ಆತ್ಮಹತ್ಯೆ: ಭ್ರಷ್ಟ ವ್ಯವಸ್ಥೆಯ ಕನ್ನಡಿ

ಆತ್ಮಹತ್ಯೆ: ಭ್ರಷ್ಟ ವ್ಯವಸ್ಥೆಯ ಕನ್ನಡಿ

ಒಂದುವರೆ ವರ್ಷದ ಹಿಂದೆ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ಕಾಂಗ್ರೆಸ್ಸಿನ ಪ್ರಚಾರ ಕಾರ್ಯ ಮತ್ತು ರಣತಂತ್ರಗಳನ್ನೊಮ್ಮೆ ನೆನಪಿಸಿಕೊಳ್ಳುವುದಕ್ಕೆ ಇದು ಸುಸಮಯ. ಆಗ ಅಧಿಕಾರದಲ್ಲಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅದ್ಯಾವ ಪರಿಯಲ್ಲಿ ಟೀಕೆಗಳನ್ನು ಮಾಡುತ್ತಿತ್ತೆಂದರೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಅದು ಮಾಡುತ್ತಿತ್ತು. ಕಮೀಷನ್ ಸರಕಾರ ಎಂಬ ಅಸ್ತ್ರವನ್ನು ಪ್ರಯೋಗಿಸಿತ್ತು. ಅದನ್ನು ಕಾಂಗ್ರೆಸ್ ಯಾವ ಪ್ರಮಾಣದಲ್ಲಿ ಪ್ರಚುರಪಡಿಸಿತ್ತೆಂದರೆ ಅದನ್ನು ದೇಶಾದ್ಯಂತ ಹೇಳಿಕೊಂಡು ಬಂತು. ಕಾಂಗ್ರೆಸಿನ ಅಬ್ಬರವನ್ನು ನೋಡಿದ ರಾಜ್ಯದ ಜನರಿಗೆ ಅದು ಇದ್ದರೂ ಇರಬಹುದು ಎಂಬ ಭಾವನೆ ಕೂಡ ಮೂಡಿತು. ಮುಂದೆ ಕಾಂಗ್ರೆಸ್ ಅಧಿಕಾರಕ್ಕೇರಲು ಇಂಥ ತಂತ್ರಗಳು ಕೆಲಸ ಮಾಡಿದ್ದವು.

ಆದರೆ ಇಂದೇನಾಗುತ್ತಿದೆ ಎಂಬುದಕ್ಕೆ ದಿನದ ಹಿಂದೆ ನಡೆದ ಘಟನೆಗಳನ್ನು ಒಮ್ಮೆ ತುಲನೆ ಮಾಡುವುದೊಳ್ಳೆಯದು. ಬೆಳಗಾವಿಯ ತಹಶೀಲ್ದಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೂ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಇದು ನೇರವಾಗಿ ಸರ್ಕಾರ ಕೊಟ್ಟ ಕಿರುಕುಳದಿಂದ ಮಾಡಿಕೊಂಡ ಪ್ರಕರಣ ಎಂಬುದು ನಿಚ್ಚಳವಾಗುತ್ತದೆ. ಇದರ ಜೊತೆಗೆ ಕರ್ಣಾಟಕ ವೈನ್ ಮರ್ಚೆಂಟ್ ಅಸೋಸಿಯೇಶನ್, ಅಬಕಾರಿ ಅಧಿಕಾರಿಗಳು ತಮಗೆ ಮಂಥ್ಲಿ ಮನಿಗೆ ಪೀಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಜೊತೆಗೆ ಅದರ ವಿರುದ್ಧ ಮದ್ಯದಂಗಡಿಗಳನ್ನು ಮುಚ್ಚಿ ಪ್ರತಿಭಟಿಸುವ ನಿರ್ಧಾರಕ್ಕೂ ಬಂದಿದ್ದಾರೆ. ಇದನ್ನು ಅಬಕಾರಿ ಸಚಿವರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದಕ್ಕೆ ಅವರು ಈ ಬಗ್ಗೆ ನೀಡಿದ ಹೇಳಿಕೆಯೇ ಸಾಕ್ಷಿ.

