗೆ ಇಳಿಯುವ ಶಾಸಕರನ್ನು. ಅವರಿಗೆ ಧೈರ್ಯವಿದ್ದರೆ, ಪ್ರಜಾಪ್ರಭುತ್ವದಲ್ಲಿ ಕಾಳಜಿ ಇದ್ದರೆ ಮತ ಪಡೆದವರನ್ನು ಪ್ರಶ್ನಿಸಲಿ. ಮತ ಹಾಕುವುದು ಪವಿತ್ರ ಕರ್ತವ್ಯವಲ್ಲ. ಅದನ್ನು ಪಡೆದವರು ತಮ್ಮ ಕರ್ತವ್ಯ ನಿರ್ವಹಿಸುವುದು ನಿಜವಾದ ಪ್ರಜಾಪ್ರಭುತ್ವ ಯಶಸ್ಸಿಗೆ ಕಾರಣ ಎಂಬುದನ್ನು ತಿಳಿಯಪಡಿಸಬೇಕು.

ಮೂಲಭೂತ ಅಂಶಗಳ ಬಗ್ಗೆ ನಾವೆಲ್ಲ ಗಮನಹರಿಸುವುದು ಬಿಟ್ಟು, ಕೇವಲ ಮೇಲ್ನೋಟದ ಆಶಯಗಳ ಬಗ್ಗೆ ಯೋಚಿಸಿದರೆ ಈ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಚುನಾವಣೆ ಎಂದರೆ ಅಸಹ್ಯ ಹುಟ್ಟಿಸುವಷ್ಟು ಬೇಸರವಾಗುತ್ತದೆ. ಈಗಾಗಲೇ ಸಭ್ಯರು ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ  ತೋರಿದ್ದಾರೆ. ಇನ್ನೂ ಹೀಗೆಯೇ ಮುಂದುವರಿದರೆ ಪ್ರಜಾಪ್ರಭುತ್ವ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ‌ದುಷ್ಟರ ಆಟದ ಅಂಗಳವಾಗಬಹುದು.

ಪ್ರಜಾಪ್ರಭುತ್ವ ಮೂಲ ಆಶಯದ ಬಗ್ಗೆ ಜಾಗೃತರಾಗೋಣ. ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸೋಣ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಿ ಕನಿಷ್ಠ ಇರುವುದರಲ್ಲಿ ಉತ್ತಮ ಎಂಬ ವ್ಯಕ್ತಿಗಳನ್ನು ಜನ ಪ್ರತಿನಿಧಿಗಳಾಗಿ ಆಯ್ಕೆ ಮಾಡಲು ಪ್ರಯತ್ನಿಸೋಣ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