ಆದದ್ದೆಲ್ಲ ಒಳ್ಳೆಯದ್ದಕ್ಕೆ...?

ಆದದ್ದೆಲ್ಲ ಒಳ್ಳೆಯದ್ದಕ್ಕೆ...?

ಬರಹ

ಹೀಗೆ ಬದುಕಬೇಕು ಅಂತ ಯಾವತ್ತು,ಏನು ಅಂದುಕೊಂಡಿರಲಿಲ್ಲ.ಗಾಳಿ ಬೀಸಿದ ಕಡೆ ತೂರಿಕೊಂಡು ಬಂದದ್ದು ಆಯ್ತು.ಸಮಾಧಾನ ಏನು ಅಂದ್ರೆ.., ಏನಾದ್ರು... ಆಗಿದ್ದೆಲ್ಲ ಒಳ್ಳೆದಕ್ಕೆ ಆಯ್ತು,ಇದು ಆಗಿದ್ದಕ್ಕೆ ನಾನು ಇವತ್ತು ಹೀಗಿರೋದು, ಅದು ಆಗಿದ್ದಕ್ಕೆ ನಾನು ಪಾಠ ಕಲಿತಿದ್ದು ಅಂತ ಜೀವನದುದ್ದಕ್ಕೂ ಸಮಾಧಾನ ಮಾಡ್ಕೊಂದು ಬಂದಿದ್ದು.ಈಗ ತಾನೆ ಕೂತು ತಲೆ ಕೆಡಿಸ್ಕೊಂಡು ಯೋಚನೆ ಮಾಡಿಲ್ಲ ಅಂದ್ರೆ ಈಗಲೂ ಏನು ಆಗಿಲ್ಲ ..ಎಲ್ಲಾ ಸರಿಯಾಗಿದೆ.

ಆದದ್ದೆಲ್ಲ ಒಳ್ಳೆಯದಕ್ಕೆ,ಆಗೋದೆಲ್ಲ ಒಳ್ಳೆಯದಕ್ಕೆ,ಆಗ್ತ ಇರೋದು ಒಳ್ಳೆದಕ್ಕೆ..ಪ್ರಯತ್ನ ಅಷ್ಟೆ ನಮ್ಮದು..ಗೀತಾ ಸಾರ.

