ಆದರ್ಶಗಳ ಕೊಲೆ!
ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಅದದ್ದೆ ಬೇರೆ! ರೆಜಿಸ್ಟರ್ ಮ್ಯಾರೇಜ್ ಆಗ್ಲಿಲ್ಲಾ. ಒಳ್ಳೆ ಅದ್ಧೂರಿಯಾಗಿ ಮದುವೆಯಾಯ್ತು. ಅಂದುಕೊಂಡದ್ದಕ್ಕಿಂತ ಜಾಸ್ತಿ ಖರ್ಚು ಆಯ್ತು! ಅದಕ್ಕೆಲ್ಲಾ ಕಾರಣಗಳು ಇದ್ವು ಅಥವ ಅದಕ್ಕೆ ನಾನೇ ಕಾರಣ ಹುಡುಕಿದ್ದಿರಬೆಕು. ಆದರೆ ಒಂದು ಮಾತ್ರಾ ನಿಜ ಏನೇ ಆದರ್ಶಗಳನ್ನು ಇಟ್ಟುಕೊಂಡ್ರೂ ಅದನ್ನು ಪಾಲಿಸೋ ಜನ ತುಂಬಾ ಕಡಿಮೆ. ಯಾಕೆ ಹೀಗಾಗುತ್ತೆ ಅಂತ? ಪರಿಸ್ಥಿತಿ ಹಾಗೆ ಬರುತ್ತೆಯೆ? ಅಥವಾ ಸಮಾಜದಲ್ಲಿದ್ದು ಬೇರೆ ರೀತಿಯಲ್ಲಿ ಯೋಚನೆ ಮಾಡೊಕೆ ಭಯವೆ?
ಮಕ್ಕಳೆ ಬೇಡ ಅಂತೀವಿ. ಯಾವುದಾದರು ಅನಾಥ ಮಗುವನ್ನು ದತ್ತು ತೊಗೊಂಡು ಸಾಕ್ತಿನಿ ಅಂತೀವಿ! ಆದರೆ ಗೆಳೆಯನೊಬ್ಬ ಅಪ್ಪ ಆಗ್ತಿರೊ ವಿಷಯ ಕೇಳಿ ಅಸೂಯೆಯಿಂದ ಕರುಬಿ ನಾನು ಅಪ್ಪ ಆಗ್ಲೇಬೇಕು ಅನ್ನೊ ಹಠ ತೊಡ್ತಿವಿ. ಯಾಕೆಂದರೆ ಸಮಾಜಕ್ಕೆ ತಾನು ಗಂಡಸು ಅನ್ನೊದನ್ನ ಪ್ರಮಾಣಿಸಿ ತೋರಿಸಬೆಕಲ್ಲಾ. ಇಲ್ಲದಿದ್ರೆ, ಮಿತ್ರರು, ಸಂಬಂಧಿಗಳು ಆಡೊ ಕುಹಕದ ಮಾತು ಸಹಿಸಬೇಕು! ನನ್ನ ಗೆಳೆಯನೊಬ್ಬನಿಗೆ ಅಪ್ಪನಾಗೊ ಸಡಗರ ಒದಗಿ ಬಂತು. ಆತ ನನಗೆ ಫೋನ್ ಮಾಡಿದಾಗಲೆಲ್ಲ ಕೇಳೋನು "ನಿಮ್ದು ಯಾವಾಗರಿ ಸುದ್ದಿ ? ಏನೂ ವಿಶೇಷ ಇಲ್ಲೇನು", ಅರೇ ಇದಾವ ಲೆಕ್ಕ? ಅವನದು ವಿಶೇಷ ಆಗಿದ್ದೆ ತಡ, ಹಿಂಗಾಡೊದಾ? ಹಿಂಗಾದಾಗ ಮೊದಲು ಒಂದು ಮಗು ಆಗ್ಲಿ ಆಮೇಲೆ ನೋಡಿದ್ರಾಯ್ತು ಅಂತ ಶುರು ಹಚ್ಕೋತೀವಿ. ಇದೆ ಅಲ್ವೆ ಆದರ್ಶಗಳ ಕೊಲೆ?
