ಆದರ್ಶ ಗುರು ಶ್ರೀ ಶಂಕರರು

ಆದರ್ಶ ಗುರು ಶ್ರೀ ಶಂಕರರು

ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ವರಪುತ್ರನಾಗಿ ಎಂಟನೇ ಶತಮಾನದಲ್ಲಿ ಆಚಾರ್ಯ ಶ್ರೀ ಶಂಕರರು ಕೇರಳದ ಕಾಲಟಿಯಲ್ಲಿ ಜನಿಸಿದವರು. ಭಗವಾನ್ ವೇದ ವ್ಯಾಸರು ಬರೆದ ನಾಲ್ಕು ವೇದಗಳನ್ನು ವ್ಯವಸ್ಥಿತ ರೂಪಕ್ಕಿಳಿಸಿ ರಕ್ಷಣೆ ಮಾಡಿ ಗುರುವಾದ ಶ್ರೀ ಶಂಕರಾಚಾರ್ಯರು ಇಂದಿಗೂ ಎಲ್ಲರ ನಾಲಿಗೆಯಲ್ಲಿ ಓಡಾಡುತ್ತಿದ್ದಾರೆ. ಈ ವೇದಗಳನ್ನು ದೇಶದ ನಾಲ್ದೆಸೆಗಳಲ್ಲಿರುವ ಮಠಗಳ ಕೈಗಿತ್ತು ಅವುಗಳ ಆಧಾರದಲ್ಲಿ ನಿತ್ಯ ಪೂಜೆ ನೆರವೇರಿಸುವ ವ್ಯವಸ್ಥೆಯನ್ನು ಮಾಡಿದರು. ಸನಾತನ ಧರ್ಮದ ತಿರುಳನ್ನು ದೇಶವ್ಯಾಪಿ ಪಸರಿಸಿ ಭಾರತೀಯ ಗುರು ಪರಂಪರೆಯ ಗೌರವವನ್ನು ಉತ್ತುಂಗಕ್ಕೊಯ್ದ ಮಹಾನ್ ಗುರುವಾದರು. ಶ್ರೀ ಶಂಕರರನ್ನು ದೈವದತ್ತವಾದ ಪ್ರತಿಭೆ; ಹಿಂದೂ ಧರ್ಮದ ಧ್ರುವತಾರೆ ಎಂದು ಆರಾಧಿಸಲಾಗುತ್ತಿದೆ.

ಶ್ರೀ ಶಂಕರರದು ಸಂಪ್ರದಾಯಸ್ಥ ನಂಬೂದಿರಿ ಬ್ರಾಹ್ಮಣರ ಕುಟುಂಬ. ಅವರು ಮೂವತ್ತ ಎರಡನೇ ವಯಸ್ಸಿನಲ್ಲಿ ಪರಂಧಾಮ ಹೊಂದಿದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ನಾಲ್ಕು ಮಠಗಳನ್ನು ಸ್ಥಾಪಿಸಿದರು. ದಕ್ಷಿಣದ ಶೃಂಗೇರಿಯಲ್ಲಿ ಶ್ರೀ ಶಾರದಾ ಮಠ, ಪಶ್ಚಿಮದ ದ್ವಾರಕೆಯಲ್ಲಿ ಕಾಳಿಕಾ ಮಠ, ಪೂರ್ವದ ಪುರಿಯಲ್ಲಿ ಗೋವರ್ಧನ ಮಠ ಉತ್ತರ ಭಾರತದ ಬದರಿಯಲ್ಲಿ ಜ್ಯೋತಿರ್‌ಮಠ ಇವು ಆ ನಾಲ್ಕು ಪೀಠಗಳು ಅಥವಾ ಮಠಗಳು. ಈ ಮಠಗಳ ಕೆಲಸವನ್ನು ಅವರು ತಮ್ಮ ನಾಲ್ಕು ಶಿಷ್ಯರಾದ ಪದ್ಮಪದ, ಹಸ್ತಮಲಕ, ತ್ರೋಟಕಾಚಾರ್ಯ, ಮತ್ತು ವರ್ತಿಕಾಕರರಿಗೆ ಒಪ್ಪಿಸಿದರು. ಅದ್ವೈತದ ಬೋಧನೆಗಳನ್ನು ಕಲಿಸುವುದು ಮತ್ತು ಉತ್ತೇಜಿಸುವುದು ಅವರ ಜವಾಬ್ದಾರಿಯಾಗಿತ್ತು.

ಭಾರತದ ಪ್ರಮುಖ ದೇವಾಲಯಗಳಲ್ಲಿ ಪೂಜೆಗೆ ಅನುಸರಿಸುವ ವಿಧಿಗಳು ಮತ್ತು ಆಚರಣೆಗಳನ್ನು ಶಂಕರರು ಸಿದ್ಧಪಡಿಸಿದರು. ತಮ್ಮ ಪ್ರಯಾಣದಲ್ಲಿ ಅವರು ಕರ್ನಾಟಕದ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ತಲುಪಿದರು. ಶ್ರೀ ಶಂಕರ ಮತ್ತು ಮಂಡನ ಮಿಶ್ರಾರು ನಡೆಯುತ್ತಿರುವಾಗ, ಸರಸವಾನಿ ಚಲಿಸದೆ ತುಂಗಭಧ್ರಾದ ಮರಳಿನಲ್ಲಿ ಸ್ಥಿರವಾಗಿ ನಿಂತರು. ಶ್ರೀ ಶಂಕರರು ಹಿಂದಕ್ಕೆ ತಿರುಗಿ ಸರಸವಾನಿ ಮುಂದೆ ಮುಂದುವರಿಯಲು ಬಯಸುವುದಿಲ್ಲ ಎಂದು ತಮ್ಮ ದೈವಿಕ ಶಕ್ತಿಗಳಿಂದ ಅರಿತುಕೊಂಡರು ಮತ್ತು ಅದ್ವೈತವನ್ನು ಹರಡಲು ಅವಳಿಗೆ ಒಂದು ಆಸನವನ್ನು ಸೃಷ್ಟಿಸಿದರು.