ಈ ಎರಡು ಪ್ರಕರಣಗಳನ್ನು ಗಮನಿಸಿದರೂ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಪರಾಕಾಷ್ಟೆಯನ್ನು ವಿವರಿಸಬಹುದು. ಜೊತೆಗೆ ಕಾಂಗ್ರೆಸ್ ಭ್ರಷ್ಟಾಚಾರದ ಒಂದು ಫಾರ್ಮೆಟಿಗೆ ಒಗ್ಗಿಕೊಂಡಿದೆ ಎಂಬುದು ತಿಳಿಯುತ್ತದೆ. ಏಕೆಂದರೆ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗಲೆಲ್ಲಾ ಇಂಥ ಪ್ರಕರಣಗಳು ಸಾಮಾನ್ಯ ಎಂಬಂತೆ ನಡೆಯುತ್ತಿರುತ್ತವೆ. ಅದು ಆತ್ಮಹತ್ಯೆಯವರೆಗೂ ಮುಂದುವರೆಯುತ್ತದೆ. ವರ್ಗಾವಣೆ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾದ ಸರ್ಕಾರಿ ಅಧಿಕಾರಿಗಳ ಪ್ರಕರಣ ಇಲ್ಲಿ ಉಲ್ಲೇಖಾರ್ಹ. ಈ ಬಾರಿ ಕೂಡಾ ಅಧಿಕಾರಕ್ಕೆ ಬಂದ ಆರಂಭದಲ್ಲೇ ವಾಲ್ಮೀಕಿ ನಿಗಮ ಹಗರಣ ನಡೆಯಿತು. ಮೂಡಾ ಹಗರಣ ಕೂಡಾನಡೆಯಿತು. ಈಗ ಅದು ಅಬಕಾರಿಗೆ ಮುಟ್ಟಿದೆ. ಇವನ್ನೆಲ್ಲಾ ನೋಡಿದರೆ ಕಾಂಗ್ರೆಸ್ ಅವಧಿಯಲ್ಲಿ ಇಡೀ ಒಂದು ವ್ಯವಸ್ಥೆಯೇ ಒಂದು ಪಕ್ಷದ ಅಡಿಯಾಳಾಗಿದೆ ಅಥವಾ ವ್ಯವಸ್ಥೆಯನ್ನು ಅಡಿಯಾಳಾಗಿ ಮಾಡಲಾಗಿದೆ. ಅಲ್ಲದೆ ಸರ್ಕಾರದ ಅಹಂಕಾರ ಆಡಳಿತ ವರ್ಗಕ್ಕೂ ಮುಟ್ಟಿದಂತೆ ಕಾಣುತ್ತಿದೆ. ಏಕೆಂದರೆ ಇವೆರಡು ಪ್ರಕರಣಗಳು ನೇರವಾಗಿ ಸಚಿವರ ಬುಡಕ್ಕೇ ಮುಟ್ಟುತ್ತಿವೆ. ವಾಲ್ಮೀಕಿ ಮತ್ತು ಮೂಡಾ ಹಗರಣಗಳೂ ಕೂಡ ಅಂತಿಮವಾಗಿ ಮಂತ್ರಿ, ಮುಖ್ಯಮಂತ್ರಿಗಳ ಬುಡಕ್ಕೆ ಬಂದಿದ್ದವು. ಅದನ್ನು ತನಿಖೆಯಿಂದ ತಪ್ಪಿಸುವ ಪ್ರಯತ್ನಗಳೂ ನಡೆದಿದ್ದವು. ಇದು ಹಾಗಾಗಬಾರದು. ಇದರಲ್ಲಿ ಸರ್ಕಾರದ ಅಥವಾ ಸಚಿವರ ಪಾತ್ರಗಳೀಲ್ಲ ಎನ್ನುವುದನ್ನು ಪಾರದರ್ಶಕ ತನಿಖೆ ಮಾತ್ರ ಹೇಳಬಲ್ಲದು. 

-ಹೊಸದಿಗಂತ, ಸಂಪಾದಕೀಯ, ದಿ: ೦೬-೧೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