ಆದಿವಾಸಿಗಳ ‘ಭಗವಾನ್' ಬಿರ್ಸಾ ಮುಂಡಾ
“ಬಿರ್ಸಾ ಓ ಬಿರ್ಸಾ, ಮಗನೇ ಎಲ್ಲಿದ್ದೀಯಾ? ಅಮ್ಮನ ಕೂಗು ಗ್ರಾಮದೆಲ್ಲೆಡೆ ಕೇಳಿಸುತ್ತಿತ್ತು. ಹೀಗೆ ಅವಳು ಕರೆಯುವುದು ಇದೇ ಮೊದಲಲ್ಲ. ಕರೆದು ಸ್ವಲ್ಪ ಹೊತ್ತಾದ ಬಳಿಕ ಹತ್ತಿರದ ಕಾಡಿನಿಂದ ಮರು ಉತ್ತರ ಬರುತ್ತಿತ್ತು.
“ನಾನು ಇಲ್ಲಿದ್ದೇನೆ ಅಮ್ಮಾ” ಎಂದು.
ಮಗ ಮನೆಗೆ ಬಂದ ಬಳಿಕ 'ಬಿರ್ಸಾ, ನೀನು ಯಾಕೆ ಆ ಕಾಡಿಗೆ ಪ್ರತೀ ದಿನ ಹೋಗುವುದು? ಅಲ್ಲಿ ಕ್ರೂರ ಮೃಗಗಳು, ವಿಷಪೂರಿತ ಹಾವುಗಳು ಇರುತ್ತವೆಯಲ್ಲಾ? ಅವುಗಳು ನಿನಗೆ ತೊಂದರೆ ಮಾಡಿದರೆ ಎಂದು ನನಗೆ ಸದಾ ಹೆದರಿಕೆಯಾಗುತ್ತದೆ’ ಎನ್ನುತ್ತಾಳೆ ಅಮ್ಮ.
ಅದಕ್ಕೆ ಪುಟ್ಟ ಬಾಲಕ ಬಿರ್ಸಾ ಕೊಡುತ್ತಿದ್ದ ಉತ್ತರ ಹಿರಿಯರನ್ನೂ ದಂಗು ಬಡಿಸುವಂತಿದೆ ‘ಅಮ್ಮಾ, ಯಾವುದೇ ಕಾಡು ಪ್ರಾಣಿ ನನಗೆ ತೊಂದರೆ ಮಾಡುವುದಿಲ್ಲ, ಅದರ ಬದಲಾಗಿ ಅವುಗಳು ನನ್ನ ಬಳಿ ಮಾತನಾಡುತ್ತವೆ. ಊರಿನ ಎಲ್ಲಾ ಮಕ್ಕಳಿಗಿಂತ ಅಧಿಕ ಕಟ್ಟಿಗೆ ನಾನು ತರುತ್ತೇನೆ, ಯಾಕೆ ಹೇಳಿ? ನಾನು ಮರಗಳ ಗೆಳೆತನ ಮಾಡಿಕೊಂಡಿದ್ದೇನೆ, ಅವುಗಳು ನನಗಾಗಿ ಒಣಗಿದ ಗೆಲ್ಲುಗಳನ್ನು ಉದುರಿಸುತ್ತವೆ. ಪುಟ್ಟ ಪುಟ್ಟ ಹಕ್ಕಿಗಳು ನನ್ನ ಕೈಗೇ ಏಕೆ ಸಿಗುತ್ತವೆ ಗೊತ್ತಾ? ಅವುಗಳ ಭಾಷೆ ನನಗೆ ಅರ್ಥವಾಗುತ್ತವೆ. ನಾನು ಮೀನು ಹಿಡಿಯಲು ಹೋದರೆ ತುಂಬಾ ಮೀನು ನನ್ನ ಬಲೆ ಬೀಳುತ್ತದೆ ಏಕೆಂದರೆ ಅವುಗಳ ಬಳಿ ನಾನು ಮಾತನಾಡುತ್ತೇನೆ. ಯಾವುದೇ ಪ್ರಾಣಿ ಅಥವಾ ಪಕ್ಷಿಗಳು ನನಗೆ ತೊಂದರೆ ಮಾಡುವುದಿಲ್ಲ. ಏಕೆಂದರೆ ಅವುಗಳ ಬಗ್ಗೆ ನನಗೆ ಗೊತ್ತು. ನಾನು ಅವರನ್ನು ಅರ್ಥ ಮಾಡಿಕೊಂಡಿದ್ದೇನೆ' ಎನ್ನುತ್ತಿದ್ದ.
