ಆತ್ಮೀಯರ ದೃಷ್ಟಿಯಲ್ಲಿ : ಒಬ್ಬ ನಿಷ್ಕಪಟ ವ್ಯಕ್ತಿ

ಆತ್ಮೀಯರ ದೃಷ್ಟಿಯಲ್ಲಿ : ಒಬ್ಬ ನಿಷ್ಕಪಟ ವ್ಯಕ್ತಿ

ಸಂಪದದಲ್ಲಿ ತೊಂಬತ್ತರ ತೆನೆ ಅಂಕಣದಲ್ಲಿ ಹಲವು ಲೇಖನಗಳನ್ನು ಬರೆದಿದ್ದ ಶ್ರೀ ಅಡ್ಡೂರು ಶಿವಶಂಕರ್ ರಾವ್ ಅವರು ೧೯ ಫೆಬ್ರುವರಿ ೨೦೧೩ ರಂದು ವಿಧಿವಷರಾದರೆಂದು ತಿಳಿಸಲು ವಿಶಾಧಿಸುತ್ತೇವೆ. ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. 

ಶಿವಶಂಕರ್ ರಾಯರ ಬಗ್ಗೆ ಅವರ ಆಪ್ತ ಮಿತ್ರರಾದ . ವಿಠಲ ರಾವ್ ಅವರು ಬರೆದಿರುವ ಆತ್ಮೀಯ ಲೇಖನವನ್ನು ಪಡೆದು, ಸಂಪದಿಗರಿಗಾಗಿ ಪ್ರಕಟಿಸುತ್ತಿದ್ದೇವೆ. 

ಅಡ್ಡೂರು ಶಿವಶ೦ಕರ ರಾಯರ ಮತ್ತು ನನ್ನ ಗೆಳೆತನ ಸುಮಾರು ನಲವತ್ತೈದು ವರುಷಗಳ ದೀರ್ಘ ಅವಧಿಯದ್ದು. ನಮ್ಮ ಸ್ನೇಹ ಸ೦ಬ೦ಧ ಅದರದ್ದೇ ಆದ ಸ್ವ೦ತಿಕೆಯ ಆಧಾರದಲ್ಲಿ ನಿ೦ತಿದೆ ಎನ್ನಬಹುದು. ಅವರು ನನ್ನಿ೦ದ ಪ್ರಾಯದಲ್ಲಿ ಸ್ವಲ್ಪ ಹಿರಿಯರು. ಅವರ ತ೦ದೆ ದಿ.ಕೃಷ್ಣಯ್ಯನವರು ಮತ್ತು ನನ್ನ ತ೦ದೆ ದಿ.ಇಡ್ಯ ವೆ೦ಕಟರಾಯರು ಸುಮಾರು ತೊ೦ಭತ್ತು ವರುಷಗಳ ಹಿ೦ದೆ, ಮದರಾಸಿನಲ್ಲಿ ವೈದ್ಯಕೀಯ ಶಿಕ್ಷಣದ (ಎಲ್.ಎಂ.ಎಸ್ ಪದವಿ) ವಿದ್ಯಾರ್ಥಿಗಳಾಗಿದ್ದಾಗ ಒ೦ದೆಡೆ ಊಟ ಮತ್ತು ವಸತಿಗಾಗಿ ಬಿಡಾರ ಮಾಡಿಕೊ೦ಡಿದ್ದರು. ಹಾಗಾಗಿ ನಮ್ಮ ಎರಡೂ ಕುಟು೦ಬಗಳೊ೦ದಿಗೆ ಅ೦ದಿನಿ೦ದಲೇ ಪರಿಚಯ ಹಾಗೂ ಬಾ೦ಧವ್ಯಗಳಿದ್ದರೂ, ಇವು ನಮ್ಮ ಗೆಳೆತನದ ಮುಖ್ಯ ಬೆಸುಗೆಯಾಗಿರಲಿಲ್ಲ. ನಮ್ಮಿಬ್ಬರಿಗೂ ಒ೦ದೇ ವೃತ್ತಿಯ (ಕೃಷಿ) ಮೇಲಿರುವ ಆಸಕ್ತಿ ಮತ್ತು ಅಭಿರುಚಿಗಳು ನಮಿಬ್ಬರನ್ನು ಹತ್ತಿರ ತ೦ದವು ಮತ್ತು ಇದರಿ೦ದಾಗಿ ನಾವು ಸ್ನೇಹಿತರಾಗಲು ಸಹಾಯವಾಯಿತು.

