ಆತ್ಮಹತ್ಯೆ ಎಂಬ ಸಾವುಗಳು...
ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ, ಜಗತ್ತಿನ ಎಲ್ಲಾ ಜೀವರಾಶಿಗಳ ಪ್ರತಿ ಕ್ಷಣದ ಪ್ರಯತ್ನವೇ ಅದು. ಆದರೆ ಹೆಚ್ಚಾಗಿ ಇತ್ತೀಚಿನ ಆಧುನಿಕ ಕಾಲದಲ್ಲಿ ಮನುಷ್ಯ ಪ್ರಾಣಿ ಸಾಯಲೇ ಯೋಚಿಸುವುದು ಕಂಡುಬರುತ್ತದೆ. ಕಷ್ಟ ಸಹಿಷ್ಣುತೆ ಕಡಿಮೆಯಾಗುತ್ತಿದೆ. ನಿನ್ನೆ ಮಾಧ್ಯಮಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂದರ್ಭದಲ್ಲಿ....
ಆತ್ಮಹತ್ಯೆ ಎಂಬ ಸಾವುಗಳು, ನೇರವಾಗಿ ಹೇಳಬೇಕೆಂದರೆ ಇದು ಒಂದು ಮಾನಸಿಕ ಖಾಯಿಲೆ. ದುರ್ಬಲ ಮನಸ್ಥಿತಿಯ ಸಂಕೇತ. ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ಅತಿರೇಕದ ಸಹಾನುಭೂತಿ, ದಕ್ಷ, ಪ್ರಾಮಾಣಿಕ, ಒಳ್ಳೆಯವರು ಎಂಬ ಭಾವನೆ ಉಂಟು ಮಾಡಬಾರದು. ಏಕೆಂದರೆ, ಆತ್ಮಹತ್ಯೆ ತಡೆಯಲು ಇಂದು ಅತ್ಯಂತ ಕಠಿಣ ನಿರ್ಧಾರಗಳು ಜನಸಾಮಾನ್ಯರಲ್ಲಿ ಮೂಡಬೇಕಿದೆ. ಯುವ ಪ್ರೇಮಿಗಳಾಗಲಿ, ರೈತರಾಗಲಿ, ಗೃಹಿಣಿಯರಾಗಲಿ, ಅಧಿಕಾರಿಗಳಾಗಲಿ, ಸಿನಿಮಾ ನಟರಾಗಲಿ ಎಲ್ಲರಿಗೂ ಇದು ಸಮಾನಾಗಿಯೇ ಅನ್ವಯ.
ಯಾವುದೋ ಬಾಹ್ಯ ಒತ್ತಡ ಇವರಿಗೆ ನೆಪ ಅಷ್ಟೇ. ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾರ್ಥಿ, ಪ್ರೀತಿ ವ್ಯೆಫಲ್ಯದ ಪ್ರೇಮಿಗಳು, ಕೌಟುಂಬಿಕ ಸಮಸ್ಯೆಯ ಗೃಹಿಣಿ, ಸಾಲಭಾದೆಯ ರೈತ, ರಾಜಕೀಯವೋ, ಇನ್ನಾವುದೋ ಒತ್ತಡದ ಅಧಿಕಾರಿ ಇವರೆಲ್ಲಾ ತಮ್ಮ ಪ್ರಾಣ ತಾವೇ ಕೊಂದು ಕೊಂಡರೆ ಇವರು ಬದುಕಿದ್ದು ತಾನೇ ಪ್ರಯೋಜನವೇನು. ಬದುಕಿರುವವರೆಲ್ಲಾ ಇವರಿಗಿಂತ ಆರಾಮವಾಗಿ ಇದ್ದಾರೆಯೇ? ಯೋಚಿಸಿ ನೋಡಿ.
ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ, ಹಿರಿಯ ಅಧಿಕಾರಿಗಳ ಸಹಾನುಭೂತಿಯೂ ಇಲ್ಲದೆ, ಚಳಿಗಾಳಿಮಳೆಯನ್ನೂ ಲೆಕ್ಕಿಸದೆ ತಮ್ಮ ಮನೆಯವರನ್ನು ತಿಂಗಳು ಗಟ್ಟಲೆ ಬಿಟ್ಟು ದೇಶಕಾಯುವ ಸೈನಿಕರು ಅದೆಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿಲ್ಲ. ಅನೇಕ ರೋಗಗಳ ಗೂಡಾದ ಮನುಷ್ಯನ ದೇಹವನ್ನು ನೋಡಲೂ ಅಸಹ್ಯವಾದ ಸ್ಥಿತಿಯಲ್ಲಿ ಅವರ ಆರೈಕೆ ಮಾಡುತ್ತಿರುವ ಡಾಕ್ಟರುಗಳು, ನರಸಮ್ಮಗಳು ಅದೆಂಥ ಮಾನಸಿಕ ಒತ್ತಡ ಅನುಭವಿಸುತ್ತಿರಬೇಕು. ನಮ್ಮದೇ ಊಟದ ಇನ್ನೊಂದು ರೂಪವನ್ನು ನಮಗೇ ನೋಡಲು ಅಸಹ್ಯವಾಗಿರುವಾಗ ಇನ್ನೊಬ್ಬರ ಮಲ ಮೂತ್ರಗಳನ್ನು ಸ್ವಚ್ಚ ಮಾಡುವ ಆ ಕೆಲಸಗಾರರು ಹೇಗಿರಬೇಕು?