ಈ ದೊಡ್ಡ ದೊಡ್ಡ ಮಾತುಗಳು ಅಮ್ಮನಿಗೆ ಅರ್ಥವಾಗುತ್ತಿರಲಿಲ್ಲ. ಮಗ ಕ್ಷೇಮವಾಗಿ ಮನೆಗೆ ಬಂದು ತಲುಪಿದರೆ ಸಾಕು ಎಂದಷ್ಟೇ ಹೆತ್ತ ಕರುಳು ಬಯಸುತ್ತಿತ್ತು.
ಈ ಧೈರ್ಯಶಾಲಿ ಬಾಲಕನೇ ಬಿರ್ಸಾ ಮುಂಡಾ. ಮುಂಡಾ ಎಂಬ ಆದಿವಾಸಿ ಪಂಗಡದಲ್ಲಿ ಜನ್ಮ ತಾಳಿದ ಧೀಮಂತ ವ್ಯಕ್ತಿ. ಆದಿವಾಸಿಗಳಲ್ಲಿ ಸ್ವಾತಂತ್ರ್ಯದ ಕನಸನ್ನು ಬಿತ್ತಿ, ಅವರನ್ನು ಸಮಾಜದ ಮುನ್ನೆಲೆಗೆ ಬರುವಂತೆ ಮಾಡಿದವನು. ಬಿರ್ಸಾ ಬದುಕಿದ್ದು ಕೇವಲ ೨೫ ಚಿಲ್ಲರೆ ವರ್ಷಗಳು. ಆದರೆ ಸಾಧಿಸಿದ್ದು ಬಹಳಷ್ಟು. ಈಗಲೂ ಸುಮಾರು ೨ ಶತಮಾನಗಳ ನಂತರವೂ ಬಿರ್ಸಾ ಮುಂಡಾರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಆದಿವಾಸಿಗಳು ಈಗಲೂ ಇವರನ್ನು ‘ಭಗವಾನ್' ಬಿರ್ಸಾ ಮುಂಡಾ ಎಂದೇ ಸಂಭೋಧಿಸುತ್ತಾರೆ. ಹಾಗಾದರೆ ಇವರ ಸಾಧನೆಗಳೇನು? ನೋಡುವ ಬನ್ನಿ..
ಬಿರ್ಸಾ ಮುಂಡ ಹುಟ್ಟಿದ್ದು ಪ್ರಸ್ತುತ ಜಾರ್ಖಂಡ್ ರಾಜ್ಯದಲ್ಲಿರುವ ರಾಂಚಿ ಜಿಲ್ಲೆಯ ಉಳಿಹಾತು ಗ್ರಾಮದಲ್ಲಿ. ನವೆಂಬರ್ ೧೫, ೧೮೭೫ರಲ್ಲಿ ಜನಿಸಿದ ಇವರ ತಂದೆ ಸುಗುನ ಮುಂಡಾ ಹಾಗೂ ತಾಯಿ ಕರ್ಮಿ ಹಾತು. ಗುರುವಾರ ಅಂದರೆ ಬ್ರಹಸ್ಪತಿ ವಾರದಂದು ಮಗು ಹುಟ್ಟಿದ ಕಾರಣ ಅವನಿಗೆ ಬಿರ್ಸಾ ಎಂದು ಹೆಸರಿಸಲಾಯಿತು. ಬಿರ್ಸಾ ಬಾಲ್ಯದಿಂದಲೂ ಬಹಳ ಚುರುಕಾದ ಧೈರ್ಯವಂತ ಹುಡುಗ. ಮನೆಯ ಬಳಿಯಲ್ಲೇ ಇದ್ದ ಅರಣ್ಯದ ಮೇಲೆ ಅವನಿಗೆ ಬಹಳ ಮಮಕಾರ.