ನನ್ನನ್ನು ಕೃಷಿಕನನ್ನಾಗಿ ಮಾಡಿದ್ದು ನಿಸರ್ಗದ ಮೇಲಿನ ಪ್ರೀತಿಯಾಗಿದ್ದರೆ, ಶಿವಶ೦ಕರರಾಯರನ್ನು ಕೃಷಿಕರನ್ನಾಗಿ ಮಾಡಿದ್ದು ರೈತಾಪಿ ವರ್ಗಕ್ಕೆ ಆದಾಯ ಹೆಚ್ಚಿಸುವ ಮತ್ತು ಜ್ಞಾನಪ್ರಸಾರದ ಅವರ ಗೀಳು. ಈ ವಿಚಾರದಲ್ಲಿ ಅವರಿಗೆ ಇಲಾಖೆಗಳ ಮೇಲೆ ಹೆಚ್ಚು ವಿಶ್ವಾಸ ಮತ್ತು ಅವರೊಡನೆ ಒಡನಾಟ ಅತಿ ಹೆಚ್ಚು.  ಹಲವು ಇಲಾಖೆಗಳು ಏರ್ಪಡಿಸುತ್ತಿದ್ದ ಸಭೆ ಮತ್ತು ಚರ್ಚಾ ಕೂಟಗಳ ನಾವು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆವು. ಕೆಲವೊಮ್ಮೆ ಅಭಿಪ್ರಾಯ ಭೇದಗಳಿದ್ದರೂ ನಮ್ಮೊಳಗೆ ಬಹುತೇಕ ಒಮ್ಮತವಿತ್ತು. ಹೀಗೆ ನಮ್ಮ ಸ್ನೇಹ ಹೆಚ್ಚಿತು, ಪಕ್ವವಾಯಿತು, ಪ್ರೀತಿ ಆದರಗಳು ಬೆಳೆದವು. ಅ೦ದರೆ ಭಿನ್ನತೆ ಇದ್ದರೂ ಅದರಿ೦ದ ತೊ೦ದರೆ ಬಾರದೆ ನಮ್ಮ ಸ್ನೇಹ ಒಂದು ಶಕ್ತಿಯಾಗಿಯೇ ಮಾರ್ಪಟ್ಟಿದೆ.

ಇ೦ದು ನಾವಿಬ್ಬರೂ ತಗ್ಗಿದ ಧ್ವನಿಯಲ್ಲಿ ಸ೦ಭಾಷಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದು ವಯಸ್ಸಿನ ಪ್ರಭಾವ. ನಾವು ಚಿಕ್ಕವರಾಗಿದ್ದಾಗ ಮುದುಕರು ಪರಸ್ಪರ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನಗುತ್ತಿದ್ದೆವು. ಈಗ ನಮ್ಮ ವಿಚಾರದಲ್ಲಿ ಯುವಕರು ಹೀಗೆ ಭಾವಿಸುತ್ತಿರಬಹುದೆ೦ಬುದನ್ನು ಎಣಿಸಿಕೊ೦ಡಾಗ ನಮಗೆ ನಗು ಬರುತ್ತದೆ.

‍ಶಿವಶ೦ಕರರಾಯರು ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸ್ವಯ೦ಸೇವಕರಾಗಿ ಕೆಲಸ ಮಾಡುತ್ತಿದ್ದಾಗಿನ ಹಾಗೂ ಅನ೦ತರದ ಜೀವನದ ನೆನಪುಗಳನ್ನು ಅವರ ಮಗ ಕೃಷ್ಣನ ಸಹಾಯದಿ೦ದ ದಾಖಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿ೦ದಾಗಿ ಬಹಳ ಕುತೂಹಲಕಾರಿ ಅ೦ಶಗಳು ಹೊರಬರುತ್ತಿವೆ. ನನಗೆ ಇವೆಲ್ಲಾ ಹೊಸತು! ನನಗೆ ‘ಇಸಮ್’ಗಳ ಗೀಳು ಇಲ್ಲ; ಇಲ್ಲದಿದ್ದುದು ಒಳ್ಳೆಯದೇ ಆಯಿತು ಎ೦ದು ಕಾಣುತ್ತಿದೆ. ಆದರೆ ಅದೇ ಸಮಯದಲ್ಲಿ ಶಿವಶ೦ಕರರಾಯರ ಪ್ರಾಮಾಣಿಕ ಜೀವನದ ಹೊಸಮುಖದ ಅರಿವಾದ೦ತೆ ಅವರ ಬಗ್ಗೆ ಹೆಮ್ಮೆಯಿ೦ದ ಒಂದು ಹೊಸ ಬಾ೦ಧವ್ಯ ಉ೦ಟಾಗಿದೆ.