ಶ್ರೀ ಶಂಕರರು ಶೃಂಗೇರಿಯಲ್ಲಿದ್ದಾಗ, ಅವರು ತಮ್ಮ ತಾಯಿ ಮರಣ ಶಯ್ಯೆಯಲ್ಲಿದ್ದಾರೆ ಎಂದು ತಿಳಿದುಬಂತು. ತನ್ನ ತಾಯಿ ಕೊನೆಯುಸಿರೆಳೆಯುವಾಗ ಅವರ ಪಕ್ಕದಲ್ಲಿ ಇರುತ್ತೇನೆ ಎಂದು ಅವರು ನೀಡಿದ ಭರವಸೆಯಂತೆ, ಅವರು ಕಾಲಡಿಯನ್ನು ತಲುಪಿ ತಾಯಿಗೆ ಅಂತಿಮ ನಮನ ಸಲ್ಲಿಸಿದರು. ಮಗ ಮರಳಿ ಬಂದಿದ್ದಾನೆ ಎಂದು ತಾಯಿ ಆರ್ಯಾಂಬೆ ಸಂತೋಷಪಟ್ಟರು. ಜೊತೆಗೆ ಪ್ರಾಣವನ್ನೂ ಬಿಟ್ಟರು. ಶ್ರೀ ಶಂಕರನು ತನ್ನ ತಾಯಿಯ ಅಂತಿಮ ವಿಧಿಗಳನ್ನು ಮಾಡಿದರು. ಆದರೆ ಕಾಲಡಿಯ ಜನರು ಸನ್ಯಾಸಿಗೆ ಕೊನೆಯ ವಿಧಿಗಳನ್ನು ಮಾಡುವ ಹಕ್ಕಿಲ್ಲ ಎಂದು ಹೇಳಿದರು, ಆದರೆ ಶ್ರೀ ಶಂಕರರು ಅದನ್ನು ಕೇಳಲಿಲ್ಲ ಮತ್ತು ಅಮ್ಮನ ದೇಹವನ್ನು ಹೊತ್ತುಕೊಂಡು ಸ್ವತಃ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಪುತ್ರ ಧರ್ಮವನ್ನು ಪಾಲಿಸಿದರು.

ಶ್ರೀ ಶಂಕರರು ಪ್ರತಿಪಾದಿಸಿದ ಧಾರ್ಮಿಕ ಸಿದ್ಧಾಂತವನ್ನು ಅದ್ವೈತ ಎನ್ನುವರು. ʼದ್ವಿ” ಎಂದರೆ ಎರಡು. ಅದ್ವೈತ ಎಂದರೆ ಎರಡಲ್ಲ, ಒಂದೇ ಎಂದು ಅರ್ಥ. ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ನಂಬಲಾಗಿದ್ದ ಆ ಕಾಲದಲ್ಲಿ ಅವೆರಡೂ ಒಂದೇ ಎಂದು ಅವರು ಪ್ರತಿಪಾದಿಸಿದರು. ಅದಿ ಶಂಕರಾಚಾರ್ಯರು ಬದುಕಿದ್ದು ಅಲ್ಪ ಕಾಲ. ಆದರೆ, ಅವರು ಸಾಧಿಸಿದ್ದು, ಅಪರಿಮಿತ. ಶ್ರೀ ಶಂಕರಾಚಾರ್ಯರ ವಿಚಾರಗಳು, ಪೀಠಗಳು ಇಂದಿಗೂ ಜೀವಂತವಾಗಿದ್ದು ಉನ್ನತ ಮಟ್ಟದಲ್ಲಿ ಮಾನವ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿದೆ. 

ಶಂಕರರ ಕಾಲಮಾನ ಯಂತ್ರತಂತ್ರಗಳಿರದ ಕಾಲ. ಸಂಪರ್ಕ ಸಾಧನಗಳಿರದ ಸಮಯ. ಕಾಲ್ನಡಿಗೆಯೊದೇ ಪರವೂರು ಸೇರಲು ಸಾಧನ. ಪತ್ರಗಳು, ತಂತಿಗಳು, ವಿದ್ಯುತ್ ಇವು ಯಾವುದೂ ಇರದ ಆ ಕಾಲದಲ್ಲಿ ಅತ್ಯಂತ ಚಿಕ್ಕ ಪ್ರಾಯದಲಿಯೇ ಅದ್ವಿತೀಯ ಸಾಧನೆ ಮಾಡಿ ಇಂದೂ ಆದಿಶಂಕರರೆಂದು ನಮ್ಮ ಜೊತೆ ಇದ್ದಾರೆ. ಅವರ ಸಾಧನೆಗಳು ನಮ್ಮ ಕಣ್ಣ ಎದುರಿಗಿವೆ. ನಾವು ಎಲ್ಲ ಸೌಲಭ್ಯಗಳನ್ನೂ ಪಡೆದಿದ್ದೇವೆ. ನಾವು ಯಾಕೆ ಶ್ರೀ ಶಂಕರರಂತೆ ಸಾಧಕರಾಗಬಾರದು?

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