ದೊಡ್ಡ ಕಿಟಕಿಗಳಿಗೆ ಮುಚ್ಚಿದ ದಪ್ಪದ ಪರದೆ ಆಗ ಈಗ ಸ್ವಲ್ಪ ಸರಿದಾಗ ಇಣುಕಿ ನೋಡಲು ಯತ್ನಿಸುತ್ತಿದ್ದ ಸೂರ್ಯ ಕಿರಣಗಳು ಎಂದಿನಂತೆ ಇಂದು ಸೂರ್ಯನಿಗೆ ಮುದ ನೀಡಲಿಲ್ಲ.ಮಲಗಿದ್ದಷ್ಟೇ..!! ನಿದ್ದೆ ಎಲ್ಲೋ ದೂರ..ಒಂದೇ ಯೋಚನೆ.
ತಾನು ಕೆಲಸ ಮಾಡುತ್ತಿದ್ದ ಐ.ಬಿ.ಎಮ್ ಕಂಪನಿಯಲ್ಲಿ ನೆನ್ನೆ ತಾನೆ ೫ ವರ್ಷ ಉತ್ತಮ ಸೇವೆಯ ಸ್ಮರಣಾರ್ಥ ಒಂದು ಸೊಗಸಾದ ಕೈ ಗಡಿಯಾರ ಕೊಟ್ಟು ಅವರ ಪಿ.ಎಮ್ ಸಾಕಷ್ಟು ಏಣಿ ಹತ್ತಿಸಿದ್ದರು.ಇದೆಲ್ಲ ಇತ್ತೀಚೆಗೆ ಅದೇನೊ "ಕಿಕ್" ಕೊಡೊಲ್ಲ.ಒಳ್ಳೆ ಸಂಬಳ, ನಿನ್ನ ಎಷ್ಟು ಅಂತ ಕೇಳೋರಿಗೆ ಅಷ್ಟೆ.., ಯಾವತ್ತು ನನ್ನ ಸಂಬಳ ನನಗೆ ಒಳ್ಳೆಯದು ಅಂತ ಅನಿಸಲಿಲ್ಲ.ಎಲ್ಲ ಒಂದೊಂದು,ಎರಡು ವರ್ಷಕ್ಕೆಲ್ಲ ಕಂಪೆನಿ ಬದಲಾಯಿಸ್ತ ಇದ್ದರು ..ನಾನಿನ್ನು ಯಾಕೆ ಇಲ್ಲಿ ಗೂಟ ಹೊಡ್ಕೊಂಡು ಕೂತಿದಿನಿ ಅಂತ ಆಗಾಗ ಯೋಚನೆ ಮಾಡ್ತ ಇದ್ದೆ. ದುಡ್ಡು ಮಾಡೊಕೆ ಇರೊಡು ಎರಡೇ ಸೀದ ದಾರಿ,ಒಂದು ಕೆಲಸ ಬದಲಾಯಿಸ್ತ ಇರು..ಪ್ರತಿಯೊಂದು ಚೇಂಜ್ ಗೆ ಏನಿಲ್ಲ ಅಂದ್ರು ೩೦% ಅಂತು ಹೈಕ್ ಸಿಕ್ಕೇ ಸಿಗುತ್ತೆ.ಇನ್ನೊಂದು ಶೇರ್ ಮಾರ್ಕೆಟ್...ಬೆಳಿಗ್ಗೆ ಇಂದ ಸಂಜೆಯವರ್ಗೆ monecontrol ವೆಬ್ಸೈಟ್ ನಲ್ಲಿ ಯಾವ ಯಾವ ಶೇರ್ ಹೇಗೆ ಮೂವ್ ಆಗ್ತ ಇದೆ ಅಂತ ನೋಡೋದು ಹಾಗೆ ಐ.ಸಿ.ಐ.ಸಿ.ಐ ಡೈರೆಕ್ಟ್.ಕಾಮ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ವರ್ಗಾಯಿಸೋದು.

ಕೆಲ್ಸಕ್ಕೆ ಹೊಸದಾಗಿ ಸೇರಿದಾಗ ೨.೫ ಲಕ್ಷ ವರ್ಷಕ್ಕೆ ಸಂಬಳ..ಅಮ್ಮ ಇನ್ನು ಸರ್ವಿಸ್ ನಲ್ಲಿ ಇದ್ದರೂ ಅವರಿಗೆ ಇನ್ನು ಅಷ್ಟು ಸಿಗೊಲ್ಲ..ಆಹಾ ಏನು ಆನಂದ ..!!,ಅಮ್ಮ,ಅಪ್ಪ "ದುಡ್ಡು ಪೋಲು ಮಾಡಬೇಡ....ಉಳಿಸಿ ಮನೆನೋ,ಸೈಟೋ ತಗೋ ಬೇಗ,ದಿನ ದಿನಕ್ಕು ಏರ್ತಾನೆ ಇದೆ ಬೆಲೆ" ಅಂದಾಗ ಆಯ್ತು ಅಂತ ಸುಮ್ಮನಾದೆ.ಮನೆ ಸಾಲ,ಆ ಕಾರ್ಡು..ಈ ಕಾರ್ಡು,ಮನೆ ತಗೊಂಡ ಮೇಲೆ ಕಾರಿಗೆ ಸಾಲ,ಒಂದೇ ಒಂದು ತಿಂಗಳು ಸಂಬಳ ಬಂದಿಲ್ಲ ಅಂದ್ರೆ ದೇವರೆ ಕಾಪಾಡಬೇಕು.ತಾನು ಕೆಲಸ ಮಾಡುತ್ತಿದ್ದ ಮೈನ್ ಫ಼್ರೇಮ್ ನಲ್ಲಿ ಇತ್ತೀಚೆಗೆ ಕೆಲ್ಸಾನು ಕಮ್ಮಿನೇ.ಬೇರೆ ಯಾವದಾದ್ರೂ ಟೆಕ್ನಾಲಜಿಗೆ ಹೋಗೊಣ ಅಂದ್ರೆ ಮತ್ತೆ ಕೂತು ಎಲ್ಲ ಓದಬೇಕು.ಮನೆಗೆ ಹೋಗುತ್ತಿದ್ದ ಹಾಗೆ ಅರ್ಧ ಸಮಯ ಮುದ್ದಿನ ಮಗಳು ಪ್ರೀತಿ ಜೊತೆ ಕಳೆದು ಹೋಗುತ್ತೆ ಇನ್ನರ್ಧ ಅರ್ಧಾಂಗಿ ವಲ್ಲಿ.

ಹೇಗಾದ್ರು ಮಾಡಿ ಸ್ವಲ್ಪ ಹೆಚ್ಚಿನ ಖರ್ಚಿಗೆ ದುಡ್ಡು ಮಾಡಬೇಕು, ಎಲ್ಲಾರು ಏನೇನೋ ಮಾಡ್ತಾರೆ ಅಂತ ಯೋಚಿಸ್ತ ಇದ್ದ ಸಮಯದಲ್ಲಿ ಕಾಲೇಜ್ ಸ್ನೇಹಿತ ಸಾಯಿ ಕೃಷ್ಣನ ಫೋನ್ ಬಂದಿತ್ತು.ಕಾಲೇಜಿನಲ್ಲಿ ಆರಾಮಾಗಿ ಓಡಾಡ್ಕೊಂಡು ಇದ್ದ,ಬಹಳ ವರ್ಷದ ಮೇಲೆ ಅದೇನು ಈಗ ನೆನೆಸ್ಕೊಂಡಿದ್ದಾನೆ..ಮಾತಡ್ತ ತಿಳಿದಿದ್ದು.ಅವನದೆ ಆದ ಒಂದು ಕನ್ಸಲ್ಟಿಂಗ್ ಕಂಪೆನಿ ಶುರು ಮಾಡಿದ್ದಾನಂತೆ,ಹೈದರಬಾದ್ ನಲ್ಲಿ.ಬಾಡಿ ಶಾಪಿಂಗ್ ಅದು ಇದು ಹೀಗೆ ಹೇಳ್ತ ಇದ್ದೆ.ಫೋನ್ ಮಾಡಿದ್ದರ ಹಿನ್ನೆಲೆ ಕೊನೆಯಲ್ಲಿ ಬಂತು.ಅವನ ಬಳಿ ಸಾಕಷ್ಟು ಮೈನ್ ಫ಼್ರ್‍ಏಮ್ ಕೆಲಸಗಳಿಗೆ ಬೇರೆ ಬೇರೆ ಕಂಪೆನಿಗಳಿಂದ ಅವಕಾಶಗಳ ಪಟ್ಟಿ ಇತ್ತು,ಹಾಗೇ ಮೈನ್ ಫ಼್ರ್‍ಏಮ್ ನಲ್ಲಿ ಕೆಲಸ ಮಾಡಲು ಇಚ್ಚಿಸುವ,ಮೈನ್ ಫ಼್ರ್‍ಏಮ್ ನೋಡಿರದ ಅಭ್ಯರ್ಥಿಗಳು ಇದ್ದರು.'ಅದೇನು ದೊಡ್ಡ ವಿಷಯ ಅಲ್ಲ,ನಾನು ನೋಡಿರಲಿಲ್ಲ ಆದರೆ ನಾನು ಫ಼್ರೆಶರ್ ಆಗಿದ್ದೆ,ಇವರು ಎಕ್ಸ್ಪೀರನ್ಸ್ ಇರುವವರು ಅಷ್ಟೇ ವ್ಯತಾಸ'.ಈ ಅಭ್ಯರ್ಥಿಗಳಲ್ಲಿ ಕೆಲವು ಅಭ್ಯರ್ಥಿಗಳ ದೂರವಾಣಿ ಕರೆಗಳನ್ನು ನಾನು ತೆಗೆದುಕೊಳ್ಳಬೇಕೆಂದು ಅವನ ಕೋರಿಕೆ.ಇದನ್ನೆಲ್ಲ ಕೇಳಿದ್ದೆ,ನೋಡಿದ್ದೆ ಆದರೆ ವ್ಯಕ್ತಿಗತವಾಗಿ ಇದನ್ನ ವಿರೋಧಿಸಿತ್ತಿದ್ದೆ.ಸ್ವಲ್ಪ ಖಾರವಾಗೆ ಹೇಳಿದೆ..ಈ ವಿಷ್ಯಕ್ಕಾದ್ರೆ ಮತ್ತೊಮ್ಮೆ ಫೋನ್ ಮಾಡಬೇಡ ಅಂತ.

