ಆದರ್ಶದ ಬೆನ್ನು ಹತ್ತಿ.....
'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು. ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೊ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೆ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೆ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು.
ಆದರೆ ವಿದಿ ಬಿಡಬೇಕಲ್ಲ, ಆ ಯುವಕನ ಮುಂದೆ ದೊಡ್ಡದೊಂದು 'ಆಸೆ' ಯ ಬೆಟ್ಟವನ್ನು ಕಣ್ಣಾಮುಂದೆ ನಿಲ್ಲಿಸುತ್ತದೆ, ವಿದಿಯ ಆ ಆಟಕ್ಕೆ ಯುವಕ ಖಂಡೀತ ಮರುಳಾಗುತ್ತಾನೆ, ದೈವ ತನ್ನ ಚಿಕ್ಕವಯಸ್ಸಿನಲ್ಲಿ ಕೇಳಿ ಕೊಟ್ಟಿದ್ದ 'ವರ' ಪೋಸ್ಟಾಫೀಸಿನ ಕೆಲಸವನ್ನು ಬಿಟ್ಟು, ರಾಜ್ಯ ಸರ್ಕಾರದ ಅತಿ ಭ್ರಷ್ಟ ಇಲಾಖೆಗೆ ಕಂದಾಯ ಇಲಾಖೆಗೆ ಆಡಿ ಇಡುತ್ತಾನೆ, ತನ್ನೊಳಗಿರುವ ನಿಜವಾದ ಮನುಷ್ಯನನ್ನು ಗ್ರಹಿಸಲು ವಿಫಲನಾಗುವುದು, ಮತ್ತು ತನ್ನ ಮನಸತ್ವಕ್ಕೆ ತಾನು ಹಿಡಿಯಲು ಹೊರಟಿರುವ ಕೆಲಸ ಹೊಂದಿಕೆಯಾಗುವದಿಲ್ಲ ಅನ್ನುವದನ್ನು ಗ್ರಹಿಸಲು ವಿಫಲನಾಗುವುದು, ಮತ್ತು ಆ ಕೆಲಸಕ್ಕೆ ಸೇರುವುದು ಬಹುಷಃ ಆ ಯುವಕನ ಜೀವನದ ಬಹು ದೊಡ್ಡ ತಿರುವು ಎಂದು ನನಗನ್ನಿಸುತ್ತಿದೆ. ಕವಿ ನಾಗರಾಜರ ಜೀವನ ಕಥೆಯಲ್ಲಿನ ಪ್ರಮುಖ ಘಟ್ಟವೆ, ಅವರ ಕೆಲಸ ಬದಲಿಸುವ ತೀರ್ಮಾನ. ಕಂದಾಯ ಇಲಾಖೆಗೆ ಸೇರಿದ ಕೆಲವೆ ದಿನದಲ್ಲಿ ಅವರಿಗೆ ಅಲ್ಲಿಯ ಭ್ರಷ್ಟ ಮುಖದ ಪರಿಚಯ, ಇವರೆ ತಂದಿದ್ದ ೧೮೦೦೦ ರೇಷನ್ ಕಾರ್ಡಿನಲ್ಲಿ ಕಣ್ಮರೆಯಾದ ೧೨೦೦ ಕಾರ್ಡಿನ ಬಗ್ಗೆ ಇವರ ಮೇಲೆ ಅಪವಾದ, ಕಡೆಗೊಮ್ಮೆ ಇವರೆ ಅದನ್ನು ಸೊಸೈಟಿಗಳಲ್ಲಿ ಹೋಗಿ ಕಳುವಾದ ಕಾರ್ಡ್ ಗಳನ್ನು ಪತ್ತೆ ಹಚ್ಚಿದಾದ ಅದನ್ನು ತಹಸಿಲ್ದಾರರೆ ಸಹಿಮಾಡಿ ಅವರ ಕಛೇರಿ ಮೂಲಕವೆ ಅನಧಿಕೃತವಾಗಿ ಸೊಸೈಟಿಗಳಿಗೆ ಹಂಚಿದ್ದು ತಿಳಿಯುತ್ತದೆ. ಅದನ್ನು ಪ್ರಶ್ನಿಸಹೋದರೆ ಬಾಯಿ ಮುಚ್ಚಿಸುತ್ತಾರೆ. ಅಲ್ಲಿಂದ ಮುಂದೆ ಭ್ರಷ್ಟಾಚಾರದ ವಿವಿದ ಮುಖಗಳ ಭೂತದರ್ಶನ ಕಂಡು ಬೆಚ್ಚಿ ಅದನ್ನು ಎದುರಿಸಹೊರಟವರು ನಾಗರಾಜರು. ಕಾಂಗ್ರೆಸ್ ನಾಯಕ ಹಾಗು ವ್ಯಾಪಾರಿ ಆಗಿದ್ದ ವರ್ತಕರೊಬ್ಬರ ಕೃತ್ರಿಮ ಅಕ್ಕಿ ಪರ್ಮಿಟ್ ಬಗ್ಗೆ ಪ್ರಶ್ನಿಸಲು ಹೊರಟ ನಾಗರಾಜರ ಕ್ರಮ ಜಿಲ್ಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅದು ದ್ವೇಶದ ರೂಪ ತಾಳಿ , ನಾಗರಾಜರು ಜೈಲನ್ನು ಸೇರಬೇಕಾಗುತ್ತದೆ. ಅತೀವ ದುಸ್ತಿಥಿ ಎಂದರೆ ನಾಗರಾಜರನ್ನು ಯಾವ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ ಅದೇ ನ್ಯಾಯಾಲಯದಲ್ಲಿ ಅವರ ತಂದೆಯವರು ಉಧ್ಯೋಗಿಗಳು. ನಾಗರಾಜರ ಒಳಗಿನ 'ಆಂಗ್ರಿ ಯಂಗ್ ಮ್ಯಾನ್' ನ ನಡುವಳಿಕೆ, ಅವರ ಸ್ವಾಭಿಮಾನಿ ವರ್ತನೆ ಅವರನ್ನು ಸತತ ವಿವಿಧ ಕೇಸುಗಳಲ್ಲಿ ಪೋಲಿಸ್ ಸ್ಟೇಷನ್ ಹಾಗು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತದೆ. ಕಡೆಗೊಮ್ಮೆ ಮುಖ್ಯಪೇದೆಗೆ ನಮಸ್ಕರಿಸಲಿಲ್ಲ ಎನ್ನುವ ಕಾರಣಕ್ಕೆ ಒಂದು ಚಿಲ್ಲರೆ ಕೇಸು ಹಾಕುವ ಮಟ್ಟಕ್ಕೆ ಅವರನ್ನು ಹಿಂಸೆಗೆ ಒಳಪಡಿಸಿದ ಘಟನೆ ಇದೆ. ಆ ಸಮಯಕ್ಕೆ ದೇಶದಲ್ಲಿ 'ಎಮರ್ಜೆನ್ಸಿ' ಘೋಷಣೆಯಾಗುತ್ತದೆ, ಅದರ ಸಂಪೂರ್ಣ ದುರಪಯೋಗ ಪಡೆದ ಪೋಲಿಸ್ ಹಾಗು ನಾಗರಾಜರ ಮೇಲಾಧಿಕಾರಿಗಳು