ಮುಂಡ ಹಾಗೂ ಇನ್ನಿತರ ಆದಿವಾಸಿ ಜನಾಂಗದವರಿಗೆ ಅರಣ್ಯದ ಉತ್ಪನ್ನಗಳೇ ಜೀವನಕ್ಕೆ ಆಧಾರ. ಆದರೆ ಆ ಸಮಯದ ಬ್ರಿಟೀಷ್ ಸರಕಾರ ಕಾಡು ಉತ್ಪತ್ತಿಗಳ ಮೇಲೆ ನಿಷೇಧವನ್ನು ಹೇರಿತು. ಇದರಿಂದ ಈ ಆದಿವಾಸಿಗಳ ಬದುಕು ಅಸಹನೀಯವಾಗತೊಡಗಿತು. ಬಿರ್ಸಾನ ಮನೆಯಲ್ಲೂ ಒಂದು ಹೊತ್ತಿನ ಕೂಳಿಗೂ ಕಷ್ಟವಾಗಲು ಪ್ರಾರಂಭವಾಯಿತು. ಬಿರ್ಸಾ ತಮ್ಮ ಸಂಬಂಧಿಕರ ಮನೆಯಲ್ಲಿ ಸ್ವಲ್ಪ ವರ್ಷಗಳನ್ನು ಕಳೆಯುತ್ತಾನೆ. ಆ ಸಮಯ ಅವನು ಶಾಲೆಗೆ ಹೋಗಿ ಅಕ್ಷರಾಭ್ಯಾಸ ಮಾಡುತ್ತಾನೆ. ಇದರಿಂದ ಅವನಿಗೆ ರಾಮಾಯಣ ಹಾಗೂ ಮಹಾಭಾರತದಂತಹ ಮಹಾಗ್ರಂಥಗಳನ್ನು ಓದಿ ಅರ್ಥೈಸುವ ಸೌಭಾಗ್ಯ ಒದಗಿ ಬರುತ್ತದೆ. ಅವನು ತನ್ನ ಪ್ರೌಢ ಶಿಕ್ಷಣಕ್ಕಾಗಿ ಮಿಷನ್ ಹೈಸ್ಕೂಲ್ ಹೋಗುತ್ತಾನೆ. ಅಲ್ಲಿ ಅವನನ್ನು ಮಿಷನರಿಗಳು ಮತಾಂತರ ಮಾಡುತ್ತಾರೆ. ದೌದ್ ಪೂರ್ತಿ ಎಂಬ ಹೊಸ ಹೆಸರೂ ಕೊಡುತ್ತಾರೆ. ನಂತರದ ದಿನಗಳಲ್ಲಿ ಅವನ ಮನೆಯವರೂ ಮತಾಂತರವಾಗುತ್ತಾರೆ. ಆದರೆ ಎರಡು ವರ್ಷ ಅಲ್ಲಿ ಕಲಿತ ಬಳಿಕ ಅವನಿಗೆ ಮತಾಂತರವಾದದ್ದು ತಪ್ಪು ಎಂಬ ಭಾವನೆ ಬಂದು ಮರಳಿ ತನ್ನ ಮತಕ್ಕೆ ಬರುತ್ತಾನೆ. ಇದರಿಂದ ಬ್ರಿಟೀಷ್ ಅಧಿಕಾರಿಗಳಿಗೆ ಅವನ ಮೇಲೆ ಸಿಟ್ಟು ಬರುತ್ತದೆ.