ಹೊಂಚಿ ಹಾಕಿ ಕಾಯುತ್ತಿದ ವಿಧಿಗೆ ಒಂದು ಸುವರ್ಣಾವಕಾಶ....!ಈ ಸಂಭಾಷಣೆಯ ನಾಲ್ಕು ದಿನಕ್ಕೆ ವಿಪರೀತವಾದ ಜ್ವರ ಎಲ್ಲ ಪರೀಕ್ಷೆಗಳಾದ ಮೇಲೆ ತಿಳಿದಿದ್ದು ವಿಷಮ ಶೀತ ಜ್ವರ ಅಂತ.ಒಂದೆರೆಡು ತಿಂಗಳು ರೆಸ್ಟ್ ಅನಿವಾರ್ಯ ಅಂತ ಸಲಹೆ.
ರಜ ಹಾಕಿ ಮನೆಗೆ ಬಂದು ಕೂಳಿತರೆ ಮೂರು ದಿನಕ್ಕೆ ಜ್ವರಕ್ಕಿಂತ ಹೆಚ್ಚಿನ ಭಾದೆ ಸುಮ್ಮನೆ ಕೂರಬೇಕಾದ್ದು,ಕೆಲ್ಸ ಇದೆಯೋ ಇಲ್ಲವೋ ಆಫ಼ೀಸ್ ಗೆ ಹೋಗಿ ಬಂದರೆ ಏನೊ ಸಮಾಧಾನ,ಬೇರೆ ಪ್ರಾಜೆಕ್ಟ್ ನವರಿಗೆ "ಮನೆಯಿಂದ ಕೆಲಸ" ಮಾಡುವ ಅವಕಾಶವಿತ್ತು ..ನನಗು ಅದು ಇಲ್ಲವಲ್ಲ ..ಕೊರಗ್ತ ಇದ್ದಾಗ ನಿಜವಾದ ಭಾದೆ ತೋರತೊಡಗಿತ್ತು.ಮುಂದಿನ ತಿಂಗಳ ಇ.ಎಮ್.ಐ (ಮಾಸಿಕ ಕಂತು) ಗಳನ್ನ ಹೇಗೆ ಕಟ್ಟೊದು ಅಂತ, ಮೋಬೈಲ್ ಬಿಲ್ಲ್ ಇಂದ ಹಿಡಿದು ಮನೆ,ಕಾರು ಎಲ್ಲ ಸಾಲಗಳು ಎಲೆಕ್ಟ್ರಾನಿಕ್ ಕ್ಲಿಯರೆನ್ಸ್,ನನ್ನ ಬ್ಯಾಂಕ್ ಅಕೌಂಟ್ ನಿಂದ ಸೀದ ಆ ಖಾತೆಗಳಿಗೆ ಜಮ ಆಗುತ್ತೆ.ಏನು ಮಾಡೊದು..??