ಕಡಿಮೆ ಪಗಾರ ಬರ್ತಿದ್ದಾಗ, ಇದಕ್ಕಿಂತ ಇನ್ನೂ ಹತ್ತು ಸಾವಿರ ಜಾಸ್ತಿಯಾದ್ರೂ ಸರಿ ಸಮಾಜ ಸೇವೆ ಮಾಡೇ ತೀರುವೆ ಅಂತ ಶಪಥ ಮಾಡ್ತೀವಿ. ಹತ್ತು ಸಾವಿರ ಜಾಸ್ತಿ ಆಗುತ್ತೆ ಆದ್ರೆ ಅದಕ್ಕೆ ತಕ್ಕ ಹಾಗೆ ಬೇರೆ ಖಯಾಲಿಗಳು ಬೆಳೆದಿರುತ್ತವೆ. ಶಪಥ ಮರೆತು ಹೋಗಿರುತ್ತದೆ!
ಮೇಲಿನ ಎಲ್ಲ ಉದಾಹರಣೆಗಳಲ್ಲಿ ಸಾಮಾನ್ಯವಾದುದೆಂದರೆ, ನಮ್ಮ ಸುತ್ತಲಿರುವವರ ಪ್ರಭಾವ, ಅವರು ಯಾರೇ ಆಗಿರಬಹುದು. ಅಪ್ಪ, ಅಮ್ಮಾ, ಬಂಧು ಅಥವಾ ಗೆಳೆಯಾ. ರೆಜಿಸ್ಟರ್ ಮದುವೆ ಆಗ್ತೀನಿ ಅಂದಾಗ ಅಪ್ಪ ಅಂತಾನೆ "ನೀನು ಹಿಂಗೆಲ್ಲಾ ಅಂದ್ರ ಹೆಂಗ? ನಮ್ಮ ಮನಿತನಕ್ಕ ತಕ್ಕಂಗ ಲಗ್ನಾ ಆಗ್ಬೇಕು. ಇಲ್ಲಾ ಅಂದ್ರ ಎಲ್ಲಾರು ಎನು ತಿಳ್ಕೋತಾರ?" "ಇದ್ದೊಬ್ಬ ಮಗಂದು ಲಗ್ನಾ ಚೆಂದಾಗಿ ನೋಡೂದು ನನ್ನ ನಸೀಬದಾಗ ಇಲ್ಲಾ ಅಂತ ಕಾಣ್ತದ" ಅಂತ ಅಮ್ಮ ಕಣ್ಣೀರು ಹಾಕ್ತಾಳೆ. ಇದನ್ನೆಲ್ಲ ವಿರೋಧಿಸಿ ತಮ್ಮ ಆದರ್ಶ ಮೆರೆಯುವವರೂ ಇದ್ದಾರೆ. ಆದರೆ ಅವರ ಭಾವನೆಗಳಿಗೆ ಸ್ಪಂಧಿಸಿ ತಮ್ಮ ಆದರ್ಶಗಳನ್ನು ಕೊಲೆ ಮಾಡುವವರೂ ಇನೂ ಜಾಸ್ತಿ ಇದ್ದಾರೆ. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಯಾವುದು ಸರಿ, ಯಾವುದು ತಪ್ಪು ಅಂತ ಮನಸ್ಸು ಯೋಚಿಸಲು ತೊಡಗುತ್ತದೆ...ಆದರ್ಶಗಳನ್ನು ಪಾಲಿಸಿದರೆ ಬೇರೆಯವರಿಗೆ ಬೇಜಾರು, ಪಾಲಿಸದಿದ್ದರೆ ತನ್ನ ಮನಸ್ಸಾಕ್ಷಿಗೆ ದ್ರೋಹ ಬಗೆದಂತೆ! ಇದಕ್ಕೆ ಪರಿಹಾರವೇನು?