ಅವರನ್ನು ದೇಶದ್ರೋಹದ ಅಪಾದನೆಗೊಳಪಡಿಸಿ , ಶಾಶ್ವತವಾಗಿ ಕಂಬಿಯ ಹಿಂದೆ ತಳ್ಳುತ್ತಾರೆ. ಜೈಲಿನ ವಾತವಾರಣ, ಅಲ್ಲಿಯ ಸಹಕೈದಿಗಳ ವರ್ತನೆ, ಜೈಲಿನಲ್ಲಿ ಪೋಲಿಸರ ಶೋಶಣೆ ಇವೆಲ್ಲ ನಾಗರಾಜರ ಮನವನ್ನು ನಿಜಕ್ಕು ಒಬ್ಬ ರಕ್ತಪಿಪಾಸುವಾಗುವಂತೆ ಕೊಲೆಗಡುಕನಾಗುವಂತೆ ಒತ್ತಾಸೆ ನೀಡುತ್ತದೆ, ಆದರೆ ಸಾತ್ವಿಕ ಮನೋಭಾವದ ನಾಗರಾಜರು ಆ ಎಲ್ಲ ಪರಿಸ್ಥಿತಿಯನ್ನು ಗೆದ್ದು ಬೆಂಕಿಯಲ್ಲಿ ಪುಟವಿಟ್ಟ ಚಿನ್ನದಂತೆ ಹೊರಬರುವುದು ನಮ್ಮೆಲ್ಲರ ಮನಸ್ಸು ತುಂಬುತ್ತದೆ. ಎಮೆರ್ಜಿನ್ಸಿಯಲ್ಲಿ ಇವರ ಮೇಲೆ ಪೋಲಿಸರು ಹೊರಸಿದ ಅಪಾದನೆ ಎಷ್ಟು ಬಾಲಿಷವೆಂದರೆ ಅವರ ಮನೆಯಲ್ಲಿ 'ಅಸತ್ಯ ಅನ್ಯಾಯದ ವಿರುದ್ದ ತಲೆಬಾಗುವುದು ಹೇಡಿತನ' ಎಂಬ ಗಾಂದೀಜಿಯವರ ಹೇಳಿಕೆ ಇದ್ದ ಗಾಂದೀಜಿಯವರ ಫೋಟೊ ಇದೆ ಎನ್ನುವುದು. ಅದೇ ರೀತಿಯ ಇತರ ಕಾರಣಗಳು, ಕಡೆಗೊಮ್ಮೆ ಎಮರ್ಜೆನ್ಸಿ ಅವಧಿ ಮುಗಿದ ನಂತರ ಎಲ್ಲ ಅರೋಪಗಳಿಂದ ಮುಕ್ತರಾಗಿ , ಪುನಃ ಕೆಲಸಕ್ಕೆ ಸೇರುತ್ತಾರೆ. ಆದರೆ ಅವರ ರೋಷ , ಸಾತ್ವಿಕ ಸಿಟ್ಟು ಇವುಗಳು ಸದಾ ಅವರ ಸುತ್ತ ಶತ್ರುವಲಯವನ್ನು ನಿರ್ಮಿಸಿರುತ್ತದೆ. ಕಡೆಯಲ್ಲಿ ಎಲ್ಲ ಅಗ್ನಿಪರೀಕ್ಷೆಗಳನ್ನು ಗೆದ್ದು ನಿಂತು, ಶುದ್ದ ಚಿನ್ನವಾಗಿ (ಅಪರಂಜಿ ) ಹೊರಹೊಮ್ಮುವುದು ನಾಗರಾಜರ ಜೀವನದ ಉಜ್ವಲತೆ ತೋರಿಸುತ್ತದೆ. ವಿದಿ ಸಹ ಅವರ ಹೋರಾಟ ಮನೋಭಾವ ಮೆಚ್ಚಿದನೇನೊ ಇಲ್ಲದಿದ್ದರೆ ಯಾವ ಜೈಲಿನಲ್ಲಿ ಅವರು ಕೈದಿಯಾಗಿ ಜೀವನ ಕಳೆದರೊ ಅದೇ ಜೈಲಿಗೆ ಪುನಃ ಜೈಲಿನ ಅಧಿಕಾರಿಯಾಗಿ , ತಾಲೋಕಿನ ದಂಡಾಧಿಕಾರಿಯಾಗಿ ಬರುತ್ತಾರೆಂದರೆ , ಇಂತಹ ಘಟನೆ ಬೇರ ಯಾರ ಜೀವನದಲ್ಲಿ ನಡೆದಿದೆಯೊ ಇಲ್ಲವೊ ನನಗೆ ತಿಳಿದಿಲ್ಲ. ಕತೆಯ ಉದ್ದಕ್ಕು ಮನಸೆಳೆಯುವುದು ಅವರ ನಿರ್ಭಾವ ನಿರ್ವಿಕಾರದ ಘಟನೆಗಳ ನಿರೂಪಣೆ, ಎಲ್ಲಿಯು ಅವರು ಅವರನ್ನು ವಿಜೃಂಬಿಸಲು ವೈಭವಿಕರಿಸಲು ಹೋಗಿಲ್ಲ ಅನ್ನುವುದು ಪುಸ್ತಕದ ಅತಿ ಮುಖ್ಯ ಅಂಶ. ಇನ್ನಾದರು ದೇಶದಲ್ಲಿ ಭ್ರಷ್ಟಾಚಾರ ತೊಲಗಲಿ ಅನ್ನುವುದು ಅವರ ಪುಸ್ತಕದ ಮುಖ್ಯ ದ್ಯೇಯ. ಅಷ್ಟು ಅನುಭವಿಸಿದರು ವ್ಯವಸ್ಥೆಯ ಮೇಲಿನ ಕೋಪವೆ ಹೊರತಾಗಿ ವ್ಯಕ್ತಿಗತ ದ್ವೇಶ ಯಾರ ಮೇಲು ಇಲ್ಲ ! ಇದೆಂತ ಮನೋಭಾವ ! ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ. ಓದಿ ಮುಗಿಸಿದ ನಂತರವು ಕೆಲವು ಘಟನೆಗಳು ಹಾಗೆ ಮನದಲ್ಲಿ ತಳ ಊರುತ್ತವೆ, ಎಂದರೆ ಇವು: ಒಮ್ಮೆ ಅಂಗಡಿಯ ಮಾಲಿಕನೊಬ್ಬ ಬಲವಂತದಿಂದ ಹಣ್ಣಿಗೆ ಎಂದು ಐವತ್ತು ರೂಪಾಯಿಗಳನ್ನು ಕೊಟ್ಟು ಹೋಗುವ, ಯಾವುದೊ ಅಸ್ಥವ್ಯಸ್ತ ಮನಸ್ಥಿಥಿಯಲ್ಲಿ ಅದನ್ನು ತೆಗೆದುಕೊಂಡ ನಾಗರಾಜರಿಗೆ ರಾತ್ರಿ ಎಲ್ಲ ನಿದ್ದೆ ಇಲ್ಲ, ಕಡೆಗೆ ಬೆಳಗ್ಗೆಯೆ ಎದ್ದು ಅಂಗಡಿ ತೆರೆಯುವ ಮುಂಚೆಯೆ ಹೋಗಿ ಜಗಲಿಯಲ್ಲಿ ಕುಳಿತಿರುತ್ತಾರೆ, ಬಾಗಿಲು ತೆಗೆಯಲು ಬಂದ ಅಂಗಡಿಯಾತ ಬೆಳಗ್ಗೆಯೆ ಫುಡ್ ಇನ್ಸ್ ಪೆಕ್ಟರ್ ಕಂಡು ಗಾಭರಿಯಾದರೆ , ನಾಗರಾಜರು ಅವನ ಐವತ್ತು ರುಪಾಯಿ ಹಿಂದೆ ನೀಡಿ ಅವನಿಗೆ ಮತ್ತೆ ಹೀಗೆಮಾಡಬೇಡ ಎಂದು ಬುದ್ದಿ ಹೇಳಿದಾಗ ಆತನ ಕಣ್ಣಲ್ಲಿ ಸಹ ನೀರು, ಇದು ಗಾಂಧೀಜಿಯವರ 'Experiment with truth ' ನೆನಪಿಸುತ್ತದೆ. ಇವರು ಎಷ್ಟು ಸಣಕಲು ಎಂದರೆ ಇವರಿಗೆ ಹಾಕಿದ್ದ ಬೇಡಿಯಿಂದ ಸಲಿಸಾಗಿ ಕೈ ಹೊರಗೆ ಎಳೆದು ಬಿಡಬಹುದು, ಒಮ್ಮೆ ಅದೇ ರೀತಿ ಬೇಡಿ ಕಿತ್ತು ವ್ಯಾನಿನಿಂದ ಎಸೆದು ಇಂದಿರಾ ವಿರುದ್ದ ಗರ್ಜಿಸುವ ಘಟನೆ ನಗೆಯ ಜೊತೆ ಉಪೇಂದ್ರರ ರೊಬಾಟ್ ಬಗೆಗಿನ ಸಿನಿಮ ನೆನಪಿಸುತ್ತದೆ. ಉದ್ದಕ್ಕು ಇವರು ತಮ್ಮ 'ಆಂಗ್ರಿ ಇಮೇಜ್ ' ನಿಂದ ಮೈಮೇಲೆ ಕೇಸುಗಳನ್ನು ಎಳೆದುಕೊಳ್ಳುವಾಗ ಸಿನಿಮಾಗಳಲ್ಲಿ (ಸಿನಿಮಾದಲ್ಲಿ ಮಾತ್ರ) ಅಂಭರೀಷರ ನಟನೆ, ಅಮಿತಾಬ್ ರ ನಟನೆ ನೆನಪಿಗೆ ಬರುತ್ತೆ. ಕಡೆಯದೊಂದು ಝಲಕ್ : ಪುಸ್ತಕದ ಕಡೆಯಲ್ಲಿ ಸಂಪದದ ಹಲವು ಮಿತ್ರರ ಸುರೇಶ್ ನಾಡಿಗ್, ಬೆಳ್ಳಾಲ ಗೋಪಿನಾಥ್ ರಾವ್, ಹೊಳೆನರಸಿಪುರ ಮಂಜುನಾಥ್ , ಕೋಮಲ್, ಹರಿಹರಪುರ ಶ್ರೀಧರ್, ಗಣೇಶರು, ವಿರೇಂದ್ರ, ಹರೀಶ್ ಆತ್ರೇಯ, ಕೇಶವ ಮೈಸೂರು, ಚೇತನ್ ಕೋಡುವಳ್ಳಿ, ನಾವಡರು, ರಾಕೇಶ್ ಶೆಟ್ಟಿ, ಗೋಪಾಲ್ ಕುಲಕರ್ಣಿ, ಪ್ರಸನ್ನ ಎಸ್ ಪಿ. ಮತ್ತೆ ಸೋಮಶೇಖರಯ್ಯ ಚಿತ್ರದುರ್ಗ ಇವರೆಲ್ಲರ ನಾಗರಾಜರ ಲೇಖನದ ಬಗೆಗಿನ ಅಭಿಪ್ರಾಯಗಳು ದಾಖಲಾಗಿವೆ. ಕಡೆಯಲ್ಲೊಂದು ಮಾತು, ನಾಗರಾಜರೆ 'ಆದರ್ಶದ ಬೆನ್ನು ಹತ್ತಿ... ' ಎನ್ನುವ ಶೀರ್ಷಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅದು ಮರೀಚಿಕೆ ಎನ್ನುವ ಅರ್ಥವನ್ನು ಕೊಡುತ್ತಿದೆ. ನೀವಿಲ್ಲಿ ಆದರ್ಶದ ಬೆನ್ನು ಹತ್ತಿಲ್ಲ. ಆದರ್ಶ, ನ್ಯಾಯ ನೀತಿ ಇವೆಲ್ಲ ನಿಮ್ಮ ಹೃದಯಸ್ಥವಾಗಿದೆ. ನಿಮ್ಮ ನಡೆ ನುಡಿ ಮಾತು ಮತ್ತು ಹೃದಯದಲ್ಲಿ ಆದರ್ಶ ನೆಲಗೊಂಡಿದೆ. ನೀವು ಅದನ್ನು ಬೆನ್ನು ಹತ್ತುವ ಪ್ರಮೇಯವಿಲ್ಲ , ಅದು ನಿಮ್ಮೊಳಗೆ ನೆಲೆನಿಂತಿದೆ. ಹೊಗಳಲು ನಾನು ನಿಮಗಿಂತ ಚಿಕ್ಕವನು. ಈ ಜೀವನ ಹೋರಾಟವೆ ನಮಗೆ ಆದರ್ಶವಾಗಲಿ.