ಗಣಿಗಳಲ್ಲಿ, ಸುಡು ಬಿಸಿಲಿನಲ್ಲಿ, ಕೊರೆಯುವ ಚಳಿಯಲ್ಲಿ, ಊಟ ನೀರಿಲ್ಲದೆ ಕೆಲಸ ಮಾಡುವ ಕಾರ್ಮಿಕರು ಎಷ್ಟೊಂದು ಹಿಂಸೆ ಅನುಭವಿಸುತ್ತಿರಬೇಕು, ನಮ್ಮ ದೇಶದ ಅನೇಕ ಮೌಢ್ಯದ, ಧಾರ್ಮಿಕ ಸೋಗಲಾಡಿತನದ ಕಟ್ಟುಪಾಡುಗಳ ನಡುವೆಯೂ ನಗುನಗುತ್ತಾ ತಮ್ಮ ಕೌಟುಂಬಿಕ ಕರ್ತವ್ಯ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳು ಪಡುತ್ತಿರುವ ಮಾನಸಿಕ ಹಿಂಸೆ ಎಷ್ಟೊಂದು ಗೊತ್ತೆ? ಭಯೋತ್ಪಾದಕ ದಾಳಿಗೆ ಸಿಲುಕಿ, ಪ್ರಕೃತಿ ವಿಕೋಪಗಳಿಗೆ ಸಿಲುಕಿ. ಎಲ್ಲವನ್ನೂ ಕಳೆದುಕೊಂಡು ದಿಢೀರನೇ ಭಿಕ್ಷುಕರಂತಾದ ಸಾವಿರಾರು ಜನರಿಗೆ ಆಗಿರಬಹುದಾದ ಮಾನಸಿಕ ಹಿಂಸೆ ಇನ್ನೆಷ್ಟಿರಬಹುದು ಊಹಿಸಿ. ಹೀಗೆ ಅನೇಕ ಉದಾಹರಣೆಗಳು ಇವೆ. ಇವರೆಲ್ಲ ಆತ್ಮಹತ್ಯೆ ಮಾಡಿಕೊಂಡರೆ ? ಬದುಕುತ್ತಿಲ್ಲವೇ?
ನಾವೇನೂ ಆದರ್ಶ ಕಲ್ಯಾಣ ರಾಜ್ಯದಲ್ಲಿದ್ದೇವೆಯೇ. ವಾಸಿಸುತ್ತಿರುವುದೇ ಕಪಟ, ವಂಚಕ ಭ್ರಮಾಲೋಕದ ಸಮಾಜದಲ್ಲಿ. ಹೀಗಿರುವಾಗ ಮಾನಸಿಕವಾಗಿ ದುರ್ಬಲ ಗೊಂಡು ಆತ್ಮಹತ್ಯೆ ಮಾಡಿಕೊಂಡರೆ ಅವರನ್ನು ನಂಬಿದ ಪ್ರೀತಿಸಿದ ಜನರ ಗತಿಯೇನು? ಸತ್ತವರಿಗೆ ಅದೇ ಕೊನೆ. ಆದರೆ ಅವರ ಅವಲಂಬಿತರಿಗೆ ನಿಜವಾದ ಕಷ್ಟ ಬದುಕಿನ ಆರಂಭ ಈ ಸಾವು ಎಂಬ ಪ್ರಜ್ಞೆ ಆತ್ಮಹತ್ಯೆ ಮಾಡಿಕೊಂಡವರಿಗೆ ಇರಬೇಡವೇ? ಕಷ್ಟ, ನೋವು, ಯಾತನೆ ಪಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಸಾವು ಸಹಜವಾಗೇ ಬರುತ್ತದೆ. ನಾವೇನು ಅದರ ಬಳಿ ಹೋಗಬೇಕಾಗಿಲ್ಲ.