ಕಾಡಿನ ಸ್ವತ್ತುಗಳನ್ನು ತಮ್ಮ ಜೀವನೋಪಾಯಕ್ಕಾಗಿ ಉಪಯೋಗಿಸುವ ಸಲುವಾಗಿ ಬಿರ್ಸಾ ಮುಂಡಾ ಹಲವಾರು ಸಮಾನ ಮನಸ್ಕ ಯುವಕರನ್ನು ಸೇರಿಸಿಕೊಂಡು ಬ್ರಿಟೀಷ್ ಸೈನ್ಯದ ವಿರುದ್ಧ ಸೆಣಸಾಡುತ್ತಾನೆ. ಬಾಲ್ಯದಿಂದಲೂ ಅವನಿಗೆ ಕಾಡಿನ ಪರಿಚಯ ಚೆನ್ನಾಗಿರುತ್ತದೆ. ಆ ಸಮಯದಲ್ಲಿ ಆದಿವಾಸಿಗಳಿಗೆ ಇದ್ದ ಶಸ್ತ್ರವೆಂದರೆ ಬಿಲ್ಲು ಬಾಣ ಮತ್ತು ಚೂರಿ. ಬಿರ್ಸಾ ತೀಕ್ಷ್ಣವಾದ ಹರಿತ ಬಾಣಗಳನ್ನು ತಯಾರಿಸುತ್ತಿದ್ದ. ಅದಕ್ಕೆ ಬಹಳ ಅಪಾಯಕಾರಿಯಾದ ವಿಷವನ್ನು ಸವರುತ್ತಿದ್ದ. ಇದರಿಂದ ಬಾಣದ ಏಟಿಗೆ ತುತ್ತಾದವರು ಕೂಡಲೇ ಸಾಯುತ್ತಿದ್ದರು.
ಆದಿವಾಸಿಗಳಲ್ಲಿ ಸ್ಪೂರ್ತಿಯನ್ನು ತುಂಬಲು ತಾನು ದೇವರನ್ನು ಕಂಡಿದ್ದೇನೆ ಎಂದು ಕಥೆ ಕಟ್ಟಿ ಹೇಳುತ್ತಾನೆ ಬಿರ್ಸಾ. ಅವರ ನಡುವೆ ಇವನೊಬ್ಬನೇ ವಿದ್ಯಾವಂತನಾದುದರಿಂದ ಆ ಅಮಾಯಕ ಆದಿವಾಸಿಗಳು ಇವನನ್ನು ಬೇಗನೇ ನಂಬಿದರು. ಪ್ರಕೃತಿಯೇ ನಮ್ಮ ತಾಯಿ ಎಂದ. ಎಲ್ಲರಲ್ಲೂ ಸಮಾನತೆ ತೋರಿಸುವುದೇ ನಮ್ಮ ಧರ್ಮ ಎಂದು ಹೇಳಿದ. ಭಿಕ್ಷಾಟನೆ ಮಾಡುವುದು, ಬೇರೆಯವರಿಗೆ ಅನ್ಯಾಯ ಮಾಡುವುದು. ಕುಡಿಯುವುದು, ಮಾಂಸಹಾರ ಸೇವನೆ, ದೇವರನ್ನು ನಂಬದೇ ಇರುವುದು ಇವೆಲ್ಲಾ ತಪ್ಪು ಎಂದು ಜನರಲ್ಲಿ ನಂಬಿಕೆ ಹುಟ್ಟಿಸಿದ. ಇದರಿಂದಾಗಿ ಅವನ ಮಾತುಗಳಿಗೆ ಬೆಲೆ ಸಿಕ್ಕಿತು. ಅವರ ನಡುವಿನ ದೇವರಾಗಿ ಅವನಿಗೆ ಗೌರವ ದೊರೆಯಲಾರಂಭಿಸಿತು.
ಅಕ್ಟೋಬರ್ ೧, ೧೮೯೪ರಲ್ಲಿ ಛೋಟಾ ನಾಗ್ಪುರ ಎಂದು ಕರೆಯುವಲ್ಲಿ ಬೃಹತ್ ಮೆರವಣಿಗೆ ನಡೆಸಲು ಬಿರ್ಸಾ ಮುಂಡಾ ತೀರ್ಮಾನಿಸುತ್ತಾನೆ. ಅಲ್ಲಿ ‘ಉಳುವವನೇ ಭೂಮಿಯ ಒಡೆಯನಾಗಬೇಕು, ಅರಣ್ಯದ ಅಧಿಕಾರ ಆದಿವಾಸಿಗಳಿಗೇ ದೊರೆಯ ಬೇಕು' ಎಂದು ಹೋರಾಟ ಮಾಡಲು ನಿರ್ಧರಿಸಲಾಯಿತು. ಈ ಘೋಷಣೆಗೆ ಬೆಂಬಲವಾಗಿ ಸಹಸ್ರಾರು ಜನರು ಬಿರ್ಸಾ ಮುಂಡಾ ಬೆಂಬಲಕ್ಕೆ ನಿಂತರು. ಇವನ ಜನಪ್ರಿಯತೆ ಅಧಿಕಗೊಳ್ಳುವುದನ್ನು ಗಮನಿಸಿದ ಬ್ರಿಟೀಷ್ ಸರಕಾರ ಅವನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳ ಶಿಕ್ಷೆಯಾಯಿತು. ಶಿಕ್ಷೆಯನ್ನು ಮುಗಿಸಿ ಹೊರಬಂದಾಗ ಅವನು ತನ್ನ ಹೋರಾಟದ ಸ್ವರೂಪವನ್ನು ಬದಲಾಯಿಸಿಕೊಂಡ. ನೇರ ಹೋರಾಟದ ಬದಲು ಗೆರಿಲ್ಲಾ ರೀತಿಯ ಪರೋಕ್ಷ ಹೋರಾಟಕ್ಕೆ ಅಣಿಯಾದ.
ಬ್ರಿಟೀಷರ ವಿರುದ್ಧ ಗೆರಿಲ್ಲಾ ಸೈನ್ಯ ಪಡೆಯನ್ನು ಕಟ್ಟಿ ಹಲವಾರು ಕಡೆಗಳಲ್ಲಿ ದಾಳಿಯನ್ನು ಮಾಡಿ ನೂರಾರು ಪೋಲೀಸರನ್ನು ಕೊಂದು ಹಾಕಿದರು. ಪೋಲೀಸರ ಬಂದೂಕಿಗೆ ಪ್ರತಿಯಾಗಿ ಬಿರ್ಸಾ ಮತ್ತು ಅವನ ತಂಡ ಬಿಲ್ಲು ಹಾಗೂ ಬಾಣಗಳಿಂದ ದಾಳಿ ಮಾಡುತ್ತಿದ್ದರು. ಬಿರ್ಸಾನ ಹೆಸರು ಕೇಳಿದಾಕ್ಷಣ ಬ್ರಿಟೀಷರ ಮನದಲ್ಲಿ ಹೆದರಿಕೆ ಮನೆ ಮಾಡತೊಡಗಿತು. ಬಿರ್ಸಾನ ಉಪಟಳ ಜಾಸ್ತಿಯಾದಾಗ ಬ್ರಿಟೀಷ್ ಸರಕಾರ ಅವನ ಸುಳಿವು ನೀಡಿದವವರಿಗೆ ಐನೂರು ರೂಪಾಯಿಗಳ ಬಹುಮಾನ ಘೋಷಿಸಿತು. ೧೮೯೯ರಲ್ಲಿ ದುಂಬಾರಿ ಬೆಟ್ಟದಲ್ಲಿ ನಡೆದ ಯುದ್ಧದಲ್ಲಿ ಬಿರ್ಸಾನ ನೂರಾರು ಸಂಗಡಿಗರು ಬ್ರಿಟೀಷರ ಬಂದೂಕಿನ ದಾಳಿಗೆ ಬಲಿಯಾದರು. ಬಿರ್ಸಾನ ಸಹಚರನೊಬ್ಬನು ಮಾಡಿದ ಒಳಸಂಚಿನ ಕಾರಣ ಬಿರ್ಸಾ ಕಾಡಿನಲ್ಲಿ ಮಲಗಿ ನಿದ್ರಿಸುತ್ತಿರುವ ಸಂದರ್ಭದಲ್ಲಿ ಬಂಧಿಸಲಾಯಿತು. ಅವನ ಕೈ ಮತ್ತು ಕಾಲುಗಳಿಗೆ ಬಿಗಿಯಾದ ಬೇಡಿಯನ್ನು ಹಾಕಲಾಯಿತು. ಸುಮಾರು ೪೦೦ ಕ್ಕೂ ಅಧಿಕ ಪ್ರಕರಣಗಳನ್ನು ಬಿರ್ಸಾನ ಮೇಲೆ ಹಾಕಲಾಯಿತು.. ವಿಚಾರಣೆ ನಡೆಯುತ್ತಿದ್ದ ಸಮಯದಲ್ಲೇ ಅಸೌಖ್ಯದ ಕಾರಣದಿಂದ ಬಿರ್ಸಾ ಮುಂಡ ನಿಧನ ಹೊಂದಿದ. ಕೆಲವು ಮೂಲಗಳ ಪ್ರಕಾರ ಅವನಿಗೆ ಜೈಲಿನಲ್ಲಿ ವಿಷವನ್ನು ನೀಡಿ ಸಾಯುವಂತೆ ಮಾಡಿದರು ಎಂದೂ ಹೇಳುತ್ತಾರೆ. ಕೇವಲ ೨೫ ವರ್ಷ ಬದುಕಿದ, ಸಾಯುವ ತನಕ ತನ್ನ ಆದಿವಾಸಿ ಸಂಗಡಿಗರಿಗೆ ನ್ಯಾಯ ದೊರೆಯಲು ಹೋರಾಡಿದ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಭಾಷ್ಯ ಬರೆದ ಚೇತನವೊಂದು ೧೯೦೦ ಜೂನ್ ೯ರಂದು ಭಾರತ ಮಾತೆಯ ಮಡಿಲಲ್ಲಿ ಅಮರವಾಯಿತು.