Comments
ಒಂದು ಒಳ್ಳೆಯ ಪುಸ್ತಕದ ವಿಮರ್ಶೆ
ಒಂದು ಒಳ್ಳೆಯ ಪುಸ್ತಕದ ವಿಮರ್ಶೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಉತ್ತಮ ನಿರೂಪಣೆ.
In reply to ಒಂದು ಒಳ್ಳೆಯ ಪುಸ್ತಕದ ವಿಮರ್ಶೆ by ಮಮತಾ ಕಾಪು
ನಮಸ್ಕಾರ ಮಮತರವರೆ
ನಮಸ್ಕಾರ ಮಮತರವರೆ
ನಾಗರಾಜರ ಪುಸ್ತಕ ಓದಿ ಕಿರಿಯರ ಜೀವನಕ್ಕೊ0ದು ಆದರ್ಶದ ಗುರಿ ನೀಡುತ್ತದೆ
ಪಾರ್ಥ ಸರ್,
ಪಾರ್ಥ ಸರ್,
ದೊಡ್ಡವರು ತೋರಿಸಿದ ಆದರ್ಶವನ್ನು ಮುಂದಿಟ್ಟುಕೊಂಡು ಕವಿಗಳು ಹೋಗಿರುವುದರಿಂದ ಅದು ಆದರ್ಶದ ಬೆನ್ನುಹತ್ತಿ ಎನ್ನುವ ಶೀರ್ಷಿಕೆ ಸರಿಯಾಗಿಯೇ ಇದೆ. ಆದರೆ ಆದರ್ಶವೇ ಮೈವೆತ್ತತಿಂತಿರುವ ಅವರ ಜೀವನವನ್ನು ನೋಡಿದಾಗ ಕಡೆಯಲ್ಲಿ ನೀವು ಎತ್ತಿರುವ ಪ್ರಶ್ನೆ ಸರಿಯೆನಿಸುತ್ತದೆ. ಅದೇನೇ ಇರಲಿ, ಒಂದು ಒಳ್ಳೆಯ ಪುಸ್ತಕವನ್ನು ಓದಲು ಪ್ರೇರೇಪಿಸುವಂತಹ ನಿಮ್ಮ ಬರವಣಿಗೆಗೆ ನನ್ನ ನಮನಗಳು; ಈ ಮೂಲಕವಾದರೂ ನಮ್ಮ ಜೀವನದಲ್ಲಿ ಕವಿಗಳ ಆದರ್ಶವನ್ನು ಸ್ವಲ್ಪವಾದರೂ ಅಳವಡಿಸಿಕೊಳ್ಳಲು ಪ್ರಯತ್ನ ಪಡೋಣ.