ನಮ್ಮ ಸಮಾಜದ ನೈತಿಕ ಮೌಲ್ಯಗಳು, ಭ್ರಮೆಗಳು ಇದಕ್ಕೆ ಮತ್ತಷ್ಟು ಪೂರಕವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣೆನ ಬೆತ್ತಲೆ ಚಿತ್ರ ಪ್ರಕಟವಾದರೆ ಆಕೆ ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಬೆತ್ತಲೆಯೇ ಸಹಜತೆ ಅಲ್ಲವೇ. ನಮ್ಮೆಲ್ಲರ ಬಟ್ಟೆಗಳ ಹಿಂದೆ ಅಡಗಿರುವುದು ಬೆತ್ತಲೆಯೇ ಅಲ್ಲವೇ. ನಾವು ಹುಟ್ಟುವುದೇ ತಾಯಿಯ ಯೋನಿಯಿಂದ. ಅದರಲ್ಲಿ ಅವಮಾನ ಎಂಥದ್ದು? ಅತ್ಯಾಚಾರಕ್ಕೆ ಒಳಗಾದ ಹೆಣ್ಣೆನ ಮುಖ ಸಾರ್ವಜನಿಕರಿಗೆ ತೋರಿಸುವುದಿಲ್ಲ ಏಕೆ. ವಿಕೃತ ಮನಸ್ಸಿನ ನಮ್ಮಗಳ ಮನಸ್ಥಿತಿಯಿಂದ ಅಲ್ಲವೇ. ಸಾಯುವುದೇ ಆದರೆ ಅತ್ಯಾಚಾರಿ ಸಾಯಬೇಕು ಬಲವಂತಕ್ಕೆ ಒಳಗಾದ ನತದೃಷ್ಟೆಯಲ್ಲ. ಹಾಗಾಗಿ ಆತ್ಮಹತ್ಯೆ ಹೇಡಿಗಳ ಕೃತ್ಯ. ಅದನ್ನು ಯಾವ ದೃಷ್ಟಿಕೋನದಿಂದಲೂ ಸಮರ್ಥಿಸಬಾರದು. ಅದು ಆತನ/ಆಕೆಯ ಸ್ವಾತಂತ್ರ್ಯ. ಆದರೆ ಸಮಾಜ ಸಹಾನುಭೂತಿ ಮಾತ್ರ ತೋರಬಾರದು. ನಾನು ಹೇಳುತ್ತಿರುವುದು ನಿಜ ಆತ್ಮಹತ್ಯೆಗಳ ಬಗ್ಗೆ. ಕೊಲೆ, ಆತ್ಮಹತ್ಯೆ ಎಂದು ಬಿಂಬಿಸುವ ಪಿತೂರಿ ಘಟನೆಗಳಿಗೆ ಇದು ಅನ್ವಯಿಸುವುದಿಲ್ಲ.
ಸಾಯಲು ಒಂದೇ ದಾರಿ. ಉಸಿರು ನಿಲ್ಲುವಂತೆ ಮಾಡಿಕೊಳ್ಲುವುದು. ಆದರೆ, ಬದುಕಲು ಹಲವಾರು ದಾರಿಗಳಿವೆ. ಅದನ್ನು ಅರಿಯದವರು ಇದ್ದರೂ ಅಷ್ಟೆ, ಹೋದರೂ ಅಷ್ಟೆ. ಎಂದಿದ್ದರೂ ಅಪಾಯಕಾರಿಯೇ. ಕ್ಷಮಿಸಿ, ನನ್ನ ಭಾವನೆ, ಅಭಿಪ್ರಾಯ ಕಠಿಣವಾಗಿರಬಹುದು. ಎಲ್ಲರ ಜೀವವೂ ಮುಖ್ಯ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೊಲೆಗಾರನಂತೆ ಇತರರಿಗೆ ಪರೋಕ್ಷವಾಗಿ ಹಿಂಸೆ ನೀಡುತ್ತಾರೆ. ಒತ್ತಡದಿಂದಲೋ, ಸೇಡಿನ ಮನೋಭಾವದಿಂದಲೋ, ಭ್ರಮೆಯಿಂದಲೋ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು ಬದುಕಿರುವವರಿಗೆ ಸತ್ಯ ಹುಡುಕಲು ಅತ್ಯಂತ ಕಷ್ಟವನ್ನು ಸೃಷ್ಟಿಸುತ್ತಾರೆ.
ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರೆಲ್ಲಾ ತುಂಬಾ ಒಳ್ಳೆಯವರು ಮತ್ತು ಅಪಾರ ಸಂಕಟವನ್ನು ಅನುಭವಿಸಿದವರು ಎಂಬ ತೀರ್ಮಾನ ಬೇಡ. ಅದಕ್ಕಿಂತ ಕಷ್ಟಪಡುವವರು ಇನ್ನೂ ಜೀವಂತವಾಗಿ ಇದ್ದಾರೆ. ಸತ್ತವರು ದುರ್ಬಲರಷ್ಟೆ. ಎಂದಿಗೂ, ಎಂತಹ ವಿಷಮ ಸ್ಥಿತಿಯಲ್ಲಿಯೂ ಆತ್ಮಹತ್ಯೆ ಬೇಡ. ಉಸಿರು ಸ್ವಯಂ ನಿಲ್ಲುವವರೆಗೂ ಹೋರಾಡೋಣ.
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