ಸಾಯಿ ಕೄಷ್ಣನ ನೆನಪಾಯಿತು,ಬೇರೆ ಏನು ನನ್ನ ಕೈಲಿ ಯೋಚನೆ ಮಾಡೊಕೆ ಆಗ್ತ ಇಲ್ಲ ನನಗೆ ಅನಿಸಿ ಅವನಿಗೆ ಕರೆ ಮಾಡಿದಾಗ ಅವನಿಗೂ ಆಶ್ಚರ್ಯ.ಅದು ಇದು ಮಾತಾಡ್ತ ನಾನೇ ಕೇಳಿದೆ ಎಷ್ಟು ಕೊಡ್ತಿಯ ಒಬ್ಬ ಅಭ್ಯರ್ಥಿಗೆ ಅಂತ."ಬೇರೆಯವರಾಗಿದ್ರೆ ನನ್ನ ಮಾರ್ಜಿನ್ ಹೆಚ್ಚಿಸಿ ಹೇಳ್ತ ಇದ್ದೆ ನೀನು ನನ್ನ ಒಳ್ಳೆಯ ಸ್ನೇಹಿತ..?? ನಿನಗೆ ನಾನು ಅಭ್ಯರ್ಥಿಯ ಒಂದು ತಿಂಗಳ ಸಂಬಳ ಕೊಡುತಿನಿ" ಅಂದ.

ಇಲ್ಲಿಯವರೆಗೆ ಮೂರು ಅಭ್ಯರ್ಥಿಗಳ ದೂರವಾಣಿ ಸಂದರ್ಶನ ಕರೆಗಳು ಮುಗಿದು,ಮೂರು ಜನಕ್ಕೂ ಕೆಲಸವು ಆಗಿತ್ತು..ನನ್ನ ಎರಡು ತಿಂಗಳ ಭಾದ್ಯತೆಗಳನ್ನ ನೀಗಿಸುವುದು ಸುಲಭವಾಗಿತ್ತು.ಆದರೆ ಇಷ್ಟು ಸುಲಭವಾಗಿ ದುಡ್ಡು ಮಾಡಬಹುದ..? ಅಂತ ಬೆರಗಾಗಿತ್ತು.ಬೇಡ ಏನೋ ಕಷ್ಟ ಅಂತ ಒಲ್ಲದ ಕೆಲಸ ಮಾಡಾಯ್ತು ಮತ್ತೇಕೆ ಅಂತ ಎಲ್ಲೊ ಯಾರೊ ದೂರದಲ್ಲಿ ಹೇಳಿದಂತಿದ್ದರೂ...ವಲ್ಲಿಯೂ ಸೇರಿದಂತೆ ಎಲ್ಲಾ ಅದ್ರಲ್ಲೇನು ತಪ್ಪು,ಯಾಕೆ ಸುಮ್ಮನೆ ಬರೋದು ಕಳ್ಕೊತಿಯ ಅಂತ "ನೀತಿ ಪಾಠ" ಮಾಡಲು ಶುರು ಮಾಡಿದ್ದರು.

ಸಾಯಿ ನೆನ್ನೆ ಮತ್ತೆ ಕರೆ ಮಾಡಿದ್ದ,ನಾನು ಒಲ್ಲೆ ಅಂದಾಗ ನಾನು ದುಡ್ಡು ಕಡಿಮೆ ಅಂತ ಹೀಗೆ ಮಾತಡ್ತ ಇದೀನಿ ಅಂತ ಮತ್ತೆ ಮತ್ತೆ ಕರೆ ಮಾಡಿ ಸ್ವಲ್ಪ ಸ್ವಲ್ಪ ಹೆಚ್ಚಿನ ಮೊತ್ತ ಸೇರಿಸ್ತ ಇದ್ದ.ಈ ಭಾರಿಯ ಅಭ್ಯರ್ಥಿಗೆ ನಮ್ಮದೇ ಪ್ರಾಜೆಕ್ಟನಲ್ಲಿ ಅವಶ್ಯಕತೆ ಇರುವುದಂತೆ...ಸಂದರ್ಶನ ತಗೊಳ್ಳೊದು ನಮ್ಮ ಟಿ.ಎಲ್ ಎಂಬುದು ತಿಳಿಯಿತು..ನನಗೆ ಅರಿಯದ ಹಾಗೆ ಯಾವ ಜಾಗ ಖಾಲಿ ಇದೆ ..??? ನನ್ನ ಧ್ವನಿ ನಮ್ಮ ಟಿ.ಎಲ್ ಗುರುತಿಸಲಾರೆನೆ...??

ಜಯಂತ್