In reply to ಪಾರ್ಥ ಸರ್, by makara
ನಿಮ್ಮ ಮಾತು ನಿಜ ಭ0ಡ್ರಿಯವರೆ ,
ನಿಮ್ಮ ಮಾತು ನಿಜ ಭ0ಡ್ರಿಯವರೆ ,
ನಿಮ್ಮ ಲಲಿತ ಸಹಸ್ರದ ವಿವರ ಇನ್ನು ಪ್ರಕಟವಾಗಲಿಲ್ಲ
ವ0ದನೆಗಳು :)
In reply to ನಿಮ್ಮ ಮಾತು ನಿಜ ಭ0ಡ್ರಿಯವರೆ , by partha1059
ಪಾರ್ಥ ಸರ್,
ಪಾರ್ಥ ಸರ್,
ಲಲಿತಾ ಸಹಸ್ರನಾಮದ ವಿವರಣೆಯು ಬಹಳಷ್ಟು ವಿಷಯಗಳನ್ನು ಒಳಗೊಂಡಿದೆ. ಅದರ ಮೂಲ ಲೇಖಕರು ಅದನ್ನು ಭಗವದ್ಗೀತಯಷ್ಟೇ ಮಹತ್ವವಾದದ್ದು ಲಲಿತಾಸಹಸ್ರನಾಮ ಎಂದು ಹೇಳುತ್ತಾ ಸಹಸ್ರನಾಮದಲ್ಲಿ ಬರುವ ಪ್ರತಿಯೊಂದು ವಿಷಯವನ್ನೂ ಬಹಳ ವಿಶದವಾಗಿ ಚರ್ಚಿಸಿದ್ದಾರೆ. ಅವರು ಅದನ್ನು ಇಂಗ್ಲೀಷ್ ಬಲ್ಲ ಆದರೆ ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನವಿಲ್ಲದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವುದರಿಂದ ಪ್ರತಿಯೊಂದು ವಿಷಯವನ್ನೂ ಅನೇಕ ಬಾರಿ ದೀಘಘವಾಗಿ ವಿವರಿಸಿರುವುದರಿಂದ ಅನುವಾದದ ಗತಿ ನಿಧಾನವಾಗಿ ಸಾಗುತ್ತಿದೆ. ಈಗ ಕೇವಲ ೨೫ರಿಂದ ೩೦%ವರೆಗೆ ಮಾತ್ರ ಆಗಿರುವುದರಿಂದ ಕಡೇಪಕ್ಷ ಶೇಖಡ ಅರ್ಧದಷ್ಟಾದರೂ ತರ್ಜುಮೆ ಮಾಡಿದ ನಂತರ ಸಂಪದದಲ್ಲಿ ಪ್ರಕಟಿಸಲು ಪ್ರಾರಂಭಿಸೋಣವೆಂದು ಕೊಂಡಿದ್ದೇನೆ. ಮೂಲ ಲೇಖನವನ್ನು ನೀವು ಕೊಂಡಿಯ ಮೂಲಕ ನೋಡಬಹುದು http://www.manblunder.com/2009/07/lalitha-sahasranamam-12.html
ಧನ್ಯವಾದಗಳೊಂದಿಗೆ,
In reply to ಪಾರ್ಥ ಸರ್, by makara
ಆದರ್ಶದ ಬೆನ್ನು ಹತ್ತಿ ಎನ್ನುವ
ಆದರ್ಶದ ಬೆನ್ನು ಹತ್ತಿ ಎನ್ನುವ ಪುಸ್ತಕದ ಬಗ್ಗೆ ತಿಳಿದು ಸಂತೋಷವಾಯಿತು. ಆಗಿನ ನಮ್ಮ ಹೊಲಸು ಕರ್ನಾಟಕದಲ್ಲಿ ಇಂಥ ಕೆಲವು ಕುಸುಮಗಳು ಮಣ್ಣಿನಿಂದ ಮೇಲೆದ್ದು ತಮ್ಮ ಸುರಭವನ್ನು ಬೀರಿವೆ ಎನ್ನುವುದು, ಇನ್ನು ಎಲ್ಲಾ ಹಾಳಾಗಿಲ್ಲ ಎನ್ನುವ ಮಾತಿಗೆ ಪುಷ್ಟಿ ದೊರೆಯುತ್ತಿದೆ. ಈಗಲೂ ಹಾಗೆಯೇ ಎಳೆಯ ಮರೆಯಲ್ಲಿ ಇರುವ ಜೀವಿಗಳೆಷ್ಟೋ ?
ಇಂದಿಗೂ ಆ ಮೂಲ್ಯಗಳನ್ನು ಮೂಡಿಸಲು ನಮ್ಮ ಬೆಂಗಳೂರಿನ ಇನ್ಫೊಸಿಸ್ ಕಂಪೆನಿ ಹೆಣಗುತ್ತಿಲ್ಲವೇ (ಕ್ಷಮಿಸಿ. ವಿಜಯ ಮಲ್ಯರ ಬಗ್ಗೆ ನಾನು ಹೇಳುತ್ತಿಲ್ಲ)