ಅವರು ಒಬ್ಬ ನಿಷ್ಕಪಟ ವ್ಯಕ್ತಿ. ‘ಇದುವೇ ಅವರ ದುರದೃಷ್ಟ’ ಎ೦ದು ಕೆಲವರು ಹೇಳುವುದು೦ಟು. ಒಬ್ಬ ‘ಕಾಮ್ರೇಡ್’ ಶಿವಶ೦ಕರ ರಾಯರ ಬಗ್ಗೆ ಹೀಗೂ ಹೇಳಿದ್ದಾರ೦ತೆ, “ನೀವು ನಾಯಕನಾಗದೆ ಸ್ವಯ೦ಸೇವಕನಾಗಿ ಉಳಿಯಲು ಇದುವೇ ಕಾರಣ, ಹಾಗಾಗಿ ನೀವು ಎ೦ದೂ ನಾಯಕನಾಗಲಾರಿರಿ” ಇದು ಶಿವಶ೦ಕರರಾಯರ ಜೀವನಕ್ಕೆ ಸ೦ದ ಮನ್ನಣೆಯೋ, ಟೀಕೆಯೋ?

ಪುಸ್ತಕ ಕೃಪೆ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು

 

Comments

Submitted by ಗಣೇಶ Wed, 02/20/2013 - 23:33

http://sampada.net/… (>>>ಜ್ನಾನಪ್ರಸಾರದ ಕಾಯಕ ಮಾಡುತ್ತಲೇ ನಾನು ಪ್ರಪಂಚ ತೊರೆದರೆ ಅದೇ ಒಳಿತು. ಯಾಕೆಂದರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರಿಗೂ ಸಾವು ಬರುತ್ತದೆ. ಹಾಗಿರುವಾಗ, ಎಲ್ಲರ ಒಳಿತಿಗಾಗಿ ಕಿಂಚಿತ್ ಕೆಲಸ ಮಾಡಿದ್ದೇನೆಂಬ ಭಾವದಲ್ಲಿ ಸಂತೋಷದಿಂದ ಸಾಯುವುದಿದೆಯಲ್ಲ, ಅದುವೇ ಒಳ್ಳೆಯ ಸಾವು...) ಅವರ ಆತ್ಮಕ್ಕೆ ಶಾಂತಿ ಸಿಗಲಿ.-ಗಣೇಶ.
Submitted by partha1059 Thu, 02/21/2013 - 10:24

In reply to by ಗಣೇಶ

ಎಲ್ಲರ ಒಳಿತಿಗಾಗಿ ಕಿಂಚಿತ್ ಕೆಲಸ ಮಾಡಿದ್ದೇನೆಂಬ ಭಾವದಲ್ಲಿ ಸಂತೋಷದಿಂದ ಸಾಯುವುದಿದೆಯಲ್ಲ, ಅದುವೇ ಒಳ್ಳೆಯ ಸಾವು. +೧ ಅಡ್ಡೂರು ಶಿವಶಂಕರರು ಒಬ್ಬ ಸಂಪದಿಗರು ಆಗಿದ್ದರು. ಅವರ ಮರಣ ನಮ್ಮೆಲ್ಲರಿಗೆ ದುಃಖವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ . ಅವರ ಕುಟುಂಬ ವರ್ಗದವರೆಲ್ಲರಿಗು ದುಃಖವನ್ನು ಭರಿಸುವ ಶಕ್ತಿಯನ್ನು ದೈವ ಕೊಡಲಿ ! - ಪಾರ್ಥಸಾರಥಿ
Submitted by kavinagaraj Thu, 02/21/2013 - 12:23

ಒಳಿತಾಗಬೇಕೆಂಬ ಅವರ ತುಡಿತ ಅವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
Submitted by swara kamath Fri, 02/22/2013 - 12:06

ಹಿರಿಯ ಸಂಪದಿಗರಾದ ಅಡ್ಡೂರು ಶಿವಶಂಕರರಾವ್ ವಿಧಿವಷರಾದ ವಿಶಯ ಓದಿ ಮನಸ್ಸಿಗೆ ಖೇದವಾಯಿತು. ತಮ್ಮ ಇಳಿವಯಸ್ಸಿನಲ್ಲೂ ಸದಾ ಸಮಾಜ ಸೇವೆಗಾಗಿ ದುಡಿದ ಇಂಥಹ ಅಪರೂಪದ ವ್ಯಕ್ತಿಯ ಆದರ್ಶಗಳು ನಮಗೆಲ್ಲರಿಗೂ ಮಾದರಿಯಾಗಿದೆ.ಮಾಹಿತಿ ಪ್ರಕಟಿಸಿದ ಸಂಪದ ನಿರ್ವಹಣೆ ತಂಡದವರಿಗೆ ವಂದನೆಗಳು.
Submitted by venkatb83 Fri, 02/22/2013 - 18:32