ಬಿರ್ಸಾ ಮುಂಡಾ ನಿಧನದ ನಂತರ ಕೂಡಾ ಬ್ರಿಟೀಷರು ಅಂದುಕೊಂಡಂತೆ ಚಳುವಳಿಗಳು ಕಮ್ಮಿಯಾಗಲಿಲ್ಲ. ಬಿರ್ಸಾನ ಸಂಗಡಿಗರು ತಮ್ಮ ಹೋರಾಟವನ್ನು ಇನ್ನಷ್ಟು ಬಿಗಿಗೊಳಿಸಿದರು. ಅವರ ಪಾಲಿಗೆ ಬಿರ್ಸಾ ಸಾಕ್ಷಾತ್ ಭಗವಾನ್ ಅಂದರೆ ದೇವರೇ ಆಗಿಹೋಗಿದ್ದ.
ಬಿರ್ಸಾ ನೆನಪು: ಬಿರ್ಸಾ ಮುಂಡಾ ನೆನಪಿನಲ್ಲಿ ರಾಂಚಿಯ ವಿಮಾನ ನಿಲ್ದಾಣಕ್ಕೆ ಇವರ ಹೆಸರನ್ನೇ ಇಡಲಾಗಿದೆ. ಬಿರ್ಸಾ ವಿಶ್ವವಿದ್ಯಾಲಯ, ಬಿರ್ಸಾ ಕೃಷಿ ಕಾಲೇಜು, ಬಿರ್ಸಾ ಆಟದ ಮೈದಾನ ಎಲ್ಲವೂ ಇವರನ್ನು ಇನ್ನಷ್ಟು ಸ್ಮರಣೀಯರನ್ನಾಗಿಸಿದೆ. ಪ್ರಖ್ಯಾತ ಬರಹಗಾರ್ತಿ ಮಹಾಶ್ವೇತಾ ದೇವಿ ಅವರು ಬಿರ್ಸಾ ಮುಂಡಾ ಬಗ್ಗೆ ‘ಅರಣ್ಯೇರ್ ಅಧಿಕಾರ್' ಎಂಬ ಬಂಗಾಳಿ ಭಾಷೆಯ ಕಾದಂಬರಿಯನ್ನು ಬರೆದಿದ್ದಾರೆ. ಬಿರ್ಸಾ ಮುಂಡಾ ಅವರ ಭಾವಚಿತ್ರವು ಸಂಸತ್ ಭವನದಲ್ಲಿದೆ. ದೇಶದ ಹಲವಾರು ಕಡೆ ಇವರ ಮೂರ್ತಿಗಳೂ ಇವೆ. ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಲು ಹೋರಾಡಿದ ಬಿರ್ಸಾ ಮುಂಡ ನಿಜಕ್ಕೂ ಅವರ ಪಾಲಿಗೆ ದೇವರೇ ಆಗಿಹೋಗಿದ್ದಾರೆ.
ಚಿತ್ರ ಕೃಪೆ: ಅಂತರ್ಜಾಲ ತಾಣ