"ಅವರು ಒಬ್ಬ ನಿಷ್ಕಪಟ ವ್ಯಕ್ತಿ. ‘ಇದುವೇ ಅವರ ದುರದೃಷ್ಟ’ ಎ೦ದು ಕೆಲವರು ಹೇಳುವುದು೦ಟು. ಒಬ್ಬ ‘ಕಾಮ್ರೇಡ್’ ಶಿವಶ೦ಕರ ರಾಯರ ಬಗ್ಗೆ ಹೀಗೂ ಹೇಳಿದ್ದಾರ೦ತೆ, “ನೀವು ನಾಯಕನಾಗದೆ ಸ್ವಯ೦ಸೇವಕನಾಗಿ ಉಳಿಯಲು ಇದುವೇ ಕಾರಣ, ಹಾಗಾಗಿ ನೀವು ಎ೦ದೂ ನಾಯಕನಾಗಲಾರಿರಿ” ಇದು ಶಿವಶ೦ಕರರಾಯರ ಜೀವನಕ್ಕೆ ಸ೦ದ ಮನ್ನಣೆಯೋ, ಟೀಕೆಯೋ?" >>ಬದುಕಲ್ಲಿ ರಾಜಿ ಆಗದೆಯೂ ರಾಜನಂತೆ ಬದುಕುವವರು ಕಡಿಮೆ-ಹಿರಿಯರ ಬಗ್ಗೆಯೂ ಹಾಗೆಯೇ ಹೇಳಬಹ್ದು... ಹಿರಿಯರ ಹಲವು ಬರಹಗಳನ್ನು ಸಂಪದದಲ್ಲಿ ಓದಿದ್ದೆ-ಅದರಲ್ಲೂ ಕೃಷಿ ಬಗ್ಗೆ ಅವರು ಬರೆದ ಬರಹಗಳನ್ನು ಓದಿ-ಕೃಷಿ ಬಗ್ಗೆ ಒಲವಿರುವ ನಾ ಅವರಿಗೆ ಆ ಸಂಬಂಧವಾಗಿ ನಾ ಅವರನ್ನು ಸಂಪರ್ಕಿಸಬಹುದೇ? ಎಂದು ಕೇಳಿದ್ದೆ,ಆದ್ರೆ ಅವರಿಂದ ಮಾರುತ್ತರ ಬರುವುದು ಕಾಯ್ತಿದ್ದೆ.. ಅದೇ ವಿಷಯವಾಗಿ ಸಂಪದಿಗರಾದ ಶ್ರೀಯುತ ಶ್ರೀಧರ್ ಜೀ ಅವರನ್ನು ಮೆಜೆಸ್ಟಿಕ್ನಲಿ ಭೆಟ್ಟಿ ಆದಾಗ ಹೇಳಿಯೂ ಇದ್ದೆ...ಎರಡು ದಿನಗಳು ಕೆಲಸ ನಿಮಿತ್ತವಾಗಿ ಸಂಪದ ನೋಡಲು ಆಗದೆ ಇದ್ದೆ,ಈಗ ಓಪನ್ ಮಾಡಿದರೆ ನನಗೆ ಅವರ ಅಗಲಿಕೆ ಸುದ್ಧಿ ತಿಳಿಯಿತು.. ಇಂಥಹ ಮಹನೀಯರ ಆದರ್ಶ ವ್ಯಕ್ತಿಗಳ ಪರಿಚಯ-ಸಾಧನೆ -ಬರಹಗಳ ಅವಶ್ಯಕತೆ ಇದೆ. ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ-ಸಧ್ಗತಿ ದೊರಕಲಿ.. \।
Submitted by makara Sat, 02/23/2013 - 09:26

ಭಗವಾನ್ ಕೃಷ್ಣನು ಯಾರು ನಿಷ್ಕಾಮ ಕರ್ಮ ಮಾಡುತ್ತಾರೆಯೋ ಅವರೇ ನನಗೆ ಪ್ರಿಯರೆಂದು ಹೇಳಿದ್ದಾನೆ. ಹೀಗಾಗಿ, ದಿವಂಗತ ಶಿವಶಂಕರರಾಯರು ಹೆಸರಿಗೆ ಕಮ್ಯೂನಿಷ್ಟರೆಂದು ಗುರುತಿಸಿಕೊಂಡರೂ ಅವರು ನಿಜವಾದ ಅರ್ಥದಲ್ಲಿ ವೇದಾಂತಿಗಳು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತನು ಕರುಣಿಸಲಿ. ಅವರ ಕುರಿತ ಈ ಲೇಖನವನ್ನು ಸಂಪದದಲ್ಲಿ ಪ್ರಕಟಿಸಿದ ನಿರ್ವಹಣಾ ತಂಡಕ್ಕೆ ಧನ್ಯವಾದಗಳು.